Baba Ramdev, Supreme Court
Baba Ramdev, Supreme Court 
ಸುದ್ದಿಗಳು

ವೈದ್ಯರ ಬಗ್ಗೆ, ಅಲೋಪತಿ ಬಗ್ಗೆ ಬಾಬಾ ರಾಮದೇವ್ ಆರೋಪ ಮಾಡುತ್ತಿರುವುದೇಕೆ? ಸುಪ್ರೀಂ ಕೋರ್ಟ್ ಪ್ರಶ್ನೆ

Bar & Bench

ಕೋವಿಡ್‌ ಸಂದರ್ಭದಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿಯನ್ನು ಮತ್ತು ಅದನ್ನು ಅನುಸರಿಸುವ ವೈದ್ಯರನ್ನು ಅವಿಶ್ವಾಸಾರ್ಹಗೊಳಿಸುವ ಮುಂದಾದ ಬಾಬಾ ರಾಮ್‌ದೇವ್‌ ಅವರ ಪ್ರಯತ್ನಗಳ ಬಗ್ಗೆ ಮಂಗಳವಾರ ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

"ಬಾಬಾ ರಾಮದೇವ್ ಅವರು ವೈದ್ಯರ ವಿರುದ್ಧ, ಅಲೋಪತಿಯ ವಿರುದ್ಧ ಆರೋಪ ಮಾಡುತ್ತಿರುವುದು ಏಕೆ? ಅವರು ಯೋಗವನ್ನು ಜನಪ್ರಿಯಗೊಳಿಸಿದ್ದಾರೆ, ಒಳ್ಳೆಯದು. ಆದರೆ ಅವರು ಇತರ ವ್ಯವಸ್ಥೆಗಳನ್ನು ಟೀಕಿಸಬಾರದು. ಅವರು ಅನುಸರಿಸುವುದು ಎಲ್ಲವನ್ನೂ ಗುಣಪಡಿಸುತ್ತದೆ ಎಂಬುದಕ್ಕೆ ಏನು ಗ್ಯಾರಂಟಿ?... ಬಾಬಾ ರಾಮ್‌ದೇವ್ ವ್ಯವಸ್ಥೆಯನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುತ್ತಿರುವುದು ಏಕೆ?" ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಿ ಟಿ ರವಿಕುಮಾರ್‌ ಅವರಿದ್ದ ಪೀಠ ಕೇಳಿತು.

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಡ್ವೊಕೇಟ್-ಆನ್-ರೆಕಾರ್ಡ್ ಅಮರಜೀತ್ ಸಿಂಗ್ ಮೂಲಕ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಐಎಂಎ ಪರ ವಕೀಲ ಪ್ರಭಾಸ್ ಬಜಾಜ್ ವಾದ ಮಂಡಿಸಿದರು. "ಈ ರೀತಿಯ ಅವಹೇಳನಕಾರಿ ಹೇಳಿಕೆಗಳು ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿವೆ. ನಾವು ಈ ಬಗ್ಗೆ ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. ಆಯುಷ್‌ ಕಂಪೆನಿಗಳು ತಪ್ಪುದಾರಿಗೆಳೆಯುತ್ತಿರುವ ಜಾಹೀರಾತುಗಳ ಬಗ್ಗೆ ಸರ್ಕಾರಕ್ಕೂ ತಿಳಿದಿದೆ. ಅಲೋಪತಿ ಔಷಧ ಪಡೆಯುತ್ತಿದ್ದರೂ ಕೋವಿಡ್‌ಗೆ ವೈದ್ಯರು ಬಲಿಯಾಗುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಇದಕ್ಕೆ ಯಾವುದೇ ಕಡಿವಾಣ ಇಲ್ಲದೆ ಹೋದರೆ ನಮ್ಮ ಬಗ್ಗೆ ಗಂಭೀರ ಪೂರ್ವಗ್ರಹ ಉಂಟಾಗುತ್ತದೆ" ಎಂದು ಅವರು ಹೇಳಿದರು.

ಇದಕ್ಕೆ ತಲೆದೂಗಿದ ನ್ಯಾ. ರವಿಕುಮಾರ್ ʼಇದು ಅಲೋಪತಿಯನ್ನು ಅಪಹಾಸ್ಯ ಮಾಡುತ್ತಿರುವಂತೆ ತೋರುತ್ತಿದೆʼ ಎಂದರು. ಬಳಿಕ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.