ರಾಹುಲ್ ಪೌರತ್ವ ವಿವಾದ ಕುರಿತ ಪತ್ರ: ಡಿ.19ರೊಳಗೆ ನಿರ್ಧಾರ ಕೈಗೊಳ್ಳುವಂತೆ ಕೇಂದ್ರಕ್ಕೆ ಅಲಾಹಾಬಾದ್ ಹೈಕೋರ್ಟ್ ಸೂಚನೆ

ರಾಹುಲ್ ಗಾಂಧಿ ಅವರ ಪೌರತ್ವದ ಬಗ್ಗೆ ಸಿಬಿಐ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಎಸ್ ವಿಘ್ನೇಶ್ ಶಿಶಿರ್ ಎಂಬುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
Rahul Gandhi, Allahabad High Court (Lucknow)
Rahul Gandhi, Allahabad High Court (Lucknow)Facebook
Published on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವ ಪ್ರಶ್ನಿಸಿ ನಾಗರಿಕರೊಬ್ಬರು ಬರೆದಿರುವ ಪತ್ರದ ಕುರಿತು ಶೀಘ್ರ ನಿರ್ಧಾರ ತೆಗೆದುಕೊಳ್ಳುವಂತೆ ಅಲಾಹಾಬಾದ್ ಹೈಕೋರ್ಟ್ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ.

ಡಿಸೆಂಬರ್ 19ರಂದು ಪತ್ರದ ಕುರಿತು ತೆಗೆದುಕೊಳ್ಳಲಾದ ನಿರ್ಧಾರದ ಬಗ್ಗೆ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಮೂರ್ತಿ ಅತ್ತೌ ರೆಹಮಾನ್ ಮಸೂದಿ ಮತ್ತು ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರಿದ್ದ ಪೀಠ ನಿರ್ದೇಶಿಸಿದೆ.

Also Read
ರಾಹುಲ್‌ ಗಾಂಧಿ ಪೌರತ್ವ ವಿಚಾರ: ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ ಸುಬ್ರಮಣಿಯನ್‌ ಸ್ವಾಮಿ

ರಾಹುಲ್ ಅವರ ಪೌರತ್ವದ ಬಗ್ಗೆ ಸಿಬಿಐ ತನಿಖೆ ಕೋರಿ ಎಸ್ ವಿಘ್ನೇಶ್ ಶಿಶಿರ್ ಸಲ್ಲಿಸಿದ್ದ  ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ ಮಧ್ಯಂತರ ಆದೇಶ ನೀಡಿದೆ.

ರಾಹುಲ್‌ ಅವರು ನಿಜವಾಗಿಯೂ ಬ್ರಿಟಿಷ್‌ ಪೌರತ್ವ ಹೊಂದಿರುವುದಕ್ಕೆ ಪುರಾವೆಗಳಿವೆ ಎಂದು ಅರ್ಜಿದಾರರು ವಾದಿಸಿದ್ದರು.

ಭಾರತದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಎಸ್‌ ಬಿ ಪಾಂಡೆ ಅವರು ವಾದ ಮಂಡಿಸಿ ಅರ್ಜಿದಾರರು ಬರೆದಿರುವ ಪತ್ರವನ್ನು ಕೇಂದ್ರ ಸರ್ಕಾರ ಸ್ವೀಕರಿಸಿದ್ದು ಪ್ರಕ್ರಿಯೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.  

ಈ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡಿದ ನ್ಯಾಯಾಲಯ ಡಿಸೆಂಬರ್ 19ರೊಳಗೆ ಪತ್ರದ ಕುರಿತು ಕೈಗೊಂಡ ನಿರ್ಧಾರ ಏನೆಂದು ತಿಳಿಸುವಂತೆ ಸೂಚಿಸಿದೆ.

Also Read
ರಾಹುಲ್ ಗಾಂಧಿ ಪೌರತ್ವ: ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಇರುವ ಅರ್ಜಿಯೆಡೆಗೆ ಬೆರಳು ಮಾಡಿದ ದೆಹಲಿ ಉಚ್ಚ ನ್ಯಾಯಾಲಯ

ರಾಹುಲ್‌ ಅವರ ಭಾರತೀಯ ಪೌರತ್ವ ಪ್ರಶ್ನಿಸಿರುವ ಇದೇ ರೀತಿಯ ಮನವಿಯನ್ನು ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ  ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥಗೊಂಡ ನಂತರವೇ ಪ್ರಕರಣ ಆಲಿಸುವುದಾಗಿ ದೆಹಲಿ ಹೈಕೋರ್ಟ್‌ ಸೂಚಿಸಿದೆ.

ಅರ್ಜಿ ಸಲ್ಲಿಸಿರುವ ವಕೀಲ ಎಸ್‌ ವಿಘ್ನೇಶ್‌ ಶಿಶಿರ್‌ ಅಲಾಹಾಬಾದ್‌ ಹೈಕೋರ್ಟ್‌ನಲ್ಲಿ ಖುದ್ದು ಹಾಜರಿದ್ದರು. ಕೇಂದ್ರ ಸರ್ಕಾರದ ಪರವಾಗಿ ವಕೀಲರಾದ ಅನುರಾಗ್ ಕುಮಾರ್ ಸಿಂಗ್, ಕುಲದೀಪ್ ಶ್ರೀವಾಸ್ತವ, ಕುಶಾಗ್ರ ದೀಕ್ಷಿತ್ ಮತ್ತು ವಿಜಯ್ ವಿಕ್ರಮ್ ಸಿಂಗ್ ವಾದ ಮಂಡಿಸಿದರು.

Kannada Bar & Bench
kannada.barandbench.com