ಐಟಿ ನಿಯಮ- 2021 ಅಥವಾ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮ- 2021ರ ಅಡಿ ಅಧಿಕಾರಿಗಳ ನೇಮಕಾತಿ ಕುರಿತಂತೆ ಸೂಕ್ತ ಅಫಿಡವಿಟ್ ಸಲ್ಲಿಸದ ಟ್ವಿಟರ್ ಸಂಸ್ಥೆಯ ವಿರುದ್ಧ ದೆಹಲಿ ಹೈಕೋರ್ಟ್ ಕಿಡಿಕಾರಿದೆ.
ಟ್ವಿಟರ್ ಸಂಸ್ಥೆ ಸಲ್ಲಿಸಿದ ಅಫಿಡವಿಟ್‌ಗಳನ್ನು ಓದಿದ ನ್ಯಾ. ರೇಖಾ ಪಲ್ಲಿ ಅವರು “ನಿಮ್ಮ ಕಂಪೆನಿ ಏನು ಮಾಡಬೇಕು ಎಂದುಕೊಂಡಿದೆಯೋ ನನಗೆ ತಿಳಿದಿಲ್ಲ. ನೀವು (ನಿಯಮ) ಪಾಲಿಸಲು ಬಯಸಿದರೆ ಅದನ್ನು ಪೂರ್ಣ ಮನಸ್ಸಿನಿಂದ ಮಾಡಿ” ಎಂದು ಹೇಳಿದರು.
“ನ್ಯಾಯಾಲಯದ ಹಿಂದಿನ ಆದೇಶದಂತೆ ಕಂಪೆನಿ ಮುಖ್ಯ ಅನುಪಾಲನಾಧಿಕಾರಿ ಮತ್ತು ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಿದೆ. ತೃತೀಯ ಗುತ್ತಿಗೆದಾರರ ಮೂಲಕ ನೋಡಲ್ ಸಂಪರ್ಕಾಧಿಕಾರಿಯನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದೆ” ಎಂದು ಟ್ವಿಟರ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸಜನ್ ಪೂವಯ್ಯ ತಿಳಿಸಿದರು.
ಅಫಿಡವಿಟ್‌ಗಳನ್ನು ಪರಿಶೀಲಿಸಿದಾಗ, ನ್ಯಾ. ಪಲ್ಲಿ ಈ ಹುದ್ದೆಗಳಿಗೆ "ಅನಿಶ್ಚಿತ ಅಧಿಕಾರಿ" ಎಂಬ ಪದ ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. “ಅನಿಶ್ಚಿತ ಕೆಲಸಗಾರ ಎಂದರೇನು? ಇದು ಅನಿಶ್ಚಿತತೆ ಇದೆ ಎಂಬ ಅಭಿಪ್ರಾಯ ನೀಡುತ್ತದೆ” ಎಂದರು.
ಪೂವಯ್ಯ ಉತ್ತರಿಸುತ್ತಾ, "ಅವರು ಮುಖ್ಯ ಅನುಪಾಲನೆ ಅಧಿಕಾರಿ ಮತ್ತು ಸ್ಥಳೀಯ ಕುಂದುಕೊರತೆ ಅಧಿಕಾರಿಗಳ ಕಾರ್ಯಗಳನ್ನು ನಿರ್ವಹಿಸಲು ಮುಂದಾಗುತ್ತಾರೆ. ಅವರು ಭಾರತದಲ್ಲಿ ವಾಸಿಸುತ್ತಿದ್ದು, ಯಾವುದೇ ಕುಂದುಕೊರತೆಗಳಿಗೆ ಜವಾಬ್ದಾರರಾಗಿರುತ್ತಾರೆ. ಉತ್ತಮ ಪದ ಬಳಸಿ ನಾವು ಉತ್ತಮ ಅಫಿಡವಿಟ್ ಸಲ್ಲಿಸುತ್ತೇವೆ." ಎಂದರು. ಟ್ವಿಟರ್ ಸಂಸ್ಥೆಯ ಭೌತಿಕ ಕಚೇರಿ ಭಾರತದಲ್ಲಿ ಇಲ್ಲದ ಕಾರಣ ವ್ಯಕ್ತಿಗಳ ನೇಮಕ ತೆರಿಗೆ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.
“ಆದರೆ ಭಾರತದಲ್ಲಿ ನೀವಿನ್ನೂ ವ್ಯವಹಾರ ಮಾಡುತ್ತಿದ್ದೀರಿ” ಎಂದು ನ್ಯಾಯಾಲಯ ಖಾರವಾಗಿ ಪ್ರತಿಕ್ರಿಯಿಸಿತು.
ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ಟ್ವಿಟರ್ ನೇಮಕ ಮಾಡಿದ ಮುಖ್ಯ ಅನುಪಾಲನೆ ಅಧಿಕಾರಿ ಉದ್ಯೋಗಿಯಲ್ಲ. ಜೊತೆಗೆ ಐಟಿ ನಿಯಮಗಳು- 2021ರ ನಿಯಮಾವಳಿ 4ರ ಪ್ರಕಾರ ಕಂಪನಿಯ ಹಿರಿಯ ಉದ್ಯೋಗಿಯೊಬ್ಬರು ಈ ಹುದ್ದೆಯನ್ನು ಅಲಂಕರಿಸಬೇಕಾಗುತ್ತದೆ ಎಂದರು. ಅಲ್ಲದೆ "ಟ್ವಿಟರ್ ಭಾರತದಲ್ಲಿ 7 ಕೋಟಿ ಡಾಲರ್‌ಗೂ ಅಧಿಕ ಹಣ ಗಳಿಸುತ್ತದೆ. ಆದರೆ ಅವರು ಅಧಿಕಾರಿಗಳನ್ನು ನೇಮಿಸಲು ಕಷ್ಟಪಡುತ್ತಿದ್ದಾರೆ?” ಎಂದರು. ನಿಯಮಗಳನ್ನು ಸಂಪೂರ್ಣ ಪಾಲಿಸಿಲ್ಲ ಎಂದ ಪೀಠ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಸ್ಪಷ್ಟತೆ ಇರುವ ಉತ್ತಮ ಅಫಿಡವಿಟ್ ಸಲ್ಲಿಸಲು ಸಾಮಾಜಿಕ ಮಾಧ್ಯಮ ಸಂಸ್ಥೆ ಟ್ವಿಟರ್‌ಗೆ ಒಂದು ವಾರ ಸಮಯ ನೀಡಿತು.
“ನಾನು ನಿಮಗೆ ಹೆಚ್ಚಿನ ಅವಕಾಶ ಕೊಡುತ್ತಿದ್ದೇನೆ. ಆದರೆ ನ್ಯಾಯಾಲಯ ಎಂದಿಗೂ ಹಾಗೆ ಮಾಡದು” ಎಂದು ನ್ಯಾ. ರೇಖಾ ಪಲ್ಲಿ ಎಚ್ಚರಿಕೆ ನೀಡಿದರು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 6ಕ್ಕೆ ನಿಗದಿಯಾಗಿದೆ.
ಗಾಜಿಯಾಬಾದ್ ದಾಳಿ ವೀಡಿಯೊ ಪ್ರಕಟವಾಗಲು ಕಾರಣವಾದ ಟ್ವಿಟರ್ ವಿರುದ್ಧ ಅಮಿತ್ ಆಚಾರ್ಯ ಎಂಬುವವರು ಅರ್ಜಿ ಸಲ್ಲಿಸಿದ್ದರು. 2021ರ ಐಟಿ ನಿಯಮಗಳ ಪ್ರಕಾರ ಸ್ಥಳೀಯ ಕುಂದುಕೊರತೆ ಅಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳನ್ನು ನೇಮಿಸುವಂತೆ ಅರ್ಜಿ ಟ್ವಿಟರ್‌ಗೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.