ಸಿಬಿಎಫ್‌ಸಿ ಪ್ರಮಾಣಪತ್ರ ತಕ್ಷಣ ಬಿಡುಗಡೆಗೆ ಆದೇಶಿಸಲು ಬಾಂಬೆ ಹೈಕೋರ್ಟ್ ನಕಾರ: 'ಎಮೆರ್ಜೆನ್ಸಿ' ಬಿಡುಗಡೆ ವಿಳಂಬ

ನಿರ್ಮಾಪಕರ ಅರ್ಜಿ ವಿಲೇವಾರಿ ಮಾಡದ ನ್ಯಾಯಾಲಯ, ಸೆಪ್ಟೆಂಬರ್ 18ರೊಳಗೆ ಚಿತ್ರದ ವಿರುದ್ಧದ ಆಕ್ಷೇಪಣೆ ಪರಿಗಣಿಸಿ ಪ್ರಮಾಣಪತ್ರ ವಿತರಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಬಿಎಫ್‌ಸಿಗೆ ಸೂಚಿಸಿದೆ.
emergency movie and Bombay High Court
emergency movie and Bombay High Court
Published on

ಬಾಲಿವುಡ್‌ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್‌ ಅಭಿನಯದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ವಿಧಿಸಲಾಗಿದ್ದ 1975ರ ತುರ್ತು ಪರಿಸ್ಥಿತಿಯನ್ನು ಹಿನ್ನೆಲೆಯಾಗಿರಿಸಿಕೊಂಡ ʼಎಮೆರ್ಜೆನ್ಸಿʼ ಚಿತ್ರದ ಸೆನ್ಸಾರ್‌ ಪ್ರಮಾಣಪತ್ರ ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಆದೇಶ ನೀಡಲು ಬಾಂಬೆ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ.

ಸಂಬಂಧಿತ ಪ್ರಕರಣವೊಂದರಲ್ಲಿ ಸಿನಿಮಾಕ್ಕೆ ಇನ್ನೂ ಅಂತಿಮ ಪ್ರಮಾಣಪತ್ರ ನೀಡಿಲ್ಲ ಮತ್ತು ಸಿನಿಮಾಟೋಗ್ರಾಫ್‌ ಕಾಯಿದೆ ಮತ್ತು ಉಳಿದ ನಿಯಮಾವಳಿಯನುಸಾರ ಅದು ಇನ್ನೂ ಪರಿಶೀಲನೆಗೆ ಒಳಗಾಗುತ್ತಿದೆ ಎಂದು ಕೇಂದ್ರ ಸರ್ಕಾರ ನಿನ್ನೆ ಮಧ್ಯಪ್ರದೇಶ ಸರ್ಕಾರಕ್ಕೆ ತಿಳಿಸಿದೆ ಎಂಬುದನ್ನು ನ್ಯಾಯಮೂರ್ತಿಗಳಾದ ಬಿ ಪಿ ಕೊಲಬವಾಲಾ ಮತ್ತು ಫಿರ್ದೋಶ್ ಪಿ ಪೂನಿವಾಲಾ ಅವರಿದ್ದ ಪೀಠ ಗಮನಿಸಿತು.

Also Read
ಕಂಗನಾ ರನೌತ್‌ ಆಯ್ಕೆ ಪ್ರಶ್ನಿಸಿದ್ದ ಅರ್ಜಿ: ಸಂಸದೆಯ ಪ್ರತಿಕ್ರಿಯೆ ಕೇಳಿದ ಹಿಮಾಚಲ ಪ್ರದೇಶ ಹೈಕೋರ್ಟ್

ಚಿತ್ರದ ವಿರುದ್ಧದ ಆಕ್ಷೇಪಣೆ ಪರಿಗಣಿಸಿ ಪ್ರಮಾಣಪತ್ರ ವಿತರಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಬಿಎಫ್‌ಸಿಗೆ ಮಧ್ಯಪ್ರದೇಶ ಹೈಕೋರ್ಟ್ ಆ ಆದೇಶದಲ್ಲಿ ಸೂಚಿಸಿತ್ತು. ಹೀಗಾಗಿ ಬರುವ ಶುಕ್ರವಾರ (ಸೆ. 6) ನಿಗದಿಯಾಗಿದ್ದ ಚಿತ್ರ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ.

ಚಿತ್ರದ ಸೆನ್ಸಾರ್ ಪ್ರಮಾಣಪತ್ರದ ಭೌತಿಕ ಪ್ರತಿಯನ್ನು ಬಿಡುಗಡೆ ಮಾಡಲು ಸಿಬಿಎಫ್‌ಸಿಗೆ ಬಾಂಬೆ ಹೈಕೋರ್ಟ್‌ ಸೂಚಿಸಿದರೆ ಅದು  ಮಧ್ಯಪ್ರದೇಶ ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸುವುದಿಲ್ಲ ಎಂದು ಚಿತ್ರದ ನಿರ್ಮಾಪಕರು ಇಂದು ವಾದಿಸಿದರು.

Also Read
ಜಾವೇದ್ ಅಖ್ತರ್ ಹೂಡಿದ್ದ ಮಾನನಷ್ಟ ಮೊಕದ್ದಮೆಗೆ ತಡೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಕಂಗನಾ ರನೌತ್

ಆದರೆ ಈ ವಾದದಿಂದ ತೃಪ್ತವಾಗದ ನ್ಯಾಯಾಲಯ ಆದೇಶ ನೀಡಲು ನಿರಾಕರಿಸಿತು. ನಿರ್ಮಾಪಕರ ಅರ್ಜಿ ವಿಲೇವಾರಿ ಮಾಡದ ನ್ಯಾಯಾಲಯ, ಸೆಪ್ಟೆಂಬರ್ 18 ರೊಳಗೆ ಚಿತ್ರದ ವಿರುದ್ಧದ ಆಕ್ಷೇಪಣೆ ಪರಿಗಣಿಸಿ ಪ್ರಮಾಣಪತ್ರ ವಿತರಣಾ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಿಬಿಎಪ್‌ಸಿಗೆ ಸೂಚಿಸಿದೆ.

 ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪ್ರಮಾಣಪತ್ರ ನೀಡುವುದು ತಡವಾಗುತ್ತದೆ ಎಂದು ಸಿಬಿಎಫ್‌ಸಿ ಹೇಳುವಂತಿಲ್ಲ ಚಲನಚಿತ್ರ ನಿರ್ಮಾಣಕ್ಕೆ ಸಾಕಷ್ಟು ಹಣ ವಿನಿಯೋಗ ಮಾಡಿರುವುದರಿಂದ ಚಿತ್ರ ಬಿಡುಗಡೆಗೆ ಅನಗತ್ಯ ವಿಳಂಬ ಮಾಡಬಾರದು ಎಂಬ ಅಂಶವನ್ನು ಸಿಬಿಎಫ್‌ಸಿ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂಬುದಾಗಿ ನ್ಯಾಯಾಲಯ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 19ಕ್ಕೆ ನಿಗದಿಯಾಗಿದೆ.

Kannada Bar & Bench
kannada.barandbench.com