
ತಾನು ಆರೋಪಿಯಾಗಿರುವ ಎಂಟು ವರ್ಷಗಳ ಹಿಂದಿನ ನಟಿ ಮೇಲಿನ ಹಲ್ಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಚಲನಚಿತ್ರ ನಟ ದಿಲೀಪ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ [ ಪಿ ಗೋಪಾಲಕೃಷ್ಣನ್ @ ದಿಲೀಪ್ ಮತ್ತು ಕೇರಳ ಸರ್ಕಾರ ಹಾಗೂ ಇನ್ನಿತರರ ನಡುವಿನ ಪ್ರಕರಣ].
ಎರ್ನಾಕುಲಂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ನಡೆಯುತ್ತಿರುವ ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದೆ ಎಂಬುದನ್ನು ಗಮನಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಪಿ ಕೃಷ್ಣ ಕುಮಾರ್ ಅವರ ಪೀಠ ಈ ಆದೇಶ ಹೊರಡಿಸಿತು.
ದುಷ್ಕರ್ಮಿಗಳ ಗುಂಪೊಂದು 2017ರಲ್ಲಿ, ಮಲಯಾಳಂನ ಜನಪ್ರಿಯ ನಟಿಯೊಬ್ಬರನ್ನು ವಾಹನದಲ್ಲಿ ಅಪಹರಿಸಿ, ಲೈಂಗಿಕ ಕಿರುಕುಳ ನೀಡಿ ಅದನ್ನು ಚಿತ್ರೀಕರಿಸಿತ್ತು. ದಿಲೀಪ್ ಪತ್ನಿ ಮಂಜು ವಾರಿಯರ್ ಅವರಿಗೆ ತಮ್ಮ ಪತಿ ವಿವಾಹೇತರ ಸಂಬಂಧದಲ್ಲಿ ತೊಡಗಿದ್ದನ್ನು ನಟಿ ವಿವರಿಸಿದ್ದ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿತ್ತು.
ಹಾಗಾಗಿ, ತನ್ನ ವಿಚ್ಛೇದನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾದ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ನಟ ದಿಲೀಪ್ ಆಕೆಯ ಮೇಲೆ ದಾಳಿಗೆ ಸೂಚನೆ ನೀಡಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಘಟನೆಯಿಂದಾಗಿ ಮಂಜು ವಾರಿಯರ್ ಮತ್ತು ದಿಲೀಪ್ ಅವರ ವಿವಾಹ ಸಂಬಂಧ ಮುರಿದು ಬಿದ್ದಿತ್ತು. ಪ್ರಕರಣದಲ್ಲಿ ಆರು ಜನರನ್ನು ಬಂಧಿಸಿ ಆರೋಪಿಗಳನ್ನಾಗಿ ಮಾಡಲಾಗಿತ್ತು.
ಜುಲೈ 2017ರಲ್ಲಿ, ದಿಲೀಪ್ ಅವರನ್ನು ಬಂಧಿಸಿ ಐಪಿಸಿ ಸೆಕ್ಷನ್ 366 (ಅಪಹರಣ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 376 ಡಿ (ಸಾಮೂಹಿಕ ಅತ್ಯಾಚಾರ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಹೊಸದಾಗಿ ಸಿಬಿಐ ತನಿಖೆ ನಡೆಸಬೇಕೆಂಬ ಅವರ ಮನವಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಇಂದಿನ ವಿಚಾರಣೆ ವೇಳೆ ಪೀಠ ತಿಳಿಸಿದೆ.