ಹರಿಯಾಣದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತನಗೆ ಬೀಳಲಿರುವ ಮತಗಳಿಗೆ ಧಕ್ಕೆ ಒದಗಬಹುದು ಎಂದು ಆಡಳಿತಾರೂಢ ಬಿಜೆಪಿ ಸಂದೇಹ ಹೊಂದಿರುವ ಕಾರಣದಿಂದಾಗಿ ʼಎಮರ್ಜೆನ್ಸಿʼ ಚಿತ್ರಕ್ಕೆ ಸೆನ್ಸಾರ್ ಪ್ರಮಾಣಪತ್ರ ನೀಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಚಿತ್ರದ ಸಹ ನಿರ್ಮಾಣ ಸಂಸ್ಥೆಯಾದ ಜೀ಼ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಬುಧವಾರ ಬಾಂಬೆ ಹೈಕೋರ್ಟ್ ಮುಂದೆ ವಾದಿಸಿತು [ಜೀ಼ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಮತ್ತು ಸಿಬಿಎಫ್‌ಸಿ ನಡುವಣ ಪ್ರಕರಣ].
ಬಿಜೆಪಿ ಸಂಸದೆಯೂ ಆಗಿರುವ ಕಂಗನಾ ರನೌತ್ ಪ್ರಧಾನ ಭೂಮಿಕೆಯಲ್ಲಿರುವ 'ಎಮರ್ಜೆನ್ಸಿ' ಚಿತ್ರವನ್ನು ಸಿಖ್ ವಿರೋಧಿಯಾಗಿ ಬಿಂಬಿಸುವ ಸಾಧ್ಯತೆಗಳಿದ್ದು ಹರಿಯಾಣದಲ್ಲಿ ಸಿಖ್ಖರ ಸಂಖ್ಯೆ ಗಣನೀಯವಾಗಿದೆ ಎಂದು ಜೀ಼ ಪರ ವಾದ ಮಂಡಿಸಿದ ಹಿರಿಯ ವಕೀಲ ವೆಂಕಟೇಶ್ ಧೋಂಡ್ ತಿಳಿಸಿದರು. ಚಿತ್ರದ ಸಹ ನಿರ್ಮಾಪಕರಲ್ಲಿ ಬಿಜೆಪಿ ಸಂಸದೆ ಕಂಗನಾ ರನೌತ್ ಕೂಡ ಒಬ್ಬರು ಎಂಬ ಅಂಶವನ್ನು ಇದೇ ವೇಳೆ ಅವರು ನ್ಯಾಯಾಲಯದ ಗಮನಕ್ಕೆ ತಂದರು.
"ಸಹ ನಿರ್ಮಾಪಕರು ಬಿಜೆಪಿ ಸಂಸದರಾಗಿದ್ದು ಬಿಜೆಪಿ ಸದಸ್ಯರೇ ಕೆಲ ಸಮುದಾಯಗಳ ಭಾವನೆಗಳಿಗೆ ನೋವುಂಟು ಮಾಡುವುದು ಅವರಿಗೆ ಬೇಕಿಲ್ಲ" ಎಂದು ಧೋಂಡ್ ಹೇಳಿದರು. ಆದರೆ ಇದು ಹೇಗೆ ಹರಿಯಾಣ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಪ್ರಶ್ನಿಸಿತು.
ಹರಿಯಾಣದಲ್ಲೂ ಸಿಖ್ಖರು ಸಾಕಷ್ಟು ಸಂಖ್ಯೆಯಲ್ಲಿದ್ದು ಕೇಂದ್ರ ಸರ್ಕಾರ ಚುನಾವಣೆಗೆ ಮುನ್ನ ಸಿಖ್ ಭಾವನೆಗಳಿಗೆ ನೋವುಂಟು ಮಾಡುವ ಚಿತ್ರ ಬಿಡುಗಡೆ ಬಯಸದು ಎಂದು ಧೋಂಡ್ ಹೇಳಿದರು.
ಆದರೆ ಚಿತ್ರ ಬಿಡುಗಡೆಗೆ ಪ್ರಮಾಣಪತ್ರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿರುವ ಸಿಬಿಎಫ್‌ಸಿಯನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದರೂ ಅದು ವಿಳಂಬ ಧೋರಣೆ ಮುಂದುವರೆಸುತ್ತಿರುವ ಕುರಿತಾದ ವಾದ ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ಪೀಠಕ್ಕೆ ಸರಿಕಾಣಲಿಲ್ಲ.
ಚಿತ್ರ ಪ್ರಮಾಣೀಕರಿಸುವಾಗ ಸಿಬಿಎಫ್‌ಸಿ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಚಿಂತಿಸಬೇಕಿಲ್ಲ. ಚಿತ್ರವನ್ನು ಸಾಕ್ಷ್ಯಚಿತ್ರದಂತೆ ನೋಡಲಾಗದು. ಅದಕ್ಕೆ ಸೃಜನಾತ್ಮಕ ಸ್ವಾತಂತ್ರ್ಯ ಇದೆ ಎಂದು ಅದು ನುಡಿಯಿತು.
ಚಲನಚಿತ್ರ ಪ್ರಶ್ನಿಸಿ ಬಂದ ಪತ್ರಗಳು ಮತ್ತು ಆಕ್ಷೇಪಣೆಗಳನ್ನು ಸಿಬಿಎಫ್‌ಸಿ ಪರಿಶೀಲಿಸುತ್ತಿದೆ ಎಂದು ಸೆನ್ಸಾರ್ ಮಂಡಳಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿನವ್ ಚಂದ್ರಚೂಡ್ ತಿಳಿಸಿದರು.
ಚಿತ್ರದ ಸೆನ್ಸಾರ್ ಪ್ರಮಾಣಪತ್ರ ಬಿಡುಗಡೆ ಮಾಡುವಂತೆ ಕೋರಿ ಸಹ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋಸ್ ಅರ್ಜಿ ಸಲ್ಲಿಸಿತ್ತು. ಚಿತ್ರವು ಸಿಖ್ ಸಮುದಾಯವನ್ನು ತಪ್ಪಾಗಿ ಬಿಂಬಿಸಿದೆ ಎಂಬ ವಿವಾದದ ಬಳಿಕ ಈ ಮನವಿ ಸಲ್ಲಿಸಲಾಗಿತ್ತು.
ಬಾಲಿವುಡ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ಅಭಿನಯದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ವಿಧಿಸಲಾಗಿದ್ದ 1975ರ ತುರ್ತು ಪರಿಸ್ಥಿತಿಯನ್ನು ಹಿನ್ನೆಲೆಯಾಗಿರಿಸಿಕೊಂಡು ʼಎಮೆರ್ಜೆನ್ಸಿʼ ಚಿತ್ರವನ್ನು ನಿರ್ಮಿಸಲಾಗಿದೆ.