
ಗಾಜಿಯಾಬಾದ್‌ನ ದಾಸ್ನಾ ದೇವಿ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರ ಬಗ್ಗೆ ಟ್ವೀಟ್ ಮಾಡಿದ್ದ ಆಲ್ಟ್ ನ್ಯೂಸ್ ಜಾಲತಾಣದ ಪತ್ರಕರ್ತ ಮೊಹಮ್ಮದ್ ಜುಬೈರ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದುಗೊಳಿಸಲು ಅಲಾಹಾಬಾದ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ .
ಆದರೆ ಡಿಸೆಂಬರ್ 2024ರಲ್ಲಿ ಜುಬೈರ್ ಅವರಿಗೆ ನೀಡಲಾದ ಬಂಧನದಿಂದ ಮಧ್ಯಂತರ ರಕ್ಷಣೆಯು ಆರೋಪಪಟ್ಟಿ ಸಲ್ಲಿಸುವವರೆಗೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿಗಳಾದ ಸಿದ್ಧಾರ್ಥ ವರ್ಮಾ ಮತ್ತು ಯೋಗೇಂದ್ರ ಕುಮಾರ್ ಶ್ರೀವಾಸ್ತವ್ ಅವರಿದ್ದ ಪೀಠ ಹೇಳಿದೆ. ತನಿಖೆಗೆ ಸಹಕರಿಸುವಂತೆ ಜುಬೈರ್ ಅವರಿಗೆ ಇದೇ ವೇಳೆ ಸೂಚಿಸಿತು.
ಅನೇಕ ಸಂದರ್ಭಗಳಲ್ಲಿ ದ್ವೇಷ ಭಾಷಣ ಮಾಡಿರುವ ಆರೋಪ ಹೊತ್ತಿರುವ ನರಸಿಂಹಾನಂದ ಅವರು ಸೆಪ್ಟೆಂಬರ್ 29 ರಂದು ಸಾರ್ವಜನಿಕ ಭಾಷಣವೊಂದರಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಭಾಷಣವನ್ನು ಅವಹೇಳನಕರ ಮತ್ತು ದ್ವೇಷಪೂರಿತ ಎಂದು ಜುಬೈರ್ ತಮ್ಮ ಎಕ್ಸ್ ಖಾತೆಯಲ್ಲಿ ಜರೆದಿದ್ದರು.
ನಂತರ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನರಸಿಂಹಾನಂದ್ ವಿರುದ್ಧ ಕೋಮು ದ್ವೇಷಕ್ಕೆ ಕುಮ್ಮಕ್ಕು ನೀಡಿದ ಮಾತ್ತು ಧಾರ್ಮಿಕ ಭಾವನೆಗೆ ಘಾಸಿ ತಂದ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿತ್ತು. ನರಸಿಂಹಾನಂದರನ್ನು ಬಂಧಿಸದಿದ್ದರೂ ಅವರನ್ನು ಪೊಲೀಸರು ಕರೆದೊಯ್ದಿದ್ದರು ಎಂದು ಅವರ ಅನುಯಾಯಿಗಳು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ದಾಸ್ನಾದೇವಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿತ್ತು.
ಈ ಸಂದರ್ಭದಲ್ಲಿ ಯತಿ ನರಸಿಂಹಾನಂದ ಸರಸ್ವತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ ಅವರು ಸಲ್ಲಿಸಿದ ದೂರಿನ ಮೇರೆಗೆ ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನ್ನ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಉದ್ದೇಶದಿಂದ ಅಕ್ಟೋಬರ್ 3 ರಂದು ಜುಬೈರ್ ನರಸಿಂಹಾನಂದ ಅವರ ಹಳೆಯ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ ಎಂದು ತ್ಯಾಗಿ ಆರೋಪಿಸಿದ್ದರು.
ನರಸಿಂಹಾನಂದ ಅವರ ಕ್ರಿಮಿನಲ್ ಚಟುವಟಿಕೆಗಳನ್ನು ಬಹಿರಂಗಪಡಿಸದಂತೆ ತಡೆಯುವ ದುರುದ್ದೇಶಪೂರಿತ ಯತ್ನವಾಗಿ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜುಬೈರ್ ಹೇಳಿದ್ದರು.