Delhi High Court, WhatsApp  
ಸುದ್ದಿಗಳು

ಪ್ರಮಾಣೀಕರಿಸದ ವಾಟ್ಸಾಪ್ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಬಳಸಲಾಗದು: ದೆಹಲಿ ಹೈಕೋರ್ಟ್

ಸಂವಿಧಾನದ 226ನೇ ವಿಧಿಯಡಿ ರಿಟ್ ಅರ್ಜಿಯ ವಿಚಾರಣೆ ನಡೆಸುವಾಗ ವಾಟ್ಸಾಪ್ ಸಂಭಾಷಣೆಗಳ ಸ್ಕ್ರೀನ್‌ ಶಾಟ್‌ ಗಣನೆಗೆ ತೆಗೆದುಕೊಳ್ಳಲಾಗದು ಎಂದು ನ್ಯಾಯಾಲಯ ಹೇಳಿದೆ.

Bar & Bench

ಭಾರತೀಯ ಸಾಕ್ಷ್ಯ ಕಾಯಿದೆಯಡಿಯಲ್ಲಿ ಸೂಕ್ತ ಪ್ರಮಾಣೀಕರಣವಿಲ್ಲದೆ ನ್ಯಾಯಾಲಯದಲ್ಲಿ ವಾಟ್ಸಾಪ್ ಸಂಭಾಷಣೆಗಳನ್ನು ಸಾಕ್ಷ್ಯವಾಗಿ ಬಳಸಲಾಗದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಡೆಲ್ ಇಂಟರ್ನ್ಯಾಷನಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆದಿಲ್‌ ಫಿರೋಜ್ ಇನ್ನಿತರರ ನಡುವಣ ಪ್ರಕರಣ].

ಸೇವೆಯಲ್ಲಿ ವಿಳಂಬವಾಗಿರುವ ಕಾರಣಕ್ಕೆ ಲಿಖಿತ ಹೇಳಿಕೆಯನ್ನು ದಾಖಲಿಸಲು ಜಿಲ್ಲಾ ಗ್ರಾಹಕ ಆಯೋಗ ನಿರಾಕರಿಸಿದ್ದನ್ನು ಪ್ರಶ್ನಿಸಿ ಎಲೆಕ್ಟ್ರಾನಿಕ್ಸ್ ಕಂಪನಿ ಡೆಲ್ ಇಂಡಿಯಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಈ ವಿಚಾರ ತಿಳಿಸಿದರು.

"ಸಾಕ್ಷ್ಯ ಕಾಯಿದೆ- 1872ರ ಅಡಿಯಲ್ಲಿ ಕಡ್ಡಾಯವಾಗಿ ಸೂಕ್ತ ಪ್ರಮಾಣೀಕರಣವಿಲ್ಲದೆ ವಾಟ್ಸಾಪ್ ಸಂಭಾಷಣೆಗಳನ್ನು ಸಾಕ್ಷ್ಯವಾಗಿ  ಪರಿಗಣಿಸಲಾಗದು" ಎಂದು ನ್ಯಾಯಾಲಯ ಹೇಳಿದೆ.

ಜಿಲ್ಲಾ ಆಯೋಗದ ಆದೇಶವನ್ನು ದೆಹಲಿ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ 2023ರ ಡಿಸೆಂಬರ್‌ನಲ್ಲಿ ಎತ್ತಿಹಿಡಿದಿತ್ತು. ಹೀಗಾಗಿ ಹೈಕೋರ್ಟ್‌ನಲ್ಲಿ ಡೆಲ್ ಪ್ರಸ್ತುತ ಅರ್ಜಿ ಸಲ್ಲಿಸಿತ್ತು.

ವಿಳಂಬಕ್ಕೆ ಕಾರಣ ಏನೆಂಬುದನ್ನು ವಿವರಿಸಿದ ಡೆಲ್‌, ಜಿಲ್ಲಾ ಆಯೋಗದೆದುರು ದೂರುದಾರರನ್ನು ಪ್ರತಿನಿಧಿಸಿದ್ದ ವಕೀಲರು ಸಂಪೂರ್ಣ ದೂರಿನ ಪ್ರತಿ ಮತ್ತದರ ಅನುಬಂಧವನ್ನು ಸೂಕ್ತ ಸಮಯಕ್ಕೆ ನೀಡಲಿಲ್ಲ ಎಂದಿತ್ತು. ತನ್ನ ವಾದ ಸಮರ್ಥನೆಗಾಗಿ ಅದು ದೂರುದಾರರೊಂದಿಗೆ ನಡೆಸಿದ ವಾಟ್ಸಾಪ್‌ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಅನ್ನು ಸಲ್ಲಿಸಿತು. ಆದರೆ ಸ್ಕ್ರೀನ್‌ಶಾಟ್‌ಅನ್ನು ಸಾಕ್ಷ್ಯವಾಗಿ ಗಣನೆಗೆ ತೆಗೆದುಕೊಳ್ಳಲು ಜಿಲ್ಲಾ ಗ್ರಾಹಕ ಆಯೋಗ ನಿರಾಕರಿಸಿ ಡೆಲ್‌ನ ಲಿಖಿತ ಹೇಳಿಕೆಯನ್ನು ದಾಖಲಿಸಲು ಒಪ್ಪಲಿಲ್ಲ. ಗ್ರಾಹಕ ಆಯೋಗದ ಈ ನಿರಾಕರಣೆಯನ್ನು ಪ್ರಶ್ನಿಸಿ ಡೆಲ್‌ ರಾಜ್ಯ ಗ್ರಾಹಕ ಆಯೋಗದ ಮೊರೆ ಹೋಗಿತ್ತು. ಅಲ್ಲಿಯೂ ಡೆಲ್‌ಗೆ ಹಿನ್ನೆಡೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅದು ಹೈಕೋರ್ಟ್‌ ಮೆಟ್ಟಿಲೇರಿತ್ತು.

"ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ರಿಟ್ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಾಲಯ ವಾಟ್ಸಾಪ್ ಸಂಭಾಷಣೆಗಳ ಸ್ಕ್ರೀನ್ ಶಾಟ್ ಅನ್ನು ಗಣನೆಗೆ ತೆಗೆದುಕೊಳ್ಳಲಾಗದು. ಮಿಗಿಲಾಗಿ, ಸಂಭಾಷಣೆಗಳನ್ನು ರಾಜ್ಯ ಆಯೋಗದ ಮುಂದೆ ಪ್ರಸ್ತುತಪಡಿಸಲಾಗಿದೆ ಎಂದು ಸಾಬೀತುಪಡಿಸಲು ಏನೂ ಇಲ್ಲದಿರುವಾಗ ಪ್ರಸ್ತುತ ರಿಟ್ ಅರ್ಜಿಯಲ್ಲಿ ಹುರುಳಿರುವುದು ನ್ಯಾಯಾಲಯಕ್ಕೆ ಕಂಡುಬರುತ್ತಿಲ್ಲ. ಅಲ್ಲದೆ  ಈ ಕುರಿತಂತೆ ರಾಜ್ಯ ಆಯೋಗದ ಆದೇಶದಲ್ಲಿ  ಯಾವುದೇ ಚರ್ಚೆ ಇಲ್ಲ” ಎಂದು ಅದು ತಿಳಿಸಿದೆ.

ಡೆಲ್ ಸ್ವೀಕರಿಸಿದ ಸಮನ್ಸ್‌ನೊಂದಿಗೆ ಕಳುಹಿಸಲಾದ ದಾಖಲೆಗಳ ಅಂಚೆ ರಸೀದಿಗಳನ್ನು ಪಡೆದ ಜಿಲ್ಲಾ ಆಯೋಗ ಪ್ರಕರಣವನ್ನು ಬಹಳ ವಿವರವಾಗಿ ಪರಿಶೀಲಿಸಿದೆ ಎಂದು ನ್ಯಾಯಾಲಯ  ಗಮನಿಸಿದೆ. ಸಮನ್ಸ್‌ನೊಂದಿಗೆ ಸಂಪೂರ್ಣ ದಾಖಲೆಗಳನ್ನು ಕಳುಹಿಸಲಾಗಿದ್ದು ಅದೇ ಡೆಲ್‌ಗೂ ದೊರೆತಿದೆ ಎಂದು ಆಯೋಗ ತೀರ್ಮಾನಕ್ಕೆ ಬಂದಿತ್ತು.

ಆದ್ದರಿಂದ, ಲಿಖಿತ ಹೇಳಿಕೆ ಸಲ್ಲಿಸುವಲ್ಲಿ ಏಳು ದಿನಗಳ ವಿಳಂಬವನ್ನು ಮನ್ನಿಸಲು ಅರ್ಜಿ ವಿಶ್ವಾಸಾರ್ಹವಲ್ಲ ಎಂದು ಜಿಲ್ಲಾ ಆಯೋಗ ಹೇಳಿರುವುದನ್ನು ಅದು ಉಲ್ಲೇಖಿಸಿದೆ.

ಅಂತೆಯೇ ವಿಳಂಬ ಮನ್ನಿಸಲು ಜಿಲ್ಲಾ ಆಯೋಗ ಒಪ್ಪದಿರುವುದರಲ್ಲಿ ಲೋಪವಾಗಿದೆ  ಎಂದು ಪರಿಗಣಿಸಲು ಯಾವುದೇ ಕಾರಣವಿಲ್ಲ ಎಂದು ತೀರ್ಮಾನಿಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.