Thug Life 
ಸುದ್ದಿಗಳು

ಥಗ್‌ ಲೈಫ್‌ ವಿವಾದ: ʼಕಮಲ್‌ ಕ್ಷಮೆ ಕೇಳುವ ಪ್ರಶ್ನೆ ಉದ್ಭವಿಸದುʼ ಎಂದ ಸುಪ್ರೀಂ, ಒತ್ತಡಕ್ಕೆ ಮಣಿದ ಸರ್ಕಾರಕ್ಕೆ ಚಾಟಿ

ಕರ್ನಾಟಕದಲ್ಲಿ ಥಗ್ ಲೈಫ್ ಬಿಡುಗಡೆ ಮಾಡದಂತೆ ಬೆದರಿಕೆ ಹಾಕಿದ ಗುಂಪುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಕ್ಕಾಗಿ ನ್ಯಾಯಾಲಯವು ಸರ್ಕಾರವನ್ನು ಟೀಕಿಸಿತು.

Bar & Bench

ನಟ ಕಮಲ್‌ ಹಾಸನ್‌ ಅಭಿನಯದ 'ಥಗ್ ಲೈಫ್' ಚಿತ್ರ ಕರ್ನಾಟಕದಲ್ಲಿ ಬಿಡುಗಡೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಗುರುವಾರ ಕರ್ನಾಟಕ ಸರ್ಕಾರಕ್ಕೆ ತಾಕೀತು ಮಾಡಿದೆ. ಕಮಲ್‌ ಹಾಸನ್‌ ಈ ವಿಚಾರದಲ್ಲಿ ಕ್ಷಮೆ ಕೇಳುವ ಪ್ರಶ್ನೆ ಉದ್ಭವಿಸದು ಎಂದಿರುವ ನ್ಯಾಯಾಲಯ ಕಮಲ್‌ ಹೇಳಿಕೆಗೆ ಸಂಶೋಧನೆಗಳ ಮೂಲಕ ಉತ್ತರಿಸಬೇಕೆ ಹೊರತು ಅನಗತ್ಯ ಸನ್ನಿವೇಶದ ನಿರ್ಮಾಣದಿಂದ ಅಲ್ಲ ಎಂದಿದೆ.

'ತಮಿಳಿನಿಂದ ಕನ್ನಡ ಹುಟ್ಟಿದೆ' ಎಂಬ ಕಮಲ್‌ ಹಾಸನ್‌ ಅವರ ಹೇಳಿಕೆಗೆ ಈಚೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದಲ್ಲಿ ಅವರ ಚಿತ್ರ ಬಹಿಷ್ಕರಿಸುವಂತೆ ಕರೆ ನೀಡಲಾಗಿತ್ತು.

ಹಿಂದಿನ ವಿಚಾರಣೆ ವೇಳೆ ಕರ್ನಾಟಕದಲ್ಲಿ ಚಿತ್ರ ಬಿಡುಗಡೆ ವಿಳಂಬಕ್ಕೆ ಕಾರಣವಾದ ಗುಂಪುಗಳಿಗೆ ಅವಕಾಶ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರವನ್ನು ಟೀಕಿಸಿತ್ತು. ವಾಕ್ ಸ್ವಾತಂತ್ರ್ಯಕ್ಕೆ ಇರುವ ಇಂತಹ ಬೆದರಿಕೆ ಎದುರಿಸದೆ ಸರ್ಕಾರ ನಿಷ್ಕ್ರಿಯವಾಗಿರುವುದಕ್ಕೆ ನ್ಯಾಯಾಲಯ ಇಂದು ಮತ್ತೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಕರ್ನಾಟಕದಲ್ಲಿ ಗಲಭೆಕೋರ ಗುಂಪುಗಳ ಕಾರಣಕ್ಕೆ ಚಿತ್ರ ಬಿಡುಗಡೆಗೆ ಅಡ್ಡಿ ಉಂಟಾಗದಂತೆ ಚಿತ್ರ ನಿರ್ಮಾಪಕರಿಗೆ ರಕ್ಷಣೆ ನೀಡುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ಭರವಸೆ ನೀಡಿತು. ನ್ಯಾಯಮೂರ್ತಿಗಳಾದ ಉಜ್ಜಲ್‌ ಭುಯಾನ್‌ ಮತ್ತು ಮನಮೋಹನ್‌ ಅವರಿದ್ದ ಪೀಠ ಸರ್ಕಾರದ ಈ ಹೇಳಿಕೆಯನ್ನು ದಾಖಲಿಸಿಕೊಂಡಿದೆ.

ಸೆನ್ಸಾರ್ ಪ್ರಮಾಣಪತ್ರ ಹೊಂದಿದ್ದರೂ, ಕೆಲ ಸಂಘಟನೆಗಳ ಬೆದರಿಕೆ ಮತ್ತು ಸರ್ಕಾರಿ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಚಿತ್ರವನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ದೂರಿ ಬೆಂಗಳೂರು ನಿವಾಸಿ ಎಂ ಮಹೇಶ್ ರೆಡ್ಡಿ ಅವರು ಅರ್ಜಿ ಸಲ್ಲಿಸಿದ್ದರು.  ವಿಕ್ಟರಿ ಸಿನಿಮಾ ಬೆಂಗಳೂರಿನಲ್ಲಿ ಚಿತ್ರ  ಪ್ರದರ್ಶಿಸುವ ಯೋಜನೆ ಘೋಷಿಸಿದ ನಂತರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಅವರು ಕಮಲ್ ಹಾಸನ್ ಅವರ ಯಾವುದೇ ಚಿತ್ರ ಬಿಡುಗಡೆಯಾದರೆ "ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಾಗಿ" ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿತ್ತು.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕೆಲವು ಮಾರ್ಗಸೂಚಿಗಳನ್ನು ರೂಪಿಸುವಂತೆ ರೆಡ್ಡಿ ಪರ ವಕೀಲ ಎ ವೇಲನ್ ಸುಪ್ರೀಂ ಕೋರ್ಟ್‌ಗೆ ವಿನಂತಿ ಮಾಡಿದರು. ಆದರೆ ಮಾರ್ಗಸೂಚಿ ನೀಡಲು ನ್ಯಾಯಾಲಯ ನಿರಾಕರಿಸಿತು.

ಮತ್ತೊಂದೆಡೆ ಇಂತಹ ಪ್ರಕರಣಗಳಲ್ಲಿ ಕೆಲ ಗುಂಪುಗಳ ಒತ್ತಡಕ್ಕೆ ಸರ್ಕಾರ ಮಣಿಯುವಂತಿಲ್ಲ ಎಂದು ಪೀಠ ನುಡಿಯಿತು.

“ಒಂದೇ ಒಂದು ಅಭಿಪ್ರಾಯದ ಕಾರಣಕ್ಕೆ ಸಿನಿಮಾ ಒಂದನ್ನು ತಡೆ ಹಿಡಿಯಲಾಗುತ್ತದೆ, ಹಾಸ್ಯ ಕಲಾವಿದನನ್ನು ನಿರ್ಬಂಧಿಸಲಾಗುತ್ತದೆ, ಕವಿತೆ ಓದದಂತೆ ನೋಡಿಕೊಳ್ಳಲಾಗುತ್ತದೆ... ಸರ್ಕಾರಗಳು ಇಂತಹ ಗುಂಪುಗಳ ಒತ್ತಡಕ್ಕೆ ಮಣಿಯುತ್ತಿವೆ. ಇಂತಹ ಸಂದರ್ಭಗಳಲ್ಲಿ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು. ಸರ್ಕಾರ ತಾನು (ಸಿನಿಮಾಕ್ಕೆ) ನಿಷೇಧ ಹೇರಿಲ್ಲ ಎಂದು ಕೈ ತೊಳೆದುಕೊಳ್ಳುವುದರಿಂದ ಏನೂ ಆಗುವುದಿಲ್ಲ. ಸರ್ಕಾರ ಈ ಗುಂಪುಗಳ ಹಿಂದೆ ಬಚ್ಚಿಟ್ಟುಕೊಂಡಿದೆ. ಭಾರತದಲ್ಲಿ ಭಾವನೆಗಳನ್ನು ನೋಯಿಸುವುದಕ್ಕೆ ಅಂತ್ಯವೆನ್ನುವುದೇ ಇರುವುದಿಲ್ಲ. ಹಾಸ್ಯ ಕಲಾವಿದನೊಬ್ಬ ಏನನ್ನೋ ಹೇಳಿದರೆ, ಇನ್ನಾರಿಗೋ ನೋವಾಯಿತು, ದಾಂಧಲೆ ಶುರುವಾಯಿತು, ನಾವು ಎತ್ತ ಸಾಗುತ್ತಿದ್ದೇವೆ?”

ಈ ಮಧ್ಯೆ ಕನ್ನಡ ಸಾಹಿತ್ಯ ಪರಿಷತ್ತಿನ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಂಜಯ್‌ ನುಲಿ, ಭಾಷೆ ಸೂಕ್ಷ್ಮ ವಿಷಯವಾಗಿದ್ದು, ಕಮಲ್ ಹಾಸನ್ ಅಂತಹ ಬೇಜವಾಬ್ದಾರಿ ಹೇಳಿಕೆ ನೀಡಬಾರದಿತ್ತು ಎಂದರು. "ಭಾಷೆಯು ಭಾವನಾತ್ಮಕ ವಿಚಾರವಾಗಿದೆ. ನಾನೇನು ಕೆಲ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತಿಲ್ಲ. ಆದರೆ, ಇದರಿಂದಾಗಿ ಲಕ್ಷಾಂತರ ಜನರ ಭಾವನೆಗೆ ಘಾಸಿಯಾಗಿದೆ. ಇದು ಪ್ರಚಾರ ತಂತ್ರ," ಎಂದರು.

"ಸಿನಿಮಾ ಬಿಡುಗಡೆಗೆ ಮುನ್ನ ಇಂತಹ ಹೇಳಿಕೆ ನೀಡುವುದು ಮಾರ್ಕೆಟಿಂಗ್ ತಂತ್ರವಷ್ಟೇ. ನೀವು ಆ ಬಲೆಗೆ ಬೀಳುತ್ತೀರಾ... ನೀವು ನಿಷೇಧವನ್ನು ಬೆಂಬಲಿಸುತ್ತೀರಾ? ಚಿತ್ರಮಂದಿರಗಳ ದಹನವಾಗಬೇಕೆ?" ಎಂದು ನ್ಯಾಯಾಲಯ ಕೇಳಿತು.

"ಇಂತಹ ಹೇಳಿಕೆಗಳನ್ನು ನೀಡುವ ಮೊದಲು ನಟ ಹೆಚ್ಚು ಜವಾಬ್ದಾರಿಯುತವಾಗಿರಬೇಕಿತ್ತು. ನಟನ ಕ್ಷಮೆಯಾಚನೆಗೆ ಒಳಪಟ್ಟು ಚಿತ್ರವನ್ನು ಪ್ರದರ್ಶಿಸಬೇಕು" ಎಂದು ನುಲಿ ಪಟ್ಟುಹಿಡಿದರು.

ಆಗ ನ್ಯಾಯಾಲಯ ಖಂಡತುಂಡವಾಗಿ "(ಕಮಲ್‌) ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ... ನೀವು ಅವರ ಹೇಳಿಕೆಯನ್ನು ನಿಮ್ಮ ಸ್ವಂತ ಸಂಶೋಧನೆಯೊಂದಿಗೆ ಎದುರಿಸಿ. ಪ್ರಶ್ನೆ ಮಾಡಿ. ಅದರ ಬದಲು ಈ ರೀತಿಯ ಸನ್ನಿವೇಶ ಸೃಷ್ಟಿ ಮಾಡಬೇಡಿ. ಇದು ಗಿಮಿಕ್ ಎಂದು ಹೇಳುತ್ತಿದ್ದೀರಿ, ಮಾನನಷ್ಟ ಮೊಕದ್ದಮೆ ಹೂಡಿ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಚಿತ್ರ  ಬಿಡುಗಡೆಗೆ ಕಾನೂನುಬಾಹಿರ ವಿಧಾನದಲ್ಲಿ ಆಕ್ಷೇಪಿಸುವುದಿಲ್ಲ ಎಂದು ನೀವು ಹೇಳಿಕೆ ನೀಡಬೇಕು" ಎಂದು ತಾಕೀತು ಮಾಡಿತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಕರ್ನಾಟಕ ಹೈಕೋರ್ಟ್‌ನಿಂದ ತನಗೆ ವಹಿಸಿಕೊಂಡಿದೆ. ಹಿರಿಯ ವಕೀಲ ಸತೀಶ್ ಪರಾಸರನ್ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಚಿತ್ರ ನಿರ್ಮಾಣ ಸಂಸ್ಥೆಯನ್ನು ಪ್ರತಿನಿಧಿಸಿದರು.