ಬಿಹಾರ ಮತದಾರರ ಪಟ್ಟಿ ವಂಚಿತರು ಮೇಲ್ಮನವಿ ಸಲ್ಲಿಸಲು ಸುಪ್ರೀಂ ಆದೇಶ; ಅಧ್ವಾನಗಳ ಪಟ್ಟಿ ಮಾಡಿದ ಯೋಗೇಂದ್ರ ಯಾದವ್

ತಮ್ಮನ್ನು ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಕೆಲವರು ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳಿವೆ ಎಂದ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿತು.
Supreme Court, Bihar SIR and Yogendra Yadav
Supreme Court, Bihar SIR and Yogendra YadavYogendra Yadav (x)
Published on

ಬಿಹಾರದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಮತದಾರರ ವಿಶೇಷ ಆಮೂಲಾಗ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಸಿದ್ಧಪಡಿಸಲಾದ ಮತದಾರರ ಪಟ್ಟಿಯಿಂದ ಹೊರಗುಳಿದವರು ಮೇಲ್ಮನವಿ ಸಲ್ಲಿಸಲು ಬಿಹಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂಪೂರ್ಣ ಸಹಾಯ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯಕಾಂತ್  ಮತ್ತು  ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ  ಮತದಾರರ ಪಟ್ಟಿಯಲ್ಲಿರುವ ಹೊರಗಿಡುವಿಕೆ ಮತ್ತು ಸೇರ್ಪಡೆಗಳ ಕುರಿತು ಯಾವುದೇ ಸಮಗ್ರ ಆದೇಶ  ಹೊರಡಿಸಲು ನಿರಾಕರಿಸಿತು. ಬದಲಾಗಿ, ಬಾಧಿತ ವ್ಯಕ್ತಿಗಳು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ (ಸಿಇಒ) ಮೇಲ್ಮನವಿ ಸಲ್ಲಿಸಬಹುದು ಎಂದಿತು.

Also Read
ಬಿಹಾರ ಎಸ್ಐಆರ್: ಮತದಾರರ ಅಂತಿಮ ಪಟ್ಟಿ ಕುರಿತು ಇಸಿಐ ಸ್ಪಷ್ಟನೆ ನೀಡುವಂತೆ ಸುಪ್ರೀಂ ಸೂಚನೆ

ತಮ್ಮನ್ನು ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಕೆಲವರು ಸಲ್ಲಿಸಿದ ಅಫಿಡವಿಟ್‌ಗಳಲ್ಲಿ ವ್ಯತ್ಯಾಸಗಳಿವೆ ಎಂದ ನ್ಯಾಯಾಲಯ ಎಲ್ಲರಿಗೂ ಅನ್ವಯವಾಗುವಂತಹ ಸಾಮಾನ್ಯ ಆದೇಶ ನೀಡದಿರಲು ನಿರ್ಧರಿಸಿತು.

ಪ್ರತಿಯೊಂದು ಪ್ರಕರಣವನ್ನೂ ನ್ಯಾಯಾಲಯ ಪರಿಶೀಲಿಸಲಾಗದು ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳೆದುರು ಮೇಲ್ಮನವಿ ಸಲ್ಲಿಸುವುದು ಪರಿಹಾರ ಎಂದು ಅದು ಹೇಳಿತು. ಪ್ರಕರಣಕ್ಕೆ ಸಂಬಂಧಿಸಿದ ಪ್ರಗತಿ ವರದಿಯನ್ನು ಒಂದು ವಾರದೊಳಗೆ ಸಲ್ಲಿಸುವಂತೆ ಸೂಚಿಸಲಾಯಿತು.

ಇದೇ ವೇಳೆ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್‌ ಮತದಾರರ ಅಂತಿಮಪಟ್ಟಿಯಲ್ಲಿ ಇರುವ ಅಸಂಗತ ವಿಚಾರಗಳನ್ನು ನ್ಯಾಯಾಲಯದ ಮುಂದಿಟ್ಟರು. ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಕೂಡ ತನ್ನ ಆತಂಕ ವ್ಯಕ್ತಪಡಿಸಿತು.

ಅಂತಿಮ ಮತದಾರರ ಪಟ್ಟಿಯಲ್ಲಿ 45,000 ಅರ್ಥಹೀನ ಹೆಸರುಗಳಿವೆ. 4.2 ಲಕ್ಷಕ್ಕೂ ಹೆಚ್ಚು ಮತದಾರರ ಮನೆಯ ಸಂಖ್ಯೆ ‘0’ ಎಂದಿದೆ. 5.2 ಲಕ್ಷ ನಕಲಿ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದ ಯಾದವ್‌  21 ಲಕ್ಷ ಮನೆಗಳಲ್ಲಿ 10ಕ್ಕೂ ಹೆಚ್ಚು ಮತದಾರರಿದ್ದರೆ 4 ಲಕ್ಷ ಮನೆಗಳಲ್ಲಿ ನೂರಕ್ಕೂ ಹೆಚ್ಚು ಮತದಾರರಿದ್ದಾರೆ ಎಂದರು. ಮನೆ ನಂಬರ್‌ 6 ಎನ್ನುವ ಒಂದರಲ್ಲಿ 800ಕ್ಕೂ ಅಧಿಕ ಮತದಾರರಿರುವ ಬಗ್ಗೆಯೂ ಅವರು ತಿಳಿಸಿದರು. ಮತದಾರರ ವಯೋಮಾನದಲ್ಲೂ ಅತಿರೇಕ ಎನ್ನಿಸುವಂತಹ ಏರುಪೇರುಗಳಿವೆ. ಅಂತಿಮ ಮತದಾರರ ಪಟ್ಟಿಯಲ್ಲಿ 124 ವರ್ಷ ದಾಟಿದವರೂ ಇದ್ದಾರೆ ಎಂದು ಗಮನ ಸೆಳೆದರು.

Also Read
ಬಿಹಾರ ಎಸ್ಐಆರ್: ಆಧಾರ್ ಗುರುತಿನ ಪುರಾವೆ ಎಂದು ಪ್ರಕಟಣೆ ಹೊರಡಿಸಲು ಇಸಿಐಗೆ ಸುಪ್ರೀಂ ಆದೇಶ

ಎಸ್‌ಐಆರ್‌ ಎಂಬುದು ಮತದಾರರನ್ನು ವಿಲಕ್ಷಣಗೊಳಿಸುವ ಸಾಧನ ಎಂದು ಬಣ್ಣಿಸಿದ ಅವರು ಕುಟುಂಬದ ಆಧಾರದಲ್ಲಿ ದಾಖಲೆ ಸಂಗ್ರಹಿಸಲು ಅವಕಾಶ ನೀಡಿದ ವಂಶಾವಳಿ ವಿಧಾನ ಬಳಕೆ ಮಾಡಿರುವುದು ಸರಿಯಲ್ಲ. ಇದು ವೈಯಕ್ತಿಕ ಪರಿಶೀಲನೆಯ ಬದಲು ಕುಟುಂಬ ಸಂಬಂಧಗಳ ಆಧಾರದಲ್ಲಿ ದಾಖಲೆಗಳನ್ನು ಸೇರಿಸಲು ಅವಕಾಶ ನೀಡಿದೆ. ಇದರಿಂದ ಸರಿಯಾದ ದಾಖಲೆ ಇಲ್ಲದ ಮತದಾರರು ಸೇರ್ಪಡೆಗೊಂಡಿದ್ದಾರೆ. ಶೇ 40 ಮತದಾರರು ಮಾನ್ಯತೆ ಪಡೆದ 11 ದಾಖಲೆಗಳಲ್ಲಿ ಯಾವುದನ್ನೂ ಸಲ್ಲಿಸಿಲ್ಲ ಎಂದರು.

ಇಂತಹ ಅಸಂಗತತೆಗಳನ್ನು ತೆಗೆದರೆ ದೇಶದೆಲ್ಲೆಡೆ ಈ ರೀತಿಯ ಎಸ್‌ಐಆರ್‌ ಸ್ವಾಗತಿಸುವುದಾಗಿ ಅವರು ಇದೇ ವೇಳೆ ತಿಳಿಸಿದರು. ಅಕ್ಟೋಬರ್‌ 16ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Kannada Bar & Bench
kannada.barandbench.com