

ಭಾರತೀಯ ಸಾಕ್ಷ್ಯ ಅಧಿನಿಯಮದ (ಬಿಎಸ್‌ಎ) ಸೆಕ್ಷನ್ 132 ರ ಪ್ರಕಾರ ಸಾಂಸ್ಥಿಕ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವ ವಕೀಲರಲ್ಲ ಎಂದು ಈಚೆಗೆ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ಕೇವಲ ವೃತ್ತಿಪರ ಸವಲತ್ತುಗಳ ಕಾರ್ಯವಿಧಾನದ ವಿಚಾರದ ಕುರಿತಷ್ಟೇ ತೀರ್ಪು ನೀಡಿಲ್ಲ ಬದಲಿಗೆ ಕಾನೂನು ಪದವಿ ಪಡೆದ ಎಲ್ಲಾ ಲಾಯರ್‌ಗಳೂ ಅಡ್ವೊಕೇಟ್‌ಗಳಲ್ಲ ಎಂದು ಸ್ಪಷ್ಟಪಡಿಸಿದೆ.
ಕಕ್ಷಿದಾರರಿಗೆ ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ (ಇ ಡಿ) ರೀತಿಯ ತನಿಖಾ ಸಂಸ್ಥೆಗಳು ಸಮನ್ಸ್ ನೀಡುತ್ತಿದ್ದ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ , ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ. ಕಕ್ಷಿದಾರರೊಂದಿಗೆ ಸಂವಹನ ನಡೆಸುವ ವಕೀಲರಿಗೆ ತನಿಖಾ ಸಂಸ್ಥೆಗಳು ಸಮನ್ಸ್ ನೀಡುವಂತಿಲ್ಲ ಎಂದು ಅದು ಹೇಳಿರುವುದರ ನಡುವೆಯೇ ಭಾರತೀಯ ಕಾನೂನಿನಡಿ ಅಡ್ವೊಕೇಟ್‌ಗಳೆಂದರೆ ಯಾರು ಎಂಬುದನ್ನು ಕೂಡ ಪರಿಶೀಲಿಸಿದೆ.
ಆ ಮೂಲಕ ಎಲ್ಲಾ ಲಾಯರ್‌ಗಳೂ ಅಡ್ವೊಕೇಟ್‌ಗಳಲ್ಲ ಎಂದು ಅದು ವಿಶದಪಡಿಸಿದೆ . ಕಾನೂನು ಪದವಿ ಪಡೆದಿದ್ದು ಸಂಬಳ ಪಡೆಯುತ್ತಾ ಸಾಂಸ್ಥಿಕ ಕಾನೂನು ಸಲಹೆಗಾರರಾಗಿರುವವರು ಅಡ್ವೊಕೇಟ್ ಎಂಬ ಪದದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಅವರಿಗೆ ವಕೀಲ- ಕಕ್ಷಿದಾರರ ಸಂವಹನ ರಕ್ಷಣೆ ಸವಲತ್ತು ದೊರೆಯುವುದಿಲ್ಲ ಎಂದು ಪೀಠ ಹೇಳಿದೆ.
ತಾಂತ್ರಿಕವಾಗಿ ಕಾಣುವ ಆ ಪದಗಳು 1961ರ ಅಡ್ವೊಕೇಟ್ಸ್ ಕಾಯಿದೆ ಜಾರಿಗೆ ಬಂದಾಗಿನಿಂದ ಅಸ್ತಿತ್ವದಲ್ಲಿದ್ದ ಶಾಸನಬದ್ಧ ವಿಭಜನೆಯಾಗಿದೆ. ಆದರೆ ಕಾರ್ಪೊರೇಟ್ ಕಾನೂನು ಮತ್ತು ಅನುಪಾಲನೆ ಆಧಾರಿತ ಕಾನೂನು ಸಲಹೆ ಬೆಳವಣಿಗೆಗಳ ಬಳಿಕ ಕಾಲಾನಂತರದಲ್ಲಿ ಮಸುಕಾಗಿದ್ದ ಈ ಪದಗಳ ಮೇಲೆ ಸುಪ್ರೀಂ ಕೋರ್ಟ್ ಮತ್ತೆ ಬೆಳಕು ಚೆಲ್ಲಿದೆ.
ನ್ಯಾಯಾಲಯ ಹೇಳಿರುವಂತೆ ಲಾಯರ್ ಎಂಬುವವರು ಕಾನೂನು ಶಿಕ್ಷಣ ಪಡೆದ ಯಾವುದೇ ವ್ಯಕ್ತಿ. ಆದರೆ ಅಡ್ವೊಕೇಟ್ ಎಂಬುದು 1961ರ ಅಡ್ವೊಕೇಟ್ಸ್ ಕಾಯಿದೆ ಅಡಿಯಲ್ಲಿ ನಿರ್ಧರಿಸಲಾದ ವಿಶೇಸ ಕಾನೂನು ಸ್ಥಾನಮಾನವಾಗಿದೆ. ವಿವಿಧ ರಾಜ್ಯಗಳ ವಕೀಲರ ಪರಿಷತ್ತಿನಲ್ಲಿ ನೋಂದಾಯಿತರಾದವರನ್ನು ಮಾತ್ರ ಅಡ್ವೊಕೇಟ್‌ಗಳೆಂದು ಪರಿಗಣಿಸಲಾಗುತ್ತದೆ.
ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡು ನ್ಯಾಯಾಲಯದಲ್ಲಿ ನಿರಂತರ ಕಾನೂನು ಪ್ರಾಕ್ಟೀಸ್ ಮಾಡದೆ ಇರುವವರನ್ನು ಅಡ್ವೊಕೇಟ್‌ಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅದು ತಿಳಿಸಿದೆ.
ಭಾರತೀಯ ಸಾಕ್ಷ್ಯ ಅಧಿನಿಯಮ 2023ರ ಪ್ರಕಾರ ಕಕ್ಷಿದಾರ ಮತ್ತು ಅಡ್ವೊಕೇಟ್ ನಡುವಿನ ಸಂಭಾಷಣೆ ಗೌಪ್ಯವಾಗಿರಬೇಕೆಂದು ರಕ್ಷಣೆ ನೀಡಿರುವ ಅದು ಈ ರಕ್ಷಣೆ ಅಡ್ವೊಕೇಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಆದರೆ ಕೇವಲ ಲಾಯರ್‌ಗಳು ಅಥವಾ ಸಂಸ್ಥೆಯೊಂದರಲ್ಲಿ ವೇತನ ಪಡೆಯುವ ಕಾನೂನು ಅಧಿಕಾರಿಗೆ ಈ ಪೂರ್ಣ ರಕ್ಷಣೆ ದೊರೆಯುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ತೀರ್ಪು ಕಾನೂನಿನ ವಿವಿಧ ವಿಭಾಗಗಳು ಕಂಪ್ಲಯೆನ್ಸ್ ತಂಡಗಳು ಮತ್ತು ಜನರಲ್ ಕೌನ್ಸೆಲ್‌ಗಳಿಗೆ ಅತ್ಯಂತ ಮಹತ್ವದ ಗಡಿ ರೇಖೆ ಹಾಕಿಕೊಟ್ಟಿದೆ. ನ್ಯಾಯಾಲಯದಲ್ಲಿ ಮಾತ್ರವೇ ಅಲ್ಲದೆ ಸಂಸ್ಥೆಗಳು, ಸ್ಟಾರ್ಟ್ ಅಪ್‌ಗಳು, ಕಾರ್ಪರೇಟ್ ಕಂಪೆನಿಗಳು ಹಾಗೂ ಅಂತರರಾಷ್ಟ್ರೀಯ ಕಂಪ್ಲಯೆನ್ಸ್ ವಿಭಾಗಗಳು ತಲೆ ಎತ್ತಿರುವ ಈ ಸಂದರ್ಭದಲ್ಲಿ ಈ ವಿಭಜನೆ ಮಹತ್ವ ಪಡೆದುಕೊಂಡಿದೆ.