ಸುಪ್ರೀಂ ಸೂಚನೆ ಹಿನ್ನೆಲೆ: ಬಾಂಗ್ಲಾಕ್ಕೆ ಗಡಿಪಾರಾಗಿದ್ದ ಗರ್ಭಿಣಿ, ಮಗನನ್ನು ಮರಳಿ ಕರೆತರುವುದಾಗಿ ತಿಳಿಸಿದ ಕೇಂದ್ರ

ಮಾನವೀಯ ನೆಲೆಯಲ್ಲಿ ಪ್ರಕರಣ ಪರಿಗಣಿಸುವಂತೆ ನ್ಯಾಯಾಲಯ ಈ ಹಿಂದೆ ಕೇಂದ್ರಕ್ಕೆ ಸೂಚಿಸಿತ್ತು.
Supreme Court of India
Supreme Court of India
Published on

ಬಾಂಗ್ಲಾದೇಶಿಯರು ಎಂಬ ಸಂದೇಹದ ಆಧಾರದಲ್ಲಿ ಕೆಲ ತಿಂಗಳುಗಳ ಹಿಂದೆ ದೇಶದಿಂದ ಗಡಿಪಾರು ಮಾಡಲಾಗಿದ್ದ ಗರ್ಭಿಣಿ ಹಾಗೂ ಆಕೆಯ ಎಂಟು ವರ್ಷದ ಮಗನನ್ನು ಭಾರತಕ್ಕೆ ಮರಳಿ ಕರೆತರಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ ಭಾರತ ಒಕ್ಕೂಟ ಮತ್ತು ಭೋದು ಶೇಖ್ ನಡುವಣ ಪ್ರಕರಣ].

ಮಾನವೀಯ ನೆಲೆಯಲ್ಲಿ ಪ್ರಕರಣ ಪರಿಗಣಿಸುವಂತೆ ನ್ಯಾಯಾಲಯ ಈ ಹಿಂದೆ ಕೇಂದ್ರಕ್ಕೆ ಸೂಚಿಸಿತ್ತು.

Also Read
ರೋಹಿಂಗ್ಯಾ ನಿರಾಶ್ರಿತರನ್ನು ಕೇಂದ್ರ ಸರ್ಕಾರ ಸಮುದ್ರಪಾಲು ಮಾಡಿದ ಆರೋಪ: ಪುರಾವೆ ಕೇಳಿದ ಸುಪ್ರೀಂ

ಅಕ್ರಮ ವಲಸಿಗರು ಎಂಬ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಪುತ್ರನನ್ನು ಕಳೆದ ಜೂನ್‌ನಲ್ಲಿ ದೆಹಲಿಯಲ್ಲಿ ಬಂಧಿಸಿ ಬಾಂಗ್ಲಾಕ್ಕೆ ಗಡಿಪಾರು ಮಾಡಲಾಗಿತ್ತು. ಸೋಮವಾರ ಬಾಂಗ್ಲಾದೇಶ ನ್ಯಾಯಾಲಯವು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ವರದಿಯಾಗಿದೆ.

ಈ ಮಧ್ಯೆ ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಮಾನವೀಯ ನೆಲೆಯಲ್ಲಿ ಇಬ್ಬರನ್ನೂ ಮರಳಿ ಕರೆತರಲು ಕೇಂದ್ರ ಸರ್ಕಾರ ಮುಂದಾಗುತ್ತದೆಯೇ ಎಂದು ಕೇಳಿತ್ತು.

ಗರ್ಭಿಣಿ ಸೋನಾಲಿ ಮತ್ತು ಅವರ ಎಂಟು ವರ್ಷದ ಮಗ ಸಬೀರ್‌ನನ್ನು ಭಾರತಕ್ಕೆ ಮರಳಿ ಕರೆತರಲಾಗುವುದು ಎಂದು ಭಾರತದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಇಂದು ನ್ಯಾಯಪೀಠಕ್ಕೆ ತಿಳಿಸಿದರು.

ಸೋನಾಲಿ ಅವರು ತಮ್ಮ ತಂದೆ ಭೋದು ಶೇಖ್‌ ಅವರೊಂದಿಗೆ ಜೈವಿಕ ನಂಟು ಇರುವುದನ್ನು ಸಾಬೀತುಪಡಿಸಬಹುದಾಗಿದ್ದರೆ ಆಕೆ ಭಾರತೀಯ ನಾಗರಿಕಳಾಗಿರಬಹುದು ಆ ಮೂಲಕ ಆಕೆಯ ಮಗನಿಗೂ ಭಾರತೀಯ ಪೌರತ್ವ ಲಭಿಸುತ್ತದೆ. ನ್ಯಾ. ಬಾಗ್ಚಿ ಹೇಳಿದರು.

ಪಶ್ಚಿಮ ಬಂಗಾಳದ ಭೀರ್‌ಭೂಮ್‌ ಜಿಲ್ಲೆಯ ಪೈಕರ್ ಪ್ರದೇಶದವರಾದ ಸೋನಾಲಿ ಬಂಧನವಾದಾಗ ಗರ್ಭ ಧರಿಸಿದ್ದರು. ಈಗ ಅವರು ಒಂಬತ್ತು ತಿಂಗಳ ತುಂಬು ಗರ್ಭಿಣಿ. ಬಂಧಿಸಲಾದ ಎರಡು ದಿನಗಳಲ್ಲೇ ಕೇಂದ್ರ ತನಿಖಾ ಸಂಸ್ಥೆಗಳ ನಿರ್ದೇಶನದಂತೆ ಆಕೆ ಹಾಗೂ ಆಕೆಯ ಕುಟುಂಬವನ್ನು ಬಾಂಗ್ಲಾದೇಶದ ಗಡಿಗೆ ಕರೆದೊಯ್ದು ಅಲ್ಲಿ ಬಾಂಗ್ಲಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.

Also Read
ಬಾಂಗ್ಲಾ, ಆಫ್ರಿಕನ್ನರ ಪಾಸ್‌ಪೋರ್ಟ್‌ ಪರಿಶೀಲನೆ ಕೋರಿಕೆ: ಜನಾಂಗೀಯ ನಿಂದನೆ ಎಂದು ನಿರಾಕರಿಸಿದ ದೆಹಲಿ ಹೈಕೋರ್ಟ್

ಕಲ್ಕತ್ತಾ ಹೈಕೋರ್ಟ್‌ಗೆ ಮನವಿ ಮಾಡಿದ್ದ ಸೋನಾಲಿ ತಂದೆ ಭೋದು ಶೇಖ್‌ ಸುನಾಲಿ, ಅವರ ಪತಿ, ಮತ್ತು ಮಗ ಭಾರತೀಯ ಪ್ರಜೆಗಳು. ತಮ್ಮ ಕುಟುಂಬ ಬಿರ್‌ಭೂಮ್‌ ಪ್ರದೇಶದಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ ಎಂದಿದ್ದರು.

ಸೆಪ್ಟೆಂಬರ್‌ 26ರಂದು ತೀರ್ಪು ನೀಡಿದ್ದ ಕಲ್ಕತ್ತಾ ಹೈಕೋರ್ಟ್‌ ಗಡಿಪಾರು ಆದೇಶ ರದ್ದುಗೊಳಿಸಿತ್ತು. ಸುನಾಲಿ, ಅವರ ಪತಿ, ಮಗ ಮತ್ತು ಇನ್ನೂ ಮೂವರು ಸೇರಿದಂತೆ ಆರು ಮಂದಿಯನ್ನು ನಾಲ್ಕು ವಾರದೊಳಗೆ ಭಾರತಕ್ಕೆ ಕರೆತರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದೇಶವನ್ನು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 10 ನಡೆಯಲಿದೆ.

Kannada Bar & Bench
kannada.barandbench.com