High Court of Karnataka
High Court of Karnataka

ಶಾಸಕರ ವಿರುದ್ಧದ 21 ಪ್ರಕರಣಗಳನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆಯೇ? ಸ್ಪಷ್ಟನೆ ಬಯಸಿದ ಕರ್ನಾಟಕ ಹೈಕೋರ್ಟ್

ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರ ವಿರುದ್ಧ ಹೂಡಲಾಗಿದ್ದ 61 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ರಾಜ್ಯ ಸಚಿವ ಸಂಪುಟದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಗೋರಕ್ಷಣೆ ಸಂದರ್ಭದ ಹಿಂಸಾಚಾರ, ಕೋಮುಹಿಂಸೆ ಸೇರಿದಂತೆ ಶಾಸಕರ ವಿರುದ್ಧ ಹೂಡಲಾಗಿದ್ದ ಇಪ್ಪತ್ತೊಂದು ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು 2020ರ ಅಕ್ಟೋಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ಕೈಬಿಡಲಾಗಿದೆಯೇ, ಇಲ್ಲವೇ ಎನ್ನುವ ಬಗ್ಗೆ ಸ್ಪಷ್ಟಪಡಿಸುವಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಕೋಮುಹಿಂಸೆ ಮತ್ತು ಗೋರಕ್ಷಣೆ ವೇಳೆ ನಡೆದ ಹಿಂಸಾಚಾರ ಪ್ರಕರಣಗಳನ್ನು 2020ರ ಕೊನೆಯ ತ್ರೈಮಾಸಿಕದಲ್ಲಿ ಕೈಬಿಡಲಾಗಿದೆ ಎಂದು ಅರ್ಜಿದಾರರಾದ ವಕೀಲ ಕ್ಲಿಫ್ಟನ್ ಡಿ ರೊಜಾರಿಯೋ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ವಿಧಾನಸಭೆಯ ಚುನಾಯಿತ ಸದಸ್ಯರ ವಿರುದ್ಧ 61 ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಸಚಿವ ಸಂಪುಟದ ನಿರ್ಧಾರವನ್ನು ರೊಜಾರಿಯೋ ಪ್ರಶ್ನಿಸಿದ್ದಾರೆ. “ಹಾಗೆ ಹಿಂಪಡೆಯಲಾಗಿದೆಯೇ ಎಂಬುದನ್ನು (ರಾಜ್ಯ ಸರ್ಕಾರ) ಸ್ಪಷ್ಟಪಡಿಸಲಿ” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಹೇಳಿದೆ.

Also Read
ಶಾಸಕರು, ಸಚಿವರ ವಿರುದ್ಧದ 570 ಕ್ರಿಮಿನಲ್ ಪ್ರಕರಣ ಹಿಂಪಡೆದ ಸರ್ಕಾರ: ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

“ರಾಜ್ಯ ಸರ್ಕಾರ ಶಾಸಕರ ವಿರುದ್ಧದ ಇಪ್ಪತ್ತೊಂದು ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಈ ಕುರಿತ ಯಾವುದೇ ವಿವಾದವನ್ನು ತಪ್ಪಿಸಲು, ಡಿಸೆಂಬರ್ 1ರ ಆದೇಶಕ್ಕೆ ಅನುಸರಣಾ ವರದಿ ಸಲ್ಲಿಸುವುದರ ಜೊತೆಗೆ, 2020 ರ ಆಗಸ್ಟ್ 31 ರ ಆದೇಶದ ವ್ಯಾಪ್ತಿಗೆ ಒಳಪಟ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಆರ್‌ಪಿಸಿಯ ಸೆಕ್ಷನ್ 321 ರ ಅಡಿಯಲ್ಲಿ ಸಲ್ಲಿಸಲಾದ ಅರ್ಜಿಗಳ ಪ್ರಕರಣಗಳ ವಿವರಗಳನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಸಲ್ಲಿಸಲಿ” ಎಂದು ನ್ಯಾಯಾಲಯ ಆದೇಶಿಸಿದೆ.

ಸಿಜೆ ಓಕಾ ಅವರ ನೇತೃತ್ವದ ನ್ಯಾಯಪೀಠವು, ” ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಲು ಸರ್ಕಾರವು ನಿರ್ದೇಶಿಸಿದಾಗ ಸರ್ಕಾರಿ ಅಭಿಯೋಜಕರು (ಪಬ್ಲಿಕ್‌ ಪ್ರಾಸಿಕ್ಯೂಟರ್)‌ ಅಂಚೆ ಪೆಟ್ಟಿಗೆಯ ರೀತಿ ವರ್ತಿಸಲು ಅಥವಾ ಸರ್ಕಾರದ ಆಜ್ಞೆಯ ಅನುಸಾರವೇ ನಡೆಯಲು ಸಾಧ್ಯವಿಲ್ಲ. ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯದ ಅಧಿಕಾರಿಗಳೂ ಕೂಡ ಆಗಿರುತ್ತಾರೆ” ಎಂದು ಡಿಸೆಂಬರ್ 1 ರಂದು ಹೇಳಿತ್ತು. ಆ ಮೂಲಕ ಪ್ರಕರಣದಲ್ಲಿ ಅಪರಾಧವನ್ನು ನಿರೂಪಿಸುವ ಉತ್ತಮ ಅವಕಾಶವಿರುವಾಗ ಅದನ್ನು ಸರ್ಕಾರದ ಸೂಚನೆಯ ಮೇರೆ ಕೈಬಿಡದೆ ವಸ್ತುನಿಷ್ಠವಾಗಿ ನಡೆದುಕೊಳ್ಳುವಂತೆ ಸೂಚಿಸಿತ್ತು.

Also Read
ದೇಶದೆಲ್ಲೆಡೆ ಸಂಸದರು, ಶಾಸಕರ ವಿರುದ್ಧ 4442 ಪ್ರಕರಣಗಳು ಬಾಕಿ: ಸುಪ್ರೀಂಗೆ ಅಮಿಕಸ್ ಕ್ಯೂರಿ ಮಾಹಿತಿ

ಹಿಂದಿನ ಆದೇಶದನುಸಾರ ನ್ಯಾಯಾಲಯವು, ಡಿಸೆಂಬರ್ 1ರ ನಂತರ ವಿಚಾರಣೆಗಳನ್ನು ಹಿಂಪಡೆಯಲು ಕೋರಿ ಸರ್ಕಾರಿ ಅಭಿಯೋಜಕರು ಸಲ್ಲಿಸಿರುವ ಅರ್ಜಿಗಳ ವಿವರವನ್ನು ನೀಡುವಂತೆ ಶುಕ್ರವಾರ ಸೂಚಿಸಿತು. ಇದಲ್ಲದೆ, ಸೆಕ್ಷನ್ 321 ರ ಅಡಿಯಲ್ಲಿ ಪ್ರಕರಣಗಳನ್ನು ಹಿಂಪಡೆಯಲು ಅರ್ಜಿಗಳನ್ನು ಸಲ್ಲಿಸಿದ ಸರ್ಕಾರಿ ಅಭಿಯೋಜಕರಿಗೆ 2020 ರ ಡಿಸೆಂಬರ್ 1 ರ ನ್ಯಾಯಾಲಯದ ಆದೇಶದ ಪ್ರತಿಯನ್ನು ಒದಗಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ವಿವರಿಸಲು ರಾಜ್ಯ ಸರ್ಕಾರಕ್ಕೆ ತಿಳಿಸಿತು.

ಚುನಾಯಿತ ಪ್ರತಿನಿಧಿಗಳು ಮತ್ತು ಮಂತ್ರಿಗಳ ವಿರುದ್ಧದ 61 ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಕೈಬಿಡಲು ನಿರ್ಧರಿಸಿದ್ದ ರಾಜ್ಯ ಸರ್ಕಾರದ ಆಗಸ್ಟ್ 31 ರ ಆದೇಶವನ್ನು ಕಳೆದ ತಿಂಗಳು ನ್ಯಾಯಪೀಠ ತಡೆಹಿಡಿದಿತ್ತು. ಮುಂದಿನ ಆದೇಶದವರೆಗೆ ಮಧ್ಯಂತರ ಆದೇಶ ಮುಂದುವರೆಯಲಿದೆ ಎಂದು ಪೀಠ ಶುಕ್ರವಾರ ತಿಳಿಸಿದೆ. ಫೆ 15 ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ.

Related Stories

No stories found.
Kannada Bar & Bench
kannada.barandbench.com