'ದೈಹಿಕ ಸಂಬಂಧ' ಎಂದರೆ ಲೈಂಗಿಕ ದೌರ್ಜನ್ಯ ಎಂಬರ್ಥವಲ್ಲ ಎಂದ ದೆಹಲಿ ಹೈಕೋರ್ಟ್: ಪೊಕ್ಸೊ ಆರೋಪಿ ಖುಲಾಸೆ

ಪೊಕ್ಸೊ ಕಾಯಿದೆಯ ಸೆಕ್ಷನ್ 3 ಅಥವಾ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಅಪರಾಧ ಸಾಬೀತಾಗಲು 'ಸಂಬಂಧ ಏರ್ಪಟ್ಟಿತ್ತು' ಎಂಬ ಪದ ಬಳಕೆ ಸಾಲದು ಎಂದ ಪೀಠ.
Delhi High court, POCSO Act
Delhi High court, POCSO Act
Published on

ಹದಿನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಮತ್ತು ಐಪಿಸಿ ಸೆಕ್ಷನ್‌ ಅಡಿಯಲ್ಲಿ ಬಂಧಿತನಾಗಿದ್ದ ಆರೋಪಿಯನ್ನು ದೆಹಲಿ ಹೈಕೋರ್ಟ್‌ ಈಚೆಗೆ ಖುಲಾಸೆಗೊಳಿಸಿದೆ [ಪರೋಕರ್ ಬಾನು ಖಾತುನ್  ಅವರ ಮೂಲಕ ಶಹಜಾನ್‌ ಅಲಿ  ಮತ್ತು ಶೋ ಪಿಎಸ್ ಮಧು ವಿಹಾರ್ ಮೂಲಕ ರಾಜ್ಯ ಸರ್ಕಾರ ನಡುವಣ ಪ್ರಕರಣ].

ಸಂತ್ರಸ್ತೆಯ ಹೇಳಿಕೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ದೌರ್ಜನ್ಯವನ್ನು ಸೂಚಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಪ್ರತಿಬಾ ಎಂ ಸಿಂಗ್ ಮತ್ತು ಅಮಿತ್ ಶರ್ಮಾ ಅವರಿದ್ದ ಪೀಠ ಹೇಳಿದೆ.

Also Read
ಪೊಕ್ಸೊ ಪ್ರಕರಣ: ಅತ್ಯಾಚಾರಕ್ಕೆ ತುತ್ತಾಗಿದ್ದ ಬಾಲಕಿಯ ಗರ್ಭಪಾತಕ್ಕೆ ಹೈಕೋರ್ಟ್ ಅನುಮತಿ

“ಸಂತ್ರಸ್ತೆ ವಾಸ್ತವವಾಗಿ ದೈಹಿಕ ಸಂಬಂಧ ಎಂಬ ಪದಗುಚ್ಛ ಬಳಸಿದ್ದು ಆದರೆ ಈ ಪದವನ್ನು ಆಕೆ ಹೇಗೆ ಅರ್ಥೈಸಿದ್ದಾಳೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪೊಕ್ಸೊ ಕಾಯಿದೆಯ ಸೆಕ್ಷನ್ 3 ಅಥವಾ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಅಪರಾಧ ಸಾಬೀತಾಗಲು  'ಸಂಬಂಧ ಏರ್ಪಟ್ಟಿತ್ತು' ಎಂಬ ಪದ ಬಳಕೆ ಸಾಲದು. ಪೊಕ್ಸೊ ಕಾಯಿದೆಯಡಿ ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದರೆ ಒಪ್ಪಿಗೆ ಅಪ್ರಸ್ತುತವಾಗಿದ್ದರೂ ಲೈಂಗಿಕ ದೌರ್ಜನ್ಯ ನಡೆಯದೆ ಇರುವಾಗ ದೈಹಿಕ ಸಂಬಂಧ ಎಂಬ ಪದಗುಚ್ಛವನ್ನು ಲೈಂಗಿಕ ಸಂಭೋಗ ಎಂದು ತನ್ನಿಂತಾನೇ ಪರಿವರ್ತಿಸಲಾಗದು" ಎಂದು ನ್ಯಾಯಾಲಯ ವಿವರಿಸಿದೆ.

ಅಪ್ರಾಪ್ತ ಸಂತ್ರಸ್ತೆಯ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಇಲ್ಲವೇ ಆಕೆಯ ಹೇಳಿಕೆಯನ್ನು ಬೆಂಬಲಿಸುವಂತಹ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅವಳು ಸ್ವಯಂಪ್ರೇರಣೆಯಿಂದ ಮೇಲ್ಮನವಿದಾರರೊಂದಿಗೆ ತೆರಳಿದ್ದಾಳೆ ಎಂಬ ಅಂಶವನ್ನೂ ಪ್ರಶ್ನಿಸಲಾಗಿಲ್ಲ. ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವುದನ್ನು ಸಾಕ್ಷ್ಯಗಳ ಮೂಲಕ ಸಾಬೀತುಪಡಿಸಬೇಕೆ ವಿನಾ ಊಹೆಯಿಂದ ಅದನ್ನು ನಿರ್ಣಯಿಸಲಾಗದು ಎಂದು ಪೀಠ ಹೇಳಿದೆ.

"ಅಂತಹ ಪ್ರಕರಣಗಳಲ್ಲಿ, ಶಂಕೆಯ ಲಾಭವು ಆರೋಪಿಯ ಪರವಾಗಿರುತ್ತದೆ ಎಂದು ಅದು ತಿಳಿಸಿತು.

Also Read
[ಪೊಕ್ಸೊ] ಸಂತ್ರಸ್ತೆಯ ವೈದ್ಯಕೀಯ ವರದಿ ಇಲ್ಲದಿದ್ದರೆ ತೀರ್ಪು ಅತ್ಯಾಚಾರ ಆರೋಪಿಗಳ ಪರವಾಗಲಿದೆ: ಕಲ್ಕತ್ತಾ ಹೈಕೋರ್ಟ್

ಅಂತೆಯೇ ಪಾಟಿ ಸಾವಲಿನಲ್ಲಿ ಸಂತ್ರಸ್ತೆ ತನ್ನ ಮೇಲೆ ದೈಹಿಕ ಹಲ್ಲೆ ಇಲ್ಲವೇ ತಪ್ಪು ಕೆಲಸ ನಡೆದಿಲ್ಲ ಎಂದು ಹೇಳಿರುವುದನ್ನು ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ದೈಹಿಕ ಗಾಯ ಅಥವಾ ಲೈಂಗಿಕ ದೌರ್ಜನ್ಯ ನಡೆದಿರುವ ಚಿಹ್ನೆಗಳಿಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್‌ ವಿಚಾರಣಾ ನ್ಯಾಯಾಲಯ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಯಾವುದೇ ತರ್ಕ ಒದಗಿಸಿಲ್ಲ ಎಂದಿತು.

ಮೇಲ್ಮನವಿದಾರ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ವಿಚಾರಣಾ ನ್ಯಾಯಾಲಯ ಯಾವ ರೀತಿ ತೀರ್ಮಾನಿಸಿತು ಎಂಬುದು ಅಸ್ಪಷ್ವವಾಗಿದೆ. ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂಬ ಅಂಶ ಒಳಪ್ರವೇಶಿಕೆಯ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ತೀರ್ಮಾನಕ್ಕೆ ಕಾರಣವಾಗದು ಎಂದ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿತು.

Kannada Bar & Bench
kannada.barandbench.com