ಸುದ್ದಿಗಳು

ಚೀನಾ ಅತಿಕ್ರಮಣದ ಹೇಳಿಕೆ: ರಾಹುಲ್‌ ವಿರುದ್ಧದ ಪ್ರಕರಣಕ್ಕೆ ತಡೆ; ಸಂಸತ್ತಿನಲ್ಲೇಕೆ ಪ್ರಶ್ನಿಸುವುದಿಲ್ಲ ಎಂದ ಸುಪ್ರೀಂ

ಸಂಸತ್ತಿನಲ್ಲಿ ಈ ಕುರಿತು ಪ್ರಸ್ತಾಪಿಸದೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವ ರಾಹುಲ್ ಗಾಂಧಿ ಅವರನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಪ್ರಶ್ನಿಸಿತು.

Bar & Bench

ಭಾರತ್‌ ಜೋಡೊ ಯಾತ್ರೆಯ ಸಂದರ್ಭದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಲಖನೌ ನ್ಯಾಯಾಲಯದಲ್ಲಿ ನಡಯುತ್ತಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ಅರುಣಾಚಲ ಪ್ರದೇಶದಲ್ಲಿ ಚೀನಾದ ಸೈನಿಕರು ಭಾರತೀಯ ಸೈನಿಕರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದಿದ್ದ ರಾಹುಲ್‌ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾ ಅತಿಕ್ರಮಣ ಕೈಗೊಂಡಿದ್ದು ಕೇಂದ್ರ ಸರ್ಕಾರವು ಕಠಿಣ ನಿಲುವು ತಳೆಯುತ್ತಿಲ್ಲ ಎಂಬುದಾಗಿ ಟೀಕಿಸಿದ್ದರು.

ಸಂಸತ್ತಿನಲ್ಲಿ ಇಂದಹ ವಿಚಾರಗಳನ್ನು ಪ್ರಸ್ತಾಪಿಸದೆ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದೇಕೆ ಎಂದು ರಾಹುಲ್ ಗಾಂಧಿ ಅವರನ್ನು ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಪ್ರಶ್ನಿಸಿತು. ರಾಹುಲ್‌ ತಮ್ಮ ಹೇಳಿಕೆಗಳಿಗೆ ಯಾವುದಾದರೂ ವಿಶ್ವಾಸಾರ್ಹ ಸಾಕ್ಷ್ಯಗಳನ್ನು ಆಧರಿಸಿದ್ದಾರೆಯೇ ಎಂದು ಸಹ ನ್ಯಾಯಾಲಯ ಕೇಳಿತು.

"ಸಾಮಾಜಿಕ ಮಾಧ್ಯಮದಲ್ಲಿ ಏಕೆ ಹೇಳಿಕೆ ನೀಡುತ್ತೀರಿ ಸಂಸತ್ತಿನಲ್ಲಿ ಏಕಿಲ್ಲ? ಚೀನಾ 2000 ಚದರ ಕಿ.ಮೀ. ಸ್ವಾಧೀನಪಡಿಸಿಕೊಂಡಿರುವುದು ನಿಮಗೆ ಹೇಗೆ ತಿಳಿಯಿತು? ಇದಕ್ಕೆ ವಿಶ್ವಾಸಾರ್ಹ ದಾಖಲೆ ಇದೆಯೇ? ನಿಜವಾದ ಭಾರತೀಯ ಇದನ್ನು ಹೇಳುವುದಿಲ್ಲ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವಾಗ, ನೀವು ಇದನ್ನೆಲ್ಲಾ ಹೇಳಬಹುದೇ? ಸಂಸತ್ತಿನಲ್ಲೇಕೆ ನೀವು ಪ್ರಶ್ನಿಸಬಾರದು? ನಿಮಗೆ 19(1)(ಎ) [ವಾಕ್ ಸ್ವಾತಂತ್ರ್ಯ] ಇದೆ ಎಂದು ನೀವು ಏನೇನೋ ಹೇಳುವುದಲ್ಲ”  ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಈ ವೇಳೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ  ವಾದ ಮಂಡಿಸಿ ರಾಹುಲ್‌ ಹೇಳಿಕೆ ಆಧರಿಸಿ ಮೂರನೇ ವ್ಯಕ್ತಿ ಮಾನನಷ್ಟ ಮೊಕದ್ದಮೆ ಹೂಡುವಂತಿಲ್ಲ ಎಂದರು.

"ಮಾನಹಾನಿ ಪ್ರಕರಣದ ಮೂಲಕ ಹೀಗೆಲ್ಲಾ ಮತ್ತೊಬ್ಬರನ್ನು ಬೆದರಿಸಲಾಗದು. ಹೈಕೋರ್ಟ್‌ ಅವರು (ದೂರುದಾರ) ಪ್ರಕರಣದಿಂದ ಬಾಧಿತರಲ್ಲ ಎನ್ನುತ್ತದ್ದೆ, ಆದರೆ ಮಾನಹಾನಿಗೊಳಗಾಗಿದ್ದರೆ ಎಂದೂ ಹೇಳುತ್ತದೆ. ಹೈಕೋರ್ಟ್‌ ನೀಡಿರುವ ಕಾರಣವು ವಿಲಕ್ಷಣವಾಗಿದ್ದು, ಸರಿಯಾಗಿಲ್ಲ," ಎಂದು ಸಿಂಘ್ವಿ ಆಕ್ಷೇಪಿಸಿದರು.

ವಾದ ಆಲಿಸಿದ ಪೀಠವು ಸರ್ಕಾರಕ್ಕೆ ನೋಟಿಸ್‌ ನೀಡಿ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಿತು. ಮೂರು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಯಲಿದೆ.

ಚೀನಾ ಅತಿಕ್ರಮಣದ ಕುರಿತಾದ ರಾಹುಲ್‌ ಹೇಳಿಕೆಗೆ ಸಂಬಂಧಿಸಿದಂತೆ ಲಖನೌ ನ್ಯಾಯಾಲಯವು ರಾಹುಲ್‌ ಅವರಿಗೆ ಹೊರಡಿಸಿದ್ದ ಸಮನ್ಸ್  ಎತ್ತಿಹಿಡಿದ ಅಲಾಹಾಬಾದ್ ಹೈಕೋರ್ಟ್ ಆದೇಶವನ್ನು ರಾಹುಲ್‌ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಮಗೆ ಸಮನ್ಸ್ ನೀಡಿದ್ದನ್ನು ಪ್ರಶ್ನಿಸಿ ರಾಹುಲ್‌ ಸಲ್ಲಿಸಿದ್ದ ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ತಿರಸ್ಕರಿಸಿದ್ದರಿಂದ ಪ್ರಕರಣದಲ್ಲಿ ಅವರು ವಿಚಾರಣಾ ನ್ಯಾಯಾಲಯದೆದುರು ಹಾಜರಾಗಿದ್ದರು.

ಉದಯ್‌ ಶಂಕರ್‌ ಶ್ರೀವಾಸ್ತವ ಎಂಬುವರು ರಾಹುಲ್‌ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಸೇನೆಯ ಕರ್ನಲ್‌ ಹುದ್ದೆಗೆ ಸಮನಾದ ಗಡಿ ರಸ್ತೆಗಳ ಸಂಸ್ಥೆಯ ನಿರ್ದೇಶಕರ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಶ್ರೀವಾಸ್ತವ ನಿವೃತ್ತರಾಗಿದ್ದಾರೆ. ವಕೀಲ ವಿವೇಕ್‌ ತಿವಾರಿ ಅವರಯ ಶ್ರೀವಾಸ್ತವ ಪರ ದೂರು ದಾಖಲಿಸಿದ್ದರು. 2022ರ ಡಿಸೆಂಬರ್‌ 9ರಂದು ಭಾರತೀಯ ಮತ್ತು ಚೀನಾ ಸೇನೆಗಳ ನಡುವೆ ನಡೆದಿದ್ದ ಘರ್ಷಣೆ ಸಂಬಂಧ 2022ರ ಡಿಸೆಂಬರ್‌ 16ರಂದು ರಾಹುಲ್‌ ಗಾಂಧಿ ಅವರು ಭಾರತೀಯ ಸೇನಾ ಪಡೆಯ ಕುರಿತು ಆಕ್ಷೇಪಾರ್ಹ ಮತ್ತು ಮಾನಹಾನಿ ಹೇಳಿಕೆ ನೀಡಿದ್ದರು ಎಂದು ವಕೀಲ ತಿವಾರಿ ಆರೋಪಿಸಿದ್ದರು.