ಅಮರಾವತಿ ಭೂ ಹಗರಣ: ಆಂಧ್ರ ಹೈಕೋರ್ಟ್‌ ಮಾಹಿತಿ ನಿರ್ಬಂಧ ಆದೇಶಕ್ಕೆ 'ಸುಪ್ರೀಂ' ತಡೆ, ನೋಟಿಸ್‌ ಜಾರಿ

“ಇದು ಮುಖ್ಯಮಂತ್ರಿ ವಿರುದ್ಧದ ರಾಜಕೀಯ ಪ್ರೇರಿತ ರಿಟ್‌ ಅರ್ಜಿಯಾಗಿದೆ” ಎಂದು ವೈಎಸ್‌ಆರ್‌ ಸರ್ಕಾರದ ಪರವಾಗಿ ಹಾಜರಾದ ವಕೀಲ ರಾಜೀವ್‌ ಧವನ್‌ ತಿಳಿಸಿದರು.
Jaganmohan Reddy and Supreme Court
Jaganmohan Reddy and Supreme Court

ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್‌ ಹೊರಡಿಸಿದ್ದ ಮಾಹಿತಿ ನಿರ್ಬಂಧ ಆದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ ಬಗ್ಗೆ ತನಿಖೆ ತಡೆಯುವಂತೆ ಹೈಕೋರ್ಟ್‌ ನೀಡಿದ್ದ ನಿರ್ದೇಶನವನ್ನು ಪ್ರಶ್ನಿಸಿ ಆಂಧ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಪೀಠ ನೋಟಿಸ್‌ ಜಾರಿ ಮಾಡಿದೆ.

ಮಾಜಿ ಅಡ್ವೊಕೇಟ್‌ ಜನರಲ್‌ ದಮ್ಮಲಪಟ್ಟಿ ಶ್ರೀನಿವಾಸ್‌ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಅಶೋಕ್‌ ಭೂಷಣ್‌, ಎಂ ಆರ್‌ ಶಾ ಹಾಗೂ ಸುಭಾಷ್‌ ರೆಡ್ಡಿ ಅವರಿದ್ದ ಪೀಠ ಈ ಸಂಬಂಧ ನೋಟಿಸ್‌ ಜಾರಿ ಮಾಡಿದೆ.

ಅಮರಾವತಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್‌ ನ್ಯಾಯಮೂರ್ತಿಗಳೊಬ್ಬರ ಹೆಣ್ಣುಮಕ್ಕಳ ಹೆಸರನ್ನು ಉಲ್ಲೇಖಿಸಿ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಪ್ರಕರಣ ದಾಖಲಿಸಿತ್ತು. ಆ ಪ್ರಕರಣದ ತನಿಖೆಯನ್ನು ಕೂಡ ಹೈಕೋರ್ಟ್‌ ತಡೆಹಿಡಿದಿತ್ತು. ವಿಚಾರಣೆ ವೇಳೆ ಆಂಧ್ರಪ್ರದೇಶ ಸರ್ಕಾರದ ಪರವಾಗಿ ಹಾಜರಾದ ವಕೀಲ ರಾಜೀವ್ ಧವನ್ ಅವರು “ಮಾರ್ಚ್ 23ರಂದು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸರ್ಕಾರ ಸಲ್ಲಿಸಿದ ಪತ್ರದ ಆಧಾರದ ಮೇಲೆ ಹೈಕೋರ್ಟ್‌ನ ಇಡೀ ಆದೇಶ ನಿಂತಿದೆ” ಎಂದು ಆರೋಪಿಸಿದರು.

Also Read
ನ್ಯಾ. ರಮಣ ವಿರುದ್ಧ ಭ್ರಷ್ಟಾಚಾರ ಆರೋಪ: ಆಂಧ್ರ ಸಿಎಂ ಜಗನ್ ವಿರುದ್ಧದ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ. ಲಲಿತ್

"ಮಾರ್ಚ್ 2 ರ ಪತ್ರವು ಪೂರಕ ಪರಿಹಾರಗಳನ್ನು ನೀಡುವುದಕ್ಕೆ ಆಧಾರವಾಗಬಹುದೇ? ಇದು ರಾಜಕೀಯ ದುರುದ್ದೇಶದಿಂದ ಕೂಡಿದ್ದೆನ್ನಲಾದ ಪತ್ರವಾಗಿದೆ… ಇದೊಂದು ನಿರೀಕ್ಷಣಾ ಜಾಮೀನೇ ಎಂದು ನನಗೆ ನಾನೇ ಕೇಳಿಕೊಳ್ಳುತ್ತಿದ್ದೇನೆ. ತನಿಖೆಯನ್ನು ಕೂಡ ತಡೆಹಿಡಿಯಲಾಗಿದೆ” ಎಂದು ಅವರು ಹೇಳಿದರು. ಮತ್ತೊಂದೆಡೆ ಅವರು “ಇದು ಮುಖ್ಯಮಂತ್ರಿ ವಿರುದ್ಧದ ರಾಜಕೀಯ ಪ್ರೇರಿತ ರಿಟ್‌ ಅರ್ಜಿಯಾಗಿದೆ. ಅರ್ಜಿ ವಾಸ್ತವಾಂಶಗಳಿಂದ ಕೂಡಿರದೆ ಹೆಸರನ್ನು ಬಹಿರಂಗಪಡಿಸದ ನಂಬಲರ್ಹ ಮೂಲಗಳನ್ನು ಆಧರಿಸಿದೆ” ಎಂದು ಹೇಳಿದರು.

ಅಡ್ವೊಕೇಟ್‌ ಜನರಲ್‌ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ತುರ್ತಾಗಿ ತಾವು ಹೈಕೋರ್ಟ್‌ ಮೊರೆ ಹೋಗಬೇಕಿದ್ದ ಕಾರಣಗಳನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. ʼಅಡ್ವೊಕೇಟ್‌ ಜನರಲ್‌ ವಿರುದ್ಧ ಆರೋಪಿಸಲಾದ ಪತ್ರವನ್ನು ಸಿಬಿಐಗೆ ಕಳುಹಿಸಲಾಗಿತ್ತು. ಮುಖ್ಯಮಂತ್ರಿ ವಿರುದ್ಧದ 25 ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಅವರು ವಾದ ಮಂಡಿಸಿದ್ದರು. 30 ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿದವರ ಪ್ರತಿಷ್ಠೆಗೆ ಧಕ್ಕೆಯಾಗುವಂತೆ ಇರುವ ಕಾರಣ ತಕ್ಷಣ ಈ ಪ್ರಕರಣವನ್ನು ಆಲಿಸಬೇಕೆಂದು ನಾನು ಹೈಕೋರ್ಟನ್ನು ಒತ್ತಾಯಿಸಿದ್ದೆ” ಎಂದರು. “ನನ್ನ ಕಕ್ಷೀದಾರರು ಮಾಜಿ ಸಿಎಂ ಪರ ವಾದ ಮಂಡಿಸಿದ ಕಾರಣ ಅವರನ್ನು ಗುರಿ ಮಾಡಲಾಗಿದೆ. ಈ ಪ್ರಕರಣ ದುರುದ್ದೇಶದಿಂದ ಕೂಡಿದೆ. ಇದು ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ. ಸಿಬಿಐ ಏನನ್ನೂ ಮಾಡಿಲಲ್.‌ ನನ್ನ ಪ್ರತಿಷ್ಠೆಗೆ ಧಕ್ಕೆ ಬಂದಿದೆ” ಎಂದು ಅವರು ಹೇಳಿದರು.

ಅರ್ಜಿಯನ್ನು ʼಹೈಕೋರ್ಟ್‌ ವಿರುದ್ಧ ಸಲ್ಲಿಸಲಾದ ಅವಿಶ್ವಾಸ ಗೊತ್ತುವಳಿʼ ಎಂದು ಬಣ್ಣಿಸಿದ ಹಿರಿಯ ವಕೀಲ ಹರೀಶ್‌ ಸಾಳ್ವೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಜಗನ್‌ ಮಾಡಿದ ಆರೋಪಗಳನ್ನು ಕುರಿತು ಪ್ರಸ್ತಾಪಿಸಿದರು. ಪ್ರಕರಣವನ್ನು ಹೈಕೋರ್ಟ್‌ ನಿಭಾಯಿಸಬಹುದಾಗಿರುವುದರಿಂದ 136ನೇ ವಿಧಿ ಅನ್ವಯ ಇದನ್ನು ಸುಪ್ರೀಂಕೋರ್ಟ್‌ ನ್ಯಾಯವ್ಯಾಪ್ತಿಗೆ ತರಬಾರದು ಎಂದರು.

Also Read
ಸುಪ್ರೀಂ ನ್ಯಾಯಮೂರ್ತಿಯ ವಿರುದ್ಧ ಮಾನಹಾನಿ ಆರೋಪ: ಆಂಧ್ರ ಸಿಎಂ ಜಗನ್ ವಜಾ ಕೋರಿ ಸುಪ್ರೀಂನಲ್ಲಿ ಪಿಐಎಲ್‌ ಸಲ್ಲಿಕೆ

"ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಹೈಕೋರ್ಟ್‌ಗೆ ತಿಳಿದಿದೆ…” ಎಂದು ಸಾಳ್ವೆ ಅವರು ಹೇಳಿದಾಗ ಪ್ರತಿಕ್ರಿಯಿಸಿದ ರಾಜೀವ್‌ ಧವನ್‌ “ಸರ್ಕಾರ ಹೈಕೋರ್ಟ್‌ ವಿರುದ್ಧವಾಗಿಯೇನೂ ಇಲ್ಲ” ಎಂದರು. ಇದೇ ವೇಳೆ “ಅಧಿಕಾರದಲ್ಲಿರುವವರ ಪ್ರತೀಕಾರ ಇದು ಎಂದು ಹೇಳಲಾಗುತ್ತಿದೆ. ಆದರೆ ಇದರರ್ಥ ಕ್ರಿಮಿನಲ್‌ ಪ್ರಕರಣವೊಂದನ್ನು ಮುಂದಿನ ಸರ್ಕಾರ ತನಿಖೆ ನಡೆಸಬಾರದೆಂದೇ?” ಎಂದು ಪ್ರಶ್ನಿಸಿದರು. ವಾದಗಳನ್ನು ಆಲಿಸಿದ ಬಳಿಕ ನ್ಯಾಯಪೀಠ, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡುವುದರ ಜೊತೆಗೆ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ಮುಂದಿನ ವರ್ಷದ ಜನವರಿ ತಿಂಗಳಿಗೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com