ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ: ಲಿಖಿತ ವಾದದಲ್ಲಿ ಹೊಸ ಅಂಶ ಪ್ರಸ್ತಾಪ; ಜ.12ಕ್ಕೆ ವಿಚಾರಣೆ ಮುಂದೂಡಿಕೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಕಾರರು (ಅರ್ಜಿದಾರರು ಮತ್ತು ರಾಜ್ಯ ಸರ್ಕಾರ) ಲಿಖಿತ ವಾದದಲ್ಲಿ ಹೊಸ ಅಂಶಗಳನ್ನು ಪ್ರಸ್ತಾಪಿಸಿರುವುದರಿಂದ ಮತ್ತೊಮ್ಮೆ ವಾದ ಆಲಿಸಬೇಕಾಗುತ್ತದೆ ಎಂದಿರುವ ಪೀಠ.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru
Published on

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಬೃಹನ್ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸೋಮವಾರ ಜನವರಿ 12ಕ್ಕೆ ಮುಂದೂಡಿದೆ.

ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್‌ ವಸ್ತ್ರದ ಅವರನ್ನು ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಡಿ ಎಸ್‌ ಮಲ್ಲಿಕಾರ್ಜುನ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಕಾರರು (ಅರ್ಜಿದಾರರು ಮತ್ತು ರಾಜ್ಯ ಸರ್ಕಾರ) ಲಿಖಿತ ವಾದದಲ್ಲಿ ಹೊಸ ಅಂಶಗಳನ್ನು ಪ್ರಸ್ತಾಪಿಸಿರುವುದರಿಂದ ಮತ್ತೊಮ್ಮೆ ವಾದ ಆಲಿಸಬೇಕಾಗುತ್ತದೆ ಎಂದು ಪೀಠವು ಹೇಳಿತು. ಇದೇ ಸಂದರ್ಭದಲ್ಲಿ ತಿದ್ದುಪಡಿ ಮಾಡಲಾದ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿತು.

ಪ್ರತಿವಾದಿಯಾಗಿರುವ ಆಡಳಿತಾಧಿಕಾರಿ ಪಿ ಎಸ್‌ ವಸ್ತ್ರದ ಪರ ವಕೀಲ ಎಚ್‌ ಸುನಿಲ್‌ ಕುಮಾರ್ ವಕಾಲತ್ತು ಸಲ್ಲಿಸಿದರು. ಇದನ್ನು ಪೀಠವು ಮಾನ್ಯ ಮಾಡಿತು. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಜಯಕುಮಾರ್ ಎಸ್‌.ಪಾಟೀಲ್‌ ಅವರು ಹಾಜರಿದ್ದರು.

ಮುರುಘಾ ಶರಣರ ಪದಚ್ಯುತಿಗೆ ಸಂಬಂಧಿಸಿದಂತೆ ಈ ಹಿಂದೆ ಸಲ್ಲಿಸಲಾಗಿರುವ ಸಿವಿಲ್‌ ದಾವೆಯನ್ನೂ (ಸ್ಕೀಂ ಸೂಟ್‌) ಇದೇ ಅರ್ಜಿ ಜೊತೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಹಿರಿಯ ವಕೀಲ ಗಂಗಾಧರ ಗುರುಮಠ ಅವರ ಮನವಿ ಒಪ್ಪದ ಪೀಠವು “ಇದು ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿದ ಅರ್ಜಿ ಮಾತ್ರವಾಗಿದ್ದು, ನಿಮ್ಮ ಮನವಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಉಲ್ಲೇಖಿಸಿ” ಎಂದು ಆದೇಶಿಸಿತು.

Also Read
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಅರ್ಜಿ: ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪೋಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದು ರಾಜ್ಯ ಸರ್ಕಾರ ಪಿ ಎಸ್ ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಅವರು 2022ರ ಡಿಸೆಂಬರ್ 15ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಇದನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಡಿಸೆಂಬರ್‌ 16ರಂದು ಹಿರಿಯ ವಕೀಲರ ಜಯಕುಮಾರ್‌ ಪಾಟೀಲ್‌ ಮತ್ತು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ವಿಸ್ತೃತ ವಾದ ಆಲಿಸಿದ್ದ ಪೀಠವು ಲಿಖಿತ ವಾದ ಸಲ್ಲಿಸುವಂತೆ ಆದೇಶ ಮಾಡಿ, ಆದೇಶ ಕಾಯ್ದಿರಿಸಿತ್ತು.

Kannada Bar & Bench
kannada.barandbench.com