“ನಾನು ಮುಗ್ಧನಾಗಿದ್ದು, ನನ್ನ ವಿರುದ್ದ ಹಗೆತನ ಹೊಂದಿರುವವರು ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಸಾಧ್ಯತೆ ಇದೆ. ಯಾವ ದೃಷ್ಟಿಯಿಂದಲೂ ನಾನು ಅಪರಾಧ ಎಸಗಿಲ್ಲ. ದೂರುದಾರ ಪೊಲೀಸರು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು,” ಎಂದು ನಟ ಅಜಯ್ ರಾವ್ ನ್ಯಾಯಾಲಯದ ಮುಂದೆ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಕೋರಿದ್ದಾರೆ.
'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಸಾಹಸ ಕಲಾವಿದನ ಸಾವಿನ ದುರ್ಘಟನೆಗೆ ಸಂಬಂಧಿಸಿದಂತೆ ನಟ ಅಜಯ್ ರಾವ್ ಅವರು ನಿರೀಕ್ಷಣಾ ಜಾಮೀನು ಕೋರಿ ರಾಮನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸಲ್ಲಿಸಿರುವ ಮನವಿಯಲ್ಲಿ ತಮಗಾಗದವರು ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಬಹುದು ಎನ್ನುವ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ತಮ್ಮನ್ನು ಕರೆದಿದ್ದು ತನಿಖಾಧಿಕಾರಿಯು ಈ ವೇಳೆ ತಮ್ಮನ್ನು ಬಂಧಿಸಬಹುದಾದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ʼಲವ್ ಯು ರಚ್ಚುʼ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸಾಹಸ ಕಲಾವಿದ ವಿವೇಕ್ ಸಾವನ್ನಪ್ಪಿದ್ದು, ಮತ್ತೊಬ್ಬ ಕಲಾವಿದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದ ದುರ್ಘಟನೆ ಇತ್ತೀಚೆಗೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಶಂಕರಯ್ಯ ಎಡಿಗಾರ್ ಒಳಗೊಂಡು ಮೂವರು ನ್ಯಾಯಾಂಗ ಬಂಧನದಲ್ಲಿದ್ದು, ಅವರೂ ಜಾಮೀನಿಗೆ ಮನವಿ ಸಲ್ಲಿಸಿದ್ದಾರೆ. ಗುರುವಾರ ಜಾಮೀನು ಮನವಿಯು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಕಲಾವಿದ ವಿವೇಕ್ ಸಾವಿನ ಹಿನ್ನೆಲೆಯಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಚಿತ್ರ ನಿರ್ದೇಶಕ ಶಂಕರಯ್ಯ ಎಡಿಗಾರ್, ಸಾಹಸ ಸಂಯೋಜಕ ವಿನೋದ್ ಕುಮಾರ್ ಮತ್ತು ಕ್ರೇನ್ ಚಾಲಕ ಮಹದೇವಯ್ಯ ಎಸ್ ಅಲಿಯಾಸ್ ಮಹದೇವ, ತಲೆಮರಿಸಿಕೊಂಡಿರುವ ನಿರ್ಮಾಪಕ ಗುರು ದೇಶಪಾಂಡೆ, ಮತ್ತು ಚಿತ್ರೀಕರಣದ ಉಸ್ತುವಾರಿ ಫರ್ನಾಂಡೀಸ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 149, 204, 337 ಅಡಿ ದೂರು ದಾಖಲಾಗಿದೆ.
14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಶಂಕರಯ್ಯ ಎಡಿಗಾರ್, ವಿನೋದ್ ಕುಮಾರ್ ಮತ್ತು ಮಹದೇವ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 7ರವರೆಗೆ ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ವಿಸ್ತರಿಸಿದೆ. ಈ ಮೂವರೂ ಆರೋಪಿಗಳು ವಕೀಲ ಟಿ ಎಂ ಸೋಮಶೇಖರ್ ಮೂಲಕ ಜಾಮೀನು ಕೋರಿ ಮನವಿ ಸಲ್ಲಿಸಿದ್ದಾರೆ.
ನಾಯಕ ನಟ ಅಜಯ್ ರಾವ್ ಅವರು ವಕೀಲ ಬಿ ಸಿ ವೆಂಕಟೇಶ್ ಅವರ ಮೂಲಕ ನಿರೀಕ್ಷಣಾ ಜಾಮೀನು ಕೋರಿದ್ದಾರೆ. “ನಾನು ಮುಗ್ಧನಾಗಿದ್ದು, ನನ್ನ ವಿರುದ್ದ ಹಗೆತನ ಹೊಂದಿರುವವರು ನನ್ನನ್ನು ಪ್ರಕರಣದಲ್ಲಿ ಸಿಲುಕಿಸುವ ಸಾಧ್ಯತೆ ಇದೆ. ಯಾವ ದೃಷ್ಟಿಯಿಂದಲೂ ನಾನು ಅಪರಾಧ ಎಸಗಿಲ್ಲ. ದೂರುದಾರ ಪೊಲೀಸರು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಮನವಿಯಲ್ಲಿ ಕೋರಿದ್ದಾರೆ.
“ವಿವೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ಕರೆ ಮಾಡಿ ನಿರ್ದೇಶಿಸಿದ್ದಾರೆ. ವಿಚಾರಣೆಯಲ್ಲಿ ಭಾಗವಹಿಸಲು ತೆರಳಿದಾಗ ತನಿಖಾಧಿಕಾರಿಯು ನನ್ನನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದಾರೆ.
“ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಲು ನಾನು ಸಿದ್ಧವಿದ್ದು, ತನಿಖೆಗೆ ಸಹಕರಿಸುತ್ತೇನೆ. ಅಲ್ಲದೇ, ಎಫ್‌ಐಆರ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಲಾಗಿಲ್ಲ” ಎಂದು ಹೇಳಿದ್ದಾರೆ.
“ನಾನು ಮರಣದಂಡನೆ, ಜೀವಾವಧಿ ಅಥವಾ 10 ವರ್ಷಕ್ಕೂ ಹೆಚ್ಚಿನ ಶಿಕ್ಷೆಗೆ ಒಳಗಾಗುವ ಯಾವುದೇ ಅಪರಾಧ ಎಸಗಿಲ್ಲ. ಪೊಲೀಸರು ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ದೂರಿನ ಪ್ರತಿಯನ್ನು ಓದಿದರೆ ಎಲ್ಲಿಯೂ ಆ ಸೆಕ್ಷನ್ ಅಡಿ ಪ್ರಕರಣ ದಾಖಲಿಸುವ ಪ್ರಮೇಯ ಉದ್ಭವಿಸುವುದಿಲ್ಲ” ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
“ವಿವೇಕ್ ಮೃತಪಟ್ಟ ದಿನದಂದು ನಾನು ನಟನೆ ಮಾಡುತ್ತಿರಲಿಲ್ಲ. ಶೂಟಿಂಗ್ ಸ್ಥಳದಿಂದ 500 ಮೀಟರ್ ದೂರದಲ್ಲಿದ್ದೆ. ಗಾಯಾಳುಗಳನ್ನು ಘಟನಾ ಸ್ಥಳದಿಂದ ಆಸ್ಪತ್ರೆಗೆ ರವಾನಿಸಿದ ಬಳಿಕ ನನಗೆ ಘಟನೆಯ ಬಗ್ಗೆ ತಿಳಿಯಿತು. ವಿಷಯ ಗೊತ್ತಾದ ತಕ್ಷಣ ನಾನು ಮತ್ತು ನನ್ನ ಮ್ಯಾನೇಜರ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದೇವೆ. ಚಿತ್ರಕ್ಕೆ ಸಂಬಂಧಿಸಿದ ಸಾಹಸ ದೃಶ್ಯವನ್ನು ಸಾಹಸ ನಿರ್ದೇಶಕರು ಮತ್ತು ನಿರ್ಮಾಣ ವ್ಯವಸ್ಥಾಪಕರ ಸಲಹೆ ಸೂಚನೆಯಂತೆ ನಡೆಸಲಾಗುತ್ತಿತ್ತು. ನಿರ್ಮಾಣ ತಂಡವು ಶೂಟಿಂಗ್ ಸ್ಥಳ ಮತ್ತು ಫೈಟಿಂಗ್ ಅನ್ನು ನಿರ್ಧರಿಸಿತ್ತು. ನಾನು ಇಲ್ಲಿ ಯಾವುದೇ ರೀತಿಯಲ್ಲಿ ಘಟನೆಗೆ ಜವಾಬ್ದಾರನಲ್ಲ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆರೋಪಿಗಳಾದ ಶಂಕರಯ್ಯ, ವಿನೋದ್ ಮತ್ತು ಮಹದೇವ ಅವರ ವಿರುದ್ಧ ಐಪಿಸಿ ಸೆಕ್ಷನ್ 304 (ಎ)ಗೆ ಬದಲಾಗಿ ತಪ್ಪಾಗಿ ಸೆಕ್ಷನ್ 304ರ ಅಡಿ ಪ್ರಕರಣ ದಾಖಲಿಸಲಾಗಿದೆ. ಸದರಿ ಪ್ರಕರಣದಲ್ಲಿ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ. ಆರೋಪಿಗಳು ಮುಗ್ಧರಾಗಿದ್ದು, ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಲಾಗಿದೆ.