ವಾಟ್ಸ್ಆಪ್ ಮತ್ತು ಅದರ ಮಾಲೀಕ ಸಂಸ್ಥೆ ಮೆಟಾವನ್ನು ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್ ವಾಟ್ಸ್‌ಆಪ್‌ನ "ಒಪ್ಪಿ, ಇಲ್ಲವೇ ಬಿಡಿ" ಎಂಬ ಗೌಪ್ಯತಾ ನೀತಿ ದತ್ತಾಂಶ ಕಳವಿಗೆ ಅವಕಾಶ ಮಾಡಿಕೊಡುವಂತಿದೆ ಎಂದು ಆತಂಕ ವ್ಯಕ್ತಪಡಿಸಿದೆ [ವಾಟ್ಸಾಪ್, ಮೆಟಾ ಮತ್ತು ಭಾರತೀಯ ಸ್ಪರ್ಧಾ ಆಯೋಗ ನಡುವಣ ಪ್ರಕರಣ].
ವಾಟ್ಸ್ಆಪ್ ಬಳಕೆದಾರರಿಗೆ ಈ ಗೌಪ್ಯತಾ ನೀತಿಯಿಂದ ಹೊರಬರುವ ಸ್ಪಷ್ಟ ಆಯ್ಕೆಯೇ ಇಲ್ಲದಿರುವುದನ್ನೂ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಮತ್ತು ವಿಪುಲ್ ಪಂಚೋಲಿ ಅವರನ್ನು ಒಳಗೊಂಡ ಪೀಠ ಗಮನಿಸಿತು
“ಗೌಪ್ಯತಾ ನೀತಿಯಿಂದ ಹೊರಬರುವ ಸ್ಪಷ್ಟ ಆಯ್ಕೆ ಎಲ್ಲಿದೆ? ನಿಮ್ಮ ಮೊಬೈಲ್‌ನಲ್ಲಿ ತೋರಿಸಿ. ಇದು ಖಾಸಗಿ ಮಾಹಿತಿಯನ್ನು ಕಳವು ಮಾಡುವ ಒಂದು ‘ಸಭ್ಯ’ ವಿಧಾನ! ನಿಮ್ಮ ವಾಣಿಜ್ಯ ಹಿತಾಸಕ್ತಿಗಳೇನು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ಬಳಕೆದಾರರನ್ನು ಈ ಆ್ಯಪ್‌ಗೆ ನೀವು ಹೇಗೆ ಅಧೀನರನ್ನಾಗಿ ಮಾಡಿಕೊಂಡಿದ್ದೀರಿ ಎಂಬುದೂ ನಿಮಗೆ ಗೊತ್ತು. ಎಲ್ಲರೂ ಇದನ್ನು ಬಳಸುತ್ತಾರೆ. ಬಳಕೆದಾರರಿಗೆ ಗೌಪ್ಯತಾ ನೀತಿಯಿಂದ ಹೊರಬರುವ ಸ್ಪಷ್ಟ ಆಯ್ಕೆ ಮಾಡುವ ಹಕ್ಕು ಇದ್ದರೆ, ಆ ಹಕ್ಕು ಇದೆ ಎಂಬುದನ್ನು ಅವರು ಹೇಗೆ ತಿಳಿದುಕೊಳ್ಳಬೇಕು? ಬಳಕೆದಾರನ ಬಳಿ ಇರುವ ಆಯ್ಕೆ ಮತ್ತು ಪರಿಸ್ಥಿತಿ ಏನು ಎಂದು ಗಮಮನಿಸೋಣ. ಗೌಪ್ಯತಾ ನೀತಿಯಿಂದ ಹೊರಬರುವ ಸ್ಪಷ್ಟ ಆಯ್ಕೆ ಮಾಡುವ ವಿಷಯಕ್ಕೆ ಬಂದಾಗ ಆ ಕುರಿತ ಮಾಹಿತಿಯು ದಿನಪತ್ರಿಕೆಯಲ್ಲಿ ಇದೆ. ಇದು ಒಬ್ಬ ಸಾಮಾನ್ಯ ವ್ಯಕ್ತಿಗೆ ಹೇಗೆ ಗೊತ್ತಾಗಬೇಕು?” ಎಂದು ಮುಖ್ಯ ನ್ಯಾಯಮೂರ್ತಿ ಕಾಂತ್ ಪ್ರಶ್ನಿಸಿದರು.
ದತ್ತಾಂಶ ಹಂಚಿಕೆಯ ಹೆಸರಿನಲ್ಲಿ ಭಾರತೀಯರ ಗೌಪ್ಯತಾ ಹಕ್ಕಿನೊಂದಿಗೆ ಆಟವಾಡಲು ಸಾಧ್ಯವಿಲ್ಲ, ಇದರಿಂದ ಸಂವಿಧಾನಾತ್ಮಕ ಮೌಲ್ಯಗಳಿಗೆ ಧಕ್ಕೆ ಒದಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.
2021ರಲ್ಲಿ ವಾಟ್ಸ್ಆಪ್ ತನ್ನ ಸೇವಾ ಷರತ್ತುಗಳು ಮತ್ತು ಗೌಪ್ಯತಾ ನೀತಿಯನ್ನು ನವೀಕರಿಸಿ, ಮೆಟಾ ಜೊತೆ ಡೇಟಾ ಹಂಚಿಕೆಯನ್ನು ಕಡ್ಡಾಯಗೊಳಿಸಿತ್ತು. ತನಿಖೆ ನಡೆಸಿದ್ದ ಸಿಸಿಐ ಇದಕ್ಕೆ ವ್ಯತಿರಿಕ್ತವಾಗಿ, ಇದು ಸ್ಪರ್ಧಾ ಕಾಯಿದೆಯಡಿ ಪ್ರಾಬಲ್ಯದ ದುರುಪಯೋಗ ಎಂದು ತೀರ್ಮಾನಿಸಿ ₹213.14 ಕೋಟಿ ದಂಡ ವಿಧಿಸಿತ್ತು. ಜೊತೆಗೆ ಐದು ವರ್ಷಗಳ ಕಾಲ ಮೆಟಾ ಜೊತೆ ದತ್ತಾಂಶ ಹಂಚಿಕೆ ಕುರಿತಂತೆ ನಿರ್ಬಂಧ ವಿಧಿಸಿತ್ತು. ಈ ಆದೇಶವನ್ನು ಜೊತೆಗೆ ದಂಡ ವಿಧಿಸಿದ್ದನ್ನು ಎನ್‌ಸಿಎಲ್‌ಎಟಿ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ವಾಟ್ಸ್ಆಪ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಆಲಿಸಿತು.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಸಾಮಾನ್ಯ ಜನರಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶದ, ತಮ್ಮ ಭಾಷೆಯನ್ನಷ್ಟೇ ತಿಳಿದಿರುವ ಬಳಕೆದಾರರಿಗೆ ಮೆಟಾ ವಿಧಿಸಿರುವ ಷರತ್ತುಗಳು ಹೇಗೆ ಅರ್ಥವಾಗುತ್ತವೆ ಎಂದು ನ್ಯಾಯಾಲಯ ಪ್ರಶ್ನಿಸಿತು. ವಾಟ್ಸ್ಆಪ್ ಉಚಿತ ಸೇವೆಯಾಗಿದ್ದರೂ, ಅದರ ಸಂಪೂರ್ಣ ಆದಾಯ ಜಾಹೀರಾತು ಆಧಾರಿತವಾಗಿದ್ದು, ಬಳಕೆದಾರರ ವರ್ತನಾ ಮಾದರಿಗಳನ್ನು ಬಳಸಿಕೊಂಡ ಜಾಹೀರಾತುಗಳು ಬರುತ್ತವೆ ಎಂಬ ಆತಂಕವೂ ವ್ಯಕ್ತವಾಯಿತು.
ವಾಟ್ಸಾಪ್ ಸಂದೇಶಗಳು ಎನ್‌ಕ್ರಿಪ್ಟ್ ಆಗಿವೆ ಮತ್ತು ಸಂಭಾಷಣೆಗಳನ್ನು ಓದಲು ಸಾಧ್ಯವಿಲ್ಲ ಎಂದು ವಾಟ್ಸಾಪ್ ಪರ ವಕೀಲರು ವಾದಿಸಿದರು. ಆದರೆ ಡೇಟಾವನ್ನು ಜಾಹೀರಾತು ಉದ್ದೇಶಕ್ಕೆ ಬಳಸಲಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆತಂಕ ವ್ಯಕ್ತಪಡಿಸಿದರು. ವೈಯಕ್ತಿಕ ದತ್ತಾಂಶಕ್ಕೆ ಹಣಕಾಸಿನ ಮೌಲ್ಯ ಇದ್ದು ಇದನ್ನು ವಾಣಿಜ್ಯಿಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಅಂತಿಮವಾಗಿ, ವಾಟ್ಸ್ಆಪ್ ತನ್ನ ಗೌಪ್ಯತಾ ನೀತಿ ಮತ್ತು ಡೇಟಾ ಹಂಚಿಕೆ ಪ್ರಕ್ರಿಯೆಯನ್ನು ವಿವರಿಸುವ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ಹೆಚ್ಚುವರಿ ಪ್ರತಿವಾದಿಯಾಗಿ ಸೇರಿಸಿ, ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿತು.
ಮೆಟಾ ಪರವಾಗಿ ಹಿರಿಯ ವಕೀಲ ಅಮಿತ್ ಸಿಬಲ್ ಹಾಗೂ ವಾಟ್ಸ್ಆಪ್ ಪರವಾಗಿ ಹಿರಿಯ ವಕೀಲರಾದ ಅರುಣ್ ಕಥಪಾಲಿಯಾ ಮತ್ತು ಮುಕುಲ್ ರೋಹಟಗಿ ಹಾಜರಿದ್ದರು.