ವರದೀಕೃತ ತೀರ್ಪುಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳಲು 'ಕೆಜೆಎಚ್ ಡೈಲಿʼ ಆರಂಭಿಸಿದ ಕೇರಳ ಹೈಕೋರ್ಟ್

ವಾಟ್ಸಾಪ್ ಮೂಲಕ ಸಂಪೂರ್ಣ ಪ್ರಮಾಣೀಕರಿಸಿದ ವರದೀಕೃತ ತೀರ್ಪುಗಳನ್ನು ಕೇರಳ ಹೈಕೋರ್ಟ್ ದೈನಂದಿನ ತೀರ್ಪು ಅಥವಾ ಕೆಜೆಎಚ್- ಡೈಲಿ ಒದಗಿಸುತ್ತದೆ.
Launch of Kerala High Court Daily Judgments
Launch of Kerala High Court Daily Judgments

ಕೇರಳ ಉಚ್ಚ ನ್ಯಾಯಾಲಯ ಈಚೆಗೆ ಕೇರಳ ಹೈಕೋರ್ಟ್ ದೈನಂದಿನ ತೀರ್ಪು ಅಥವಾ 'ಕೆಜೆಎಚ್- ಡೈಲಿ' ಎಂಬ ಯೋಜನೆಯನ್ನು ಆರಂಭಿಸಿದ್ದು, ದಿನನಿತ್ಯದ ಸಂಪೂರ್ಣ ಪ್ರಮಾಣೀಕರಿಸಿದ ವರದೀಕೃತ ತೀರ್ಪುಗಳನ್ನು ವಾಟ್ಸಾಪ್ ಮೂಲಕ ಒದಗಿಸುತ್ತಿದೆ.  

ನ್ಯಾಯ ಲಭ್ಯತೆಯನ್ನು ಸಮಾನ ನೆಲೆಯಲ್ಲಿ ದೊರಕಿಸಿಕೊಡುವ ಉದ್ದೇಶದ ಭಾಗವಾಗಿ ರೂಪಿತವಾದ ಈ ಸೇವೆಯನ್ನು ಜೂನ್‌ 27, 2024ರಂದು ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಶಿಶ್ ಜೆ ದೇಸಾಯಿ ಅವರು ಅನಾವರಣಗೊಳಿಸಿದರು.

ನ್ಯಾಯಮೂರ್ತಿ ಎ ಮುಹಮ್ಮದ್ ಮುಸ್ತಾಕ್ ಮತ್ತು ಸಂಪಾದಕೀಯ ಸಮಿತಿ ಸದಸ್ಯರಾದ ನ್ಯಾಯಮೂರ್ತಿ ವಿ ಜಿ ಅರುಣ್, ನ್ಯಾಯಮೂರ್ತಿ ಸಿ ಎಸ್ ಡಯಾಸ್, ಜೋಸೆಫ್ ರಾಜೇಶ್, (ಐಟಿ ನಿರ್ದೇಶಕ), ಜುಬಿಯಾ ಎ (ಕೇರಳ ರಾಜ್ಯ ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರದ ನಿರ್ದೇಶಕಿ), ರಾಕೇಶ್ ಎಂಜಿ (ಐಟಿ ಉಪ ನಿರ್ದೇಶಕರು) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಈ ದೈನಂದಿನ ಸೇವೆಯು ನ್ಯಾಯಾಧೀಶರು, ಜಿಲ್ಲಾ ನ್ಯಾಯಾಂಗ, ಕಾನೂನು ವೃತ್ತಿಪರರು, ಕಾನೂನು ವಿದ್ವಾಂಸರು ಮತ್ತು ಸಾರ್ವಜನಿಕರಿಗೆ ಕೇರಳ ಹೈಕೋರ್ಟ್‌ನ ಪ್ರಮಾಣೀಕೃತ ವರದಿ ತೀರ್ಪುಗಳನ್ನು ಒದಗಿಸುತ್ತದೆ.

Also Read
ಹತ್ಯೆಗೆ ಸಂಬಂಧಿಸಿದ ವಾಟ್ಸಾಪ್‌ ಸಂದೇಶಕ್ಕೆ ಥಂಬ್ಸ್‌ ಅಪ್‌ ಇಮೋಜಿ: ವಜಾಗೊಂಡ ಪೇದೆಗೆ ಮದ್ರಾಸ್‌ ಹೈಕೋರ್ಟ್‌ ಅಭಯ

ಕಳೆದ ಜನವರಿಯಲ್ಲಿ ಬಿಡುಗಡೆಯಾದ ದ್ವಿಭಾಷಾ ಮಾಸಿಕ ಸುದ್ದಿಪತ್ರ  'ಹೈ ಕೋರ್ಟ್ ಕ್ರಾನಿಕಲ್ಸ್' ಯಶಸ್ವಿಗೊಂಡ ಬಳಿಕ ಈ ಯೋಜನೆ ಜಾರಿಗೆ ತರಲಾಗಿದೆ. ಆರಂಭದಿಂದಲೂ ಅಮೋಘ ಬೆಳವಣಿಗೆ ಕಂಡ ಹೈಕೋರ್ಟ್ ಕ್ರಾನಿಕಲ್ಸ್‌ಗೆ 15,000 ಕ್ಕೂ ಹೆಚ್ಚು ಇಮೇಲ್ ಚಂದಾದಾರರು ಮತ್ತು 3,000 ಕ್ಕೂ ಹೆಚ್ಚು ವಾಟ್ಸಾಪ್‌ ಚಂದಾದಾರರಿದ್ದಾರೆ.

ಕ್ರಾನಿಕಲ್ಸ್‌ನೊಂದಿಗೆ ಸಂಯೋಜಿತವಾಗಿರುವ ವಾಟ್ಸಾಪ್‌ ಸಮುದಾಯಗಳ ಮೂಲಕ ಕೆಜೆಎಚ್‌ ಡೈಲಿ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಕ್ರಾನಿಕಲ್ಸ್‌ ತಂಡ ಮತ್ತು ಐಟಿ ನಿರ್ದೇಶನಾಲಯದ ಸಹಯೋಗದಿಂದಾಗಿ ಕೆಜೆಎಚ್‌ ಡೈಲಿ ರೂಪುಗೊಂಡಿದೆ.

ಐದು ವರದಿಗಾರರ ಸಂಪಾದಕೀಯ ಸಮಿತಿಯನ್ನು ಒಳಗೊಂಡಿರುವ ತಂಡವೊಂದು ಕೆಜೆಎಚ್‌ ಡೈಲಿ ಯೋಜನೆಯ ಮೂಲಕ ತೀರ್ಪುಗಳು ಸಕಾಲದಲ್ಲಿ ದೊರೆಯುವಂತೆ ಮಾಡುತ್ತದೆ.

ಸಂಪಾದಕೀಯ ಮತ್ತು ವರದಿಗಾರರ ತಂಡದಲ್ಲಿ ವಕೀಲರಾದ ಎಸ್ ಕೃಷ್ಣ, ಲಿಯೋ ಲುಕೋಸ್, ಗಾಯತ್ರಿ ಮುರಳೀಧರನ್, ಗಿರೀಶ್ ಕುಮಾರ್ ಮತ್ತು ಗಜೇಂದ್ರ ಸಿಂಗ್ ರಾಜಪುರೋಹಿತ್ ಅವರಿದ್ದಾರೆ.

ಸಂಪಾದಕೀಯ ಸಮಿತಿಯು ವಿಶೇಷ ಡ್ಯಾಶ್‌ಬೋರ್ಡ್‌ನಲ್ಲಿ ಪ್ರಮಾಣೀಕೃತ ತೀರ್ಪುಗಳನ್ನು ತ್ವರಿತವಾಗಿ ಪಡೆಯಲು ಅನುವು ಮಾಡಿಕೊಡುತ್ತದೆ. ವರದಿ ಮಾಡಬಹುದಾದ ತೀರ್ಪನ್ನು ಹೈಕೋರ್ಟ್‌ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ ನಂತರ, ತಂಡವು ಸಂಕ್ಷಿಪ್ತ ಸಾರಾಂಶ ರಚಿಸಿ ಅದನ್ನುವಾಟ್ಸಾಪ್‌ ಮೂಲಕ ಹಂಚಿಕೊಳ್ಳುತ್ತದೆ.

Also Read
ಹೈಬ್ರಿಡ್ ವಿಧಾನದಲ್ಲಿ ಕಾರ್ಯನಿರ್ವಹಣೆಗೆ ಮುಂದಾದ ಮಣಿಪುರ ಹೈಕೋರ್ಟ್: ಜಿಲ್ಲಾ ನ್ಯಾಯಾಲಯಗಳಲ್ಲಿ ಇ- ಫೈಲಿಂಗ್ ಕಡ್ಡಾಯ
ವರದಿ ಮಾಡಬಹುದಾದ ತೀರ್ಪು ಎಂದರೇನು? ಹೊಸ ಕಾನೂನು ತತ್ವಗಳನ್ನು ಮಂಡಿಸುವ, ಅಸ್ತಿತ್ವದಲ್ಲಿರುವ ಕಾನೂನುಗಳಿಗೆ ಸ್ಪಷ್ಟನೆ ನೀಡುವ ಅಥವಾ ಕಾನೂನಿನ ವ್ಯಾಖ್ಯಾನ ಮತ್ತು ಅನ್ವಯದ ಮೇಲೆ ಮಹತ್ವದ ಪ್ರಭಾವವನ್ನು ಹೊಂದಿರುವಂತಹ ತೀರ್ಪುಗಳನ್ನು ವರದಿಮಾಡಬಲ್ಲ ತೀರ್ಪುಗಳು ಎನ್ನಲಾಗುತ್ತದೆ. ಇವುಗಳಿಗೆ ವ್ಯಾಪಕ ಪ್ರಭಾವ ಇದೆ ಎಂದು ಪರಿಗಣಿಸಲಾಗಿದ್ದು ಕಾನೂನು ವರದಿಗಳಲ್ಲಿ ಇವುಗಳನ್ನು ಪ್ರಕಟಿಸಲಾಗುತ್ತದೆ. ನ್ಯಾಯಿಕ ವರ್ಗ ಮತ್ತು ಜನಸಾಮಾನ್ಯರು ಇವುಗಳನ್ನು ಓದಬಹುದು. ಈ ವರದೀಕೃತ ತೀರ್ಪುಗಳು ಪೂರ್ವ ನಿದರ್ಶನಗಳಂತೆ ಕಾರ್ಯ ನಿರ್ವಹಿಸಲಿದ್ದು ಕೆಳ ನ್ಯಾಯಾಲಯಗಳು ಇವುಗಳನ್ನು ಅವಲಂಬಿಸಿ ತೀರ್ಪು ನೀಡುತ್ತವೆ.
ಅಂತೆಯೇ ವರದಿ ಮಾಡಲಾಗದ ತೀರ್ಪುಗಳು ಇದ್ದು ಇವು ಹೊಸ ಕಾನೂನು ಸಿದ್ಧಾಂತವನ್ನು ಮಂಡಿಸುವುದಿಲ್ಲ ಅಥವಾ ಕಾನೂನು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುವುದಿಲ್ಲ. ಇವು ವಾಡಿಕೆಯ ತೀರ್ಪುಗಳಾಗಿದ್ದು ಇವುಗಳನ್ನು ಕಾನೂನು ವರದಿಗಳಲ್ಲಿ ಪ್ರಕಟಿಸುವುದಿಲ್ಲ ಅಲ್ಲದೆ  ಇವುಗಳಿಗೆ ಪೂರ್ವ ನಿದರ್ಶನದ ಮೌಲ್ಯವೂ ಇರುವುದಿಲ್ಲ.
ಕಾನೂನು ವಿಚಾರಗಳ ನವೀನತೆ, ಪ್ರಕರಣದ ಮಹತ್ವ ಮತ್ತು ಸಂಭಾವ್ಯ ಪ್ರಭಾವದಂತಹ ವಿವಿಧ ಅಂಶಗಳ ಆಧಾರದ ಮೇಲೆ ನ್ಯಾಯಾಲಯ ವರದಿ ಮಾಡಬಹುದಾದ ಅಥವಾ ವರದಿ ಮಾಡದ ತೀರ್ಪು ಎಂದು ವರ್ಗೀಕರಿಸುವ ನಿರ್ಧಾರ  ತೆಗೆದುಕೊಳ್ಳುತ್ತದೆ. 
Kannada Bar & Bench
kannada.barandbench.com