[ಕನ್ನಡ ಕಡ್ಡಾಯಕ್ಕೆ ಹಿನ್ನೆಡೆ] ಎನ್‌ಇಪಿ ಅಡಿ ಕನ್ನಡ ಕಡ್ಡಾಯವಲ್ಲ; ಪುನರ್‌ವ್ಯಾಖ್ಯಾನ ಅಗತ್ಯವಿಲ್ಲ ಎಂದ ಕೇಂದ್ರ

ನಿರ್ದಿಷ್ಟ ಭಾಷೆ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಮೇಲೆ ಎನ್‌ಇಪಿ ನಿರ್ಬಂಧ ವಿಧಿಸುವುದಿಲ್ಲ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು ಅದರ ನೀತಿಯ ಭಾಗವಾಗಿದ್ದು ಅದಕ್ಕೂ ಕೇಂದ್ರಕ್ಕೂ ಸಂಬಂಧವಿಲ್ಲ ಎಂದು ವಿವರಣೆ.
Kannada and Karnataka High Court
Kannada and Karnataka High Court

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)- 2020 ಮತ್ತು ಅದರ ನಿಬಂಧನೆಗಳಲ್ಲಿ ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸುವ ಸಂಬಂಧ ಉಲ್ಲೇಖಗಳಿಲ್ಲ. ಹೀಗಾಗಿ, ಎನ್‌ಇಪಿ ನಿಬಂಧನೆಗಳನ್ನು ಪುನರ್‌ವ್ಯಾಖ್ಯಾನಿಸುವ ಅಗತ್ಯ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸರ್ಕಾರವು ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಹೇಳಿದೆ. ಇದರಿಂದಾಗಿ ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರಕ್ಕೆ ತೀವ್ರ ಹಿನ್ನೆಡೆಯಾಗಿದೆ.

ಪದವಿ ಹಂತದಲ್ಲಿ ಭಾಷೆಯಾಗಿ ಕನ್ನಡ ಕಡ್ಡಾಯ ಕಲಿಕೆಯ ಆದೇಶವನ್ನು ವಿರೋಧಿಸಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್‌, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಶ್ರೀ ಹಯಗ್ರೀವಾ ಟ್ರಸ್ಟ್‌, ವ್ಯೋಮಾ ಲಿಂಗ್ವಿಸ್ಟಿಕ್‌ ಲ್ಯಾಬ್ಸ್‌ ಫೌಂಡೇಶನ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ (ಪಿಐಎಲ್‌) ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಭಾಷೆಯ ಅಧ್ಯಯನ ಮುಂದುವರಿಸಲು ಸ್ವತಂತ್ರರು ಎಂದು ಆದೇಶ ಮಾಡಬೇಕು ಎಂದು ಕೋರಿ ಶಿವಕುಮಾರ್‌ ಕೆ ಜಿ ಸೇರಿದಂತೆ ಆರು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತು ರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸುತ್ತಿದ್ದು, ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತನ್ನ ನಿಲುವು ಸ್ಪಷ್ಟಪಡಿಸಿದೆ.

ಪ್ರಸಕ್ತ ಮನವಿಯಲ್ಲಿ ಅರ್ಜಿದಾರರು, ರಾಜ್ಯ ಸರ್ಕಾರವು 2021ರ ಆಗಸ್ಟ್‌ 7 ಮತ್ತು ಸೆಪ್ಟೆಂಬರ್‌ 15ರಂದು ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿದ್ದಾರೆ. ಉನ್ನತ ಶಿಕ್ಷಣ ಪಠ್ಯಕ್ರಮದ ಭಾಗವಾಗಿ ನಿರ್ದಿಷ್ಟ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಮೇಲೆ ಎನ್‌ಇಪಿ ನಿರ್ಬಂಧ ವಿಧಿಸುವುದಿಲ್ಲ ಎಂದು ಘೋಷಿಸುವಂತೆ ಕೋರಿದ್ದಾರೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವು ನೀತಿಯ ಭಾಗವಾಗಿದ್ದು, ಮೊದಲ ಪ್ರತಿವಾದಿಯಾದ ಭಾರತ ಸರ್ಕಾರವು ಅರ್ಜಿದಾರರ ಮೊದಲೆರಡು ಕೋರಿಕೆಗಳಿಗೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಆಕ್ಷೇಪಣೆಯಲ್ಲಿ ಕೇಂದ್ರ ಸರ್ಕಾರವು ಉಲ್ಲೇಖಿಸಿದೆ.

ಎನ್‌ಇಪಿಯಲ್ಲಿ ಭಾರತದ ಭಾಷೆಗಳು, ಕಲೆ ಮತ್ತು ಸಂಸ್ಕೃತಿ ಪ್ರಚಾರ ತಲೆಬರಹ ಹೊಂದಿರುವ 22ನೇ ಅಧ್ಯಾಯವನ್ನು ಭಾರತೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳ ಪ್ರಚಾರಕ್ಕೆ ಮೀಸಲಿಡಲಾಗಿದೆ. ಈ ಅಧ್ಯಾಯದ 22.10ನೇ ಪ್ಯಾರಾದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಾತೃಭಾಷೆ/ಸ್ಥಳೀಯ ಭಾಷೆಯನ್ನು ಬೋಧನಾ ಭಾಷೆಯನ್ನಾಗಿ ಬಳಕೆ ಮಾಡಬಹುದಾಗಿದ್ದು, ದ್ವಿಭಾಷೆಯಲ್ಲಿ ಕಲಿಸುವುದಕ್ಕೆ ಅವಕಾಶ ನೀಡುತ್ತದೆ ಎಂದು ಕೇಂದ್ರ ಆಕ್ಷೇಪಣೆಯಲ್ಲಿ ವಿವರಿಸಿದೆ.

ಸ್ಥಳೀಯ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದ ಮಹಾತ್ವಾಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಸುಲಭವಾಗಿ ಸಮಗ್ರ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಎನ್‌ಇಪಿ ಜಾರಿಗೊಳಿಸಲಾಗಿದೆ. ಎಲ್ಲಾ ಮಟ್ಟದಲ್ಲೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಕೂಲಕ್ಕಾಗಿ ಭಿನ್ನ ಬಗೆಯ ಶೈಕ್ಷಣಿಕ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿಪಡಿಸಿ ಅದು ಎಲ್ಲರಿಗೂ ದೊರೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಎಲ್ಲಾ ಸಾಫ್ಟ್‌ವೇರ್‌ಗಳು ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ದೊರೆಯಲಿದ್ದು, ಅಂಗವಿಕಲರು ಮತ್ತು ಸಂಪರ್ಕರಹಿತ ಪ್ರದೇಶಗಳಲ್ಲಿರುವ ಮಕ್ಕಳೂ ಇವುಗಳನ್ನು ಬಳಕೆ ಮಾಡಬಹುದಾಗಿದೆ. ಇ-ಕಂಟೆಂಟ್‌ ಅನ್ನು ಎಲ್ಲಾ ಸ್ಥಳೀಯ ಭಾಷೆಗಳಲ್ಲಿ ರಾಜ್ಯಗಳು ಹಾಗೂ ಎನ್‌ಸಿಇಆರ್‌ಟಿ, ಸಿಐಇಟಿ, ಸಿಬಿಎಸ್‌ಇ, ಎನ್‌ಐಒಎಸ್‌ ಮತ್ತು ಇತರೆ ಸಂಸ್ಥೆಗಳು ಅಭಿವೃದ್ಧಿಪಡಿಸಲಿವೆ. ಇದೆಲ್ಲವನ್ನೂ ದೀಕ್ಷಾ ವೇದಿಕೆಯಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಆಕ್ಷೇಪಣೆಯಲ್ಲಿ ಕೇಂದ್ರ ವಿವರಿಸಿದೆ.

Also Read
[ಕನ್ನಡ ಕಡ್ಡಾಯ] ಕೇಂದ್ರದ ನಿಲುವು ಸ್ಪಷ್ಟ; ರಾಜ್ಯದ ನಿಲುವು ಪುನರ್‌ ಪರಿಗಣಿಸಲು ನಿರ್ದೇಶಿಸಲಾಗುವುದು ಎಂದ ಹೈಕೋರ್ಟ್‌

ಎನ್‌ಇಪಿಯ ಪ್ಯಾರಾ 10.8ರಲ್ಲಿ ಎಲ್ಲರಿಗೂ ದಕ್ಕುವ, ಸಮಾನ ಮತ್ತು ಎಲ್ಲರನ್ನೂ ಒಳಗೊಳ್ಳುವ ದೃಷ್ಟಿಯಿಂದ ಶೈಕ್ಷಣಿಕ ಸಂಸ್ಥೆಗಳು ಇಲ್ಲದ ಕಡೆ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಅಭಿವೃದ್ಧಿಪಡಿಸಲಾಗುವುದು. ಸ್ಥಳೀಯ/ಭಾರತೀಯ ಅಥವಾ ದ್ವಿಭಾಷೆ ಬೋಧಿಸುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ಹೇಳಿದೆ.

ಎನ್‌ಇಪಿ ಭಾಗವಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ಬೇಕಾದರೆ ಬೋಧನೆ ಅಥವಾ ಕಾರ್ಯಕ್ರಮಗಳನ್ನು ಸ್ಥಳೀಯ ಅಥವಾ ಭಾರತೀಯ ಭಾಷೆಗಳಲ್ಲಿ ನೀಡಬಹುದಾಗಿದೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಬೃಹತ್‌, ವಿವಿಧ ಕೋರ್ಸ್‌ಗಳ ವಿಶ್ವವಿದ್ಯಾಲಯ ಮತ್ತು ಕಾಲೇಜು ಹೊಂದುವ ಉನ್ನತ ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಪಡಿಸುವುದು. ಈ ಮೂಲಕ ದೇಶಾದ್ಯಂತ ಸ್ಥಳೀಯ/ಭಾರತೀಯ ಭಾಷೆಯಲ್ಲಿನ ಬೋಧನೆ ಮಾಡುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com