ಯುವತಿಯೊಬ್ಬರು ವ್ಯಕ್ತಿಯೊಂದಿಗೆ ದೀರ್ಘಕಾಲದ ಒಡನಾಟ ಮತ್ತು ದೈಹಿಕ ಸಂಬಂಧ ಹೊಂದಿದ್ದರು ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಆಕೆ ವ್ಯಕ್ತಿಯೊಬ್ಬರ ವಿರುದ್ಧ ಹೂಡಿದ್ದ ಅತ್ಯಾಚಾರ ಪ್ರಕರಣವನ್ನು ಬುಧವಾರ ರದ್ದುಗೊಳಿಸಿದೆ [ಪ್ರಶಾಂತ್ ಮತ್ತು ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಪರಸ್ಪರ ಸಮ್ಮತಿ ಇರುವ ಸಂಬಂಧ ಮುರಿದುಬಿದ್ದ ಮಾತ್ರಕ್ಕೆ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗದು ಎಂದು ನ್ಯಾಯಮೂರ್ತಿ ಬಿ ವಿ ನಾಗರತ್ನ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ತಿಳಿಸಿತು.
ಯುವತಿಯ ಒಪ್ಪಿಗೆ ಇಲ್ಲದೆ ಆಕೆಯೊಂದಿಗೆ ಆರೋಪಿ ಸುದೀರ್ಘ ಕಾಲ ಸಂಬಂಧ ಹೊಂದಿದ್ದ ಎಂಬುದು ಒಪ್ಪುವಂತಹ ವಿಚಾರವಲ್ಲ ಎಂದು ನ್ಯಾಯಾಲಯ ತಿಳಿಸಿದೆ.
“ಪರಸ್ಪರ ಸಮ್ಮತಿ ಇರುವ ಸಂಬಂಧ ಮುರಿದುಬಿದ್ದ ಮಾತ್ರಕ್ಕೆ ವ್ಯಕ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗದು. ಮೊದಲು ಕಕ್ಷಿದಾರರ ನಡುವೆ ಸಮ್ಮತಿಯ ಸಂಬಂಧ ಇದ್ದು ನಂತರ ವಿವಾಹದ ನಂಟು ಬೆಳೆಯಲಿಲ್ಲ ಎಂಬ ಕಾರಣಕ್ಕೆ ಅಪರಾಧದ ಬಣ್ಣ ಬಳಿಯಲಾಗದು” ಎಂದು ನ್ಯಾಯಾಲಯ ತಿಳಿಸಿದೆ.
ತನ್ನ ವಿಳಾಸ ಪತ್ತೆ ಹಚ್ಚಿ ತನ್ನೊಂದಿಗೆ ವ್ಯಕ್ತಿ ಬಲವಂತದ ಲೈಂಗಿಕ ಸಂಬಂಧ ಬೆಳೆಸಿಕೊಂಡಿದ್ದ ಎಂಬ ಬಗ್ಗೆಯೂ ಸುಪ್ರೀಂ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿತು. ವಿಳಾಸವನ್ನು ಯುವತಿ ಸ್ವಯಂ ಪ್ರೇರಣೆಯಿಂದ ನೀಡದೆ ಇದ್ದರೆ ಅದು ಆರೋಪಿಗೆ ತಿಳಿಯುವುದು ಸಾಧ್ಯವಿಲ್ಲ ಎಂದ ನ್ಯಾಯಾಲಯ ಯುವತಿಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪ ಎದುರಿಸಿದ್ದ ವ್ಯಕ್ತಿಯ ವಿರುದ್ಧದ ಪ್ರಕರಣ ರದ್ದುಗೊಳಿಸಿತು.
ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿ ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ. ತನ್ನೊಂದಿಗೆ ಸಂಬಂಧ ಮುಂದುವರೆಸದಿದ್ದರೆ ನಿನ್ನ ಕುಟುಂಬಕ್ಕೆ ತೊಂದರೆ ನೀಡುವುದಾಗಿ ಹೇಳಿದ್ದ ಎಂಬುದಾಗಿ ಯುವತಿ 2019 ರಲ್ಲಿ ದೂರು ದಾಖಲಿಸಿದ್ದಳು. ಸಾಕಷ್ಟು ಸಾಕ್ಷ್ಯಾಧರಗಳಿವೆ ಎಂದು ತಿಳಿಸಿದ್ದ ದೆಹಲಿ ಹೈಕೋರ್ಟ್ ವ್ಯಕ್ತಿಯ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.
ಆದರೆ ಆರಂಭದಲ್ಲಿ ಇಬ್ಬರು ಅನ್ಯೋನ್ಯವಾಗಿದ್ದರು ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಪ್ರಾಸಿಕ್ಯೂಷನ್ ದೂರಿರುವುದನ್ನೇ ಪರಿಗಣಿಸಿದರೂ ವಿವಾಹದ ಭರವಸೆಯ ಕಾರಣಕ್ಕೆ ದೂರುದಾರೆ ಆರೋಪಿಯೊಂದಿಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದ್ದರು ಎಂದು ತೀರ್ಮಾನಿಸಲಾಗದು. ಅಲ್ಲದೆ ಪರಸ್ಪರ ಸಮ್ಮತಿಯಿಂದ ಕೂಡಿದ್ದ ಜೋಡಿಯ ಸಂಬಂಧ ಮುರಿದುಬಿದ್ದ ಮಾತ್ರಕ್ಕೆ ಕ್ರಿಮಿನಲ್ ಮೊಕದ್ದಮೆ ಹೂಡಲು ಸಾಧ್ಯವಿಲ್ಲ ಎಂದು ಸ್ಪಷ್ವಪಡಿಸಿತು.