ನ್ಯಾಯಮೂರ್ತಿಗಳ ವರ್ಗಾವಣೆ ಪ್ರಶ್ನಿಸಿ ಸಿಜೆಐಗೆ ಕರ್ನಾಟಕ ಹೈಕೋರ್ಟ್‌ 200 ಕಿರಿಯ ವಕೀಲರ ಪತ್ರ; ನಾಳೆ ಸಿಜೆ ಭೇಟಿ

ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನಾಳೆ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ನಿಯೋಗವೊಂದು ಭೇಟಿ ಮಾಡಲಿದೆ.
Karnataka High Court, Lawyers
Karnataka High Court, Lawyers
Published on

ಕರ್ನಾಟಕ ಹೈಕೋರ್ಟ್‌ನ ಕೆಲ ನ್ಯಾಯಮೂರ್ತಿಗಳ ವರ್ಗಾವಣೆ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ 200 ಯುವ ವಕೀಲರು ಶನಿವಾರ ಮನವಿ ಸಲ್ಲಿದ್ದಾರೆ. ಇದೇ ವಿಚಾರವಾಗಿ ನಾಳೆ ವಕೀಲರ ನಿಯೋಗವೊಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರನ್ನು ಭೇಟಿಯಾಗಿ ಚರ್ಚಿಸಲಿದೆ.

ಸುಮಾರು 200 ಕ್ಕೂ ಹೆಚ್ಚು ಕಿರಿಯ ವಕೀಲರು ಸಹಿ ಮಾಡಿರುವ ಪತ್ರದಲ್ಲಿ ಪ್ರಸ್ತಾವಿತ ವರ್ಗಾವಣೆಗಳನ್ನು ಮರುಪರಿಶೀಲಿಸುವಂತೆ ವಕೀಲರು ಸಿಜೆಐ ಸಂಜೀವ್‌ ಖನ್ನಾ ಅವರನ್ನು ಕೋರಿದ್ದಾರೆ.

Also Read
ನ್ಯಾಯಮೂರ್ತಿಗಳ ವರ್ಗಾವಣೆ ಪ್ರಸ್ತಾವಕ್ಕೆ ಎಎಬಿ ವಿರೋಧ: ಭೇಟಿಗೆ ಸಿಜೆಐಗೆ ಕಾಲಾವಕಾಶ ಕೋರಿಕೆ

ವರ್ಗಾವಣೆಯಾಗಲಿರುವ ನ್ಯಾಯಮೂರ್ತಿಗಳು ತಮ್ಮ ನ್ಯಾಯಸಮ್ಮತತೆ, ನ್ಯಾಯಾಂಗ ಶಿಸ್ತು ಮತ್ತು ಯುವ ವಕೀಲರನ್ನು ಆಳವಾಗಿ ಪ್ರೋತ್ಸಾಹಿಸುವ ಕಾರಣಕ್ಕೆ ಗೌರವಕ್ಕೆ ಭಾಜನರಾಗಿದ್ದು ತಾವು ಪ್ರಾಕ್ಟೀಸ್‌ ರೂಪಿಸಿಕೊಳ್ಳುತ್ತಿರುವ ಹಂತದಲ್ಲಿ ಅಂತಹ ವರ್ಗಾವಣೆ ಕಿರಿಯ ವಕೀಲರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಆ ರೀತಿಯ ನ್ಯಾಯಮೂರ್ತಿಗಳ ಉಪಸ್ಥಿತಿ ನ್ಯಾಯ ವಿತರಣೆಯ ಗುಣಮಟ್ಟಕ್ಕೆ ಮಾತ್ರವಲ್ಲದೆ ಕಾನೂನು ಸಮುದಾಯದಲ್ಲಿ ನ್ಯಾಯಯುಕ್ತತೆ ಮತ್ತು ವೃತ್ತಿಪರ ಬೆಳವಣಿಗೆಯ ಸಂಸ್ಕೃತಿ ಪೋಷಿಸಲು ಕೂಡ ನಿರ್ಣಾಯಕವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Also Read
ಹಿಮಾಲಯದಲ್ಲಿ ಹೈಕೋರ್ಟ್‌ನ ಪೀಠ ಮಾಡಿದರೆ ಅಲ್ಲಿಗೂ ಹೋಗುತ್ತೇನೆ: ನ್ಯಾ. ಕೃಷ್ಣ ದೀಕ್ಷಿತ್‌

ಮತ್ತೊಂದೆಡೆ ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಉದ್ದೇಶದಿಂದ ನಾಳೆ (ಸೋಮವಾರ) ಬೆಳಿಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರನ್ನು ನಿಯೋಗವೊಂದು ಭೇಟಿ ಮಾಡಲಿದೆ.

ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಮಾಡುವುದನ್ನು ವಿರೋಧಿಸಿ ಸಿಜೆಐ ಖನ್ನಾ ಅವರಿಗೆ ನಿ ಬೆಂಗಳೂರು ವಕೀಲರ ಸಂಘ (ಎಎಬಿ) ಕೂಡ ನಿನ್ನೆ (ಶನಿವಾರ) ಪತ್ರ ಬರೆದಿತ್ತು. ದಾವೆದಾರರು, ವಕೀಲರಿಗೆ ತಕ್ಷಣ ಸ್ಪಂದಿಸುವ, ಕಠಿಣ ಪರಿಶ್ರಮ ಹಾಕಿ ಕೆಲಸ ಮಾಡುವ ನ್ಯಾಯಮೂರ್ತಿಗಳನ್ನು ವರ್ಗಾವಣೆಯ ಪ್ರಸ್ತಾವದಲ್ಲಿ ಭಾಗವಾಗಿಸಲಾಗಿದೆ. ಇಂತಹ ಕಠಿಣ ಪರಿಶ್ರಮಿ ನ್ಯಾಯಮೂರ್ತಿಗಳನ್ನು ವರ್ಗಾಯಿಸುವುದು ಅನ್ಯಾಯ ಎಂದಿತ್ತು.

Also Read
ಕರ್ನಾಟಕ ಹೈಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ವರ್ಗಾವಣೆ ಪ್ರಸ್ತಾವದ ಶಂಕೆ: ಧಾರವಾಡ ವಕೀಲರ ಸಂಘದ ತೀವ್ರ ವಿರೋಧ

ನ್ಯಾಯಮೂರ್ತಿಗಳಾದ ಕೃಷ್ಣ ಎಸ್.‌ ದೀಕ್ಷಿತ್‌, ಕೆ ನಟರಾಜನ್‌, ಎನ್‌ ಎಸ್‌ ಸಂಜಯ್‌ ಗೌಡ ಮತ್ತು ಹೇಮಂತ್‌ ಚಂದನಗೌಡರ್‌ ಅವರನ್ನು ವರ್ಗಾವಣೆ ಮಾಡುವುದಕ್ಕೆ ಕೆಲ ದಿನಗಳ ಹಿಂದೆ ಹೈಕೋರ್ಟ್‌ ಧಾರವಾಡ ಪೀಠದ ವಕೀಲರ ಸಂಘ ಕೂಡ ತನ್ನ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆದಿತ್ತು.

ಈ ಮಧ್ಯೆ ಹಿಮಾಲಯದಲ್ಲಿ ಹೈಕೋರ್ಟ್‌ನ ಪೀಠ ಮಾಡಿದರೆ ಅಲ್ಲಿಗೂ ಹೋಗುತ್ತೇನೆ ಎಂದು ಪ್ರಸ್ತಾವಿತ ವರ್ಗಾವಣೆಯಲ್ಲಿ ಹೆಸರಿರುವ ನ್ಯಾ. ಕೃಷ್ಣ ದೀಕ್ಷಿತ್‌ ಪ್ರತಿಕ್ರಿಯಿಸಿದ್ದು ಗಮನ ಸೆಳೆದಿತ್ತು. ಪ್ರಕರಣವೊಂದರ ವಿಚಾರಣೆಯ ನಂತರ ಮೌಖಿಕವಾಗಿ ಈ ವಿಚಾರ ತಿಳಿಸಿದ್ದ ನ್ಯಾ. ಕೃಷ್ಣ “ವರ್ಗಾವಣೆ ವಿಚಾರದಲ್ಲಿ ನಾವು ವರ್ಗಾವಣೆಗೆ ಬದ್ಧವಾಗಿರಬೇಕು ಎಂದು ಹೇಳಿದಾಗ ನೀವು ಹೋಗಬೇಕಲ್ಲವೇ? ಇದು ನಮಗೂ ಅನ್ವಯಿಸುತ್ತದೆ” ಎಂದು ವಕೀಲರೊಬ್ಬರನ್ನುದ್ದೇಶಿಸಿ ಹೇಳಿದ್ದರು.

Kannada Bar & Bench
kannada.barandbench.com