[ಗಾಜಿಯಾಬಾದ್‌ ವಿಡಿಯೋ] ಟ್ವೀಟ್‌ ತೆಗೆದುಹಾಕುವ ಅಧಿಕಾರ ಟ್ವಿಟರ್‌ ಇಂಡಿಯಾಗೆ ಇದೆಯೇ ಎಂದು ಕೇಳಿದ ಕರ್ನಾಟಕ ಹೈಕೋರ್ಟ್

ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಿದ್ದರಿದ್ದರೂ ಉತ್ತರಪ್ರದೇಶ ಪೊಲೀಸರು ಅದನ್ನು ತಿರಸ್ಕರಿಸಿದ್ದಾರೆ ಎಂದು ವಕೀಲ ಸಿ ವಿ ನಾಗೇಶ್ ವಾದಿಸಿದರು.
UP Police and Karnataka High Court
UP Police and Karnataka High Court

ಸಾಮಾಜಿಕ ಮಾಧ್ಯಮ ವೇದಿಕೆ ಮೂಲಕ ಬಿತ್ತರಗೊಳ್ಳುವ ವಿಚಾರವನ್ನು ತೆಗೆದುಹಾಕಲು ಟ್ವಿಟರ್‌ ಇಂಡಿಯಾಕ್ಕೆ ಅಧಿಕಾರವಿದೆಯೇ ಅಥವಾ ಅಮೆರಿಕ ಮೂಲದ ಅದರ ಮಾತೃ ಕಂಪೆನಿಗೆ ಅದನ್ನು ಕಾಯ್ದಿರಿಸಲಾಗಿದೆಯೇ ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಉತ್ತರಪ್ರದೇಶ ಪೊಲೀಸರನ್ನು ಪ್ರಶ್ನಿಸಿತು.

ಗಾಜಿಯಾಬಾದ್‌ ದಾಳಿ ವಿಡಿಯೋಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನೀಡಿದ್ದ ನೋಟಿಸ್‌ ಪ್ರಶ್ನಿಸಿ ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಜಿ ನರೇಂದರ್‌ ಅವರಿದ್ದ ಪೀಠ ಟ್ವಿಟರ್‌ನ ವಿಚಾರಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಇಂಡಿಯಾಕ್ಕೆ ಇರುವ ಅಧಿಕಾರ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ.

"ಟ್ವಿಟರ್ ಇಂಡಿಯಾ ವಿರುದ್ಧದ ಆರೋಪ ಎಂತಹುದು? ವಿಚಾರಗಳನ್ನು ತೆಗೆದುಹಾಕುವ ಅಧಿಕಾರ ಅದಕ್ಕಿದೆಯೇ? ದೂರುದಾರರು ಟ್ವಿಟರ್ ಇಂಡಿಯಾವನ್ನು ಇದಕ್ಕೆ ಹೇಗೆ ಸಂಬಂಧ ಕಲ್ಪಿಸುತ್ತಾರೆ? ಟ್ವಿಟರ್‌ ಇಂಡಿಯಾಗೆ ವಿಚಾರಗಳನ್ನು ತೆಗೆದುಹಾಕುವ ಅಧಿಕಾರ ಇದೆಯೇ ಎಂಬುದನ್ನು ಪತ್ತೆ ಮಾಡಲು ಪ್ರಾಥಮಿಕ ತನಿಖೆ ನಡೆಸಲಾಗಿದೆಯೇ?” ಎಂದು ನ್ಯಾಯಾಲಯ ಉತ್ತರಪ್ರದೇಶ ಪೊಲೀಸರನ್ನು ಪ್ರಶ್ನಿಸಿತು.

Also Read
ಗಾಜಿಯಾಬಾದ್ ದಾಳಿ ವಿಡಿಯೋ ಟ್ವೀಟ್: ಪತ್ರಕರ್ತರು, ರಾಜಕಾರಣಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ ಉತ್ತರಪ್ರದೇಶ ಪೊಲೀಸರು

ಉತ್ತರ ಪ್ರದೇಶ ಪೊಲೀಸರ ವಾದವೇನು?

 • ಕರ್ನಾಟಕ ಹೈಕೋರ್ಟ್‌ಗೆ ಮನೀಶ್‌ ಅವರ ಅರ್ಜಿ ಕರ್ನಾಟಕ ಹೈಕೋರ್ಟ್‌ ನ್ಯಾಯವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರ ಪರ ವಕೀಲ ಪ್ರಸನ್ನ ಕುಮಾರ್‌ ವಾದಿಸಿದರು.

 • ಗಾಜಿಯಾಬಾದ್‌ನಲ್ಲಿ ಪ್ರಕರಣ ದಾಖಲಾಗಿದ್ದು ಮನೀಶ್‌ ಅವರಿಗೆ ಟ್ವಿಟರ್‌ನ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ನೋಟಿಸ್‌ ನೀಡಲಾಗಿದೆ.

 • ಕರ್ನಾಟಕ ಹೈಕೋರ್ಟ್‌ ವ್ಯಾಪ್ತಿಯಲ್ಲಿ ಸಂಪೂರ್ಣ ಅಥವಾ ಅಲ್ಪಪ್ರಮಾಣದ ಕ್ರಮ ಕೈಗೊಳ್ಳಲು ಕೂಡ ಸಾಧ್ಯವಾಗದು.

 • ಭಾರತದ ಟ್ವಿಟರ್‌ ಉಸ್ತುವಾರಿ ಯಾರು ಎಂದು ತಿಳಿಯಲು ಉತ್ತರಪ್ರದೇಶ ಪೊಲೀಸರು ಬಯಸುತ್ತಾರೆ. ಅದನ್ನು ಬಹಿರಂಗಪಡಿಸಿದ್ದರೆ ಇದಾವುದೂ ನಡೆಯುತ್ತಿರಲಿಲ್ಲ.

 • ಟ್ವಿಟರ್‌ನ ಅಹವಾಲು ಅಧಿಕಾರಿ ಭಾರತದ ಹೊರಗೆ ಇರಬಹುದು. ಆದರೆ ಐಟಿ ನಿಯಮ 2021ರ ಪ್ರಕಾರ ಅಂತಹ ಅಧಿಕಾರಿ ಭಾರತದಲ್ಲೇ ಇರಬೇಕಾಗುತ್ತದೆ. ಅದನ್ನು ಬಹಿರಂಗಪಡಿಸುವುದು ಟ್ವಿಟರ್‌ ಜವಾಬ್ದಾರಿಯಾಗಿದೆ.

 • (ಇದೇ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ) ಆಲ್ಟ್‌ನ್ಯೂಸ್‌ ಸಂಸ್ಥಾಪಕರಲ್ಲೊಬ್ಬರಾದ ಮೊಹಮ್ಮದ್‌ ಜುಬೈರ್‌ ಅವರು ತನಿಖೆಗೆ ಹಾಜರಾಗಿದ್ದು ಅವರು (ಪೊಲೀಸರ) ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Also Read
ಗಾಜಿಯಾಬಾದ್ ದಾಳಿ ವೀಡಿಯೊ: ಟ್ವಿಟರ್‌ನ ಮನೀಶ್ ಮಹೇಶ್ವರಿಗೆ ಮಧ್ಯಂತರ ರಕ್ಷಣೆ ಒದಗಿಸಿದ ಕರ್ನಾಟಕ ಹೈಕೋರ್ಟ್

ಮನೀಶ್‌ ಪರ ವಕೀಲ ಸಿವಿ ನಾಗೇಶ್‌ ಹೇಳಿದ್ದೇನು?

 • ಟ್ವಿಟರ್ ಇಂಡಿಯಾ ಮತ್ತು ಅದರ ಉದ್ಯೋಗಿಗಳಿಗೆ ಟ್ವಿಟರ್ ಬಳಕೆದಾರರ ಮಾಹಿತಿ ಮೇಲೆ ನಿಯಂತ್ರಣವಿಲ್ಲ. ಆದ್ದರಿಂದ ಮನೀಶ್‌ ಮಾಹಿತಿ ಒದಗಿಸುವ ಸ್ಥಿತಿಯಲ್ಲಿ ಇಲ್ಲ.

 • ಮನೀಶ್‌ ಬೆಂಗಳೂರು ನಿವಾಸಿ ಅಥವಾ ಪ್ರಕರಣದ ಒಂಬತ್ತನೇ ಆರೋಪಿ ಟ್ವಿಟರ್‌ ಇಂಡಿಯಾದ ಕಚೇರಿ ಬೆಂಗಳೂರಿನಲ್ಲಿದೆ ಎಂಬುದು ನಿರ್ವಿವಾದದ ಸಂಗತಿ. ನಾವು ಗಾಜಿಯಾಬಾದ್‌ನಲ್ಲಿಲ್ಲ. ಟ್ವಿಟರ್‌ ಇಂಡಿಯಾ ಕಚೇರಿ ಬೆಂಗಳೂರಿನ ಆರ್‌ಎಂಜಡ್‌ ಇನ್ಫಿನಿಟಿಯಲ್ಲಿದೆ. ಆದ್ದರಿಂದ (ಪ್ರಕರಣ) ಕರ್ನಾಟಕ ಹೈಕೋರ್ಟ್‌ ನ್ಯಾಯವ್ಯಾಪ್ತಿಗೆ ಬರುತ್ತದೆ.

 • ಟ್ವಿಟರ್‌ ಇಂಡಿಯಾ ಡೇಟಾವನ್ನು ನಿಯಂತ್ರಿಸುವುದಿಲ್ಲವಾದ್ದರಿಂದ ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ಮನೀಶ್‌ ಅವರಿಗೆ ನೋಟಿಸ್‌ ನೀಡುವ ಅಧಿಕಾರ ಉತ್ತರಪ್ರದೇಶ ಪೊಲೀಸರಿಗೆ ಇಲ್ಲ.

 • ವಿಡಿಯೋ ಮೂಲಕ ತನಿಖೆಗೆ ಸಹಕರಿಸುವುದಾಗಿ ಮನೀಶ್ ತಿಳಿಸಿದ್ದರೂ ನಿಗೂಢ ಕಾರಣಕ್ಕಾಗಿ ವಿಡಿಯೋ ಮೂಲಕ ಹಾಜರಾಗಲು ಅವರು (ಉತ್ತರ ಪ್ರದೇಶ ಪೊಲೀಸರು) ಒಪ್ಪುತ್ತಿಲ್ಲ.

 • ಮನೀಶ್‌ ಕೇವಲ ಟ್ವಿಟರ್‌ನ ಉದ್ಯೋಗಿ. ಅವರು ವ್ಯವಸ್ಥಾಪಕ ನಿರ್ದೇಶಕರಲ್ಲ. ಅವರು (ಉತ್ತರ ಪ್ರದೇಶ ಪೊಲೀಸರು) ಯಾರನ್ನು ಸಂಪರ್ಕಿಸಬೇಕೆಂದು ತಿಳಿಯಲು ಬಯಸುತ್ತಿದ್ದಾರೆ. ಅವರಿಗೆ ಸ್ವಲ್ಪ ತಾಳ್ಮೆ ಇದ್ದಿದ್ದರೆ ಅದು ಅವರಿಗೆ ಗೊತ್ತಾಗುತ್ತಿತ್ತು.

 • ಎಫ್‌ಐಆರ್‌ನಲ್ಲಿ ಐಟಿ ನಿಯಮ 2021ರ ನಿಬಂಧನೆಗಳನ್ನು ಉಲ್ಲೇಖಿಸಿಲ್ಲ ಬದಲಿಗೆ ಐಪಿಸಿ ಸೆಕ್ಷನ್‌ಗಳಾದ ಸೆಕ್ಷನ್ 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷಕ್ಕೆ ಕುಮ್ಮಕ್ಕು) ಮತ್ತು 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶದ ಕೃತ್ಯಗಳು) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ನಾಗೇಶ್‌ ತಿಳಿಸಿದರು.

Also Read
ಗಾಜಿಯಾಬಾದ್ ದಾಳಿ ವಿಡಿಯೋ: ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆಯಲು ಜುಬೈರ್‌ಗೆ ಕರ್ನಾಟಕ ಹೈಕೋರ್ಟ್ ಅವಕಾಶ

ನ್ಯಾಯಾಲಯದ ಅವಲೋಕನ

 • ಟ್ವಿಟರ್‌ ಪ್ಲಾಟ್‌ಫಾರ್ಮ್‌ ಅನ್ನು ಟ್ವಿಟರ್‌ ನಡೆಸುತ್ತಿದೆಯೇ ವಿನಾ ಟ್ವಿಟರ್‌ ಇಂಡಿಯಾ ಅಲ್ಲ. ಟ್ವಿಟರ್‌ನಲ್ಲಿ ಪ್ರಕಟವಾಗುವ ವಿಷಯಕ್ಕೆ ಇದು ಹೊಣೆಗಾರನಾಗಲಾರದು ಎಂದು ಪೀಠ ಹೇಳಿತು.

 • ಅಲ್ಲದೆ ಟ್ವಿಟರ್‌ ಇಂಡಿಯಾ ಜವಾಬ್ದಾರಿ ಮತ್ತು ಹೊಣೆಗಾರಿಕೆ ಬಗ್ಗೆ ಮಾಹಿತಿ ಇಲ್ಲ ಎಂಬ ಉತ್ತರ ಪ್ರದೇಶ ಪೊಲೀಸರ ಪ್ರತಿಕ್ರಿಯೆಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿತು. ಮಾಹಿತಿ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿದೆ ಎಂದು ಕೂಡ ತಿಳಿಸಿತು.

 • ಟ್ವಿಟರ್‌ ಇಂಡಿಯಾ ಮತ್ತು ಟ್ವಿಟರ್‌ ಎರಡೂ ಬೇರೆ ಬೇರೆ ಸಂಸ್ಥೆಗಳು ಅವೆರಡನ್ನೂ ಬೆರೆಸುವಂತಿಲ್ಲ.

 • ಕಂಟೆಂಟ್ ಅಪ್ಲೋಡ್ ಮಾಡಿದವರು ಅಥವಾ ಅದನ್ನು ತೆಗೆದುಹಾಕದವರು ಮನೀಶ್ ಎಂದು ನೀವು (ಉತ್ತರ ಪ್ರದೇಶ ಪೊಲೀಸರು) ಸಾಬೀತುಪಡಿಸದ ಹೊರತು ಅವರು (ಮನೀಶ್‌) ಯಾರೂ ಆಗಿರುವುದಿಲ್ಲ.

 • ಟ್ವಿಟರ್‌ ಪ್ಲಾಟ್‌ಫಾರ್ಮ್‌ ಅನ್ನು ಟ್ವಿಟರ್‌ ನಡೆಸುತ್ತಿದೆಯೇ ವಿನಾ ಟ್ವಿಟರ್‌ ಇಂಡಿಯಾ ಅಲ್ಲ. ಟ್ವಿಟರ್‌ನಲ್ಲಿ ಪ್ರಕಟವಾಗುವ ವಿಷಯಕ್ಕೆ ಇದು (ಟ್ವಿಟರ್‌ ಇಂಡಿಯಾ) ಹೊಣೆಗಾರನಾಗಲಾರದು.

ಪ್ರಕರಣದ ವಿಚಾರಣೆ ನಾಳೆ (ಬುಧವಾರ) ಮುಂದುವರೆಯಲಿದೆ.

Related Stories

No stories found.
Kannada Bar & Bench
kannada.barandbench.com