
ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೆ ತರಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ಹಿಂದಿ ಹೇರಿಕೆಯ ಚರ್ಚೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ರಾಜ್ಯದಲ್ಲಿ ಎನ್ಇಪಿಯ ತ್ರಿಭಾಷಾ ಸೂತ್ರ ಜಾರಿಗೆ ವಿರೋಧ ವ್ಯಕ್ತಪಡಿಸಿ ಹೇಳಿ ನೀಡಿರುವ ಹಿನ್ನೆಲೆಯಲ್ಲಿ ಈ ಪಿಐಎಲ್ ಸಲ್ಲಿಸಲಾಗಿದೆ.
ಕುತೂಹಲಕಾರ ಸಂಗತಿ ಎಂದರೆ, ತಮಿಳುನಾಡಿನವರೇ ಆದ ವಕೀಲ ಜಿ ಎಸ್ ಮಣಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ.
ತಮಿಳುನಾಡು ಶಾಲೆಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಮತ್ತು ತಮಿಳು ಮಾತ್ರ ಕಲಿಸಲಾಗುತ್ತದೆ. ಕೇಂದ್ರ ಸರ್ಕಾರವು ಎನ್‌ಇಪಿ ಮೂಲಕ ಹಿಂದಿ ಹೇರಿಕೆಗೆ ಯೋಜಿಸುತ್ತಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಸ್ಟಾಲಿನ್ ಅವರ ದೃಷ್ಟಿಕೋನ ತಪ್ಪಾಗಿದ್ದು, ಮನಸೋ ಇಚ್ಛೆಯಿಂದ ಕೂಡಿರುವಂಥದ್ದು, ರಾಜಕೀಯ ಪ್ರೇರಿತವಾದದ್ದು ಹಾಗೂ ಉಚಿತ ಮತ್ತು ಪರಿಣಾಮಕಾರಿ ಶಿಕ್ಷಣ ಪಡೆಯುವ ಮೂಲಭೂತ ಹಕ್ಕಿಗೆ ವಿರುದ್ಧ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ನೀತಿ ಅಂಗೀಕರಿಸಿ ಒಡಂಬಡಿಕೆಗೆ ಸಹಿ ಹಾಕುವಂತೆ ಸೂಚಿಸುವ ನೇರ ಅಧಿಕಾರ ನ್ಯಾಯಾಲಯಕ್ಕೆ ಇಲ್ಲವಾದರೂ ಸಾಂವಿಧಾನಿಕ ನಿಬಂಧನೆ ಅಥವಾ ಕಾನೂನು ಉಲ್ಲಂಘಿಸಿದ ಸಂದರ್ಭಗಳಲ್ಲಿ ರಾಜ್ಯಗಳಿಗೆ ಅಂತಹ ಆದೇಶ ನೀಡುವ ಅಧಿಕಾರ ಅದಕ್ಕೆ ಇದ್ದು ಕೆಲ ಸಂದರ್ಭಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳಲೇಬೇಕಾಗುತ್ತದೆ ಎಂದು ಅರ್ಜಿ ವಿವರಿಸಿದೆ.
ರಾಜ್ಯಗಳು ಎನ್‌ಇಪಿಯನ್ನು ಜಾರಿಗೆ ತರುವುದು ಮತ್ತು ಅದಕ್ಕಾಗಿ ಒಡಂಬಡಿಕೆಯೊಂದನ್ನು ಮಾಡಿಕೊಳ್ಳುವುದು ಅವುಗಳ ಸಾಂವಿಧಾನಿಕ ಮತ್ತು ಕಾನೂನುಬದ್ಧ ಹೊಣೆಗಾರಿಕೆಯಾಗಿದೆ ಎಂದು ಅರ್ಜಿ ಹೇಳಿದೆ.
ರಾಜ್ಯಗಳಲ್ಲಿ ಹಿಂದಿ ಹೇರಿಕೆಯ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಮಣಿ ವಾದಿಸಿದ್ದಾರೆ.