ದೇಶದ ಚಿತ್ರರಂಗದ ಖ್ಯಾತನಾಮರಾದ ಅಮಿತಾಬ್ ಬಚ್ಚನ್ , ಐಶ್ವರ್ಯಾ ರೈ ಬಚ್ಚನ್ , ಅಭಿಷೇಕ್ ಬಚ್ಚನ್ , ನಾಗಾರ್ಜುನ , ಅನಿಲ್ ಕಪೂರ್ ಜಾಕಿ ಶ್ರಾಫ್… ಇವರೆಲ್ಲಾ ಯಾವುದೋ ಚಿತ್ರದ ತಾರಾಗಣ ಎಂದು ಭಾವಿಸಿದಿರಾ? ಆದರೆ ಈಚಿನ ದಿನಗಳಲ್ಲಿ ತಮ್ಮ ವ್ಯಕ್ತಿತ್ವ ಹಕ್ಕು ರಕ್ಷಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ನಟರು ಇವರು.
ನಟರಷ್ಟೇ ಅಲ್ಲದೆ ನಿರ್ದೇಶಕ ಕರಣ್ ಜೋಹರ್, ಆಧ್ಯಾತ್ಮಿಕ ಗುರುಗಳಾದ ಶ್ರೀ ಶ್ರೀ ರವಿಶಂಕರ್, ಜಗ್ಗಿ ವಾಸುದೇವ್ ಹಾಗೂ ಪತ್ರಕರ್ತ ರಜತ್ ಶರ್ಮಾ ಕೂಡ ತಮ್ಮ ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಕೋರಿ ಇದೇ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಡೀಪ್‌ಫೇಕ್, ಎಐ ಆಧಾರಿತ ವಸ್ತು ವಿಷಯ ಹಾಗೂ ಖ್ಯಾತನಾಮರ ಅಸ್ಮಿತೆ ದುರುಪಯೋಗಪಡಿಸಿಕೊಂಡು ಅಶ್ಲೀಲ ವಸ್ತುವಿಷಯ ಪ್ರಸಾರ ಮಾಡುವುದರ ವಿರುದ್ಧ ದೆಹಲಿ ಉಚ್ಚ ನ್ಯಾಯಾಲಯದ ವಿವಿಧ ಪೀಠಗಳು ಮಹತ್ವದ ಆದೇಶಗಳನ್ನು ನೀಡಿವೆ.
ಇವರಲ್ಲಿ ಅನೇಕರು ರಾಷ್ಟ್ರ ರಾಜಧಾನಿಯಲ್ಲಿ ನೆಲೆಸಿಲ್ಲದೆ ಇದ್ದರೂ ದೆಹಲಿ ಹೈಕೋರ್ಟ್‌ಗೆ ಮಾತ್ರವೇ ಅರ್ಜಿ ಸಲ್ಲಿಸುತ್ತಿರುವುದು ಏಕೆ ಎಂಬುದು ಗಮನಿಸಬೇಕಾದ ವಿಚಾರ. ವ್ಯಕ್ತಿತ್ವ ಹಕ್ಕುಗಳ ರಕ್ಷಣೆ ಸಂಬಂಧ ದೆಹಲಿ ಹೈಕೋರ್ಟ್ ಆದ್ಯ ನ್ಯಾಯಾಲಯವಾಗಿರುವುದಕ್ಕೆ ಕಾರಣವೇನು ಎಂಬುದರ ಸಂಕ್ಷಿಪ್ತ ನೋಟ ಇಲ್ಲಿದೆ:
ದೆಹಲಿ ಹೈಕೋರ್ಟ್ ದೀರ್ಘಕಾಲದಿಂದಲೂ ಬೌದ್ಧಿಕ ಆಸ್ತಿ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯವಾಗಿದೆ.
ಆನಂದ್ ಮತ್ತು ಆನಂದ್ ಕಾನೂನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಪ್ರವೀಣ್ ಆನಂದ್ ಅವರು ಹೇಳುವಂತೆ, ಈ ಕ್ಷೇತ್ರಕ್ಕೆ ಸಂಬಂಧಿಸಿದ ಕಾನೂನು ವೃತ್ತಿಪರರಿಗೆ ಅಗತ್ಯವಾದ ವ್ಯವಸ್ಥೆಯನ್ನು ದೆಹಲಿ ಕಲ್ಪಿಸಿದೆ.
ಗಾಯಕ ದಲೇರ್ ಮೆಹಂದಿ ವ್ಯಕ್ತಿತ್ವ ಹಕ್ಕು ರಕ್ಷಣೆ ಹಾಗೂ ಟೈಟಾನ್ ಇಂಡಸ್ಟ್ರೀಸ್ ಮತ್ತು ರಾಮ್‌ಕುಮಾರ್ ಜ್ಯೂವೆಲರ್ಸ್ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಖ್ಯಾತನಾಮರು ತಮ್ಮ ವ್ಯಕ್ತಿತ್ವ ಹಕ್ಕುಗಳನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದನ್ನು ವಿವರಿಸಿತು ಎನ್ನುತ್ತಾರೆ ನಾಯಕ್ ನಾಯಕ್ ಅಂಡ್ ಕಂಪೆನಿಯ ಸಂಸ್ಥಾಪಕ ಹಾಗೂ ವ್ಯವಸ್ಥಾಪನಾ ಪಾಲುದಾರ ಅಮಿತ್ ನಾಯಕ್.
ಪೈರಸಿ ಯುಗ ಆರಂಭವಾಗಿದ್ದು ಉತ್ತರ ಭಾರತದಲ್ಲಿ. ಹಾಗಾಗಿ ಅಂತಹ ಪ್ರಕರಣಗಳನ್ನು ದೆಹಲಿ ಹೈಕೋರ್ಟ್ ಆಲಿಸುವಂತಾಯಿತು ಎಂಬುದು ಆನಂದ್ ಅವರ ವಾದ.
ದೆಹಲಿ ಹೈಕೋರ್ಟ್‌ನಲ್ಲಿ 2021ರಿಂದ ಬೌದ್ಧಿಕ ಆಸ್ತಿ ಮತ್ತು ವ್ಯಕ್ತಿತ್ವ ಹಕ್ಕು ರಕ್ಷಣೆ ಕುರಿತಂತೆ ಪ್ರತ್ಯೇಕ ಬೌದ್ಧಿಕ ಆಸ್ತಿ ವಿಭಾಗ ಇದ್ದು ಇಂತಹ ಪ್ರಕರಣಗಳ ಬಗ್ಗೆ ಅದು ತ್ವರಿತ ಹಾಗೂ ನುರಿತ ತೀರ್ಪುಗಳನ್ನು ನೀಡುತ್ತಿದೆ ಎಂಬ ಮಾತುಗಳಿವೆ.