ಸ್ತ್ರೀ ಸಂಗಾತಿಯ ಯಾವುದೇ ಪ್ರತಿರೋಧ ಇಲ್ಲದೆ ಅಥವಾ ಮದುವೆಗೆಒತ್ತಾಯಿಸದೆ ಸುದೀರ್ಘ ಕಾಲ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದರೆ ಆಗ ಅದು ಸಹಮತದ ಲೈಂಗಿಕ ಸಂಬಂಧವಾಗುತ್ತದೆಯೇ ವಿನಾ ವಿವಾಹದ ಸುಳ್ಳು ಭರವಸೆ ನೀಡಿ ಮಾಡಲಾದ ಅತ್ಯಾಚಾರ ಎನಿಸಿಕೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತಿಳಿಸಿದೆ [ಮಹೇಶ್ ದಮು ಖರೆ ಮತ್ತು ಮಹರಾಷ್ಟ್ರಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಸಮ್ಮತಿಯ ಲೈಂಗಿಕ ಸಂಬಂಧ ಹಳಸಿದ ಬಳಿಕ ಪುರುಷ ಸಂಗಾತಿ ಮೇಲೆ ಆರೋಪ ಮಾಡುವುದು ಚಿಂತೆಗೀಡು ಮಾಡುವಂತಹ ಪ್ರವೃತ್ತಿ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿದೆ.
ಸುದೀರ್ಘ ಕಾಲದ ಸಹಮತದ ಲೈಂಗಿಕ ಸಂಬಂಧ ಇದ್ದರೂ ಅದನ್ನು ಅತ್ಯಾಚಾರ ಎಂದು ಕ್ರಿಮಿನಲ್ ಕಾನೂನು ಅನ್ವಯಿಸಿ ಅಪರಾಧ ಎಂದು ಪರಿಗಣಿಸಲು ಯತ್ನಿಸುತ್ತಿರುವುದು ಆತಂಕಕಾರಿ ಯತ್ನವಾಗಿದೆ ಎಂಬುದು ಈ ನ್ಯಾಯಾಲಯ ನಡೆಸಿರುವ ಇದೇ ರೀತಿಯ ಅನೇಕ ಪ್ರಕರಣಗಳ ವಿಚಾರಣೆಯಿಂದ ಸ್ಪಷ್ಟವಾಗಿದೆ ಎಂದು ಅದು ಹೇಳಿದೆ.
ಆದ್ದರಿಂದ ಒಪ್ಪಿಗೆಯ ಸಂಬಂಧ ಮತ್ತು ಸುಳ್ಳು ಭರವಸೆ ಆಧರಿಸಿ ನಡೆಸುವ ಅತ್ಯಾಚಾರ ಪ್ರಕರಣಗಳಿಗೂ ಇರುವ ವ್ಯತ್ಯಾಸವನ್ನು ಅರಿಯಬೇಕಿದೆ ಎಂದು ಅದು ಕಿವಿಮಾತು ಹೇಳಿದೆ.
ವಿವಾಹವಾಗುವ ಭರವಸೆ ಹೊರತಾಗಿಯೂ ವೈವಾಹಿಕ ಸಂಬಂಧ ಬೇಡದೆ ಸಂಗಾತಿಯೊಂದಿಗೆ ವೈಯಕ್ತಿಕ ಒಲವು ಬೆಳೆಸಿಕೊಳ್ಳುವಂತಹ ರೀತಿಯಲ್ಲಿ ಸ್ತ್ರೀ ಸಂಗಾತಿ ಪುರುಷನೊಂದಿಗೆ ದೈಹಿಕ ಸಂಬಂಧ ಹೊಂದಲು ಬೇರೆ ಕಾರಣಗಳು ಇರಬಹುದು. ಅಂತಹ ಸಂಬಂಧ ದೀರ್ಘಕಾಲದಿಂದ ಇದ್ದಷ್ಟೂ ಅದು ಮದುವೆಯ ಯಾವುದೇ ಭರವಸೆಯಿಲ್ಲದ ಸಮ್ಮತಿಯ ಸಂಬಂಧ ಎಂಬ ಸೂಚನೆ ಹೆಚ್ಚುತ್ತದೆ ಎಂದು ಅದು ಹೇಳಿದೆ.
ಸ್ತ್ರೀ ಸಂಗಾತಿ ನಿರಾಸಕ್ತಿ ತೋರದೆ ಇಲ್ಲವೇ ಪ್ರತಿರೋಧ ಒಡ್ಡದೆ ದೈಹಿಕ ಸಂಬಂಧವನ್ನು ದೀರ್ಘ ಕಾಲ ಮುಂದುವರೆಸುವುದು ಕ್ರಿಮಿನಲ್ ಅಪರಾಧದ ಕುಣಿಕೆಯನ್ನು ತೆಗೆದು ಹಾಕಿ ಅಪರಾಧವನ್ನು ಇಲ್ಲವಾಗಿಸುತ್ತದೆ ಎಂದು ಅದು ಹೇಳಿದೆ.
ಪ್ರಸ್ತುತ ಪ್ರಕರಣದಲ್ಲಿ ಸುಮಾರು ಒಂಬತ್ತು ವರ್ಷಗಳ ಸುದೀರ್ಘ ಸಹಮತದ ಸಂಬಂಧ ಹೊಂದಿದ್ದ ದೂರುದಾರೆ ಆಪಾದನೆಯನ್ನು ಮಾಡುವುದಕ್ಕೆ ಪ್ರಚೋದಕ ಅಂಶವಾಗಿರುವುದು ಮೇಲ್ಮನವಿದಾರ ಮದುವೆಯಾಗುವ ಭರವಸೆಯಿಂದ ಹಿಂದೆ ಸರಿದ ಎನ್ನುವುದಕ್ಕಿಂತಲೂ ಹೆಚ್ಚಾಗಿ ದೂರುದಾರೆಗೆ ಹಣಕಾಸಿನ ಬೆಂಬಲ ಸ್ಥಗಿತಗೊಳಿಸಿದ್ದಾಗಿದೆ ಎಂದ ನ್ಯಾಯಾಲಯ ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಲು ಅನುಮತಿ ನೀಡಿತು.