Stray Dog  
ಸುದ್ದಿಗಳು

"ಅನಾಥ ಮಕ್ಕಳನ್ನೇಕೆ ದತ್ತು ಪಡೆಯುವುದಿಲ್ಲ?" ಶ್ವಾನಪ್ರೇಮಿಗಳಿಗೆ ತಿವಿದ ಸುಪ್ರೀಂ ಕೋರ್ಟ್‌

80 ವರ್ಷದ ನಾಯಿ ಪ್ರೇಮಿಯ ಪರವಾಗಿ ಹಾಜರಾದ ವಕೀಲರು ಬೀದಿ ನಾಯಿಗಳನ್ನು ದತ್ತು ಪಡೆಯಲು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದಾಗ ಸುಪ್ರೀಂ ಕೋರ್ಟ್ ಈ ಪ್ರಶ್ನೆಮುಂದಿಟ್ಟಿತು.

Bar & Bench

ಬೀದಿ ನಾಯಿಗಳ ಕುರಿತ ಪ್ರಕರಣವನ್ನು ಮಂಗಳವಾರ ಆಲಿಸುತ್ತಿದ್ದ ಸುಪ್ರೀಂ ಕೋರ್ಟ್‌ ಅನೇಕ ವಕೀಲರು ಶ್ವಾನಪ್ರಿಯರ ಪರವಾಗಿ ವಾದಿಸುತ್ತಾರೆಯೇ ವಿನಾ ಮನುಷ್ಯರ ಪರವಾಗಿ ಅದರಲ್ಲಿಯೂ ಮಾನವೀಯ ಅಂಶಗಳ ವಿಚಾರವಾಗಿ ವಾದಿಸುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿತು.

ರಸ್ತೆಗಳಲ್ಲಿರುವ ಅನಾಥ ಮಕ್ಕಳನ್ನು ದತ್ತು ಸ್ವೀಕರಿಸುವ ಪರವಾಗಿ ಯಾಕೆ ವಾದ ಮಂಡಿಸುತ್ತಿಲ್ಲ? ಬೀದಿ ನಾಯಿಗಳ ವಿಚಾರಕ್ಕೆ ತಮ್ಮ ವಾದ ಸೀಮಿತಗೊಳಿಸುತ್ತಿರುವುದೇಕೆ? ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್ ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠ ಪ್ರಶ್ನಿಸಿತು.

80 ವರ್ಷದ ನಾಯಿ ಪ್ರೇಮಿಯ ಪರವಾಗಿ ಹಾಜರಾದ ಹಿರಿಯ ವಕೀಲ ವೈಭವ್ ಗಗ್ಗರ್ ಅವರು ಬೀದಿ ನಾಯಿಗಳ ದತ್ತು ಪ್ರಕ್ರಿಯೆಗೆ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದಾಗ ನ್ಯಾಯಾಲಯ  ಈ ಪ್ರತಿಕ್ರಿಯೆ ನೀಡಿತು.

"ನಾನು ರಸ್ತೆಯಲ್ಲೇ ವಾಸಿಸುವ 80 ವರ್ಷದ ಮಹಿಳೆಯ ಪರ ವಾದ ಮಂಡಿಸುತ್ತಿದ್ದೇನೆ. ಅವರು 200 ನಾಯಿಗಳನ್ನು ನೋಡಿಕೊಳ್ಳುತ್ತಾರೆ. ದೆಹಲಿಯಲ್ಲಿ ಅವರನ್ನು ‘ಡಾಗ್‌ ಅಮ್ಮಾʼ ಎಂದೇ ಕರೆಯಲಾಗುತ್ತದೆ. ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸುವುದನ್ನು ಪರಿಗಣಿಸಬೇಕು. ಇಲ್ಲಿ ಅನೇಕ ವಕೀಲರು ತಮ್ಮ ಮನೆಯಲ್ಲಿ 8–10 ದೇಶಿ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ರಾಷ್ಟ್ರೀಯ ದತ್ತು ಮಿಷನ್ ಜಾರಿಗೆ ತರಬಹುದು. ಪ್ರೋತ್ಸಾಹವೆಂದರೆ ಸರಳವಾಗಿ ಸಂತಾನ ನಿಯಂತ್ರಣ (ಸ್ಟೆರಿಲೈಸೇಶನ್) ಮತ್ತು ಲಸಿಕೆ ನೀಡುವಂತಿರಬಹುದು,” ಎಂದು ಗಗ್ಗರ್ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ, “ನೀವು ಗಂಭೀರವಾಗಿ ಈ ಮಾತು ಹೇಳುತ್ತಿದ್ದೀರಾ? ಈಗಷ್ಟೇ ಒಬ್ಬ ಕಿರಿಯ ವಕೀಲ ರಸ್ತೆಗಳಲ್ಲಿ ಇರುವ ಅನಾಥ ಮಕ್ಕಳ ಅಂಕಿಅಂಶಗಳನ್ನು ನಮಗೆ ನೀಡಿದ್ದಾರೆ. ಬಹುಶಃ ವಕೀಲರು ಆ ಮಕ್ಕಳ ದತ್ತು ತೆಗೆದುಕೊಳ್ಳುವುದರ ಪರವಾಗಿ ವಾದಿಸಬೇಕಿತ್ತು. 2011ರಲ್ಲಿ ನಾನು ನ್ಯಾಯಮೂರ್ತಿಯಾಗಿ ನೇಮಕವಾದ ಬಳಿಕ ಇಷ್ಟೊಂದು ದೀರ್ಘವಾದ ವಾದ ಆಲಿಸಿಯೇ ಇರಲಿಲ್ಲ. ಆದರೆ ಇಲ್ಲಿಯವರೆಗೆ ಯಾರೂ ಮನುಷ್ಯರ ವಿಚಾರದಲ್ಲಿ ಇಷ್ಟು ದೀರ್ಘ ವಾದ ಮಂಡಿಸಿರಲಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೀದಿ ನಾಯಿಗಳ ವಿಚಾರವಾಗಿ ಸುದೀರ್ಘ ವಾದಗಳ ಮಂಡನೆಯಾಗಿದೆ. ಈವರೆಗೆ ಯಾರೂ ಮನುಷ್ಯರ ಪರವಾಗಿ ಇಷ್ಟು ದೀರ್ಘವಾಗಿ ವಾದ ಮಂಡಿಸಿಲ್ಲ.
ಸುಪ್ರೀಂ ಕೋರ್ಟ್‌

ವಿಚಾರಣೆ ವೇಳೆ ವಾದ ಮಂಡಿಸಿದ ಹಿರಿಯ ವಕೀಲ ಅರವಿಂದ್ ದಾತರ್ 2025ರ ನವೆಂಬರ್ 7ರ ಸುಪ್ರೀಂ ಕೋರ್ಟ್ ಆದೇಶ ಕಾನೂನುಬದ್ಧ ಹಾಗೂ ನ್ಯಾಯಸಮ್ಮತ. ಸಂಸ್ಥಾ ಪ್ರದೇಶಗಳು, ಕ್ಯಾಂಪಸ್‌ಗಳು, ಗೇಟೆಡ್ ಸೊಸೈಟಿಗಳಲ್ಲಿ ಬೀದಿ ನಾಯಿಗಳಿಗೆ ಉಳಿಯುವ ಹಕ್ಕಿಲ್ಲ. ನಾಯಿಗಳನ್ನು ಅರಣ್ಯಕ್ಕೆ ಬಿಡುವುದರಿಂದ ವನ್ಯಜೀವಿಗಳಿಗೆ ಅಪಾಯ. ಅಪಾಯಕಾರಿಯಾದ ನಾಯಿಗಳನ್ನು ಅರಣ್ಯಾಧಿಕಾರಿಗಳು ಕೊಲ್ಲುವ ಅಧಿಕಾರ ಇರಬೇಕು. ಆದೇಶವನ್ನು ವಿಮಾನ ನಿಲ್ದಾಣ, ನ್ಯಾಯಾಲಯ, ಸಾರ್ವಜನಿಕ ಉದ್ಯಾನಗಳಿಗೂ ವಿಸ್ತರಿಸಬೇಕು ಎಂದರು.

ಸಾರ್ವಜನಿಕ ಸಂಸ್ಥೆಗಳ ಅವರಣದಲ್ಲಿ ಯಾವುದೇ ಮನುಷ್ಯರು ತಂಗುವಂತಿಲ್ಲ ಎಂದ ಮೇಲೆ ಯಾವುದೇ ಪ್ರಾಣಿಯೂ ಸಹ ಅಲ್ಲಿ ತಂಗುವಂತಿಲ್ಲ. ಅದು ಪ್ರಾಣಿಗಳಿಂದ ನಡೆಯುವ ಅತಿಕ್ರಮಣ ಎಂದು ವಾದಿಸಿದರು.

ಹಿರಿಯ ವಕೀಲ ವಿಕಾಸ್ ಸಿಂಗ್ ಅವರು ಸಮಸ್ಯೆಯನ್ನು “ಮಾನವ ವಿರುದ್ಧ ಪ್ರಾಣಿ” ಎಂದು ನೋಡಬಾರದು. ಹಾವು, ಕಪಿಗಳಂತಹ ಪ್ರಾಣಿಗಳಿಂದಲೂ ಮನುಷ್ಯರಿಗೆ ಅಪಾಯ ಇದೆ. ಪರಿಸರ ವ್ಯವಸ್ಥೆಯಲ್ಲಿ ನಾಯಿಗೂ ಪಾತ್ರ ಇದೆ. ಪರಿಸರ ಸಮತೋಲನವನ್ನು ನ್ಯಾಯಾಲಯ ಪರಿಗಣಿಸಬೇಕು ಎಂದರು.

ಆದರೆ ಮತ್ತೊಬ್ಬ ಹಿರಿಯ ನ್ಯಾಯವಾದಿ ಪಿಂಕಿ ಆನಂದ್‌ ಮಾನವ – ಪ್ರಾಣಿ ವಿಚಾರವನ್ನು ಸಂಘರ್ಷದ ಬದಲಿಗೆ ಸಹಬಾಳ್ವೆಯ ನೆಲೆಯಲ್ಲಿ ನೋಡಬೇಕು. ನಾಯಿಗಳನ್ನು ತೆರವುಗೊಳಿಸುವುದು ವೈಜ್ಞಾನಿಕವಲ್ಲ ಮತ್ತು ಪರಿಣಾಮಕಾರಿಯೂ ಅಲ್ಲ ಎಂದರು. ಅಲ್ಲದೆ ಪ್ರಾಣಿಗಳ ಜನನ ನಿಯಂತ್ರಣ  ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಅಗತ್ಯವಿದ್ದು ಇಡೀ ದೇಶದಲ್ಲಿ ಪ್ರಾಣಿಗಳ ಜನನ ನಿಯಂತ್ರಣ  ಕೇಂದ್ರಗಳ ಸಂಖ್ಯೆ ಕೇವಲ 76ರಷ್ಟಿದೆ ಎಂದರು.

ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರು ಪ್ರಕರಣ ಅತ್ಯಂತ ಭಾವನಾತ್ಮಕ ಹಾಗೂ ಸಮಾಜಮುಖಿ ವಿಷಯಗಳನ್ನು ಒಳಗೊಂಡಿದೆ ಎಂದರು. ಪ್ರಾಣಿಗಳ ಸಂತಾನ ನಿಯಂತ್ರಣವೇ ಶಾಶ್ವತ ಪರಿಹಾರ. ಸಂವಿಧಾನದ 51ನೇ ವಿಧಿ ಪ್ರಕಾರ ಎಲ್ಲ ಜೀವಿಗಳ ಮೇಲೂ ಕರುಣೆ ಅಗತ್ಯ; ಕ್ರೂರತೆ ಒಪ್ಪಲಾಗದು ಎಂದರು.

ಇದೇ ವೇಳೆ, ಪ್ರಾಣಿಗಳ ಸಂತಾನ ನಿಯಂತ್ರಣ ನಿಯಮಾವಳಿಗಳು ಜಾರಿ ಕಳಪೆಯಾಗಿರುವುದೇ ಬೀದಿ ನಾಯಿಗಳ ಹೆಚ್ಚಳಕ್ಕೆ ಕಾರಣ ಎಂದು ಹಿರಿಯ ವಕೀಲ ಪರ್ಸಿವಲ್ ಬಿಲ್ಲಿಮೋರಿಯಾ ವಾದಿಸಿದರು. ನಿಯಮಾವಳಿ ಜಾರಿಗೊಳಿಸಿದ ಸಂತಾನ ನಿಯಂತ್ರಣ ಕಾರ್ಯಕ್ರಮದಿಂದ ನಾಯಿಗಳ ಸಂಖ್ಯೆ ಗಣನೀಯವಾಗಿ ಇಳಿಯಬಹುದು.ಬೀದಿ ನಾಯಿಗಳು ಸಮಸ್ಯೆ ಅಲ್ಲ; ವ್ಯವಸ್ಥೆಯ ವೈಫಲ್ಯವೇ ಮೂಲ ಸಮಸ್ಯೆ ಎಂದು ಅವರು ಗಮನ ಸೆಳೆದರು.

ಗುಜರಾತ್‌ನಲ್ಲಿ ವಕೀಲರೊಬ್ಬರಿಗೆ ನಾಯಿ ಕಚ್ಚಿತು. ಆಗ ಪುರಸಭೆಯವರು ನಾಯಿಗಳನ್ನು ಹಿಡಿಯಲು ಹೋದರು. ಆಗ ಅವರನ್ನೇ ಥಳಿಸಲಾಯಿತು. ವಕೀಲರು, ನಾಯಿ ಪ್ರಿಯರೇ ಆ ಕೆಲಸ ಮಾಡಿದರು!
ಸುಪ್ರೀಂ ಕೋರ್ಟ್

ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ–ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಕಾರ್ಯಯೋಜನೆ ಇದೆಯೇ ಎಂದು ತಾನು ಪರಿಶೀಲಿಸಬೇಕಿದೆ ಎಂದಿತು. ಭವಿಷ್ಯದಲ್ಲಿ ನಾಯಿ ಕಡಿತ ಅಥವಾ ಅದರಿಂದ ಸಾವು ಸಂಭವಿಸಿದರೆ ರಾಜ್ಯ ಸರ್ಕಾರಗಳಿಗೆ ಭಾರೀ ದಂಡ ವಿಧಿಸುವ ಸಾಧ್ಯತೆ ಇದೆ. ನಾಯಿಗಳಿಗೆ ಆಹಾರ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾದೀತು ಎಂದು ಹೇಳಿತು. ಜನವರಿ 20, ಮಧ್ಯಾಹ್ನ 2 ಗಂಟೆಗೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.