ಬೆಂಗಳೂರು ವಕೀಲರ ಸಂಘದ ಚುನಾವಣೆ: 38 ಹುದ್ದೆಗಳಿಗೆ 180 ಮಂದಿ ಸ್ಪರ್ಧೆ; ರಾತ್ರಿ ವೇಳೆಗೆ ಫಲಿತಾಂಶ ಪ್ರಕಟ

ಅಧ್ಯಕ್ಷ ಹುದ್ದೆಗೆ ಎ ಪಿ ರಂಗನಾಥ್‌, ವಿವೇಕ್‌ ಸುಬ್ಬಾರೆಡ್ಡಿ, ಟಿ ಜಿ ರವಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಹುದ್ದೆ ಸೃಷ್ಟಿಸಲಾಗಿದ್ದು, ಖಜಾಂಚಿ ಹುದ್ದೆ ಮಹಿಳಾ ವಕೀಲರಿಗೆ ಮೀಸಲಾಗಿದೆ.
ಬೆಂಗಳೂರು ವಕೀಲರ ಸಂಘದ ಚುನಾವಣೆ: 38 ಹುದ್ದೆಗಳಿಗೆ 180 ಮಂದಿ ಸ್ಪರ್ಧೆ; ರಾತ್ರಿ ವೇಳೆಗೆ ಫಲಿತಾಂಶ ಪ್ರಕಟ
Published on

ಹಲವು ಅಡೆ-ತಡೆಗಳ ಬಳಿಕ ಪ್ರತಿಷ್ಠಿತ ಬೆಂಗಳೂರು ವಕೀಲರ ಸಂಘದ (ಎಎಬಿ) ಚುನಾವಣೆಯು ಭಾನುವಾರ (ಫೆಬ್ರವರಿ 16) ನಡೆಯಲಿದ್ದು ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸೇರಿ 38 ಹುದ್ದೆಗಳಿಗೆ 180 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಮತದಾನ ನಡೆಯಲಿದ್ದು, 21 ಸಾವಿರ ವಕೀಲರ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ರಾತ್ರಿ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ.

ಅಧ್ಯಕ್ಷ ಸ್ಥಾನಕ್ಕೆ 6, ಉಪಾಧ್ಯಕ್ಷ ಹುದ್ದೆಗೆ 6, ಪ್ರಧಾನ ಕಾರ್ಯದರ್ಶಿ ಹುದ್ದೆಗೆ 5 ಹಾಗೂ ಖಜಾಂಚಿ ಸ್ಥಾನವು ಮಹಿಳಾ ವಕೀಲರಿಗೆ ಮೀಸಲಾಗಿದ್ದು, 16 ಮಂದಿ ಸ್ಪರ್ಧಿಸಿದ್ದಾರೆ. ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಇದೇ ಮೊದಲ ಬಾರಿಗೆ ಉಪಾಧ್ಯಕ್ಷ ಹುದ್ದೆ ಸೃಷ್ಟಿಸಲಾಗಿದ್ದು, ಖಜಾಂಚಿ ಹುದ್ದೆಯನ್ನು ಮಹಿಳಾ ವಕೀಲರಿಗೆ ಮೀಸಲಿರಿಸಲಾಗಿದೆ.

ಇನ್ನು ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಮೆಯೊ ಹಾಲ್‌ ಕೋರ್ಟ್‌ ಮತ್ತು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಈ 4 ಘಟಕಗಳಲ್ಲಿ ಸದಸ್ಯತ್ವ ಪಡೆದಿರುವ ವಕೀಲರು ಆಯಾ ನಿರ್ದಿಷ್ಟ ಘಟಕದ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನದ ಆಕಾಂಕ್ಷಿಗಳಿಗೆ ಎಲ್ಲಾ ಘಟಕದ ಸದಸ್ಯರು ಮತದಾನ ಮಾಡಲಿದ್ದಾರೆ.

ಬೆಂಗಳೂರು ವಕೀಲ ಸಂಘದ ಆಡಳಿತ ಮಂಡಳಿಗೆ ಹೈಕೋರ್ಟ್‌ ಘಟಕದಿಂದ 9 ಮಂದಿ ಸದಸ್ಯರು ಆಯ್ಕೆಯಾಗಲಿದ್ದಾರೆ. ಈ ಪೈಕಿ 6 ಸ್ಥಾನಗಳು ಮುಕ್ತ ಸ್ಥಾನಗಳಿದ್ದು, 3 ಸ್ಥಾನ ಮಹಿಳೆಯರಿಗೆ ಮೀಸಲಾಗಿವೆ.  ಒಟ್ಟಾರೆ 9 ಸ್ಥಾನಕ್ಕೆ 34 ಮಂದಿ ಕಣದಲ್ಲಿದ್ದಾರೆ. ಸಿಟಿ ಸಿವಿಲ್‌ ಕೋರ್ಟ್‌ನಿಂದ 4 ಮಹಿಳೆಯರೂ ಸೇರಿ 15 ಸದಸ್ಯರು ಆಡಳಿತ ಮಂಡಳಿ ಪ್ರವೇಶಿಸಲಿದ್ದಾರೆ. ಮುಕ್ತ ವಿಭಾಗದಲ್ಲಿ 11 ಸದಸ್ಯರ ಸ್ಥಾನಕ್ಕೆ 49 ಮಂದಿ, ಮಹಿಳೆಯರಿಗೆ ಮೀಸಲಾಗಿರುವ 4 ಸ್ಥಾನಗಳಿಗೆ 15 ಮಂದಿ ಕಣದಲ್ಲಿದ್ದಾರೆ. ಮ್ಯಾಜಿಸ್ಟ್ರೇಟ್‌ ಕೋರ್ಟ್‌ನಲ್ಲಿ 2 ಮಹಿಳೆಯರು 7 ಮಂದಿ ಆಯ್ಕೆಯಾಗಲಿದ್ದು, ಮುಕ್ತ ವಿಭಾಗದಲ್ಲಿ 5 ಸ್ಥಾನಗಳಿಗೆ 17 ಮಂದಿ, 2 ಮಹಿಳೆಯರಿಗೆ ಮೀಸಲಾಗಿರುವ ಸ್ಥಾನಗಳಿಗೆ 8 ವಕೀಲೆಯರು ಕಣದಲ್ಲಿದ್ದಾರೆ. ಮೆಯೊ ಹಾಲ್‌ ಕೋರ್ಟ್‌ನಿಂದ 7 ಸದಸ್ಯರು ಆಡಳಿತ ಮಂಡಳಿ ಪ್ರತಿನಿಧಿಸಲಿದ್ದು, ಮುಕ್ತ ವಿಭಾಗದ 5 ಸ್ಥಾನಗಳಿಗೆ 18 ಮಂದಿ ಸ್ಪರ್ಧಿಸಿದ್ದು, ಮಹಿಳೆಯರಿಗೆ ಮೀಸಲಾಗಿರುವ 2 ಸ್ಥಾನಗಳಿಗೆ 6 ಮಂದಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಅಧ್ಯಕ್ಷರ ಹುದ್ದೆಗೆ ಹಿರಿಯ ವಕೀಲ ವಿವೇಕ್‌ ಸುಬ್ಬಾರೆಡ್ಡಿ, ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌, ಎಎಬಿ ಮಾಜಿ ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ವಕೀಲರಾದ ನಂಜಪ್ಪ ಕಾಳೇಗೌಡ, ಆರ್‌ ರಾಜಣ್ಣ ಮತ್ತು ಟಿ ಎ ರಾಜಶೇಖರ್‌ ಅವರೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Also Read
ಎಎಬಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ 6 ಮಂದಿ ಸ್ಪರ್ಧೆ, ಅಖಾಡದಲ್ಲಿ ಒಟ್ಟು 140 ಅಭ್ಯರ್ಥಿಗಳು

ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಎಬಿ ಮಾಜಿ ಖಜಾಂಚಿ ಎಂ ಟಿ ಹರೀಶ್‌, ಮಾಜಿ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ಕೆ ಅಕ್ಕಿ ಮಂಜುನಾಥ್‌ ಗೌಡ, ಎಂ ಎಚ್‌ ಚಂದ್ರಶೇಖರ್‌ ಮತ್ತು ಎಚ್‌ ವಿ ಪ್ರವೀಣ್‌ ಗೌಡ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇದೇ ಮೊದಲ ಬಾರಿಗೆ ಸೃಷ್ಟಿಸಲಾಗಿರುವ ಉಪಾಧ್ಯಕ್ಷ ಹುದೆಯ ಮೇಲೆ ಸಿ ಎಸ್‌ ಗಿರೀಶ್‌ ಕುಮಾರ್‌, ಮುನಿಯಪ್ಪ ಸಿ ಆರ್‌ ಗೌಡ, ಟಿ ಸಿ ಸಂತೋಷ್‌, ಆರ್‌ ಸುವರ್ಣಾ, ಎ ವೇದಮೂರ್ತಿ ಮತ್ತು ಕೆ ವೆಂಕಟ ರೆಡ್ಡಿ ಕಣ್ಣಿಟ್ಟಿದ್ದಾರೆ. ಇನ್ನು ಮಹಿಳೆಯರಿಗೆ ಮೀಸಲಾಗಿರುವ ಖಜಾಂಚಿಯ ಹುದ್ದೆಗೇರಲು ಎಚ್‌ ಆರ್‌ ಅನಿತಾ, ಗೀತಾ ರಾಜ್‌, ವಿ ಹೇಮಲತಾ, ಕೆ ವಿ ಮಮತಾ, ಎಲ್‌ ಮಂಜುಳಾ, ಪಿ ಮಂಜುಳಾ, ಎಂ ಮಂಜುಳಮ್ಮ, ಕೆ ಮೀನಾಕ್ಷಿ, ರುಖೈಬಿ, ಸಂಧ್ಯಾ ಜಮದಾಗ್ನಿ, ಕೆ ಶೈಲಜಾ, ಶ್ವೇತಾ ರವಿಶಂಕರ್‌, ಜಿ ಸುಧಾ, ಎಸ್‌ ಸುಧಾ, ಪಿ ಕೆ ಸ್ವಪ್ನಾ, ಎಂ ಎಂ ವಹೀದಾ ಕಾತರರಾಗಿದ್ದಾರೆ.

ಉನ್ನತಾಧಿಕಾರ ಸಮಿತಿಯು ಚುನಾವಣೆಯ ಮೇಲೆ ನಿಗಾ ಇರಿಸಿದ್ದು, ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಅವರು ಮುಖ್ಯ ಚುನಾವಣಾಧಿಕಾರಿಯಾಗಿದ್ದಾರೆ. ಹಿರಿಯ ವಕೀಲರಾದ ವಿಕ್ರಂ ಹುಯಿಲಗೋಳ, ಪಿ ಅನು ಚೆಂಗಪ್ಪ, ವಕೀಲರಾದ ಕೆಂಪಣ್ಣ ಮತ್ತು ಎಂ ಆರ್‌ ವೇಣುಗೋಪಾಲ್‌ ಅವರು ಚುನಾವಣಾಧಿಕಾರಿಗಳಾಗಿದ್ದಾರೆ.

Kannada Bar & Bench
kannada.barandbench.com