ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಗೂ ಉಚಿತ ಕಾನೂನು ನೆರವು ದೊರೆಯುವಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ಪ್ರವರ್ತಿತವಾದ ಮತ್ತು ದೇಶದಾದ್ಯಂತ ವಿವಿಧ ರಾಜ್ಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳು ಜಾರಿಗೆ ತಂದಿರುವ ಕಾನೂನು ನೆರವು ಡಿಫೆನ್ಸ್ ವಕೀಲ ವ್ಯವಸ್ಥೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು ಯು ಲಲಿತ್ ತಿಳಿಸಿದರು.
ನವದೆಹಲಿಯಲ್ಲಿ ಭಾನುವಾರ ಸಮಾರೋಪಗೊಂಡ ಅಖಿಲ ಭಾರತ ಜಿಲ್ಲಾ ಕಾನೂನು ಸೇವಾ ಅಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾನೂನು ಸೇವೆ ಒದಗಿಸುವ ಹೊಣೆ ಹೊತ್ತ ಎಲ್ಲಾ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಭಾಗವಹಿಸಿದ ಮೊದಲ ಕಾರ್ಯಕ್ರಮ ಇದಾಗಿದೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಹಾಲಿ ಅಧ್ಯಕ್ಷರೂ ಆಗಿರುವ ನ್ಯಾ. ಲಲಿತ್, ತಾಲೂಕು ಮಟ್ಟದವರೆಗೆ ಜಾರಿಗೆಯಲ್ಲಿರುವ ಕಾನೂನು ನೆರವು ರಕ್ಷಣಾ ಸಲಹೆಗಾರ ವ್ಯವಸ್ಥೆ ಪ್ರತಿ ಜಿಲ್ಲೆಗೂ ತಲುಪಲಿದೆ ಎಂದು ಆಶಿಸಿದರು.
“ಕಾನೂನು ನೆರವು ಆಂದೋಲನವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದರೆ ಹೆಚ್ಚಿನ ಜನ ಕಾನೂನು ನೆರವು ಪಡೆಯಬಹುದು. ಕಾನೂನು ನೆರವು ಡಿಫೆನ್ಸ್ ವಕೀಲ ವ್ಯವಸ್ಥೆಯನ್ನು ಆರಂಭಿಸಿದಾಗ ನಾವು ಯುವಕರು ಮತ್ತು ಕಾನೂನು ವಿದ್ಯಾರ್ಥಿಗಳು ಇದರಲ್ಲಿ ತೊಡಗಿಕೊಳ್ಳುವಂತೆ ಹೇಳಿದ್ದೆವು. ಇಂದು ತಾಲೂಕು ಮಟ್ಟದವರೆಗೂ ತಲುಪಿರುವ ಇದು ಪ್ರತಿ ಜಿಲ್ಲೆಗೂ ಹಬ್ಬಬೇಕಿದೆ. .ಸಮಾಜದ ಹಿಂದುಳಿದ ವರ್ಗಕ್ಕೆ ಸೇರಿದ ಶೇ ಎಪ್ಪತ್ತರಷ್ಟು ಮಂದಿಗೆ ಈ ಸೇವೆ ತಲುಪಬೇಕೆಂಬುದು ನಮ್ಮ ಗುರಿ” ಎಂದು ಅವರು ಹೇಳಿದರು.
ಕಾನೂನು ನೆರವು ನೀಡುವಲ್ಲಿ ನ್ಯಾಯಾಂಗ ಅಧಿಕಾರಿಗಳ ಪಾತ್ರದ ಮಹತ್ವ ವಿವರಿಸಿದ ಅವರು ನ್ಯಾಯಾಧೀಶ ಮತ್ತು ಕಾನೂನು ಸೇವೆ ಒದಗಿಸುವವರ ನಡುವಿನ ವ್ಯತ್ಯಾಸವನ್ನು ಹೇಳಿದರು.
ಅಲ್ಲದೆ ಜಿಲ್ಲಾ ನ್ಯಾಯಾಧೀಶರು ತಳಮಟ್ಟದಲ್ಲಿ ಕೆಲಸ ಮಾಡಲಿದ್ದು ಅವರಿಗೆ ನಿಜವಾದ ಸಮಸ್ಯೆಗಳ ಅರಿವಿದೆ. ಕಾನೂನು ನೆರವು ಎಲ್ಲಿ ಅಗತ್ಯವಿರುತ್ತದೆ ಎಂಬುದು ತಿಳಿದಿರುತ್ತದೆ. 42 ದಿನಗಳ ಅವಧಿಯಲ್ಲಿ ನಾವು ಕಾನೂನು ಸಹಾಯಕ್ಕಾಗಿ ಸುಮಾರು 19.5 ಲಕ್ಷ ಹಳ್ಳಿಗಳನ್ನು ತಲುಪಿದ್ದೇವೆ. ನಾವು ದೇಶದ ಮೂಲೆ ಮೂಲೆಗಳನ್ನು ತಲುಪಬಹುದು ನಮ್ಮ ಸಂಸ್ಥೆ ಅಗಾಧ ಸಾಮರ್ಥ್ಯ ಮತ್ತು ಶಕ್ತಿ ಪಡೆದಿದೆ” ಎಂದು ವಿವರಿಸಿದರು.
ಇದೇ ಸಮಾರಂಭದ ಉದ್ಘಾಟನೆ ವೇಳೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಮಾತನಾಡಿದ್ದು ಅದರ ವಿವರ ತಿಳಿಯಲು ಕೆಳಗೆ ಕ್ಲಿಕ್ಕಿಸಿ.