ಸುದ್ದಿಗಳು

ಕಿರಿಯ ವಕೀಲರು ವಿಚಾರಣಾ ನ್ಯಾಯಾಲಯಕ್ಕೆ ತೆರಳಿ ವೃತ್ತಿಯಲ್ಲಿ ತೊಡಗಲು ಬಯಸುತ್ತಿಲ್ಲ: ಸುಪ್ರೀಂ ಕೋರ್ಟ್ ವಿಷಾದ

"ಈ ಪೀಳಿಗೆಯ ಸಮಸ್ಯೆ ಏನೆಂದರೆ, ಅವರು ಕಾನೂನು ಪ್ರಾಕ್ಟೀಸ್‌ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಹೋಗಲು ಬಯಸುತ್ತಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Bar & Bench

ಯುವ ಪೀಳಿಗೆಯ ವಕೀಲರು ಕಾನೂನು ಪ್ರಾಕ್ಟೀಸ್‌ ಕಲಿಯಲು ವಿಚಾರಣಾ ನ್ಯಾಯಾಲಯಗಳಿಗೆ ಹೋಗಲು ಇಚ್ಛಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ವಿಷಾದ ವ್ಯಕ್ತಪಡಿಸಿದೆ [ಅಜಯ್ ಕುಮಾರ್ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಸಕ್ಷಮ ಪ್ರಾಧಿಕಾರವನ್ನು ಕಕ್ಷಿದಾರ ಸಂಪರ್ಕಿಸಿ ನಂತರ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ವಕೀಲರಿಗೆ ಸ್ಪಷ್ಟಪಡಿಸಿದ ನಂತರ ನ್ಯಾ. ಎಸ್‌ ವಿ ಎನ್‌ ಭಟ್ಟಿ ಅವರು ಮೌಖಿಕವಾಗಿ ಈ ಹೇಳಿಕೆ ನೀಡಿದರು.

"ಈ ಪೀಳಿಗೆಯ ಸಮಸ್ಯೆ ಏನೆಂದರೆ, ಅವರು ಪ್ರಾಕ್ಟೀಸ್‌ ಮಾಡಲು ವಿಚಾರಣಾ ನ್ಯಾಯಾಲಯಕ್ಕೆ ಹೋಗಲು ಬಯಸುವುದಿಲ್ಲ" ಎಂದು ನ್ಯಾಯಮೂರ್ತಿ ಭಟ್ಟಿ ಹೇಳಿದರು.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಯೊಬ್ಬ ಪೆರೋಲ್‌ಗಾಗಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಭಟ್ಟಿ ಮತ್ತು ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರಿದ್ದ ಪೀಠ  ವಿಚಾರಣೆ ನಡೆಸಿತು. ಈ ಅರ್ಜಿಯ ವಿಚಾರಣೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಇತ್ತು.

ಪತ್ನಿಯ ಶಸ್ತ್ರಚಿಕಿತ್ಸೆಗಾಗಿ ಈಗಾಗಲೇ 45 ದಿನಗಳ ಪೆರೋಲ್ ನೀಡಲಾಗಿದೆ ಎಂಬ ಕಾರಣಕ್ಕೆ ಹೈಕೋರ್ಟ್‌ ಪೆರೋಲ್ ನಿರಾಕರಿಸಿದ್ದನ್ನು ಅರ್ಜಿದಾರರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.  ಪತ್ನಿಯ ಶಸ್ತ್ರಚಿಕಿತ್ಸೆ ನಂತರ ಆಕೆಯ ಚೇತರಿಕೆ ವೇಳೆ ದಂಪತಿಯ ಚಿಕ್ಕ ಮಕ್ಕಳಿಗೆ ಆರೈಕೆಯ ಅಗತ್ಯವಿರುವುದರಿಂದ ಪತಿಗೆ ಪೆರೋಲ್‌ ಅಗತ್ಯವಿದೆ ಎಂದು ವಾದಿಸಲಾಗಿತ್ತು. ನ್ಯಾಯಾಲಯವು ಅಂತಿಮವಾಗಿ ಸೀಮಿತ ಅವಧಿಗೆ ಪೆರೋಲ್ ನೀಡಿತು.

ಆದರೆ ಸೂಕ್ತ ಕಾರ್ಯವಿಧಾನ ಅನುಸರಿಸಿಲ್ಲ. ಅರ್ಜಿದಾರರು ಮೊದಲು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬೇಕಿತ್ತು. ಅರ್ಜಿದಾರರ ಪರ ವಕೀಲರು ಸರ್ಕಾರಿ ವಕೀಲರಿಗೆ ಮುಂಚಿತವಾಗಿ ಈ ವಿಚಾರ ತಿಳಿಸಬೇಕಿತ್ತು ಎಂದರು.

 "ಸಾಮಾನ್ಯ ವಿಧಾನವೆಂದರೆ ಮೊದಲು ಅಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸುವುದು, ಅವರಿಗೆ ತುರ್ತು ಕಾರಣವನ್ನು ಮನವರಿಕೆ ಮಾಡಿಕೊಡುವುದು ಮತ್ತು ಪೆರೋಲ್ ಪಡೆಯುವುದು" ಎಂದು ನ್ಯಾಯಾಲಯ ಹೇಳಿತು.

ದಾಖಲೆಗಳನ್ನು ಗಮನಿಸಿದ ನ್ಯಾಯಾಲಯ ಒಂದು ವಾರದ ಕಾಲ ಪೆರೋಲ್ ನೀಡಲು ಅನುಮತಿಸಿತು.ಅರ್ಜಿದಾರರು ಎರಡು ವಾರ ಪೆರೋಲ್‌ ನೀಡುವಂತೆ ಕೇಳಿಕೊಂಡಾಗ  ಪೀಠದಲ್ಲಿರುವ ತಮ್ಮ ಸಹೋದ್ಯೋಗಿಯ ಒತ್ತಾಯದ ಮೇರೆಗೆ ಮಾತ್ರ ತಾವು ಪೆರೋಲ್ ನೀಡಲು ಒಪ್ಪಿಕೊಂಡಿರುವುದಾಗಿಯೂ ಇಲ್ಲದಿದ್ದರೆ ತಾವು ಅರ್ಜಿಯನ್ನು ವಜಾಗೊಳಿಸುತ್ತಿದ್ದುದಾಗಿಯೂ ನ್ಯಾ. ಭಟ್ಟಿ ಕಿಡಿಕಾರಿದರು.

 ನಂತರ ವಕೀಲರು ನ್ಯಾಯಾಲಯವನ್ನು ಒಂದು ವಾರದ ಪೆರೋಲ್ ಅವಧಿಯಲ್ಲಿ ವಿಸ್ತರಣೆಗಾಗಿ ಅಧಿಕಾರಿಗಳನ್ನು ಸಂಪರ್ಕಿಸಬಹುದೇ ಎಂದು ಕೇಳಿದರು.

ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಸೂಕ್ತ ಅರ್ಜಿಯನ್ನು ಸಲ್ಲಿಸಲು ಸ್ವಾತಂತ್ರ್ಯ ಹೊಂದಿದ್ದಾರೆ.  ಅಗತ್ಯವಿದ್ದರೆ, ಮುಂದಿನ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಪೀಠ ಸ್ಪಷ್ಟಪಡಿಸಿತು.

"ಅದಕ್ಕಾಗಿಯೇ ಪ್ರಕರಣವನ್ನು 25 ರ ನಂತರ ಪಟ್ಟಿ ಮಾಡಲಾಗಿದೆ. ನೀವು ಅಧಿಕಾರಿಗಳ ಮುಂದೆ ಸೂಕ್ತವಾದ ಅರ್ಜಿ ಸಲ್ಲಿಸಬಹುದು.  ನಂತರ ಪ್ರಕರಣ ವಿಲೇವಾರಿಗಾಗಿ ಈ ನ್ಯಾಯಾಲಯವನ್ನು ಸಂಪರ್ಕಿಸಬಹುದು. ನಾವು ನಿಮಗೆ ಹೇಳಬೇಕಿತ್ತು" ಎಂದು ನ್ಯಾಯಮೂರ್ತಿ ಎಸ್‌ ವಿ ಎನ್ ಭಟ್ಟಿ ಹೇಳಿದರು.

ಮುಂದುವರಿದು, "ನಿಮ್ಮ ತಲೆಮಾರಿನ ದೊಡ್ಡ ಸಮಸ್ಯೆಯೆಂದರೆ ನೀವು ವಿಚಾರಣಾ ನ್ಯಾಯಾಲಯಕ್ಕೆ ತೆರಳಿ ವೃತ್ತಿಯಲ್ಲಿ ತೊಡಗಲು ಬಯಸುವುದಿಲ್ಲ," ಎಂದು ನ್ಯಾಯಮೂರ್ತಿಗಳು ಬೇಸರಿಸಿದರು.