ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ

‘ಸುಪ್ರೀಂ’ ನೀಡಿದ ಬಹುದೊಡ್ಡ ಉಡುಗೊರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ; ಯಾರು ಏನೇ ಹೇಳಲಿ, ಅದು ಹಾಗೆಯೇ ಉಳಿಯಲಿ

ಅಜ್ಞಾನ ಮತ್ತು ಕೆಲವರ ಹಿತಾಸಕ್ತಿಯನ್ನಷ್ಟೇ ಪ್ರತಿನಿಧಿಸುವವರನ್ನು ಸುಪ್ರೀಂಕೋರ್ಟ್ ನಿರ್ಲಕ್ಷಿಸಬೇಕೇ ವಿನಾ ಸಾರ್ವಜನಿಕ ಹಿತಾಸಕ್ತಿಯನ್ನಲ್ಲ ಎನ್ನುತ್ತಾರೆ ಸುಪ್ರೀಂಕೋರ್ಟಿನ ಹಿರಿಯ ವಕೀಲ ದುಶ್ಯಂತ್ ದವೆ.

ಭಾರತದ ಸಂವಿಧಾನ ತನ್ನೆಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು; ಚಿಂತನೆ, ಅಭಿವ್ಯಕ್ತಿ, ನಂಬಿಕೆ ಶ್ರದ್ಧೆ ಹಾಗೂ ಆರಾಧನೆಯ ಸ್ವಾತಂತ್ರ್ಯವನ್ನು; ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆಯನ್ನು: ಎಲ್ಲರಲ್ಲೂ ಭ್ರಾತೃತ್ವ ಮತ್ತು ವೈಯಕ್ತಿಕ ಘನತೆಯನ್ನು ಆಶ್ವಾಸನೆಯಾಗಿ ನೀಡುತ್ತದೆ.

ಇವು ನಮ್ಮ ಸಂವಿಧಾನದ ಮೂಲ ಆಶಯಗಳು. ದೇಶದ ಸಂವಿಧಾನ ಎಂಬುದು ಭಾರತದ ಜನರಾದ ನಾವು ನಮಗಾಗಿ ಕೊಟ್ಟುಕೊಂಡ- ಭೂತ, ವರ್ತಮಾನ ಹಾಗೂ ಭವಿಷ್ಯದ ಉಡುಗೊರೆಯಾಗಿದೆ ಎಂಬುದನ್ನು ಸದಾ ನೆನಪಿನಲ್ಲಿಡಬೇಕು.

ಪ್ರಸಿದ್ಧ ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನಲ್ಲಿ, ಸುಪ್ರೀಂಕೋರ್ಟ್ ಈ ಗುರಿಗಳನ್ನು ನಮ್ಮ ಸಂವಿಧಾನದ ಮೂಲ ರಚನೆಯ ಭಾಗ ಎಂದು ಘೋಷಿಸಿತು. ದೇಶದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ರಚಿಸುವ ವೇಳೆ, ಸಂವಿಧಾನ ಶಿಲ್ಪಿಗಳು ಅವುಗಳ ಅಧಿಕಾರವನ್ನು ವ್ಯಾಖ್ಯಾನಿಸಿದ್ದಾರೆ ಮತ್ತು ಮಿತಿಗಳನ್ನೂ ಹೇರಿದ್ದಾರೆ. ಸಂವಿಧಾನದ ಮೂಲ ಉದ್ದೇಶಗಳನ್ನು ಸಾಧಿಸಲು ದೇಶದ ಈ ಮೂರು ಅಂಗಗಳು ಪರಸ್ಪರ ಯತ್ನಿಸಬೇಕು

Also Read
‘ನನ್ನನ್ನು ಮುಗಿಸಬೇಡಿ, ವಾದವನ್ನಷ್ಟೇ ಮುಗಿಸಿ!’ ಕೋರ್ಟಿನಲ್ಲಿ ಆಗಾಗ ಬೀಸುವ ತಮಾಷೆಯ ತಂಗಾಳಿ…

ಭಾರತದ ನಾಗರಿಕರು ಈ ಉದ್ದೇಶಗಳ ಪ್ರಯೋಜನ ಪಡೆಯಲಿ ಎಂದು ಸಂವಿಧಾನದ ರಚನಾಕಾರರು ಅದರ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ರೂಪಿಸಿದರು. ‘ಈ ಭಾಗ ಒದಗಿಸಿರುವ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ಮೊಟಕುಗೊಳಿಸುವ ಯಾವುದೇ ಕಾನೂನನ್ನು’ ಮಾಡದಂತೆ ಸರ್ಕಾರಕ್ಕೆ ನಿರ್ಬಂಧ ವಿಧಿಸಲಾಯಿತು. ‘ಈ ಷರತ್ತಿಗೆ ವಿರುದ್ಧವಾಗಿ ಮಾಡಿದ ಯಾವುದೇ ಕಾನೂನು ಉಲ್ಲಂಘನೆಯ ಮಟ್ಟಿಗೆ ಅನೂರ್ಜಿತವಾಗಿರುತ್ತದೆ‘.

ಸಂವಿಧಾನ ರಚನೆ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ. ಬಿ ಆರ್ ಅಂಬೇಡ್ಕರ್ ನೇತೃತ್ವದ ಅದ್ಭುತ ಭಾರತೀಯರ ನಿಯೋಗವೊಂದು ಸಂವಿಧಾನ ರಚನೆಯಲ್ಲಿ ತೊಡಗಿತ್ತು. 2 ವರ್ಷ, 11 ತಿಂಗಳು, ಮತ್ತು 17 ದಿನಗಳ ಅವಧಿಯಲ್ಲಿ ಅವರೆಲ್ಲಾ ಸೇರಿ ಪ್ರತಿಯೊಂದು ವಿಧಿ, ಅದರ ಪ್ರತಿಯೊಂದು ಸಾಲು, ಪ್ರತಿಯೊಂದು ಪೂರ್ಣವಿರಾಮ ಮತ್ತು ಅಲ್ಪವಿರಾಮದ ಕುರಿತು ಚರ್ಚಿಸಿದರು. ಅವರ ದಣಿವರಿಯದ ಯತ್ನ, ಒಂದು ಕಡೆ ಪ್ರಜೆಗಳ ನಡುವೆ ಮತ್ತೊಂದು ಕಡೆ ಪ್ರಜೆಗಳು ಮತ್ತು ರಾಜ್ಯದ ನಡುವಿನ ಒಪ್ಪಂದವಾಗಿರುವಂತಹ ಮನೋಜ್ಞ ದಾಖಲೆಯೊಂದನ್ನು ಕಟೆಯಿತು.

ನವಭಾರತದ ಅಗತ್ಯತೆಗಳನ್ನು ಈಡೇರಿಸುವಷ್ಟು ಗಂಭೀರವಾಗಿಲ್ಲ ಎಂದು ವಿಮರ್ಶಿಸಿ ಡಾ. ಅಂಬೇಡ್ಕರ್ ಮೊದಲ ಕರಡನ್ನು ತಿರಸ್ಕರಿಸಿದರು. ಪರಿಹಾರ ಇಲ್ಲದ ಹಕ್ಕುಗಳು ನಿಷ್ಪ್ರಯೋಜಕ ಎಂದು ಅವರು ನಂಬಿದ್ದರು. ಪರಿಣಾಮ 32ನೇ ವಿಧಿ ಕಣ್ತೆರೆದು ಸಂವಿಧಾನದ ‘ಈ ಭಾಗದಿಂದ ದತ್ತವಾದ ಹಕ್ಕುಗಳನ್ನು ಜಾರಿಗೊಳಿಸಲು ಸೂಕ್ತ ವಿಧಾನದ ಮೂಲಕ ಸುಪ್ರಿಂಕೋರ್ಟಿನ ಕದ ತಟ್ಟುವ ಹಕ್ಕಿದೆ’ ಎಂದು ಸಾರಿತು.

Also Read
ಕಾನೂನು ಕೈಯಲ್ಲಿ ಹಿಡಿದು ಬಣ್ಣದಲೋಕ ಗೆದ್ದ ‘ಸಚ್ಚಿ’…

ಸಂವಿಧಾನದ ಭಾಗ 3ರ ಹಕ್ಕುಗಳನ್ನು ಜಾರಿಗೊಳಿಸಲು ಯಾವುದು ಸೂಕ್ತವೋ ಅಂತಹ ಆದೇಶಗಳು, ನಿರ್ದೇಶನಗಳು ಅಥವಾ ತೀರ್ಪುಗಳನ್ನು ನೀಡಲು, ಈ ವಿಧಿಯಡಿ ಸುಪ್ರೀಂಕೋರ್ಟಿಗೆ ಅಧಿಕಾರವನ್ನೂ ಸಹ ಒದಗಿಸಲಾಗಿದೆ. ಸಮಾನವಾಗಿ, 226ನೇ ವಿಧಿ ಪ್ರತಿಯೊಂದು ಹೈಕೋರ್ಟ್‌ಗೆ ಅಧಿಕಾರವೊಂದನ್ನು ನೀಡಿದ್ದು ಭಾಗ 3ರ ಹಕ್ಕುಗಳನ್ನು ಜಾರಿಗೊಳಿಸಲು ಅದು ಸರ್ಕಾರವೂ ಸೇರಿದಂತೆ, ಯಾವುದೇ ವ್ಯಕ್ತಿ ಅಥವಾ ಪ್ರಾಧಿಕಾರಕ್ಕೆ ನಿರ್ದೇಶನ, ಆದೇಶ ಅಥವಾ ತೀರ್ಪುಗಳನ್ನು ಹೊರಡಿಸಬಹುದಾಗಿದೆ. ಡಾ. ಅಂಬೇಡ್ಕರ್ ಅವರ ಪಾಲಿಗೆ, 32ನೇ ವಿಧಿ ಎಂಬುದು ಸಂವಿಧಾನದ ‘ಹೃದಯ ಮತ್ತು ಆತ್ಮ’ ಆಗಿತ್ತು.

ಸಂವಿಧಾನವನ್ನು ಅಂಗೀಕರಿಸಿದ ಮರುಕ್ಷಣದಿಂದಲೇ ಸುಪ್ರೀಂಕೋರ್ಟ್ ನಾಗರಿಕರ ನೆರವಿಗೆ ಬಂದಿತು. ರೊಮೇಶ್ ಥಾಪರ್ (1950) ಪ್ರಕರಣದಲ್ಲಿ ಸಂವಿಧಾನ ಪೀಠವು ತನ್ನ ಪಾತ್ರವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿದೆ:

‘ಮೂಲಭೂತ ಹಕ್ಕುಗಳ ರಕ್ಷಕ ಮತ್ತು ಖಾತ್ರಿದಾರನಾಗಿ ಈ ನ್ಯಾಯಾಲಯ ರೂಪುಗೊಂಡಿದೆ, ಮತ್ತು ಅದು ತನಗೆ ವಹಿಸಲಾಗಿರುವ ಜವಾಬ್ದಾರಿಗೆ ಬದ್ಧವಾಗಿದ್ದು, ಅಂತಹ ಹಕ್ಕುಗಳ ಉಲ್ಲಂಘನೆ ವಿರುದ್ಧ ರಕ್ಷಣೆ ಕೋರುವ ಅರ್ಜಿಗಳನ್ನು ಅಂಗೀಕರಿಸಲು ನಿರಾಕರಿಸುವುದಿಲ್ಲ...’

Also Read
ರಾಂ ಜೇಠ್ಮಲಾನಿ : ಬದಲಾಗದ, ಪಶ್ಚಾತ್ತಾಪವಿಲ್ಲದ ನಿರ್ಭೀತ ಮನ

1952ರಲ್ಲಿ ವಿ ಜಿ ರೋ ಪ್ರಕರಣದಲ್ಲಿ ಶಾಸಕಾಂಗದೊಂದಿಗೆ ಘರ್ಷಣೆ ನಡೆಸಲು ನ್ಯಾಯಾಂಗ ಯತ್ನಿಸುತ್ತಿದೆ ಎಂಬ ಸಂದೇಹವಾದಿಗಳ ವಾದವನ್ನು ನ್ಯಾಯಾಲಯ ಮೊಳಕೆಯಲ್ಲಿಯೇ ಚಿವುಟಿತು:

‘... ಹಾಗಿದ್ದಲ್ಲಿ, ಈ ದೇಶದ ನ್ಯಾಯಾಲಯಗಳು ಮಹತ್ವದ ಆದರೆ ಸುಲಭವಲ್ಲದ ಯಾವುದೇ ಕೆಲಸ ನಿಭಾಯಿಸಿದ್ದರೆ ಅದು, ಶಾಸಕಾಂಗದ ಅಧಿಕಾರವನ್ನು ಬಾಗಿಸಬೇಕೆನ್ನುವ ಸುಧಾರಣಾವಾದಿ ಮನೋಭಾವದ ಇಚ್ಛೆಯಿಂದ ಮಾಡದಿದ್ದರೂ ಸಂವಿಧಾನದ ಪ್ರಕಾರ ತನಗೆ ನಿಗದಿಗೊಳಿಸಿದ ಕರ್ತವ್ಯ ನಿರ್ವಹಿಸಲು ಹಾಗೆ ಮಾಡಿವೆ… ವಿಶೇಷವಾಗಿ ‘ಮೂಲಭೂತ ಹಕ್ಕುಗಳಿಗೆ’ ಸಂಬಂಧಿಸಿದಂತೆ ನ್ಯಾಯಾಲಯ ಜಾಗೃತ ಕಾವಲುಗಾರನ ಪಾತ್ರ ವಹಿಸಿರುವುದು ನಿಜ‘.

ಮುಂದುವರೆದು,

‘ನಾವು ಸ್ಪಷ್ಟವಾದ ವಿವರಣೆಗೆ ಮುಂದಾಗಿರುವುದು ಏಕೆಂದರೆ ಕೆಲವು ಕಡೆಗಳಲ್ಲಿ ಹೊಸ ನ್ಯಾಯಾಲಯಗಳು ದೇಶದ ಶಾಸಕಾಂಗಗಳ ಜೊತೆ ಘರ್ಷಣೆ ಬಯಸುತ್ತವೆ ಎಂದು ಸೂಚಿಸಲಾಗಿದೆ.’ ಎಂದಿತ್ತು.

Also Read
ನ್ಯಾಯಮೂರ್ತಿ ಅರುಣ್ ಮಿಶ್ರಾ: ಒಂದು ಮೌಲ್ಯಮಾಪನ

ನನ್ನ ದೃಷ್ಟಿಯಲ್ಲಿ, ಇತ್ತೀಚೆಗೆ ಸುಪ್ರೀಂಕೋರ್ಟ್‌ನ ಪಾತ್ರದ ಬಗ್ಗೆ ಮಾಧ್ಯಮಗಳಲ್ಲಿ ವಿಶೇಷವಾಗಿ ನಡೆದ ಚರ್ಚೆ ಎಂದರೆ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಕುರಿತಾದದ್ದು. ಅಷ್ಟೇ ದೃಢವಾಗಿ ಅದು ತಿರಸ್ಕಾರ ಯೋಗ್ಯವಾಗಿದೆ. ಏಳು ದಶಕಗಳ ನಂತರ, ನ್ಯಾಯಾಲಯ ತನ್ನ ಸ್ಥಾನಮಾನ, ಅಧಿಕಾರಗಳು, ಕರ್ತವ್ಯಗಳು ಮತ್ತು ಮಿತಿಗಳನ್ನು ಪುನಃ ಪ್ರತಿಪಾದಿಸಲು ಯತ್ನಿಸುವುದು ಸಹಜ. ತಾನು ದೇಶದಲ್ಲಿ ಕಾರ್ಯಾಂಗದೊಂದಿಗೆ ಯಾವುದೇ ಘರ್ಷಣೆ ಬಯಸುತ್ತಿಲ್ಲ ಎಂದು ಅದು ಘೋಷಿಸಬಹುದು, ಆದರೆ ಅದು ಜಾಗೃತ ಕಾವಲುಗಾರನಾಗಿ ತನ್ನ ಕರ್ತವ್ಯ ಮಾಡುತ್ತಿದೆ. ಕೇಂದ್ರ ಕಾನೂನು ಸಚಿವರು ಮತ್ತು ಹಿರಿಯ ವಕೀಲರೊಬ್ಬರನ್ನೂ ಒಳಗೊಂಡಂತೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ ಪಾತ್ರ ಪ್ರಶ್ನಿಸುತ್ತಿರುವವರು ಸಂವಿಧಾನವನ್ನು ಮತ್ತೆ ಬರೆಯಲು ಮುಂದಾಗಿದ್ದಾರೆ. ಅವರ ಪ್ರಯತ್ನಗಳು ಸಂವಿಧಾನದ ನಿಜವಾದ ಸ್ವರೂಪ ಮತ್ತು ಮಹತ್ವಾಕಾಂಕ್ಷೆಯನ್ನು ಸಂಪೂರ್ಣವಾಗಿ ಕಡೆಗಣಿಸುತ್ತವೆ, ಜೊತೆಗೆ ಅದರ ಆತ್ಮವನ್ನೂ ಕೂಡ.

ಅಂಬೇಡ್ಕರ್ ಅವರು ಸ್ಪಷ್ಟವಾಗಿ ತಿಳಿಸಿರುವಂತೆ, ‘ಸಂವಿಧಾನ ಒಂದು ಕಡೆ ರಾಜ್ಯದ ಅಂಗಗಳನ್ನು ಬಲಗೊಳಿಸಲು ಯತ್ನಿಸುತ್ತದೆ’, ಮತ್ತೊಂದೆಡೆ, ‘ಅವುಗಳ ಅಧಿಕಾರವನ್ನು ನಿಯಂತ್ರಿಸಲು ಯತ್ನಿಸುತ್ತದೆ. ಏಕೆಂದರೆ ಈ ಅಂಗಗಳ ಅಧಿಕಾರದ ಮೇಲೆ ಯಾವುದೇ ಮಿತಿ ಹೇರದಿದ್ದರೆ ಸಂಪೂರ್ಣ ದಬ್ಬಾಳಿಕೆ ಮತ್ತು ಬಲಾತ್ಕಾರ ಉಂಟಾಗುತ್ತದೆ‘. ಅಂತಹ ಪರಿಸ್ಥಿತಿಯಲ್ಲಿ, ‘ಯಾವುದೇ ಕಾನೂನು ರೂಪಿಸಲು ಶಾಸಕಾಂಗ ಮುಕ್ತವಾಗಬಹುದು, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಕಾರ್ಯಾಂಗ ಸ್ವತಂತ್ರವಾಗಬಹುದು; ಮತ್ತು ಕಾನೂನಿಗೆ ಯಾವುದೇ ವ್ಯಾಖ್ಯಾನ ನೀಡಲು ಸುಪ್ರೀಂಕೋರ್ಟ್ ಮುಂದಾಗಬಹುದು‘, ಎಂದು ಆತಂಕಗೊಂಡ ಅವರು ‘ಸಂಪೂರ್ಣ ಅರಾಜಕತೆಗೆ’ ಇದು ಕಾರಣವಾದೀತು ಎಂದಿದ್ದಾರೆ.

ತಕ್ಕಡಿ ಆತ್ಯಂತಿಕವಾಗಿ ಕಾರ್ಯಾಂಗದ ಕಡೆ ವಾಲಿದೆ ಎಂಬ ಸಣ್ಣ ಅನುಮಾನ ಸೂಕ್ತ ರೀತಿಯಲ್ಲಿ ಚಿಂತಿಸಬಲ್ಲ ಭಾರತೀಯ ಮನಸ್ಸುಗಳಲ್ಲಿ ಈಗ ಮೂಡಿದೆ.

Also Read
ಭೂಸ್ವಾಧೀನ ಕಾಯಿದೆ, ಎಜಿಆರ್, ಮಾಸ್ಟರ್ ಆಫ್ ರೋಸ್ಟರ್: ನ್ಯಾಯಮೂರ್ತಿಯಾಗಿ ಅರುಣ್ ಮಿಶ್ರಾ ನೀಡಿದ ಪ್ರಮುಖ ತೀರ್ಪುಗಳು

ಸುಪ್ರೀಂಕೋರ್ಟ್ ಮೂಲಭೂತ ಹಕ್ಕುಗಳ ವ್ಯಾಪ್ತಿಯನ್ನು ಅರ್ಥಪೂರ್ಣ ರೀತಿಯಲ್ಲಿ ವಿಸ್ತರಿಸಿದೆ. ಇದೇ ವೇಳೆ ಅವುಗಳ ಜಾರಿಗಾಗಿ ತನ್ನ ಅಧಿಕಾರ ವ್ಯಾಪ್ತಿಯನ್ನು ಕೂಡ ವಿಸ್ತರಿಸಿದೆ. ಹೀಗಾಗಿ, ಕಳೆದ ನಾಲ್ಕು ದಶಕಗಳಲ್ಲಿ ದೇಶಕ್ಕೆ ಉತ್ತಮ ಸೇವೆ ಸಲ್ಲಿಸಿದ ಕಾನೂನು ಮತ್ತು ನ್ಯಾಯಶಾಸ್ತ್ರದ ಒಂದು ಶಾಖೆಯಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹುಟ್ಟು ಪಡೆಯಿತು. 1981ರ ಎಸ್‌ ಪಿ ಗುಪ್ತಾ ಪ್ರಕರಣದಲ್ಲಿ, 7 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಕುರಿತು ದೃಢ ಹೆಜ್ಜೆಗಳನ್ನಿರಿಸಿತು. ಆಗ ನ್ಯಾ. ಪಿ ಎನ್ ಭಗವತಿ ಹೇಳುತ್ತಾರೆ:

‘… ಕಾನೂನಾತ್ಮಕ ಅನ್ಯಾಯ ಅಥವಾ ಕಾನೂನಾತ್ಮಕ ಹಾನಿ ಉಂಟಾಗಿದ್ದಲ್ಲಿ ವ್ಯಕ್ತಿ ಅಥವಾ ನಿರ್ದಿಷ್ಟ ವ್ಯಕ್ತಿಗಳ ಸಮೂಹವನ್ನು ಬಡತನ, ಅಸಹಾಯಕತೆ, ಅಂಗವೈಕಲ್ಯ ಇಲ್ಲವೇ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಹಿಂದುಳಿದಿರುವಿಕೆಯ ಆಧಾರದಲ್ಲಿ ಪರಿಗಣಿಸಿ, ಆತ ಪರಿಹಾರಕ್ಕಾಗಿ ನ್ಯಾಯಾಲಯವನ್ನು ಎಡತಾಕಲು ಸಾಧ್ಯವಾಗದೆ ಇದ್ದಾಗ ಸಮಾಜದ ಯಾವುದೇ ಸದಸ್ಯರು ಸೂಕ್ತ ನಿರ್ದೇಶನ, ಆದೇಶ ಅಥವಾ ತೀರ್ಪು ಕೋರಿ 226 ನೇ ವಿಧಿಯಡಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜೊತೆಗೆ ಅಂತಹ ವ್ಯಕ್ತಿಯ ಅಥವಾ ನಿರ್ದಿಷ್ಟ ವ್ಯಕ್ತಿಗಳ ಸಮೂಹದ ಯಾವುದೇ ಮೂಲಭೂತ ಹಕ್ಕು ಉಲ್ಲಂಘನೆಯಾಗಿದ್ದಲ್ಲಿ ಈ (ಸರ್ವೋಚ್ಛ) ನ್ಯಾಯಾಲಯದಲ್ಲಿ 32ನೇ ವಿಧಿಯಡಿ ನ್ಯಾಯಾಂಗ ಪರಿಹಾರ ಕಂಡುಕೊಳ್ಳಬಹುದಾಗಿದೆ... ‘

ವ್ಯಕ್ತಿಗಳು ನಿಜವಾಗಿಯೂ ಅಸಹಾಯಕರಾಗಿದ್ದರೆ, ‘ಕ್ರಮಾನುಸಾರ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಒತ್ತಾಯಿಸುವುದಿಲ್ಲ ಮತ್ತು ಯಾವುದೇ ವ್ಯಕ್ತಿ ಸಾರ್ವಜನಿಕರ ಪರವಾಗಿ ಸ್ವಯಂಪ್ರೇರಿತವಾಗಿ (Pro Bono Publico) ಸಲ್ಲಿಸಿದ ಅರ್ಜಿಗೆ ಕೂಡ (ನ್ಯಾಯಾಲಯ) ಪ್ರತಿಕ್ರಿಯಿಸಬಹುದು’ ಎಂದು ಅವರು ಹೇಳಿದ್ದಾರೆ.

ಮುಂದುವರೆದು,
‘ಸರ್ಕಾರ ಅಥವಾ ಸಾರ್ವಜನಿಕ ಅಧಿಕಾರಿಯಿಂದ ಕರ್ತವ್ಯಲೋಪ ಇಲ್ಲವೇ ಅಂತಹ ಕ್ರಿಯೆ ನಡೆದಾಗ ಮತ್ತು ಸಂವಿಧಾನ ಅಥವಾ ಕಾನೂನಿಗೆ ವಿರುದ್ಧವಾದ ಸಾರ್ವಜನಿಕ ಅನ್ಯಾಯ ಅಥವಾ ಸಾರ್ವಜನಿಕ ಹಾನಿ ಸಂಭವಿಸಿದಾಗ, ಸಾಕಷ್ಟು ಕಳಕಳಿಯುಳ್ಳ ಯಾವುದೇ ವ್ಯಕ್ತಿ ಅಂತಹ ಅನ್ಯಾಯ ಅಥವಾ ಹಾನಿಗೆ (ನ್ಯಾಯಾಲಯದ ಮುಖಾಂತರ) ಪರಿಹಾರ ಕಂಡುಕೊಳ್ಳಬಹುದು’ ಎಂದು ತಿಳಿಸಲಾಗಿದೆ.

ಅದಕ್ಕೆ ನೀಡಲಾದ ತಾರ್ಕಿಕತೆಯಲ್ಲಿ ‘‘ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಪ್ರತಿನಿಧಿಸುವ ವ್ಯವಸ್ಥೆ ಇಲ್ಲದಿದ್ದಾಗ, ತಮ್ಮ ಹಕ್ಕುಗಳಿಗೆ ನೇರವಾಗಿ ಹಾನಿಯಾಗದಿದ್ದರೂ ಕೂಡ ಸಾರ್ವಜನಿಕ ಕಳಕಳಿ ಇರುವ ವ್ಯಕ್ತಿಗಳು ಅಥವಾ ಸಂಘಟನೆಗಳಿಗೂ ಕೂಡ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶ ಮಾಡಿಕೊಡಲಾಗಿದೆ. ಕರ್ತವ್ಯದ, ಸಂವಿಧಾನದ, ಇಲ್ಲವೇ ಕಾನೂನಿನ ಉಲ್ಲಂಘನೆಗಳಿಂದ ಉಂಟಾಗುವ ಸಾರ್ವಜನಿಕ ನಷ್ಟಕ್ಕೆ ನ್ಯಾಯಾಂಗ ಪರಿಹಾರ ಒದಗಿಸುವ ಸಲುವಾಗಿ ಈಗಾಗಲೇ ಇರುವ ನಿಯಮಗಳನ್ನು ಸುಧಾರಣೆಗೊಳಿಸುವುದು ಅವಶ್ಯಕ’ ಎನ್ನಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿರೋಧಿಸುವವರರನ್ನು ಖಂಡಿಸುತ್ತಾ, ನ್ಯಾ. ಭಗವತಿ ದೃಢ ಧ್ವನಿಯಲ್ಲಿ ಹೀಗೆ ಹೇಳಿದ್ದಾರೆ,

‘... ನ್ಯಾಯಾಲಯಕ್ಕೆ ಒಯ್ಯುವ ಹಕ್ಕಿನ (Locus standi ) ನಿಯಮವನ್ನು ಸುಧಾರಣೆಗೊಳಿಸುವ ಮೂಲಕವಷ್ಟೇ ಅಧಿಕಾರಿ ವಲಯ ಮತ್ತು ಕಾನೂನಿನ ಉಲ್ಲಂಘನೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಿದೆ’, ಮತ್ತು ಆ ಮೂಲಕ ದಬ್ಬಾಳಿಕೆಯನ್ನು ತಡೆಯಬೇಕಿದೆ- ಅದು ಆರ್ಥಿಕ, ವಾಣಿಜ್ಯ, ಕಾರ್ಪೊರೇಟ್ ಅಥವಾ ಸರ್ಕಾರಿ ದಬ್ಬಾಳಿಕೆ ಯಾವುದೇ ಇರಲಿ‘.

ನ್ಯಾಯಮೂರ್ತಿಗಳಾದ ಎ ಸಿ ಗುಪ್ತಾ, ಫಝಲ್ ಅಲಿ, ವಿ ಡಿ ತುಳಜಾಪುರ್ಕರ್, ಡಿ ಎ ದೇಸಾಯಿ, ಆರ್ ಎಸ್ ಪಾಠಕ್ ಮತ್ತು ಇ ಎಸ್ ವೆಂಕಟರಾಮಯ್ಯ ಇದಕ್ಕೆ ಸಮ್ಮತಿಯನ್ನು ತಮ್ಮ ದೇ ಅಭಿಪ್ರಾಯಗಳ ಮೂಲಕ ವ್ಯಕ್ತಪಡಿಸಿದ್ದರು.

ಇದು ಕಾರ್ಯವಿಧಾನದ ತಾಂತ್ರಿಕತೆಯ ವ್ಯಾಪ್ತಿಯಡಿ ಬರುವಂಥದ್ದಲ್ಲ ಮತ್ತು ಪ್ರಜೆಗಳ ಮೂಲಭೂತ ಮಾನವ ಹಕ್ಕುಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಯಾವುದೇ ರೀತಿಯ ಆದೇಶಗಳನ್ನು ಮಾಡಬಹುದು ಎಂದು ಸುಪ್ರೀಂಕೋರ್ಟ್ ಅನೇಕ ವರ್ಷಗಳಿಂದ ಸಲಹೆ ರೂಪದ ಮಾತುಗಳನ್ನಾಡಿದೆ. ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಜಾರಿಗೆ ತರಲು ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕ ತೀರ್ಪುಗಳನ್ನು ನೀಡಿ ಸುಪ್ರೀಂಕೋರ್ಟ್ ದೇಶಕ್ಕೆ ಭಾರೀ ಸೇವೆ ಸಲ್ಲಿಸಿದೆ. ಅದು ನೀಡಿದ ತೀರ್ಪು, ಆದೇಶ ಇಲ್ಲವೇ ನಿರ್ದೇಶನಗಳ ಆಳ-ಅಗಲ, ಕಲ್ಪನೆಗೂ ಮೀರಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಿದೆ.

ಲಕ್ಷಗಟ್ಟಲೆ ಭಾರತೀಯರು ಸುಪ್ರೀಂಕೋರ್ಟ್‌ ಮಧ್ಯಸ್ಥಿಕೆಯಿಂದ ಪ್ರಯೋಜನ ಪಡೆದಿದ್ದಾರೆ. ಅಲ್ಲದೆ ದೇಶದೆಲ್ಲೆಡೆ ಇರುವ ಹೈಕೋರ್ಟುಗಳು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಗೆ ನೀಡಿದ ತೀರ್ಪಿನಿಂದಾಗಿ ಇನ್ನೊಂದಷ್ಟು ಲಕ್ಷಾಂತರ ಮಂದಿಗೆ ಉಪಯೋಗವಾಗಿದೆ. ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಕೆಲಸಗಳಿಗೆ ನಾಗರಿಕರು ಋಣಿಯಾಗಿದ್ದಾರೆ. ಆದರೆ ಎಲ್ಲ ಸಮಯದಲ್ಲಿಯೂ ನ್ಯಾಯಾಲಯ ಅಗತ್ಯವಿರುವವರ ಸಹಾಯಕ್ಕೆ ಬಂದಿದೆ ಎಂದಲ್ಲ, ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಅದು ಅನೇಕ ಸಮಯಗಳಲ್ಲಿ ವಿಫಲವಾಗಿದೆ.

ಅಗಾಧ ಪ್ರಮಾಣದ ವಿವೇಚನೆಯಿಲ್ಲದ ಗಣಿಗಾರಿಕೆಯಿಂದಾಗಿ ಪರಿಸರಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ನಿರಂತರ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಟಿ.ಎನ್. ಗೋವರ್ಧಮಾನ್ ಪ್ರಕರಣದಲ್ಲಿ ನೀಡಿದ ಅನೇಕ ತೀರ್ಪುಗಳು ಇದಕ್ಕೆ ಅತ್ಯುತ್ತಮ ಉದಾಹರಣೆ. 1996ರ ಡಿಸೆಂಬರ್ 12ರಿಂದ ಈ ಪ್ರಕರಣಗಳನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ದೇಶದೆಲ್ಲೆಡೆ ಇರುವ ಕಾಡುಗಳಲ್ಲಿ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಿತಲ್ಲದೆ, ಹಲವಾರು ಸಾವಿರ ಆದೇಶಗಳ ಮೂಲಕ ನಿರಂತರವಾಗಿ ಆ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ. ಇದು ಶುರುವಾದದ್ದು ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಂದಾಗಿ. ಅಮಿಕಸ್ ಕ್ಯೂರಿಯಂತೆ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಅವರು ವರ್ತಿಸಿ ಕಠಿಣ ಆದೇಶಗಳನ್ನು ನೀಡಲು ನ್ಯಾಯಾಲಯದ ಮನವೊಲಿಸಿದರು.

ಅನೇಕರ ಪಾಲಿಗೆ, ಇದು ಕಾರ್ಯಾಂಗ ಕ್ಷೇತ್ರದ ಮೇಲೆ ನಡೆಸಿದ ಗಂಭೀರ ದಾಳಿಯಾಗಿ ಕಂಡಿತು. ಗಣಿಗಾರಿಕೆ ಉದ್ಯಮದ ಅಭಿವೃದ್ಧಿ ಮತ್ತಿತರ ವಾಣಿಜ್ಯ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿ, ಉದ್ಯೋಗ, ಉತ್ಪಾದನೆ, ರಫ್ತು ಮತ್ತು ಕೈಗಾರಿಕೀಕರಣವನ್ನು ದುರ್ಬಲಗೊಳಿಸುತ್ತಿರುವಂತೆ ತೋರಿತು. ಇದೇ ವೇಳೆ ಅಮೂಲ್ಯ ಕಾಡುಗಳನ್ನು ರಕ್ಷಿಸುವ ಮೂಲಕ ನ್ಯಾಯಾಲಯ ಸರ್ವ ಜನರ ಹಿತ ಕಾಪಾಡಿದೆ ಎಂದು ಬೇರೆಯವರಿಗೆ ಅನ್ನಿಸುತ್ತಿದೆ. ಇನ್ನೊಂದು ಸನ್ನಿವೇಶದಲ್ಲಿ, ದೆಹಲಿಯಲ್ಲಿ ನಿರ್ದಿಷ್ಟ ಡೀಸೆಲ್ ವಾಹನಗಳು ರಸ್ತೆಗಿಳಿಯುವುದನ್ನು ತಡೆಯುವಂತೆ ಸಾಳ್ವೆ ಸುಪ್ರೀಂಕೋರ್ಟ್‌ ಮನವೊಲಿಸಿದರು. ಇದು 12 ವರ್ಷಗಳ ಹೋರಾಟದ ಫಲವಾಗಿ ದೊರೆತ ದೊಡ್ಡ ಜಯ ಎಂದು ಕರೆದರು. ಹೀಗೆ ಅಸಾಮಾನ್ಯ ನ್ಯಾಯದಾನದ ಹೆಚ್ಚಿನ ಲಾಭ ಪಡೆದ ನಂತರವೂ ‘ಚುನಾಯಿತ ಕಾರ್ಯಕಾರಿಯ ವಲಯದೊಳಗೆ ಹಸ್ತಕ್ಷೇಪ ಮಾಡುವಂತೆ ನ್ಯಾಯಾಲಯಗಳನ್ನು ಹೆಚ್ಚಾಗಿ ಕೇಳಲಾಗುತ್ತಿದೆ’ ಎಂಬ ಅನುಮಾನ ಅವರನ್ನೇಕೆ (ಸಾಳ್ವೆ) ಕಾಡುತ್ತಿದೆ ಎಂಬುದು ನಿಗೂಢ.

ಅವರು ಕೂಡ ‘ಸಾಂವಿಧಾನಿಕ ವೇಷದಲ್ಲಿ ತಮ್ಮ ಆಲೋಚನೆಗಳನ್ನು ಹುದುಗಿಸಿಟ್ಟು ಅದರ ಜಾರಿಯ ಆಗ್ರಹವನ್ನು ಹುಸಿ-ಸಾಂವಿಧಾನಿಕ ಹಕ್ಕುಗಳ ಜಾರಿ ಎಂದಿದ್ದರೇ?"

ಸಂವಿಧಾನ ನಿರಂಕುಶವಾದವನ್ನು ಸಹಿಸುವುದಿಲ್ಲ. ಜೊತಗೆ ಸಾಂವಿಧಾನಿಕ ವ್ಯವಸ್ಥೆಯಡಿ ನ್ಯಾಯಾಲಯಗಳು ವಿಮರ್ಶೆ ಮಾಡಲಾಗದಂತಹ ಕಾರ್ಯಾಂಗದ ಯಾವುದೇ ನಿರ್ಧಾರ ಇರುವುದಿಲ್ಲ. 2007ರಲ್ಲಿ, ಐ ಆರ್ ಕೊಯೆಲ್ಹೋ ಪ್ರಕರಣದಲ್ಲಿ ಒಂಬತ್ತು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಮಾತುಗಳನ್ನಾಡಿದೆ:

‘…ಸಂವಿಧಾನದ ಅಂತಿಮ ವ್ಯಾಖ್ಯಾನಕಾರನಾಗಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದು ಮತ್ತು ಸಾಂವಿಧಾನಿಕ ಮಿತಿಗಳನ್ನು ಜಾರಿಗೊಳಿಸುವುದು ಈ ನ್ಯಾಯಾಲಯದ ಕರ್ತವ್ಯವಾಗಿದೆ.’ ಅಲ್ಲದೆ ‘ಸರ್ಕಾರ ಚಲಾಯಿಸುವ ಅಧಿಕಾರ ಪ್ರಜಾಪ್ರಭುತ್ವದ ತತ್ವಗಳನ್ನು ನಾಶಪಡಿಸಲು ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ನಿಯಂತ್ರಿಸುವ’ ಅಗತ್ಯವಿರುತ್ತದೆ ಎಂದು ನ್ಯಾಯಪೀಠ ಸಾಂವಿಧಾನಿಕತೆಯ ತತ್ವವನ್ನು ಒತ್ತಾಯಿಸಿದೆ.

ನ್ಯಾಯಾಂಗ ವಿಮರ್ಶೆ ಎಂಬುದು ಸಂವಿಧಾನದ ಬುನಾದಿಯ ಭಾಗ ಕೂಡ. ಹಾಗಿದ್ದರೆ, ನಾಗರಿಕರ ಹಕ್ಕುಗಳು ಮತ್ತು ಸ್ವಾತಂತ್ರ್ಯ ಮೊಟುಕಾದರೆ ಅಥವಾ ಕಾರ್ಯಾಂಗ ಅದನ್ನು ಕುಗ್ಗಿಸಿದರೆ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳಬೇಕೇ? ಖಂಡಿತವಾಗಿಯೂ ಅಲ್ಲ. ಹಾಗೇನಾದರೂ ಸಂಭವಿಸಿದರೆ ಪ್ರಜಾಪ್ರಭುತ್ವದಲ್ಲಿ ಏನೂ ಉಳಿಯುವುದಿಲ್ಲ. ಜೊತೆಗೆ ಸಾರ್ವಜನಿಕ ಹಿತಾಸಕ್ತಿ ಕ್ರಿಯೆಯನ್ನು ನ್ಯಾಯಾಂಗ ಆವಿಷ್ಕರಿಸಿದ್ದರ ಹಿಂದಿನ ನಿಜ ಉದ್ದೇಶ (ಸಮಾನತಾವಾದಿ ಸಾಮಾಜಿಕ ವ್ಯವಸ್ಥೆ ಮತ್ತು ಕಲ್ಯಾಣ ರಾಜ್ಯ ರೂಪಿಸಲು ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ನೀಡಲಾದ ಸಾಂವಿಧಾನಿಕ ಭರವಸೆ) ಸೋಲುತ್ತದೆ.
ಬಡತನ, ಅಜ್ಞಾನ, ಸಾಮಾಜಿಕ ತಾರತಮ್ಯ ಮತ್ತು ಆರ್ಥಿಕ ಅನಾನುಕೂಲತೆಯಿಂದಾಗಿ ಆ ಹಕ್ಕುಗಳನ್ನು ಸ್ವತಃ ಪ್ರತಿಪಾದಿಸಲಾಗದ ಸಮಾಜದ ಅನೇಕ ಭಾಗಗಳ ಮೇಲಾಗುತ್ತಿರುವ ಹಕ್ಕುಗಳ ಉಲ್ಲಂಘನೆ ತಡೆಯಲು ಇಂತಹ ಮಧ್ಯಸ್ಥಿಕೆಗಳು ಅತ್ಯಗತ್ಯ. ಅವುಗಳಿಲ್ಲದೆ ಸಾರ್ವಜನಿಕ ಹಿತಾಸಕ್ತಿಯನ್ನು ಎಂದಿಗೂ ಸಾಧಿಸಲಾಗದು. ಅನೇಕ ಬಾರಿ ಅಂತಹ ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಕೂಡ ತಿಳಿದಿರುವುದಿಲ್ಲ.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಇಲ್ಲದೇ ಹೋದರೆ ಕಾರ್ಯಾಂಗದ ನಡೆಯಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಪೂರ್ವಗ್ರಹ ಎಂಬುದು ಪ್ರಶ್ನೆ ಮಾಡದೆ ಹಾಗೆಯೇ ಉಳಿದುಬಿಡುತ್ತದೆ. ನ್ಯಾಯಾಲಯಗಳು ಕಾರ್ಯಾಂಗ ಮತ್ತು ಶಾಸಕಾಂಗದ ಮೇಲೆ ನಿರಂತರವಾಗಿ ನಿಗಾ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ನಮ್ಮ ಸಂವಿಧಾನದಡಿಯಲ್ಲಿ ನಾಗರಿಕರಿಗೆ ದೊರಕುವ ಎಲ್ಲಾ ಹಕ್ಕುಗಳು ನಿಷ್ಪ್ರಯೋಜಕವಾಗುತ್ತವೆ. ಕಾನೂನಿನ ನಿಯಮ ಎಂಬುದು ಎಲ್ಲಾ ನಾಗರಿಕ ಸಮಾಜಗಳಿಗೆ ಅಂಗೀಕೃತ ಮಾನದಂಡವಾಗಿದ್ದು ಭಾರತದ ನ್ಯಾಯಾಲಯಗಳು ಆ ಕಾನೂನಿನ ನಿಯಮವನ್ನು ಜಾರಿಗೊಳಿಸುವ ಕರ್ತವ್ಯ ನಿರ್ವಹಿಸುತ್ತಿವೆ.

ಅಜ್ಞಾನ ಮತ್ತು ಕೆಲವರ ಹಿತಾಸಕ್ತಿಯನ್ನಷ್ಟೇ ಪ್ರತಿನಿಧಿಸುವವರನ್ನು ಸುಪ್ರೀಂಕೋರ್ಟ್ ನಿರ್ಲಕ್ಷಿಸಬೇಕೇ ವಿನಾ ಸಾರ್ವಜನಿಕ ಹಿತಾಸಕ್ತಿಯನ್ನಲ್ಲ. ಸಾಂವಿಧಾನಿಕ ನ್ಯಾಯಾಲಯವಾಗಿ ಅದು ದೇಶದ ಮತ್ತು ಅದರ ನಾಗರಿಕರಿಗೆ ಸೇವೆ ಸಲ್ಲಿಸುವುದನ್ನು ಮುಂದುವರೆಸಬೇಕು.

ಲೇಖಕ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರು ಮತ್ತು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ನಿನ ಹಾಲಿ ಅಧ್ಯಕ್ಷರು ಕೂಡ.

(ಲೇಖನ ಮೊದಲ ಬಾರಿಗೆ ‘ದ ವೈರ್’ ಜಾಲತಾಣದಲ್ಲಿ ಪ್ರಕಟಗೊಂಡಿತ್ತು)

Related Stories

No stories found.
Kannada Bar & Bench
kannada.barandbench.com