
ಮಾಸಿಕ ₹73,000 ವೇತನ ಪಡೆಯುತ್ತಿರುವ ಮತ್ತು ₹80 ಲಕ್ಷ ಮೌಲ್ಯದ ಫ್ಲ್ಯಾಟ್‌ಗೆ ಬಂಡವಾಳ ಹೂಡಿರುವ ಮಹಿಳಾ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಜೀವನಾಂಶ ಒದಗಿಸುವಂತೆ ಪತಿಗೆ ಆದೇಶಿಸಲು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ.
ಪತ್ನಿ ತಮ್ಮನ್ನು ತಾವು ಪೋಷಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಮರ್ಥರಾಗಿದ್ದಾರೆ ಎಂದು ನ್ಯಾ ಸೌರಭ್ ಲವಣೈ ತೀರ್ಪು ನೀಡಿದರು.
ಅಂತೆಯೇ ಪತ್ನಿಗೆ ಮಾಸಿಕ ₹15,000 ಜೀವನಾಂಶ ನೀಡಬೇಕೆಂಬ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಪೀಠವು ಅವರ ಮಗುವಿನ ಪಾಲನೆಗೆ ತಿಂಗಳಿಗೆ ₹25,000 ನೀಡಬೇಕು ಎಂದು ನೀಡಿದ್ದ ನಿರ್ದೇಶನವನ್ನು ಎತ್ತಿಹಿಡಿಯಿತು.
ʼತೀರ್ಪು ಮರುಪರಿಶೀಲಿಸುವಂತೆ ಕೋರಿರುವವರ ಪತ್ನಿ ಟಿಸಿಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗದಲ್ಲಿದ್ದು, ಪ್ರಸ್ತುತ ತಿಂಗಳಿಗೆ ₹73,000 ಗಳಿಸುತ್ತಿದ್ದಾರೆ. ಇದು ಅವರ ಜೀವನ ಸಾಗಿಸಲು ಸಾಕಷ್ಟಾಗುತ್ತದೆ ಎಂಬುದು ಈ ನ್ಯಾಯಾಲಯದ ಅಭಿಪ್ರಾಯ. ಅಲ್ಲದೆ ಅವರು 2023 ಜನವರಿಯಲ್ಲಿ ₹80,43,409 ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದಾರೆ. ಆ ವೇಳೆ 11.01.2023ರಂದು ₹47,670 ಚೆಕ್ ಮೂಲಕ ಬಿಲ್ಡರ್ ಇಲ್ಲವೇ ಪ್ರಮೋಟರ್‌ಗೆ ಪಾವತಿಸಿದ್ದಾರೆ. 06.05.2023ರಂದು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ಸುಮಾರು ₹50,000 ಸಂಬಳ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಎಲ್ಲಾ ಸಂಗತಿಗಳ ಹಿನ್ನೆಲೆಯಲ್ಲಿ, ಪತ್ನಿಗೆ ತಿಂಗಳಿಗೆ ₹15,000 ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ತಪ್ಪಾಗಿದೆ ಎಂದು ಈ ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ. ಆದರೆ ಪ್ರತಿವಾದಿ ಸಂಖ್ಯೆ 3 (ತೀರ್ಪು ಮರುಪರಿಶೀಲನೆ ಕೋರಿರುವ ವ್ಯಕ್ತಿಪತ್ನಿಯ ಅಪ್ರಾಪ್ತ ಮಗುವಿಗೆ) ತಿಂಗಳಿಗೆ ₹25,000 ಪಾಲನಾ ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ ನಿರ್ದೇಶನ ಸಮಂಜಸವಾಗಿದೆʼ ಎಂದು ಆಗಸ್ಟ್ 20ರಂದು ನೀಡಿದ ಆದೇಶದಲ್ಲಿ ತಿಳಿಸಲಾಗಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶ ಕೋರಿದ್ದ ಪ್ರಕರಣದಲ್ಲಿ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಪತಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಪ್ರಸಕ್ತ ಪ್ರಕರಣದಲ್ಲಿ ಪತಿಯು ತಿಂಗಳಿಗೆ ಸುಮಾರು ₹1,75,000 ಸಂಬಳ ಪಡೆಯುತ್ತಿರುವುದರಿಂದ, ಕೌಟುಂಬಿಕ ನ್ಯಾಯಾಲಯವು 2023ರ ಮೇ 6ರಿಂದ ಪತ್ನಿಗೆ ತಿಂಗಳಿಗೆ ₹15,000 ಮತ್ತು ಮಗನಿಗೆ ತಿಂಗಳಿಗೆ ₹25,000 ಜೀವನಾಂಶ ಕೊಡಬೇಕೆಂದು ಆದೇಶಿಸಿತ್ತು. ಉಳಿದ ಬಾಕಿಯನ್ನು ಮೂರು ತಿಂಗಳೊಳಗೆ ಸಮಾನ ಕಂತುಗಳಲ್ಲಿ ಪಾವತಿಸಬೇಕು ಎಂದು ಕೂಡ ಸೂಚಿಸಿತ್ತು.
ರಜನೀಶ್ ಮತ್ತು ನೇಹಾ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ, ಪತ್ನಿ ಆದಾಯ ಗಳಿಸುತ್ತಿದ್ದರೆ ಅದು ಜೀವನಾಂಶ ಪಡೆಯಲು ಸಂಪೂರ್ಣ ಅಡ್ಡಿಯಾಗದು ಎಂದಿದ್ದರೂ ವೈವಾಹಿಕ ಜೀವನದ ವೇಳೆ ಹೊಂದಿದ್ದ ಜೀವನ ಮಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ಪೋಷಿಸಿಕೊಳ್ಳಲು ಆಕೆಯ ಆದಾಯ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಇದೆ. ಈ ಪ್ರಕರಣದಲ್ಲಿ ಪತ್ನಿಯು ಹೊಂದಿರುವ ಆದಾಯ ಹಾಗೂ ಆಕೆ ಫ್ಲ್ಯಾಟ್ ಕೊಳ್ಳಲು ಹೊಂದಿರುವ ಆರ್ಥಿಕ ಸಾಮರ್ಥ್ಯವು ಆಕೆಯ ಜೀವನ ನಿರ್ವಹಣೆಗೆ ಸಾಕಾಗಿದೆ ಎಂದ ಹೈಕೋರ್ಟ್, ಈ ಹಿಂದೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಭಾಗಶಃ ಬದಲಿಸಿತು.