
ಕೆಲವು ಗಂಭೀರ ಅಪರಾಧಗಳ ಆರೋಪಿಗಳನ್ನು ಬಂಧಿಸುವಾಗ ಪೊಲೀಸರಿಗೆ ಕೈಕೋಳ ಬಳಸಲು ಅವಕಾಶ ನೀಡುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ- 2023ರ (ಬಿಎನ್‌ಎಸ್‌ಎಸ್) ಸೆಕ್ಷನ್ 43(3) ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ಸಂಬಂಧಿಸಿದಂತೆ ಆಂಧ್ರಪ್ರದೇಶ ಹೈಕೋರ್ಟ್ ಕಳೆದ ವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಮತ್ತು ನ್ಯಾಯಮೂರ್ತಿ ರವಿ ಚೀಮಲಾಪತಿ ಅವರಿದ್ದ ಪೀಠ ಈ ಸಂಬಂಧ ಕೇಂದ್ರ ಕಾನೂನು ಮತ್ತು ನ್ಯಾಯ ಹಾಗೂ ಗೃಹ ಸಚಿವಾಲಯಗಳಿಗೆ ನೋಟಿಸ್ ಜಾರಿ ಮಾಡಿದೆ.
ಸಂವಿಧಾನದ 14 ಮತ್ತು 21ನೇ ವಿಧಿಗಳಡಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಬಿಎನ್ಎಸ್ಎಸ್ ಸೆಕ್ಷನ್ 43(3) ಉಲ್ಲಂಘಿಸುತ್ತದೆ. ಈ ಸೆಕ್ಷನ್ ಕಾನೂನುಜಾರಿ ಅಧಿಕಾರಿಗಳಿಗೆ ಪರಮಾಧಿಕಾರ ನೀಡಿ ವ್ಯಕ್ತಿಗಳ ಘನತೆ ಹಾಳುಗೆಡವುತ್ತದೆ. ಒದಗಿಸಲಾಗಿರುವ ಸಾಂವಿಧಾನಿಕ ರಕ್ಷಣೆ ಹಾಗೂ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಎಂದು ವಕೀಲ ಕೆಯೂರ್ ಅಕ್ಕಿರಾಜು ಸಲ್ಲಿಸಿರುವ ಅರ್ಜಿ ದೂರಿತ್ತು.
ಆರೋಪಿಯ ಕೈಗೆ ಕೋಳ ಹಾಕಲು ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ಅಧಿಕಾರ ತುಂಬಾ ಅತಿ ಎನಿಸುವಂತಿದ್ದು ಮುಗ್ಧತೆಗೆ ಸಂಬಂಧಿಸಿದ ಮೂಲಭೂತ ಊಹೆಯೇ ಕ್ಷೀಣವಾಗಿ ಅಪರಾಧ ಸಾಬೀತಾಗುವ ಮೊದಲೇ ವ್ಯಕ್ತಿಗಳಿಗೆ ಕಳಂಕ ತರುವ ಅಪಾಯವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅನಿಯಂತ್ರಿತ ಬಂಧನದ ವಿರುದ್ಧ ರಕ್ಷಣೆ ನೀಡುವ ನ್ಯಾಯಾಂಗದ ಪಾತ್ರವನ್ನು ಈ ಸೆಕ್ಷನ್ ದುರ್ಬಲಗೊಳಿಸುತ್ತದೆ. ಇದು ಉದ್ದೇಶದೊಂದಿಗೆ ತಾರ್ಕಿಕ ಸಂಬಂಧ ಹೊಂದಿಲ್ಲದೆ ಇರುವುದರಿಂದ ಅನುಪಾತದ ಪರೀಕ್ಷೆ ಯಲ್ಲಿ ವಿಫಲವಾಗುತ್ತದೆ. ನ್ಯಾಯಾಂಗ ಮೇಲ್ವಿಚಾರಣೆ ಇಲ್ಲದೆ ರೂಪಿಸಲಾದ ಸೆಕ್ಷನ್ ಇದಾಗಿದ್ದು ಯಾವುದೇ ನ್ಯಾಯಯುತ ಕಾರಣವಿಲ್ಲದೆ ಆರೋಪಿಗಳ ನಡುವೆ ತಾರತಮ್ಯ ಉಂಟು ಮಾಡುತ್ತದೆ ಎಂದು ಅರ್ಜಿ ವಾದಿಸಿದೆ.
ಕೈಕೋಳ ಹಾಕುವುದು ಸಾಮಾನ್ಯ ರೂಢಿಯಾಗುವ ಬದಲು ಅಪವಾದವಾಗಬೇಕು ಎಂದು ಸುಪ್ರೀಂ ಕೋರ್ಟ್‌ನ ಅನೇಕ ತೀರ್ಪುಗಳು ಹೇಳುತ್ತವೆ. ತಪ್ಪಿಸಿಕೊಳ್ಳುವ ಅಥವಾ ಹಿಂಸಾಚಾರದ ಸ್ಪಷ್ಟ ಅಪಾಯವಿರುವ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಂಗ ಮೇಲ್ವಿಚಾರಣೆಯೊಂದಿಗೆ ಕೈಕೋಳ ಹಾಕಲು ಅನುಮತಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ಎ ಶ್ರೀನಾಥ್ ವಾದ ಮಂಡಿಸಿದರು.