ʼದ ವೈರ್‌ʼ ಪತ್ರಕರ್ತರಿಂದ ವಶಪಡಿಸಿಕೊಂಡಿದ್ದ ಸಾಧನಗಳನ್ನು ಮರಳಿಸುವಂತೆ ಪೊಲೀಸರಿಗೆ ದೆಹಲಿ ನ್ಯಾಯಾಲಯ ಆದೇಶ

ಸಾಮಾಜಿಕ ಜಾಲತಾಣಗಳ ಮಾಲೀಕತ್ವ ಹೊಂದಿರುವ ʼಮೆಟಾʼದ ವೇದಿಕೆಗಳಲ್ಲಿ ತಾನು ವಿಶೇಷ ಸವಲತ್ತು ಹೊಂದಿರುವುದಾಗಿ ವರದಿ ಮಾಡಲಾಗಿದೆ ಎಂದು ಅಮಿತ್ ಮಾಳವೀಯ 'ದ ವೈರ್' ವಿರುದ್ಧ ದೂರು ದಾಖಲಿಸಿದ್ದರು. ನಂತರ ವರದಿಯನ್ನು ವೈರ್‌ ಹಿಂಪಡೆದಿತ್ತು.
The Wire and Amit Malviya
The Wire and Amit MalviyaFacebook

ಬಿಜೆಪಿ ನಾಯಕ ಅಮಿತ್‌ ಮಾಳವೀಯ ದಾಖಲಿಸಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ 2022 ರ ಅಕ್ಟೋಬರ್‌ನಲ್ಲಿ ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದ 'ದ ವೈರ್' ಸಂಪಾದಕರಿಗೆ ಸೇರಿದ ಎಲೆಕ್ಟ್ರಾನಿಕ್ ಸಾಧನಗಳನ್ನು ಮರಳಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.

ತಮ್ಮ ಸಾಧನಗಳನ್ನು ಮರಳಿಸುವಂತೆ ಕೋರಿದ ದ ವೈರ್‌ನ ಸಂಸ್ಥಾಪಕ ಸಂಪಾದಕರಾದ ಸಿದ್ಧಾರ್ಥ್ ವರದರಾಜನ್, ಎಂ ಕೆ ವೇಣು ಹಾಗೂ ಅದರ ಸಂಪಾದಕರಾದ ಸಿದ್ಧಾರ್ಥ್ ಭಾಟಿಯಾ, ಜಾಹ್ನವಿ ಸೇನ್ ಮತ್ತು ಉತ್ಪನ್ನ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥ ಮಿಥುನ್‌ ಕಿಡಂಬಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

Also Read
ಭಾರತೀಯ ವಕೀಲರ ಕೆಲಸ ಕಸಿಯುವ ಉದ್ದೇಶ ಇಂಗ್ಲೆಂಡ್‌ ಮತ್ತು ವೇಲ್ಸ್‌ ವಕೀಲರಿಗೆ ಇಲ್ಲ: ಬ್ರಿಟನ್ ಲಾ ಸೊಸೈಟಿ ಅಧ್ಯಕ್ಷೆ

ಸಾಧನಗಳು ದೀರ್ಘಕಾಲದವರೆಗೆ ಪೊಲೀಸರ ವಶದಲ್ಲಿದ್ದು ಈಗ ಅವುಗಳನ್ನು ವಶದಲ್ಲಿಟ್ಟುಕೊಳ್ಳಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ. “ತನಿಖೆ ವೇಳೆ ವಶಪಡಿಸಿಕೊಂಡ ಸಾಧನಗಳು ಬಹಳ ಸಮಯದಿಂದ ತನಿಖಾಧಿಕಾರಿಯ ವಶದಲ್ಲಿವೆ ಎಂಬುದು ದಾಖಲೆಯಿಂದ ಸ್ಪಷ್ಟವಾಗಿದೆ. ಸಾಧನಗಳನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯ ಪರಿಶೀಲಿಸಿದ್ದು ಯಾವುದೇ ನಂತರದ ತನಿಖೆಯ ಉದ್ದೇಶಕ್ಕಾಗಿ ಅವುಗಳ ಪ್ರತಿಗಳು ಎಫ್‌ಎಸ್‌ಎಲ್‌ ಬಳಿ ಇವೆ”ಎಂದು ನ್ಯಾಯಾಲಯ ಹೇಳಿದೆ.

ಮುಂದಿನ ತನಿಖೆಗೆ ಆ ಸಾಧನಗಳು ಮತ್ತೆ ಬೇಕಾಗಬಹುದು ಎಂಬ ತನಿಖಾಧಿಕಾರಿಯ ವಾದವನ್ನು ಅದು ಇದೇ ವೇಳೆ ತಿರಸ್ಕರಿಸಿತು.“ನಂತರದ ಹಂತದಲ್ಲಿ ಕೆಲ ಹೊಸ ವಿಚಾರಗಳು ಹೊರಹೊಮ್ಮಬಹುದು. ಅದು ಆಗಬಹುದು ಇಲ್ಲವೇ ಆಗದೇ ಇರಬಹುದು ಎಂಬುದು ಊಹೆಯದ್ದಾಗಿರುವುದರಿಂದ ಸ್ವಭಾವತಃ ಶಂಕಾಸ್ಪದವಾಗಿದೆ” ಎಂದು ತೀಸ್ ಹಜಾರಿ ನ್ಯಾಯಾಲಯದ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ಸಿದ್ಧಾರ್ಥ ಮಲಿಕ್ ತಿಳಿಸಿದರು.

Also Read
ಎರಡು ವರ್ಷಗಳ ಜೈಲುವಾಸದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾದ ಕೇರಳ ಪತ್ರಕರ್ತ ಸಿದ್ದೀಕ್‌ ಕಪ್ಪನ್

ಹೀಗಾಗಿ 15 ದಿನಗಳೊಳಗೆ ಸಾಧನಗಳನ್ನು ಬಿಡುಗಡೆ ಮಾಡುವಂತೆ ನ್ಯಾಯಾಧೀಶರು ಪೊಲೀಸರಿಗೆ ಆದೇಶಿಸಿದರು. ಸಾಧನಗಳನ್ನು ಹಿಂತಿರುಗಿಸಿದ ಬಗ್ಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸೂಚಿಸಿ ಅಕ್ಟೋಬರ್ 21ಕ್ಕೆ ನ್ಯಾಯಾಲಯ ಪ್ರಕರಣವನ್ನು ಮುಂದೂಡಿತು.

ಮೆಟಾದ (ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ವಾಟ್ಸಾಪ್‌ ಇತ್ಯಾದಿಗಳ ಒಡೆತನ ಹೊಂದಿರುವ ಸಂಸ್ಥೆ) ವೇದಿಕೆಗಳಲ್ಲಿ ತಾನು ವಿಶೇಷ ಸವಲತ್ತು ಹೊಂದಿರುವುದಾಗಿ ವರದಿ ಮಾಡಲಾಗಿದೆ ಎಂದು ಬಿಜೆಪಿಯ ಅಮಿತ್ ಮಾಳವೀಯ ದೂರು ದಾಖಲಿಸಿದ್ದರು. ನಂತರ ವರದಿಯನ್ನು ವೈರ್‌ ಹಿಂಪಡೆದಿತ್ತು.

Related Stories

No stories found.
Kannada Bar & Bench
kannada.barandbench.com