PM Narendra Modi  
ಸುದ್ದಿಗಳು

ಮನವಿದಾರನ ಆರೋಗ್ಯ ಸ್ಥಿತಿ ಸರಿ ಇಲ್ಲ: ಮೋದಿ ಅನರ್ಹತೆ ಕೋರಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ಕ್ಯಾಪ್ಟನ್ ದೀಪಕ್ ಕುಮಾರ್ ಅವರು ನರೇಂದ್ರ ಮೋದಿಯವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸುವಂತೆ ಕೋರಿದ್ದರು. ಅರ್ಜಿಯನ್ನು ಈ ಹಿಂದೆ ಹೈಕೋರ್ಟ್ ಏಕ ಸದಸ್ಯ ಪೀಠ ತಿರಸ್ಕರಿಸಿತ್ತು.

Bar & Bench

ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಬುಧವಾರ ತಿರಸ್ಕರಿಸಿರುವ ದೆಹಲಿ ಹೈಕೋರ್ಟ್, ಅರ್ಜಿ ಸಲ್ಲಿಸಿದ ವ್ಯಕ್ತಿ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತೆ ತೋರುತ್ತಿದೆ ಎಂದು ಹೇಳಿದೆ.

ಸ್ಥಳೀಯ ಠಾಣಾಧಿಕಾರಿ ಮತ್ತು ಜಿಲ್ಲಾ ನ್ಯಾಯಾಧೀಶರು ಅರ್ಜಿದಾರ ಕ್ಯಾಪ್ಟನ್ ದೀಪಕ್ ಕುಮಾರ್ ಅವರ ಮೇಲೆ ನಿಗಾ ಇಡುವಂತೆ  ಅಗತ್ಯವಿದ್ದರೆ ಮಾನಸಿಕ ಆರೋಗ್ಯ ಕಾಯಿದೆಯಡಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಸೂಚಿಸಿತು.

ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ನಾಗರಿಕ ವಿಮಾನಯಾನ ಮಾಜಿ ಸಚಿವ (ಈಗ ಸಂವಹನ ಸಚಿವ) ಜ್ಯೋತಿರಾದಿತ್ಯ ಸಿಂಧಿಯಾ ಅವರು  ಸಂವಿಧಾನಕ್ಕೆ ನಿಷ್ಠೆಯಿಂದಿರುವುದಾಗಿ ಸುಳ್ಳು ಪ್ರಮಾಣ ಮಾಡಿದ್ದಾರೆ ಎಂದು ಕುಮಾರ್ ಆರೋಪಿಸಿದ್ದರು. ಅಲ್ಲದೆ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿಯೊಬ್ಬರ ಸಹಾಯ ಪಡೆದು ಪ್ರಧಾನಿ ತನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಕುಮಾರ್ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಕುಮಾರ್‌ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಿತು. "ನೀವು ಆರೋಗ್ಯವಾಗಿದ್ದೀರಾ? ನಿಮ್ಮ ಅರ್ಜಿ ಅಸಮಂಜಸವಾದುದಾಗಿದೆ. ಇದು ಒಂದು ಅತಿಯಿಂದ ಮತ್ತೊಂದು ಅತಿಗೆ ಹೋಗುತ್ತಿದೆ. ನೀವು ಹಾರಿಸುತ್ತಿದ್ದ ವಿಮಾನಕ್ಕೆ ಅಪಘಾತವಾಯಿತು, ನಿಮ್ಮ ಮಗಳು ಕಾಣೆಯಾಗಿದ್ದಾಳೆ, ಮಾಜಿ ನಿವೃತ್ತ ಸಿಜೆಐ ನಿಮ್ಮನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದೆಲ್ಲಾ ಇದೆ. ನೀವು ಸ್ವಸ್ಥವಾಗಿದ್ದೀರಾ? ಯಾವುದೇ ಮನುಷ್ಯನಿಗೂ ಅರ್ಜಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಏಕಸದಸ್ಯ ಪೀಠ ಇದು ಆಧಾರರಹಿತ ಆರೋಪಗಳಿಂದ ತುಂಬಿದೆ ಎಂದು ಹೇಳಿರುವುದು ಸರಿಯಾಗಿದೆ” ಎಂಬುದಾಗಿ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.

ಕುಮಾರ್‌ ಮಾಡಿರುವ ಎಲ್ಲಾ ಆರೋಪಗಳು ಕಪೋಲಕಲ್ಪಿತವಾಗಿದ್ದು ಯಾವುದೇ ಆಧಾರ ಇಲ್ಲದಂತಹವು ಎಂದು ಪೀಠ ತಿಳಿಸಿದೆ. ಆರೋಪಗಳು ಅಸಂಬದ್ಧವಾಗಿದ್ದು ಅಧಿಕಾರಿಗಳು ಅರ್ಜಿದಾರನ ಮೇಲೆ ನಿಗಾ ಇಡುವಂತೆ ಸೂಚಿಸಿದ ಪೀಠ ಮೇಲ್ಮನವಿಯನ್ನು ವಜಾಗೊಳಿಸಿತು.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ವಾರಾಣಸಿ ಕ್ಷೇತ್ರದಿಂದ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರು ಸಂವಿಧಾನದ ಮೇಲೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದಿರುವುದಾಗಿ ಚುನಾವಣಾ ಅಧಿಕಾರಿಯ ಮುಂದೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸಂಚೊಂದರಲ್ಲಿ ಮೋದಿ ಭಾಗಿಯಾಗಿದ್ದು ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದಾರೆ. ತನ್ನ ನಿಯಂತ್ರಣದಲ್ಲಿದ್ದ ವಿಮಾನವನ್ನು ಪತನಗೊಳಿಸಿ ಕೊಲ್ಲಲು ಮೋದಿ ನೇತೃತ್ವದಲ್ಲಿ ಯತ್ನ ನಡೆದಿತ್ತು ಎಂದು ಅವರು ದೂರಿದ್ದರು.

ಮೋದಿಯವರು ಸುಳ್ಳು ಪ್ರತಿಜ್ಞಾ ವಿಧಿಯನ್ನು ಕೈಗೊಂಡಿರುವುದರ ವಿರುದ್ಧ ಪರಿಣಾಮಕಾರಿಯಾಗಿ ಮತ್ತು ಕಾಲಮಿತಿಯಲ್ಲಿ ತನಿಖೆ ನಡೆಸಬೇಕು. ಆರೋಪಗಳು ನಿಜವೆಂದು ಕಂಡುಬಂದರೆ, ಅವರು ಯಾವುದೇ ಸಾರ್ವಜನಿಕ ಹುದ್ದೆ ಸ್ವೀಕರಿಸದಂತೆ ನಿಷೇಧಿಸಬೇಕು ಎಂದು ಕುಮಾರ್‌ ಒತ್ತಾಯಿಸಿದ್ದರು.  ಅರ್ಜಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಅವರು ವಿಭಾಗೀಯ ಪೀಠದ ಮೊರೆ ಹೋಗಿದ್ದರು.