
ನ್ಯಾಯಮೂರ್ತಿ ನಿರ್ಮಲ್ ಯಾದವ್ ಮನೆ ಬಾಗಿಲಲ್ಲಿ 2008 ರಲ್ಲಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣದ ತೀರ್ಪನ್ನು ಚಂಡೀಗಢ ನ್ಯಾಯಾಲಯ ಗುರುವಾರ ಕಾಯ್ದಿರಿಸಿದೆ [ಸಿಬಿಐ ಮತ್ತು ಸಂಜೀವ್ ಬನ್ಸಾಲ್ ಇನ್ನಿತರರ ನಡುವಣ ಪ್ರಕರಣ].
ಆರೋಪಿತರು ಮತ್ತು ಪ್ರಾಸಿಕ್ಯೂಷನ್ ವಾದಗಳನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಅಲ್ಕಾ ಮಲಿಕ್ ಅವರು ಮಾರ್ಚ್ 29ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದರು.
ಹೈಕೋರ್ಟ್ ಆಗಿನ ನ್ಯಾಯಮೂರ್ತಿಯಾಗಿದ್ದ ನಿರ್ಮಲ್‌ಜಿತ್ ಕೌರ್ ಅವರ ನಿವಾಸಕ್ಕೆ 15 ಲಕ್ಷ ಮೌಲ್ಯದ ಪೊಟ್ಟಣವನ್ನು ತಂದು ತಲುಪಿಸಲಾಗಿತ್ತು. ಪ್ರಕರಣವನ್ನು ಈ ವಿಷಯವನ್ನು ನ್ಯಾಯಮೂರ್ತಿ ಕೌರ್ ಅವರ ಪೇದೆ ಚಂಡೀಗಢ ಪೊಲೀಸರಿಗೆ ವರದಿ ಮಾಡಿದ್ದರು. ಎಫ್‌ಐಆರ್ ದಾಖಲಾಗಿತ್ತು.
ನಂತರ ಪಂಜಾಬ್‌ನ ಗವರ್ನರ್ ಮತ್ತು ಕೇಂದ್ರಾಡಳಿತ ಪ್ರದೇಶದ ಚಂಡೀಗಢದ ಆಡಳಿತಾಧಿಕಾರಿಯಾಗಿದ್ದ ಜನರಲ್ (ನಿವೃತ್ತ) ಎಸ್ ಎಫ್ ರೊಡ್ರಿಗ್ಸ್ ಅವರ ಆದೇಶದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಯಿತು.
ಪ್ರಾಸಿಕ್ಯೂಷನ್ ಪ್ರಕಾರ, ಹರಿಯಾಣದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಂಜೀವ್ ಬನ್ಸಾಲ್ ಅವರ ಗುಮಾಸ್ತರೊಬ್ಬರು ಮತ್ತೊಬ್ಬ ನ್ಯಾಯಮೂರ್ತಿ ಯಾದವ್ ಎಂಬುವವರಿಗೆ ಹಣ ನೀಡಲು ಮುಂದಾಗಿದ್ದರು. ಹೆಸರುಗಳಲ್ಲಿನ ಗೊಂದಲದಿಂದಾಗಿ ಅದು ನ್ಯಾ. ನಿರ್ಮಲ್ ಯಾದವ್ ಅವರ ನಿವಾಸ ತಲುಪಿತ್ತು.
2010 ರಲ್ಲಿ, ನ್ಯಾಯಮೂರ್ತಿ ಯಾದವ್ ಅವರನ್ನು ಉತ್ತರಾಖಂಡ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು, ಒಂದು ವರ್ಷದ ನಂತರ ಅವರು ನಿವೃತ್ತರಾದರು. ಅದೇ ವರ್ಷ ಅವರು ಸೇರಿದಂತೆ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. 2014ರಲ್ಲಿ, ವಿಶೇಷ ನ್ಯಾಯಾಲಯ ಐದು ಆರೋಪಿಗಳ ವಿರುದ್ಧ ಆರೋಪ ನಿಗದಿಪಡಿಸಿತು.
ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಬನ್ಸಾಲ್ ಡಿಸೆಂಬರ್ 2016 ರಲ್ಲಿ ನಿಧನರಾದರು. ಪರಿಣಾಮವಾಗಿ, ಅವರ ವಿರುದ್ಧದ ವಿಚಾರಣೆಯನ್ನು ಜನವರಿ 2017ರಲ್ಲಿ ಕೈಬಿಡಲಾಯಿತು.
2016ರಲ್ಲಿ ನ್ಯಾಯಮೂರ್ತಿ ಕೌರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣಾ ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ, ಹೈಕೋರ್ಟ್‌ಗೆ ಪದೋನ್ನತಿ ಪಡೆದ ಕೇವಲ 33 ದಿನಗಳಾಗಿತ್ತು. ಮನೆಯಲ್ಲಿದ್ದ ನನಗೆ ಜವಾನ ಬಂದು ದೆಹಲಿಯಿಂದ ಪತ್ರ ಬಂದಿದೆ ಎಂದರು. ಒಡೆದು ನೋಡಿ ಎಂದೆ. ಆಗ ಅವರು ಅದನ್ನು ತೆರೆಯಲು ತಿಣುಕಾಡುತ್ತಿದ್ದರು. ಆಗ ಅದು ಪತ್ರವಲ್ಲ ಎಂದು ನನಗೆ ಅನ್ನಿಸಿತು. ಬೇಗನೆ ಒಡೆಯಿರಿ ಎಂದೆ. ಆಗ ಅವರು ಅದನ್ನು ಹರಿದಾಗ ಅದರಲ್ಲಿ ಕರೆನ್ಸಿ ನೋಟುಗಳಿದ್ದವು. ಒಂದು ಕ್ಷಣವೂ ತಡ ಮಾಡಿದೆ ಅದನ್ನು ಕೊಟ್ಟವರನ್ನು ಹಿಡಿಯಿರಿ ಎಂದು ಹೇಳಿದೆ ಎಂದು ವಿವರಿಸಿದ್ದರು.
ಕೆಲವೇ ನಿಮಿಷಗಳಲ್ಲಿ ಬನ್ಸಾಲ್ ಅವರು ತಮಗೆ ಕರೆ ಮಾಡಿ ಹಣ ತಪ್ಪಾಗಿ ನಿಮ್ಮ ಮನೆ ಬಾಲಿಗೆ ಬಂದಿದೆ ಎಂದರು. ಅದು ವಾಸ್ತವವಾಗಿ ನಿರ್ಮಲ್ ಸಿಂಗ್ ಎಂಬುವವರಿಗೆ ಸೇರಬೇಕಿತ್ತು ಎಂದರು. ಆದರೆ ನಾನು ಅಷ್ಟರಲ್ಲಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ತಿಳಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಮಾರ್ಚ್ 27) ಅಂತಿಮ ವಾದ ಆಲಿಸಲಾಗಿದೆ.