ಅಸ್ತಿತ್ವದಲ್ಲಿಲ್ಲದ ಪೊಲೀಸ್ ಠಾಣೆ ಹೆಸರಿಸಿದ ಉತ್ತರಪ್ರದೇಶ ಎಸ್ಐಗೆ ಶೋಕಾಸ್‌ ನೋಟಿಸ್‌ ನೀಡಿದ ಅಲಾಹಾಬಾದ್ ಹೈಕೋರ್ಟ್

ಅಕ್ಬರಾಬಾದ್‌ನ ಪೊಲೀಸ್ ಠಾಣೆಯಲ್ಲಿ ಉತ್ತರಪ್ರದೇಶದ ದರೋಡೆಕೋರರ ನಿಗ್ರಹ ಕಾಯಿದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಐ ಸೂಚನೆಯಂತೆ ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.
ಅಸ್ತಿತ್ವದಲ್ಲಿಲ್ಲದ ಪೊಲೀಸ್ ಠಾಣೆ ಹೆಸರಿಸಿದ ಉತ್ತರಪ್ರದೇಶ ಎಸ್ಐಗೆ ಶೋಕಾಸ್‌ ನೋಟಿಸ್‌ ನೀಡಿದ ಅಲಾಹಾಬಾದ್ ಹೈಕೋರ್ಟ್
Published on

ಅಸ್ತಿತ್ವದಲ್ಲಿಲ್ಲದ ಪೊಲೀಸ್‌ ಠಾಣೆಯನ್ನು ಹೆಸರಿಸಿ ನ್ಯಾಯಾಲಯದ ದಿಕ್ಕು ತಪ್ಪಿಸಿದ್ದಕ್ಕಾಗಿ ವಿವರಣೆ ನೀಡುವಂತೆ ಅಲಾಹಾಬಾದ್‌ ಹೈಕೋರ್ಟ್‌ ಪೊಲೀಸ್‌ ಅಧಿಕಾರಿಯೊಬ್ಬರಿಗೆ ಶೋಕಾಸ್‌ ನೋಟಿಸ್‌ ನೀಡಿದೆ.

ಉತ್ತರ ಪ್ರದೇಶದ ಬಿಜ್ನೋರ್‌ ಜಿಲ್ಲೆಯ ಸಬ್‌ಇನ್ಸ್‌ಪೆಕ್ಟರ್‌ ಅಮಿತ್‌ ಕುಮಾರ್‌ ನೋಟಿಸ್‌ ಪಡೆದ ಪೊಲೀಸ್‌ ಅಧಿಕಾರಿ. ಅಮ್‌ರೋಹಾ ಜಿಲ್ಲೆಯ ಅಕ್ಬರಾಬಾದ್‌ನಲ್ಲಿ ಆರೋಪಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದರು. ವಾಸ್ತವದಲ್ಲಿ ಅಲ್ಲಿ ಯಾವುದೇ ಪೊಲೀಸ್‌ ಠಾಣೆ ಅಸ್ತಿತ್ವದಲ್ಲಿ ಇಲ್ಲದಿರುವುದನ್ನು ಕಂಡು ನ್ಯಾಯಮೂರ್ತಿ ಜೆ ಜೆ ಮುನೀರ್‌ ಕೆಂಡಾಮಂಡಲರಾದರು.

ಅಪರಾಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಜೂನ್ 25 ರಂದು ನಡೆದ ವಿಚಾರಣೆ ವೇಳೆ ಹೆಚ್ಚುವರಿ ಸರ್ಕಾರಿ ವಕೀಲರು (ಎಜಿಎ) ಅಕ್ಬರಾಬಾದ್‌ನ ಪೊಲೀಸ್ ಠಾಣೆಯಲ್ಲಿ ಉತ್ತರಪ್ರದೇಶದ ದರೋಡೆಕಾರರ ನಿಗ್ರಹ ಕಾಯಿದೆಯಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐ ಸೂಚನೆಯಂತೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು.

ಜುಲೈ 2ರಂದು ಪ್ರಕರಣ ಆಲಿಸಿದಾಗ, “ವಿಶೇಷ ಕಾರ್ಯಾಚರಣೆ ಪಡೆಯಾಗಿ ರೂಪುಗೊಂಡಿದ್ದ ನಿಗೂಢ ಪೊಲೀಸರ ಗುಂಪೊಂದು ಅತಿರೇಕದಲ್ಲಿ ಕೈಗೊಂಡ ಕ್ರಮಕ್ಕೆ ತಮ್ಮ ಕಕ್ಷೀದಾರರು ತುತ್ತಾಗಿದ್ದಾರೆ. ಆರೋಪಿಯನ್ನು ಅವರ ಮನೆಯಿಂದ ಬಂಧಿಸಲಾಗಿದ್ದು ಮೋಟಾರ್‌ ಬೈಕ್‌ ಮತ್ತು ಕಾರುಗಳನ್ನು ಅವರಿಂದ ವಶಪಡಿಸಿಕೊಂಡಿರುವುದಾಗಿ ಸುಳ್ಳು ಹೇಳಲಾಗಿದೆ. ಅಮ್‌ರೋಹಾ ಜಿಲ್ಲೆಯಲ್ಲಿಅಕ್ಬರಾಬಾದ್‌ ಹೆಸರಿನ ಯಾವುದೇ ಪೊಲೀಸ್‌ ಠಾಣೆ ಅಸ್ತಿತ್ವದಲ್ಲಿಲ್ಲ” ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

Also Read
ಉತ್ತರಪ್ರದೇಶ ಪೊಲೀಸರ ಕ್ರೂರ ಹಿಂಸೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್ ಮೊರೆ ಹೋದ ಮಾಜಿ ಯೋಧ

ನ್ಯಾಯಾಲಯ ಇದನ್ನು ಪ್ರಶ್ನಿಸಿದಾಗ ಅರ್ಜಿದಾರರ ಪರ ವಕೀಲರ ಹೇಳಿಕೆಗೆ ಎಜಿಎ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ವಿಚಾರಣೆ ನಡೆಸಿದ ಅವರು, ಎಸ್‌ಐ ಅಮಿತ್‌ಕುಮಾರ್‌ ನೀಡಿದ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾಗಿ ತಿಳಿಸಿದ್ದರು. ಅದರಂತೆ ಕುಮಾರ್‌ಗೆ ಶೋ-ಕಾಸ್ ನೋಟಿಸ್ ನೀಡಲಾಗಿದೆ.

ಸರ್ಕಾರಿ ವಕೀಲರಿಗೆ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆದಿದ್ದಕ್ಕಾಗಿ ಏಕೆ ಸೂಕ್ತ ಕ್ರಮ ಕೈಗೊಳ್ಳಬಾರದು ಎಂಬ ಕುರಿತು ಬಿಜ್ನೋರ್‌ ಜಿಲ್ಲೆ ಕೊತ್ವಾಲಿ ಪೊಲೀಸ್‌ ಠಾಣೆಯ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ಗೆ ನೋಟಿಸ್‌ ನೀಡಬೇಕು ಏಕೆಂದರೆ ಅರ್ಜಿದಾರರ ವಿರುದ್ಧ ಉತ್ತರಪ್ರದೇಶ ದರೋಡೆಕೋರರ ನಿಗ್ರಹ ಕಾಯಿದೆಯ ಸೆಕ್ಷನ್‌ 3 (1)ರಡಿ ಅಪರಾಧಗಳಿಲ್ಲವೋ ಅದೇ ರೀತಿ ಅಮ್‌ರೋಹಾ ಜಿಲ್ಲೆಯಲ್ಲಿ ಆ ಹೆಸರಿನ ಯಾವುದೇ ಪೊಲೀಸ್‌ ಠಾಣೆ ಅಸ್ತಿತ್ವದಲ್ಲಿಲ್ಲ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 8 ರಂದು ನಡೆಯಲಿದೆ.

Kannada Bar & Bench
kannada.barandbench.com