CJI Sanjiv Khanna 
ಸುದ್ದಿಗಳು

ನಿವೃತ್ತಿಯ ನಂತರ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ: ನಿರ್ಗಮಿತ ಸಿಜೆಐ ಸಂಜೀವ್ ಖನ್ನಾ

ನ್ಯಾಯಮೂರ್ತಿ ಖನ್ನಾ ಅವರು 2019ರ ಜನವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಹೊಂದಿದರು. ನವೆಂಬರ್ 2024 ರಿಂದ ಮೇ 2025ರವರೆಗೆ ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.

Bar & Bench

ತಾವು ನಿವೃತ್ತಿಯ ಬಳಿಕ ಯಾವುದೇ ಹುದ್ದೆ ಅಲಂಕರಿಸುವುದಿಲ್ಲ ಎಂದು ಇಂದು ಸೇವೆಯಿಂದ ನಿವೃತ್ತರಾದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸಂಜೀವ್‌ ಖನ್ನಾ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, "ನಾನು ನಿವೃತ್ತಿ ನಂತರ ಯಾವುದೇ ಹುದ್ದೆ ಸ್ವೀಕರಿಸುವುದಿಲ್ಲ.. ಆದರೆ ಕಾನೂನು ಕುರಿತು ಕೆಲಸ ಮಾಡುತ್ತೇನೆ" ಎಂದು ಉತ್ತರಿಸಿದರು.

ಅಲಾಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಹೇಗೆ ನಿರ್ವಹಿಸಲಾಯಿತು ಎನ್ನುವ ಕುರಿತು ವಿವರಿಸಿದ ಅವರು

"ನ್ಯಾಯಾಂಗ ಚಿಂತನೆಯು ನಿರ್ಣಾಯಕವೂ ಮತ್ತು ನ್ಯಾಯಸಮ್ಮತವಾಗಿರಬೇಕು. ನಾವು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳೆರಡನ್ನೂ ನೋಡುತ್ತೇವೆ. ನಂತರ ಸಮಸ್ಯೆಯನ್ನು ತರ್ಕಬದ್ಧವಾಗಿ ನಿರ್ಧರಿಸುತ್ತೇವೆ. ಹಾಗೆ ಮಾಡುವಾಗ ನಿರ್ಧಾರ ತೆಗೆದುಕೊಳ್ಳುತ್ತೇವೆ. ನಂತರ ನಾವು ಮಾಡಿದ್ದು ಸರಿಯೋ ಅಲ್ಲವೋ ಎಂಬುದನ್ನು ಭವಿಷ್ಯ ಹೇಳುತ್ತದೆ” ಎಂದರು.

ಮೇ 14, 1960 ರಂದು ಜನಿಸಿದ ನ್ಯಾಯಮೂರ್ತಿ ಖನ್ನಾ ಅವರು ಸಮೃದ್ಧ ಕಾನೂನು ಪರಂಪರೆ ಹೊಂದಿರುವ ಕುಟುಂಬದಿಂದ ಬಂದವರು. ಅವರ ತಂದೆ ದೇವ್ ರಾಜ್ ಖನ್ನಾ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು ಮತ್ತು ಅವರ ತಾಯಿ ಸರೋಜ್ ಖನ್ನಾ ಅವರು ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದರು.

ಅವರು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರ ಸೋದರಳಿಯ.  ಸಿಜೆಐ ಖನ್ನಾ ಅವರ ಅಜ್ಜ, ಪ್ರಮುಖ ವಕೀಲರಾದ ಸರವ್ ದಯಾಳ್, 1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ತನಿಖೆ ನಡೆಸುತ್ತಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು.

ಮೂರು ದಶಕಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಮತ್ತು ವಕಾಲತ್ತು ಅನುಭವ ಹೊಂದಿರುವ ನ್ಯಾ. ಖನ್ನಾ ಅವರು ದೆಹಲಿ ಹೈಕೋರ್ಟ್‌ನಲ್ಲಿ ವಕೀಲಿಕೆ ಮಾಡಿದ್ದರು, ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ಕೌನ್ಸಿಲ್ ಆಗಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದರು.

ಜೂನ್ 2005 ರಲ್ಲಿ ನ್ಯಾ. ಖನ್ನಾ ಅವರನ್ನು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು,  2006ರಲ್ಲಿ ದೆಹಲಿ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳನ್ನಾಗಿ ಮಾಡಲಾಯಿತು. ಜನವರಿ  2019ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದ ಅವರು ನವೆಂಬರ್ 2024 ರಿಂದ ಮೇ 2025 ರವರೆಗೆ ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು.