ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ವಿಚಾರಣಾ ಆಯೋಗದ ವರದಿ ಪ್ರಶ್ನಿಸಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಅರ್ಜಿ ವಜಾ

ನವೆಂಬರ್‌ 12ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠವು ಇಂದು ಪ್ರಕಟಿಸಿತು.
ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ವಿಚಾರಣಾ ಆಯೋಗದ ವರದಿ ಪ್ರಶ್ನಿಸಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಅರ್ಜಿ ವಜಾ
Published on

ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ಘಟಿಸಿದ ಕಾಲ್ತುಳಿತದಲ್ಲಿ11 ಮಂದಿ ಮೃತಪಟ್ಟ ಪ್ರಕರಣದ ಸಂಬಂಧ ತನಿಖೆಗಾಗಿ ರಾಜ್ಯ ಸರ್ಕಾರ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗವು ಜುಲೈ 11ರಂದು ನೀಡಿರುವ ವರದಿಯನ್ನು ರದ್ದುಗೊಳಿಸಲು ಕೋರಿ ಆರ್‌ಸಿಬಿ ವಿಜಯೋತ್ಸವದ ಆಯೋಜನೆಯ ಹೊಣೆ ಹೊತ್ತಿದ್ದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌  ಸಲ್ಲಿಸಿದ್ದ ಅರ್ಜಿಯ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ನವೆಂಬರ್‌ 12ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ತಾರಾ ವಿತಾಸ್ತಾ ಗಂಜು ಅವರ ವಿಭಾಗೀಯ ಪೀಠವು ಇಂದು ಪ್ರಕಟಿಸಿತು.

Justices DK Singh & Tara Vitasta Ganju
Justices DK Singh & Tara Vitasta Ganju

ರಾಜ್ಯ ಸರ್ಕಾರದ ನಿಲುವನ್ನು ಪರಿಗಣಿಸಿ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂಬುದನ್ನು ಮನಗಂಡು ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಪೀಠ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಬಿ ಕೆ ಸಂಪತ್‌ ಕುಮಾರ್‌ ಅವರು “ಮಾಧ್ಯಮಗಳಲ್ಲಿ ಡಿಎನ್‌ಎ ಮತ್ತು ಅದರ ಪದಾಧಿಕಾರಿಗಳ ಹೆಸರು ಪ್ರಸ್ತಾಪಿಸಿ ಘನತೆಗೆ ಹಾನಿ ಮಾಡಲಾಗಿದೆ. ನ್ಯಾ. ಕುನ್ಹಾ ಆಯೋಗವು ವಿಚಾರಣೆಯ ವೇಲೆ ಪಾಟೀಸವಾಲಿಗೆ ಅವಕಾಶ ಮಾಡಿಕೊಟ್ಟಿಲ್ಲ” ಎಂದಿದ್ದರು.

ಈ ಹಂತದಲ್ಲಿ ನ್ಯಾ. ಗಂಜು ಅವರು “ಅರ್ಜಿದಾರರಿಗೆ ಮಾನಹಾನಿಯಾಗಿದ್ದರೆ ಸಿವಿಲ್‌ ನ್ಯಾಯಾಲಯದಲ್ಲಿ ಪರಿಹಾರವಿದೆ. ಅಲ್ಲಿ ನಷ್ಟ ತುಂಬಿಕೊಡಲು ಸಿವಿಲ್‌ ದಾವೆ ಹೂಡಬಹುದು” ಎಂದಿದ್ದರು.

ನ್ಯಾ. ಸಿಂಗ್‌ ಅವರು “ನ್ಯಾ. ಕುನ್ಹಾ ವರದಿಯನ್ನು ವಜಾ ಮಾಡಿದರೂ ನಿಮಗೆ ಆಗಿದೆ ಎನ್ನಲಾದ ಹಾನಿಯನ್ನು ತುಂಬಿಕೊಡಲಾಗದು” ಎಂದಿದ್ದರು.

ಅದಕ್ಕೆ ಸಂಪತ್‌ ಕುಮಾರ್‌ ಅವರು “ಸಂವಿಧಾನದ 21ನೇ ವಿಧಿಯಡಿ ಮಾನಹಾನಿಯಾದರೆ ರಿಟ್‌ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದುವರೆಗೂ ಸರ್ಕಾರವು ಸದನದಲ್ಲಿ ನ್ಯಾ. ಕುನ್ಹಾ ವರದಿಯನ್ನು ಮಂಡಿಸಿಲ್ಲ. ಈ ವರದಿಯಲ್ಲಿ ಸಾಕಷ್ಟು ದೋಷಗಳಿವೆ” ಎಂದಿದ್ದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ನೋಟಿಸ್‌ ನೀಡುವುದಾದರೆ ದೂರಿನ ಪ್ರತಿಯ ಜೊತೆಗೆ ನೋಟಿಸ್‌ ನೀಡಲಾಗುವುದು ಎಂದು ಮುಖ್ಯಮಂತ್ರಿಯವರೇ ಸ್ಪಷ್ಟಪಡಿಸಿದ್ದಾರೆ. ಕ್ರಿಮಿನಲ್‌ ಪ್ರಕ್ರಿಯೆ ಸಂಬಂಧ ಸ್ವತಂತ್ರವಾಗಿ ಪೊಲೀಸರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಒಂದೊಮ್ಮೆ ನ್ಯಾ. ಕುನ್ಹಾ ವರದಿ ಆಧರಿಸಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ಗೆ ನೋಟಿಸ್‌ ನೀಡುವುದಾದರೆ ಅದನ್ನು ನೋಟಿಸ್‌ನಲ್ಲಿ ಉಲ್ಲೇಖಿಸಲಾಗುವುದು” ಎಂದು ಸ್ಪಷ್ಟಪಡಿಸಿದ್ದರು.

“ಜೂನ್‌ 5ರಂದು ಕಾಲ್ತುಳಿತ ಸಂಭವಿಸಿದ್ದು, ಜುಲೈ 11ರಂದು ನ್ಯಾ. ಕುನ್ಹಾ ಆಯೋಗ ವರದಿ ನೀಡಿದೆ. ಘಟನೆ ನಡೆದ ದಿನದಿಂದಲೇ ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿವೆಯೇ ವಿನಾ ಸರ್ಕಾರದಿಂದ ಆ ಕೆಲಸವಾಗಿಲ್ಲ. ಅದಾಗ್ಯೂ, ಮಾಧ್ಯಮ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂದು ರಿಟ್‌ ಅರ್ಜಿ ಸಲ್ಲಿಸಲಾಗದು” ಎಂದಿದ್ದರು.

ವಿಚಾರಣಾ ಆಯೋಗವು ದಾಖಲಿಸಿರುವ ಸಾಕ್ಷಿಗಳ ಪಾಟೀ ಸವಾಲಿಗೆ ವಿಚಾರಣಾ ಆಯೋಗ ಕಾಯಿದೆ 1952ರಲ್ಲಿ ಅವಕಾಶವಿದೆ. ಅರ್ಜಿದಾರರ ಹಿತಾಸಕ್ತಿಗೆ ವಿರುದ್ಧವಾಗಿ ಸಾಕ್ಷಿ ನೀಡಿರುವವರ ಪಾಟೀ ಸವಾಲಿಗೆ ಅರ್ಜಿದಾರರು ಕೋರಿದ್ದು, ಇದಕ್ಕೆ ನ್ಯಾ. ಕುನ್ಹಾ ಆಯೋಗ ನಿರಾಕರಿಸಿದೆ. ಹೀಗಾಗಿ, ಇಡೀ ವಿಚಾರಣಾ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಕೋರಲಾಗಿತ್ತು.

ತನ್ನ ಸಾಕ್ಷಿಗಳು ಮತ್ತು ಇತರೆ ಸಾಕ್ಷಿಗಳು ದಾಖಲಿಸಿರುವ ಪ್ರತಿಯನ್ನು ಕೋರಲಾಗಿದ್ದು, ಅದನ್ನು ಆಯೋಗವು ನಿರಾಕರಿಸಿದೆ. ತಪ್ಪಾಗಿ ದಾಖಲಿಸಿರುವ ಉತ್ತರದತ್ತ ಬೆರಳು ಮಾಡಲು ಪ್ರತಿ ಕೇಳಿರುವುದಕ್ಕೆ ನಿರಾಕರಿಸಿರುವುದರಿಂದ ಆಕ್ಷೇಪಾರ್ಹ ವರದಿಯನ್ನು ವಜಾಗೊಳಿಸಬೇಕು. ತನ್ನ ಮತ್ತು ತನ್ನ ಅಧಿಕಾರಿಗಳ ವಿರುದ್ಧ ಮಾತನಾಡಿರುವ ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸುವ ಉದ್ದೇಶದಿಂದ ಸಾಕ್ಷಿ ದಾಖಲಿಸಿರುವ ಪ್ರತಿಯನ್ನು ಕೋರಿರುವುದಕ್ಕೆ ನಿರಾಕರಿಸಲಾಗಿದೆ. ಈ ಸಂಬಂಧ ನಿರ್ಧಾರ ಕೈಗೊಂಡಿರುವುದನ್ನು ತಿಳಿಸಲು ನ್ಯಾ. ಕುನ್ಹಾ ಅವರು ನಿರಾಕರಿಸಿದ್ದು, ಜುಲೈ 3ರಂದು ತಾವು ನೀಡಿರುವ ಮೆಮೊಗೂ ಉತ್ತರಿಸಲಾಗಿಲ್ಲ ಎಂದು ಆಕ್ಷೇಪಿಸಲಾಗಿತ್ತು.

ವಿಚಾರಣಾ ಆಯೋಗ ಕಾಯಿದೆಯ ಪ್ರಕಾರ ವೈಯಕ್ತಿಕವಾಗಿ ವಾದ ಆಲಿಸಲು ಅವಕಾಶ ನೀಡಬೇಕು. ಅರ್ಜಿದಾರರ ವಿರುದ್ಧ ನೀಡುವ ಯಾವುದೇ ಹೇಳಿಕೆಯು ತಮ್ಮ ಮತ್ತು ಅಧಿಕಾರಿಗಳ ಘನತೆಗೆ ಪೂರ್ವಾಗ್ರಹ ಉಂಟು ಮಾಡಲಿದೆ. ಇದಕ್ಕೆ ಅನುಮತಿಸದೇ ಇರುವುದರಿಂದ ಆಕ್ಷೇಪಾರ್ಹವಾದ ವರದಿಯು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿದೆ. ಆಯೋಗವು ಪೂರ್ವಾಗ್ರಹ ಪೀಡಿತವಾಗಿ ವರ್ತಿಸಿದ್ದು, ಇದು ವಾಸ್ತವಿಕ ಅಂಶಗಳನ್ನು ಪತ್ತೆ ಮಾಡುವ ಆಯೋಗಕ್ಕೆ ಬದಲಾಗಿ ದೋಷ ಹುಡುಕುವ ಆಯೋಗದ ರೀತಿಯಲ್ಲಿ ಕೆಲಸ ಮಾಡಿದೆ. ನ್ಯಾ. ಕುನ್ಹಾ ವರದಿಯಲ್ಲಿ ತನ್ನ ಇಬ್ಬರು ನಿರ್ದೇಶಕರತ್ತ ಬೆರಳು ಮಾಡಿದೆ ಎಂದು ಮಾಧ್ಯಮ ವರದಿಯಿಂದ ತಿಳಿದಿದೆ. ಈ ಪೈಕಿ ಒಬ್ಬ ನಿರ್ದೇಶಕರು ತನ್ನ ಹೇಳಿಕೆಯನ್ನು ಸರಿಯಾದ ರೀತಿಯಲ್ಲಿ ದಾಖಲಿಸಿಲ್ಲ. ಹೀಗಾಗಿ, ಅದರ ಪ್ರತಿ ನೀಡುವಂತೆ ಕೋರಿದ್ದು, ಅದನ್ನೂ ನಿರಾಕರಿಸಲಾಗಿದೆ. ಆಕ್ಷೇಪಾರ್ಹವಾದ ವರದಿಯನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿ, ಅರ್ಜಿದಾರರಿಗೆ ನಿರಾಕರಿಸುವ ಮೂಲಕ ಪೂರ್ವ ನಿಯೋಜಿತವಾಗಿ ಆಯೋಗ ವರ್ತಿಸಿದೆ. ಈ ಮೂಲಕ ತನ್ನ ಮತ್ತು ತನ್ನ ಅಧಿಕಾರಿಗಳನ್ನು ಪ್ರಕರಣದಲ್ಲಿ ಸಿಲುಕಿಸುವ ಕೆಲಸ ಮಾಡಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿತ್ತು.

Also Read
ಕಾಲ್ತುಳಿತ ಪ್ರಕರಣ: ನ್ಯಾ. ಕುನ್ಹಾ ಆಯೋಗದ ವರದಿ ರದ್ದು ಕೋರಿ ಹೈಕೋರ್ಟ್‌ ಕದತಟ್ಟಿದ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌

ನ್ಯಾ. ಕುನ್ಹಾ ಅವರು ಆತುರದಿಂದ ತನಿಖೆ ನಡೆಸಿರುವುದನ್ನ ನೋಡಿದರೆ ಸರ್ಕಾರವು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದ್ದು, ಸಾಮಾನ್ಯ ಜನರ ಕಣ್ಣೊರೆಸಲು ಆಯೋಗ ರಚನೆ ಮಾಡಿದಂತಿದೆ. ಪ್ರಕರಣದಿಂದ ನುಣಿಚಿಕೊಂಡು ಅರ್ಜಿದಾರರಂಥ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಉದ್ದೇಶ ಹೊಂದಲಾಗಿದೆ. ಕಾಲ್ತುಳಿತ ಪ್ರಕರಣವು ಕ್ರೀಡಾಂಗಣದ ಹೊರಗೆ ನಡೆದಿದ್ದು, ತಾನು ಕಾರ್ಯಕ್ರಮದ ಜವಾಬ್ದಾರಿಯನ್ನು ಕ್ರೀಡಾಂಗಣದ ಒಳಗೆ ಒಪ್ಪಿಕೊಂಡಿದ್ದು ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಘಟನೆ ನಡೆದಿರುವ ಪ್ರದೇಶವು ಸರ್ಕಾರ ಮತ್ತು ಪೊಲೀಸರ ವ್ಯಾಪ್ತಿಗೆ ಒಳಪಟ್ಟಿದೆ. ಈ ಸಂಬಂಧ ತಾನು ಸಲ್ಲಿಸಿರುವ ದಾಖಲೆಗಳನ್ನು ಆಯೋಗ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿತ್ತು.

Also Read
ನ್ಯಾ.ಕುನ್ಹಾ ವರದಿ ರದ್ದತಿಗೆ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ಕೋರಿಕೆ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪೊಲೀಸರನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದಂತೆ ಅದಾಗಲೇ ಹಣ ಪಾವತಿಸಲಾಗಿತ್ತು. ಐಪಿಎಲ್‌ ಪಂದ್ಯಕ್ಕೆ ಬಂದೋಬಸ್ತ್‌ ನೀಡಲು ಪೊಲೀಸರು ಹಣ ಸಂಗ್ರಹಿಸಿದ್ದು, ಆ ಪಂದ್ಯವು ಲಖನೌಗೆ ಸ್ಥಳಾಂತರಗೊಂಡಿತ್ತು ಎಂಬ ಮಾಧ್ಯಮ ವರದಿಯನ್ನು ನ್ಯಾ. ಕುನ್ಹಾ ಆಯೋಗ ಪರಿಗಣಿಸಿಲ್ಲ. ನ್ಯಾ. ಕುನ್ಹಾ ಅವರಿಗೆ ಜೂನ್‌ 5ರಿಂದ ಅನ್ವಯಿಸುವಂತೆ ಒಂದು ತಿಂಗಳಲ್ಲಿ ವರದಿ ಸಲ್ಲಿಸಲು ಸರ್ಕಾರ ಆದೇಶಿಸಿತ್ತು. ಆನಂತರ ಸಮಯದ ವಿಸ್ತರಣೆ ನೀಡಿರಲಿಲ್ಲ. ಅದಾಗ್ಯೂ, ಸಮಯ ಮೀರಿ ನ್ಯಾ. ಕುನ್ಹಾ ಅವರು ಜುಲೈ 11ರಂದು ಸರ್ಕಾರಕ್ಕೆ ವರದಿ ಸಲ್ಲಿಸಿರುವುದರಿಂದ ಅದನ್ನು ವಜಾಗೊಳಿಸಬೇಕು ಎಂದು ಕೋರಲಾಗಿತ್ತು.

Kannada Bar & Bench
kannada.barandbench.com