ತಾನು ಮದುವೆಯಾಗಿರುವ ಸಂತ್ರಸ್ತೆಯ ಕಾಳಜಿ ವಹಿಸುವೆ ಎಂದ ಪೋಕ್ಸೊ ಆರೋಪಿ: ಜಾಮೀನು ನೀಡಿದ ಅಲಾಹಾಬಾದ್ ಹೈಕೋರ್ಟ್

ಆರೋಪಿತ ವ್ಯಕ್ತಿ ಮತ್ತು ಸಂತ್ರಸ್ತೆಯ ವಿವಾಹ ಕಾನೂನು ಪ್ರಕಾರವಾಗಿ ನಡೆದಿರದಿದ್ದರೂ ಪ್ರಾಯೋಗಿಕ ನೆಲೆಯಲ್ಲಿ ಪ್ರಕರಣವನ್ನು ನೋಡಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ.
ತಾನು ಮದುವೆಯಾಗಿರುವ ಸಂತ್ರಸ್ತೆಯ ಕಾಳಜಿ ವಹಿಸುವೆ ಎಂದ ಪೋಕ್ಸೊ ಆರೋಪಿ: ಜಾಮೀನು ನೀಡಿದ ಅಲಾಹಾಬಾದ್ ಹೈಕೋರ್ಟ್
A1
Published on

ತಾನು ಮದುವೆಯಾಗಿರುವ ಸಂತ್ರಸ್ತೆ ಹಾಗೂ ತನ್ನ ಲೈಂಗಿಕ ಕೃತ್ಯದಿಂದ ಜನಿಸಿದ ಮಗುವಿನ ಕಾಳಜಿ ಮಾಡುತ್ತೇನೆ ಎಂದು ತಿಳಿಸಿರುವ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯಡಿ ಬಂಧಿತನಾಗಿದ್ದ ಆರೋಪಿಗೆ ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ಜಾಮೀನು ಮಂಜೂರು ಮಾಡಿದೆ (ರಾಮಶಂಕರ್‌ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ).

“ಆರೋಪಿತ ವ್ಯಕ್ತಿ ಮತ್ತು ಸಂತ್ರಸ್ತೆಯ ವಿವಾಹ ಕಾನೂನು ಪ್ರಕಾರ ನಡೆದಿರದಿದ್ದರೂ ಪ್ರಾಯೋಗಿಕ ನೆಲೆಯಲ್ಲಿ ಪ್ರಕರಣವನ್ನು ನೋಡಬೇಕು ಎಂದು ನ್ಯಾಯಮೂರ್ತಿ ಕ್ರಿಶನ್ ಪಹಲ್ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತು.

"ಪ್ರಕರಣ ಎಲ್ಲರ ಪ್ರಜ್ಞೆಗೆ ಘಾಸಿಯುಂಟು ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಜಗತ್ತಿಗೆ ಕಾಲಿಟ್ಟ ನವಜಾತ ಶಿಶುವಿನ ತಪ್ಪಾದರೂ ಏನು? ಗಂಗಾನದಿಯಲ್ಲಿ ಬಹಳಷ್ಟು ನೀರು ಹರಿದಿದ್ದು, ಮುಂದಡಿ ಇಡುವ ಸಮಯ ಬಂದಿದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಾಸಿಕ್ಯೂಷನ್‌ ವಾದದಂತೆ ಅರ್ಜಿದಾರ ರಾಮಶಂಕರ್‌ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ತನ್ನೊಡನೆ ಕರೆದೊಯ್ದು ದೇವಸ್ಥಾನದಲ್ಲಿ ಮದುವೆಯಾಗಿದ್ದ. ಮದುವೆಯನ್ನು ನೋಂದಣಿ ಮಾಡಿಸಿರಲಿಲ್ಲ. ಆರು ತಿಂಗಳ ನಂತರ ಆಕೆಯನ್ನು ಕರೆತಂದು ಹಳ್ಳಿಯ ಹೊರಗೆ ಬಿಟ್ಟು ಹೋಗಿದ್ದ. ಆಗ ಆಕೆ ಆರು ತಿಂಗಳ ಗರ್ಭಿಣಿಯಾಗಿರುವ ವಿಚಾರ ತಿಳಿದುಬಂದಿತ್ತು. ಕೆಲ ದಿನಗಳಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

Also Read
[ಮರ್ಯಾದೆಗೇಡು ಹತ್ಯೆ] ಗರ್ಭಿಣಿ ಪತ್ನಿಯೆದುರಿಗೆ ಭಾವನ ಕೊಲೆ; ಆರೋಪಿಯ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌

ಅರ್ಜಿದಾರನ ಪ್ರಕಾರ ಆತ ಮತ್ತು ಸಂತ್ರಸ್ತೆ ಪ್ರೀತಿಸುತ್ತಿದ್ದರು. ಗ್ರಾಮಸ್ಥರ ಭಯದಿಂದ ಅವರು ಓಡಿಹೋಗಿದ್ದರು. ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ, ವಿವಾಹ ನೋಂದಣಿಯಾಗಿರಲಿಲ್ಲ. ತನ್ನ ವಿರುದ್ಧ ಸಂತ್ರಸ್ತೆ ನೀಡಿರುವ ಹೇಳಿಕೆ ಸುಳ್ಳು. ಆಕೆ ಮೇಲೆ ಒತ್ತಡ ಹೇರಲಾಗಿದೆ. ತಾನು ಮಗುವಿನೊಂದಿಗೆ ಹಾಗೂ ಮದುವೆಯಾಗಿರುವ ಸಂತ್ರಸ್ತೆಯೊಂದಿಗೆ ಬದುಕಲು ಬಯಸುತ್ತಿರುವುದಾಗಿ ಆತ ನ್ಯಾಯಾಲಯಕ್ಕೆ ತಿಳಿಸಿದ.

ವಿಕಿರಣಶಾಸ್ತ್ರದ ವರದಿಯ ಪ್ರಕಾರ ಸಂತ್ರಸ್ತೆಗೆ ಘಟನೆ ನಡೆದಾಗ ಸುಮಾರು 18-20 ವರ್ಷ ವಯಸ್ಸಾಗಿದ್ದು ಪ್ರಾಪ್ತ ವಯಸ್ಕಳಾಗಿದ್ದಳು ಎಂಬುದನ್ನು ಗಮನಿಸಿದ ನ್ಯಾಯಾಲಯ ನವಜಾತ ಶಿಶುವಿನ ಬದುಕು ಅಪಾಯದಲ್ಲಿರುವುದರಿಂದ ಪ್ರಕರಣವನ್ನು ಅಸಾಧಾರಣ ಸನ್ನಿವೇಶ ಎಂದು ಪರಿಗಣಿಸಿ ವಿನಾಯಿತಿ ನೀಡಲು ಒಲವು ತೋರಿತು.

ಪತ್ನಿ ಮತ್ತು ಮಗುವನ್ನು ಸಲಹುತ್ತೇನೆ ಎಂದು ಆರೋಪಿ ನೀಡಿದ ಭರವಸೆ ಮೇರೆಗೆ ಜಾಮೀನು ನೀಡುತ್ತಿರುವುದಾಗಿ ತಿಳಿಸಿದ ಪೀಠ, ಆರೋಪಿ ಬಿಡುಗಡೆಯಾದ ಆರು ತಿಂಗಳಲ್ಲಿ ಮಗುವಿನ ಹೆಸರಿನಲ್ಲಿ ₹ 2 ಲಕ್ಷ ಠೇವಣಿ ಇಡಬೇಕು ಎಂದು ಆದೇಶಿಸಿತು.

Kannada Bar & Bench
kannada.barandbench.com