ನಿರ್ದಿಷ್ಟ ಶಿಕ್ಷಾ ನಿಯಮಾವಳಿಗಳ ಅನುಪಸ್ಥಿತಿಯಲ್ಲಿ ಸದಸ್ಯರು ಮಾಡುವ ಪೋಸ್ಟ್‌ಗಳಿಗೆ ವಾಟ್ಸಾಪ್ ಗ್ರೂಪ್ ಅಡ್ಮಿನ್ ಅವರನ್ನು ಹೊಣೆ ಮಾಡುವುದು ದೋಷಪೂರಿತ ಹೊಣೆಗಾರಿಕೆಗೆ ಕಾರಣವಾಗಲಿದ್ದು ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಚಾರಗಳಿಗೆ ವಾಟ್ಸಾಪ್ ಗುಂಪಿನ ನಿರ್ವಾಹಕರನ್ನು ಹೊಣೆ ಮಾಡಲಾಗದು ಎಂಬ ಬಾಂಬೆ ಹೈಕೋರ್ಟ್ ತೀರ್ಪನ್ನು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಇತ್ತೀಚೆಗೆ ಪುನರುಚ್ಚರಿಸಿತು. [ಆರ್. ರಾಜೇಂದ್ರನ್ ವಿಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ನಡುವಣ ಪ್ರಕರಣ].
ಗ್ರೂಪ್‌ನಲ್ಲಿ ಪೋಸ್ಟ್ ಮಾಡಿದ ಆಕ್ಷೇಪಾರ್ಹ ಸಂದೇಶಗಳಿಗೆ ಸಂಬಂಧಿಸಿದಂತೆ ಅದರ ನಿರ್ವಾಹಕರು (ಅಡ್ಮಿನ್) ಬೇರೆ ಯಾವುದೇ ಪಾತ್ರ ನಿರ್ವಹಿಸಿಲ್ಲ ಎಂದು ಕಂಡುಬಂದರೆ ಅವರನ್ನು ಆರೋಪಪಟ್ಟಿಯಿಂದ ತೆಗೆದುಹಾಕಬೇಕು ಎಂದು ತಿಳಿಸಿತು. ಈ ಸಂಬಂಧ ಕಿಶೋರ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ತೀರ್ಪು ಅವಲಂಬಿಸಿ ನ್ಯಾ. ಜಿ ಆರ್ ಸ್ವಾಮಿನಾಥನ್ ಆದೇಶ ನೀಡಿದರು. ಆದರೆ, ಒಂದು ವೇಳೆ ಅಡ್ಮಿನ್‌ಗಳ ಪಾತ್ರ ದ ಬಗ್ಗೆ ಅರ್ಜಿದಾರರು ಮಾಹಿತಿ ಕಲೆ ಹಾಕಿದರೆ ಆಗ ಅವರು ಪ್ರಕರಣ ಎದುರಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದಾಯಗಳ ನಡುವೆ ಕೆಟ್ಟ ಭಾವನೆ ಮೂಡಿಸುವಂತಹ ಸಂದೇಶಗಳನ್ನು ಗ್ರೂಪ್‌ನಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಪೊಲೀಸರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಗುಂಪಿನ ಅಡ್ಮಿನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ.
ಅರ್ಜಿದಾರರು ಕೇವಲ ಗ್ರೂಪ್ ಅಡ್ಮಿನ್ ಆಗಿದ್ದು, ಗ್ರೂಪ್‌ನಲ್ಲಿ ಸದಸ್ಯರು ಪೋಸ್ಟ್ ಮಾಡುವ ಸಂದೇಶಗಳಿಗೆ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ ಎಂದು ವಾದಿಸಿದ ದೂರುದಾರರು ವಾಟ್ಸಾಪ್ ಗುಂಪಿನಿಂದ ತೆಗೆದುಹಾಕಲಾಗಿದ್ದ ಸದಸ್ಯರನ್ನು ಮತ್ತೆ ಗುಂಪಿಗೆ ಸೇರಿಸಿದ್ದರಿಂದ ಅರ್ಜಿದಾರರ ನಡುವೆ ಒಪ್ಪಂದ ಏರ್ಪಟ್ಟಿತ್ತು ಎಂದು ವಾದಿಸಿದ್ದರು.
ಆದರೂ, ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದವರು ಯಾರು ಎಂಬುದನ್ನು ತೀರ್ಮಾನಿಸಲು ಸಹಾಯ ಮಾಡುವ ವಿಧಿ ವಿಜ್ಞಾನ ವರದಿ ಇನ್ನಷ್ಟೇ ದೊರೆಯಬೇಕಿದೆ ಎಂದು ಹೆಚ್ಚುವರಿ ಸಾರ್ವಜನಿಕ ಪ್ರಾಸಿಕ್ಯೂಟರ್ ತಿಳಿಸಿದರು. ಇದರ ಆಧಾರದ ಮೇಲೆ ನ್ಯಾಯಾಲಯ ಅರ್ಜಿಯನ್ನು ಅಕಾಲಿಕ ಎಂಬುದಾಗಿ ಪರಿಗಣಿಸಿತು.
ವಾಟ್ಸಾಪ್ ಗ್ರೂಪ್ ರಚಿಸಿರುವವರಿಗೆ ಸದಸ್ಯರ ಅಪರಾಧ ಕೃತ್ಯಗಳ ಬಗ್ಗೆ ಮೊದಲೇ ತಿಳಿದಿರುತ್ತದೆ ಎಂದು ನಿರೀಕ್ಷಿಸಲಾಗದು ಎಂಬ ಬಾಂಬೆ ಹೈಕೋರ್ಟ್‌ನ ಅಭಿಪ್ರಾಯವನ್ನು ನ್ಯಾಯಾಲಯ ಈ ಸಂದರ್ಭದಲ್ಲಿ ಪ್ರಸ್ತಾಪಿಸಿತು. ಅರ್ಜಿದಾರರು ಗ್ರೂಪ್ ಅಡ್ಮಿನ್ ಪಾತ್ರವನ್ನು ಮಾತ್ರ ನಿರ್ವಹಿಸಿದ್ದರೆ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸುವಾಗ ಅರ್ಜಿದಾರರ ಹೆಸರನ್ನು ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್ ನಿರ್ದೇಶಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: