ಟರ್ಕಿ ಮೂಲದ ಸೆಲೆಬಿ ನಿರ್ಬಂಧ: ವಿಮಾನ ನಿಲ್ದಾಣದಲ್ಲಿ ಸರಕು ಸೇವೆಗೆ ಟೆಂಡರ್ ಕರೆಯದೆ ಬೇರೆ ದಾರಿ ಇಲ್ಲ ಎಂದ ಎಎಐ

ಅಂತಹ ಯಾವುದೇ ಟೆಂಡರ್ ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್‌ ಮುಂದಿರುವ ಪ್ರಕರಣಗಳ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಷರತ್ತು ವಿಧಿಸುವುದಾಗಿ ಎಎಐ ಹೇಳಿದೆ.
Çelebi, Airport
Çelebi, Airport
Published on

ಭದ್ರತಾ ಕಾರಣಕ್ಕೆ ನಿರ್ಬಂಧಕ್ಕೊಳಗಾಗಿರುವ ವೈಮಾನಿಕ ಸರಕು ಸೇವೆ ಒದಗಿಸುವ ಟರ್ಕಿ ಮೂಲದ ಸೆಲೆಬಿ ಏರ್‌ಪೋರ್ಟ್‌ ಸರ್ವೀಸಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಬದಲಿಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸರಕು ಮತ್ತು ಪ್ರಯಾಣಿಕರ ಸಾಗಣೆ ನೋಡಿಕೊಳ್ಳುವುದಕ್ಕಾಗಿ ಬೇರೆ ಗ್ರೌಂಡ್ ಹ್ಯಾಂಡ್ಲಿಂಗ್ ಮತ್ತು ಕಾರ್ಗೋ ಆಪರೇಟರ್ ನೇಮಿಸಿಕೊಳ್ಳಲು ಟೆಂಡರ್‌ ಕರೆಯುವ ಅಗತ್ಯವಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸೋಮವಾರ ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದೆ  [ ಸೆಲೆಬಿ ಗ್ರೌಂಡ್ ಸರ್ವೀಸಸ್ ಚೆನ್ನೈ ಪ್ರೈವೇಟ್ ಲಿಮಿಟೆಡ್ vs. ಏರ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ನಡುವಣ ಪ್ರಕರಣ].

ನಾಗರಿಕ ವಿಮಾನಯಾನ ಸಚಿವಾಲಯ ಮೇ 15, 2025 ರಂದು ರಾಷ್ಟ್ರೀಯ ಭದ್ರತೆಯ ಕಾರಣಗಳಿಗಾಗಿ ಸೆಲೆಬಿಯ ಭದ್ರತಾ ಅನುಮತಿ  ಹಿಂತೆಗೆದುಕೊಂಡಿತ್ತು. ಇತ್ತೀಚಿನ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಸಂದರ್ಭದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಆರೋಪದಡಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಿದ್ದರ ನಡುವೆ ಈ ಕ್ರಮ ಕೈಗೊಳ್ಳಲಾಗಿತ್ತು.

Also Read
ಟರ್ಕಿ ಸಂಸ್ಥೆ ಸೆಲೆಬಿ ಭದ್ರತಾ ಅನುಮತಿ ರದ್ದು: ವಿಷಾದಕ್ಕಿಂತಲೂ ಸುರಕ್ಷಿತವಾಗಿರುವುದು ಉತ್ತಮ ಎಂದ ದೆಹಲಿ ಹೈಕೋರ್ಟ್

ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆ ಸುಗಮವಾಗಿ ನಡೆಯುವುದಕ್ಕಾಗಿ ಮೂವರು ಗ್ರೌಂಡ್‌ ಹ್ಯಾಂಡ್ಲರ್‌ಗಳ ಅಗತ್ಯವಿದೆ ಎಂದು ನ್ಯಾಯಮೂರ್ತಿ ಅಬ್ದುಲ್‌ ಖುದ್ದೋಸ್‌ ಅವರಿಗೆ ಪ್ರಾಧಿಕಾರ ವಿವರಿಸಿತು.

ಇತ್ತೀಚೆಗೆ ಸೆಲೆಬಿ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ, ಬೇರೆ ಗ್ರೌಂಡ್ ಹ್ಯಾಂಡ್ಲರ್ ನೇಮಿಸಲು ಎಎಐಗೆ ಟೆಂಡರ್ ಕರೆಯದೆ ಬೇರೆ ದಾರಿಯಿಲ್ಲ ಎಂದು ಎಎಐ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿವರಿಸಿದರು.

ಆದರೆ ಅಂತಹ ಯಾವುದೇ ಟೆಂಡರ್ ದೆಹಲಿ ಮತ್ತು ಮದ್ರಾಸ್ ಹೈಕೋರ್ಟ್‌ಗಳ ಮುಂದಿರುವ ಪ್ರಕರಣಗಳ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಎಎಐ ಷರತ್ತು ವಿಧಿಸುವುದಾಗಿ ಅವರು ತಿಳಿಸಿದರು.

Also Read
ಆಪರೇಷನ್ ಸಿಂಧೂರ್ ಕುರಿತ ಹೇಳಿಕೆ: ಪ್ರೊ. ಅಲಿ ವಿರುದ್ಧದ ತನಿಖಾ ವ್ಯಾಪ್ತಿ ವಿಸ್ತರಿಸದಂತೆ ಎಸ್ಐಟಿಗೆ ಸುಪ್ರೀಂ ತಾಕೀತು

ಭಾರತದಲ್ಲಿ ವಿಮಾನ ನಿಲ್ದಾಣಗಳೊಂದಿಗಿನ ಒಪ್ಪಂದ ರದ್ದಾಗಿರುವುದನ್ನು ಹಾಗೂ ಹಾಗೆ ರದ್ದುಗೊಳ್ಳಲು ಕಾರಣವಾದ ತನಗೆ ನೀಡಲಾಗಿದ್ದ ಭದ್ರತಾ ಅನುಮತಿ ರದ್ದತಿ ಪ್ರಶ್ನಿಸಿ ಸೆಲಿಬಿ ದೆಹಲಿ ಹಾಗೂ ಮದ್ರಾಸ್‌ ಹೈಕೋರ್ಟ್‌ಗಳ ಮೊರೆ ಹೋಗಿತ್ತು. ಅದರ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.  ಮದ್ರಾಸ್ ಹೈಕೋರ್ಟ್‌ನ ಮುಂದಿರುವ ಮೂಲ ಅರ್ಜಿ  ಜುಲೈ 7 ರಂದು  ವಿಚಾರಣೆಗೆ ಬರಲಿದೆ.

ಎಎಐ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಆರ್‌ ಎಲ್‌ ಸುಂದರೇಶನ್‌ ಕೂಡ ವಾದ ಮಂಡಿಸಿದರು. ಸೆಲೆಬಿಯನ್ನು ಹಿರಿಯ ನ್ಯಾಯವಾದಿ ಪಿ ಎಸ್‌ ರಾಮನ್‌ ವಾದ ಮಂಡಿಸಿದರು.

Kannada Bar & Bench
kannada.barandbench.com