Jabalpur Bench of Madhya Pradesh High Court, Couple 
ಸುದ್ದಿಗಳು

ದೈಹಿಕ ಸಂಬಂಧವಿಲ್ಲದೆಯೇ ಹೆಂಡತಿ ಪರ ಪುರುಷನನ್ನು ಪ್ರೀತಿಸುತ್ತಿದ್ದರೆ ಅದು ವ್ಯಭಿಚಾರವಲ್ಲ: ಮಧ್ಯಪ್ರದೇಶ ಹೈಕೋರ್ಟ್

ಪತಿಗೆ ಅಲ್ಪ ಆದಾಯ ಇದೆ ಎಂಬುದು ಪತ್ನಿಗೆ ನೀಡಬೇಕಾದ ಜೀವನಾಂಶವನ್ನು ಆತ ನಿರಾಕರಿಸಲು ಮಾನದಂಡವಾಗಬಾರದು ಎಂದು ಹೈಕೋರ್ಟ್ ಹೇಳಿತು.

Bar & Bench

ಪತಿಯನ್ನು ಹೊರತುಪಡಿಸಿ ಬೇರೆಯವರ ಮೇಲೆ ಪತ್ನಿ ಪ್ರೀತಿ, ಅನುರಾಗ ಹೊಂದಿದ್ದ ಸಂದರ್ಭಗಳಲ್ಲಿ ಆಕೆ ಅನ್ಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾಗ ಮಾತ್ರ ವ್ಯಭಿಚಾರ ಎನಿಸಿಕೊಳ್ಳುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ಲೈಂಗಿಕ ಸಂಭೋಗ ನಡೆದಿದ್ದಾಗ ಮಾತ್ರ ವ್ಯಭಿಚಾರ ಎನಿಸಿಕೊಳ್ಳುತ್ತದೆ ಎಂದ  ನ್ಯಾಯಮೂರ್ತಿ ಜಿ.ಎಸ್. ಅಹ್ಲುವಾಲಿಯಾ, ಬೇರೆಯವರನ್ನು ಪ್ರೀತಿಸುತ್ತಿರುವುದರಿಂದ ಆಕೆ ಜೀವನಾಂಶಕ್ಕೆ ಅರ್ಹವಲ್ಲ ಎಂಬ ಪತಿಯ ವಾದವನ್ನು ತಿರಸ್ಕರಿಸಿದರು.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್ 144 (5) ಅಥವಾ ಸಿಆರ್‌ಪಿಸಿ ಸೆಕ್ಷನ್ 125(4) ರ ಪ್ರಕಾರ ಪತ್ನಿ ವ್ಯಭಿಚಾರದಲ್ಲಿ ತೊಡಗಿರುವುದು ಸಾಬೀತಾದರೆ ಮಾತ್ರ ಜೀವನಾಂಶ ನಿರಾಕರಿಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವ್ಯಭಿಚಾರ ಎಂದು ಬಿಂಬಿಸಲು ಅಗತ್ಯವಾದ ಅಂಶ ಎಂದರೆ ಅದು ಲೈಂಗಿಕ ಸಂಭೋಗ. ಯಾವುದೇ ದೈಹಿಕ ಸಂಬಂಧವಿಲ್ಲದೆ ಹೆಂಡತಿ ಬೇರೊಬ್ಬರ ಬಗ್ಗೆ ಪ್ರೀತಿ ಮತ್ತು ಅನುರಾಗ ಹೊಂದಿದ್ದರೆ ಅದು ಆಕೆ ವ್ಯಭಿಚಾರದಲ್ಲಿ ತೊಡಗಿದ್ದಳು ಎನ್ನಲು ಸಾಕಾಗದು" ಎಂದು ನ್ಯಾಯಾಲಯ ಜನವರಿ 17ರಂದು ನೀಡಿದ ತೀರ್ಪಿನಲ್ಲಿ ವಿವರಿಸಿದೆ..

ತನ್ನ ಪತ್ನಿಗೆ ₹4,000 ಮಧ್ಯಂತರ ಜೀವನಾಂಶ ನೀಡುವಂತೆ  ಕೌಟುಂಬಿಕ ನ್ಯಾಯಾಲಯ ಪ್ರಕಟಿಸಿದ್ದ ತೀರ್ಪಿನ ವಿರುದ್ಧ ಪತಿ ಹೈಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ತಾನು ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದು ತನ್ನ ಮಾಸಿಕ ವೇತನ ಕೇವಲ ₹8,000 ಎಂದು ಆತ ಹೇಳಿದ್ದರು.

ಆದರೂ ಆತ ಕೆಲಸ ಮಾಡುತ್ತಿರುವ ಆಸ್ಪತ್ರೆ ಸಲ್ಲಿಸಿರುವ ವೇತನ ಪ್ರಮಾಣಪತ್ರ ಸೂಕ್ತವಾಗಿಲ್ಲ. ಪ್ರಮಾಣಪತ್ರದಲ್ಲಿ, ಸ್ಥಳ ದಿನಾಂಕವನ್ನು ಉಲ್ಲೇಖಿಸಿಲ್ಲ. ದಾಖಲೆಯನ್ನು ಅಧಿಕಾರಿಗಳು ನೈಜವೆಂದು ಸಾಬೀತುಪಡಿಸದ ಹೊರತು ತನಗೆ ಅದನ್ನು ಅವಲಂಬಿಸುವುದು ಕಷ್ಟಕರವಾಗುತ್ತದೆ ಎಂದು ನ್ಯಾಯಾಲಯ ನುಡಿಯಿತು.

ಪತಿಗೆ ಅಲ್ಪ ಆದಾಯ ಇದೆ ಎಂಬುದು ಪತ್ನಿಗೆ ನೀಡಬೇಕಾದ ಜೀವನಾಂಶವನ್ನು ಆತ ನಿರಾಕರಿಸಲು ಮಾನದಂಡವಾಗಬಾರದು ಎಂದು ಕೂಡ ಹೈಕೋರ್ಟ್ ಹೇಳಿತು. ಪತ್ನಿ ಬ್ಯೂಟಿ ಪಾರ್ಲರ್ ನಡೆಸುವ ಮೂಲಕ ಹಣ ಸಂಪಾದಿಸುತ್ತಿದ್ದಾಳೆ ಎಂಬ ಪತಿಯ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ. ಅಂತಹ ದಾಖಲೆಗಳನ್ನು ಆತ ಒದಗಿಸಿಲ್ಲ ಎಂದು ತಿಳಿಸಿದ ಅದು ಕ್ರಿಮಿನಲ್‌ ಮರುಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Adultery_and_maintenance.pdf
Preview