

ಉದ್ಯೋಗಿಗಳ ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜನ್ಮ ದಿನಾಂಕವನ್ನು ನಿರ್ಣಾಯಕವಾಗಿ ಸಾಬೀತುಪಡಿಸುವ ದಾಖಲೆಗಳಾಗಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಪರಿಗಣಿಸುವಂತಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಸ್ಪಷ್ಟಪಡಿಸಿದೆ [ಪ್ರಮಿಳಾ ಮತ್ತು ಮಧ್ಯಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಉದ್ಯೋಗಿ ಸೇವೆಗೆ ಸೇರ್ಪಡೆಯಾದಾಗ ಸಿದ್ಧಪಡಿಸಿದ್ದ ಮತ್ತು ಅವರ ಸಂಪೂರ್ಣ ಸೇವಾ ಅವಧಿಯಲ್ಲಿ ಅವಲಂಬಿಸಲಾಗುವ ಸೇವಾ ದಾಖಲೆಗಳನ್ನು ಸಾಮಾನ್ಯವಾಗಿ ವಿಶ್ವಾಸಾರ್ಹವೆಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಜೈ ಕುಮಾರ್ ಪಿಳ್ಳೈ ಅವರು ತಿಳಿಸಿದ್ದಾರೆ.
ಸೇವಾ ದಾಖಲೆಗಳ ಬದಲು ಬಹಳ ಕಾಲವಾದ ಬಳಿಕ ಸೃಜಿಸಲಾದ ಆಧಾರ್ ಕಾರ್ಡ್‌ಗಳು ಅಥವಾ ಮತದಾರರ ಗುರುತಿನ ಚೀಟಿಗಳಂತಹ ಗುರುತಿನ ದಾಖಲೆ ಬಳಸುವಂತಿಲ್ಲ ಎಂದು ಪೀಠ ಹೇಳಿದೆ.
“ಪ್ರತಿವಾದಿ ಸಂಖ್ಯೆ–5 (ಹಿರ್ಲಿಬಾಯಿ) ಅವರು ಅವಲಂಬಿಸಿರುವ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ಅವರ ಜನ್ಮ ದಿನಾಂಕವನ್ನು ನಿರ್ಧರಿಸುವ ನಿರ್ಣಾಯಕ ಪುರಾವೆಯಾಗಿ ಪರಿಗಣಿಸಲಾಗದು. ಈ ದಾಖಲೆಗಳನ್ನು ಸ್ವಯಂ ಘೋಷಣೆಯ ಆಧಾರದ ಮೇಲೆ ತಯಾರಿಸಲಾಗಿದ್ದು, ಗುರುತಿನ ಉದ್ದೇಶಕ್ಕಷ್ಟೇ ಸೀಮಿತವಾಗಿವೆ. ಸೇವಾ ವಿಷಯಗಳಲ್ಲಿ ವಯಸ್ಸಿನ ನಿರ್ಧಾರಕ್ಕೆ ಇವು ಮೂಲ ಅಥವಾ ಶಾಸನಾತ್ಮಕ ಸಾಕ್ಷಿ ಅಲ್ಲ,” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನಿವೃತ್ತ ಅಂಗನವಾಡಿ ಸಹಾಯಕಿ ಹಿರ್ಲಿಬಾಯಿ ಅವರು ತಮ್ಮ ಜನ್ಮ ದಿನಾಂಕವನ್ನು ತಪ್ಪಾಗಿ ದಾಖಲಿಸಲಾಗಿದೆ ಎಂದು ದಾವೆ ಹೂಡಿದ್ದರು. ಆಧಾರ್ ಮತ್ತು ಮತದಾರರ ಗುರುತಿನ ಚೀಟಿಗಳಲ್ಲಿನ ದಿನಾಂಕದ ಆಧಾರದಲ್ಲಿ ಸೇವೆಗೆ ಮರು ನಿಯೋಜನೆಗೊಂಡಿದ್ದರು.
ಆದರೆ ಅವರ ಮರುನಿಯೋಜನೆಯನ್ನು ರದ್ದುಗೊಳಿಸಿರುವ ಹೈಕೋರ್ಟ್ ಆಧಾರ್ ಕಾರ್ಡ್‌ನಲ್ಲಿ ಉಲ್ಲೇಖಿಸಿದ ಜನ್ಮ ದಿನಾಂಕಕ್ಕೆ ಯಾವುದೇ ದಾಖಲೆ ಸಾಕ್ಷ್ಯ ಇರಲಿಲ್ಲ. ಜೊತೆಗೆ ಹಿರ್ಲಿಬಾಯಿ ಅವರ ಮಗ ಹಾಗೂ ಸೊಸೆಯ ಹುಟ್ಟಿದ ವರ್ಷಗಳಿಗಿಂತ ಅವರು ತಾವು ಜನಿಸಿದ್ದೆಂದು ಹೇಳುತ್ತಿರುವ ಆಧಾರ್ ದಾಖಲೆಯಲ್ಲಿನ ವರ್ಷವು ನಂತರದ್ದಾಗಿದೆ ಎನ್ನುವ ಅಂಶದತ್ತ ನ್ಯಾಯಾಲಯವು ಬೆರಳು ಮಾಡಿತು.
ಮೇಲ್ಮನವಿ ಪ್ರಾಧಿಕಾರವು ಈ ಮಹತ್ವದ ಅಂಶಗಳನ್ನು ಪರಿಗಣಿಸದೇ ವಿಳಂಬವಾಗಿ ಆದೇಶ ನೀಡಿದ್ದು, ಅಂಗೀಕಾರಾರ್ಹವಲ್ಲದ ದಾಖಲೆಗಳ ಮೇಲೆ ಅವಲಂಬಿಸಿತ್ತು ಎಂದು ಹೈಕೋರ್ಟ್ ತಿಳಿಸಿದೆ.
ಅಲ್ಲದೆ, ಸರಿಯಾದ ಆಯ್ಕೆ ಪ್ರಕ್ರಿಯೆಯ ಮೂಲಕ ಹಿರ್ಲಿಬಾಯಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಪ್ರಮಿಳಾ ಅವರಿಗೆ ಯಾವುದೇ ನೋಟಿಸ್ ನೀಡದೇ, ವಿಚಾರಣೆ ನಡೆಸದೇ ಹಾಗೂ ವಾದಿಸಲು ಅವಕಾಶ ನೀಡದೇ ಸೇವೆಯಿಂದ ತೆಗೆದುಹಾಕಿದ್ದು ಸ್ವಾಭಾವಿಕ ನ್ಯಾಯ ತತ್ವದ ಉಲ್ಲಂಘನೆಯಾಗಿದೆ ಎಂದು ಪೀಠ ವಿವರಿಸಿದೆ.
ಅಂತಿಮವಾಗಿ 2020ರ ಮೇಲ್ಮನವಿ ಆದೇಶವನ್ನು ಹಾಗೂ ಪ್ರಮೀಳಾ ಅವರ ಸೇವಾ ರದ್ದತಿ ಆದೇಶವನ್ನು ಅದು ರದ್ದುಗೊಳಿಸಿತು. ಪ್ರಮೀಳಾ ಅವರನ್ನು ಸಂಪೂರ್ಣ ಸೇವಾ ಹಕ್ಕು ಮತ್ತು ಸೌಲಭ್ಯಗಳೊಂದಿಗೆ ಮರುನಿಯೋಜಿಸುವಂತೆ ಆದೇಶಿಸಿತು. ಜೊತೆಗೆ, ನಿವೃತ್ತಿಯ ನಂತರ ಹಿರ್ಲಿಬಾಯಿ ಅವರಿಗೆ ಪಾವತಿಸಲಾದ ಯಾವುದೇ ವೇತನ ಅಥವಾ ಸೌಲಭ್ಯಗಳನ್ನು ಅವರು ಬಡ್ಡಿಯೊಂದಿಗೆ ಮರುಪಾವತಿಸಬೇಕು ಎಂದು ಕೂಡ ನಿರ್ದೇಶಿಸಿತು.
[ಆದೇಶದ ಪ್ರತಿ]