ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿ ನೋಟಿಸ್ ಪಡೆದ ವ್ಯಕ್ತಿಯ ನಿರೀಕ್ಷಣಾ ಜಾಮೀನು ಅರ್ಜಿ ನಿರಾಕರಿಸುವಂತಿಲ್ಲ: ಹೈಕೋರ್ಟ್

ಮುಗ್ಧರು ನಕಲಿ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದರೆ ಅವರನ್ನು ರಕ್ಷಿಸುವ ಉದ್ದೇಶದಿಂದ ಸೆಕ್ಷನ್ 41-ಎ ನಿಬಂಧನೆಯನ್ನು ಸೇರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
Karnataka High Court
Karnataka High Court

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಸಿಆರ್‌ಪಿಸಿ ಸೆಕ್ಷನ್‌ 41-ಎ ಪ್ರಕಾರ ವಿಚಾರಣೆಗೆ ಹಾಜರಾಗಲು ಸೂಚಿಸಿ ತನಿಖಾಧಿಕಾರಿ ನೋಟಿಸ್‌ ಜಾರಿ ಮಾಡಿದಾಗ ನೋಟಿಸ್‌ ಪಡೆದ ವ್ಯಕ್ತಿಗೆ ಬಂಧನ ಭೀತಿ ಸಂಪೂರ್ಣ ಹೋಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಕರ್ನಾಟಕ ಹೈಕೋರ್ಟ್‌ ಇಂತಹ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸುವ ಅರ್ಜಿಯನ್ನು ನ್ಯಾಯಾಲಯಗಳು ನಿರಾಕರಿಸುವಂತಿಲ್ಲ ಎಂದು ಹೇಳಿದೆ.

ರಾಜ್ಯ ಅರಣ್ಯ ಕಾಯಿದೆ ಉಲ್ಲಂಘಿಸಿದ್ದಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯ ರಾಮಪ್ಪ ಎಂಬುವವರಿಗೆ ತನಿಖಾಧಿಕಾರಿಯಿಂದ ನೋಟಿಸ್‌ ಜಾರಿಯಾಗಿತ್ತು. ಬಂಧನ ಭೀತಿಯಿಂದಾಗಿ ಅವರು ಬಾಗಲಕೋಟೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡಿತ್ತು ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೂಲಕ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್‌ ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣನವರ್‌ ಅವರಿದ್ದ ಏಕಸದಸ್ಯ ಪೀಠ ರಾಮಪ್ಪ ಅವರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಇತ್ತೀಚೆಗೆ ಆದೇಶಿಸಿದೆ.

ಕರ್ನಾಟಕ ಅರಣ್ಯ ಕಾಯಿದೆಯ ಸೆಕ್ಷನ್‌ 80, 84, 86, 87ರ ಅಡಿ ಹಾಗೂ ಕರ್ನಾಟಕ ಅರಣ್ಯ ನಿಯಮ 144, 145 ಹಾಗೂ ಐಪಿಸಿ ಸೆಕ್ಷನ್ 379ರ ಅಡಿ 2020ರ ನವೆಂಬರ್ 19ರಂದು ಅರಣ್ಯಾಧಿಕಾರಿಗಳು ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಅರ್ಜಿದಾರನಿಗೆ ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್‌ 41-ಎ ಅಡಿ ಕಳೆದ ಜನವರಿ 13ರಂದು ನೋಟಿಸ್ ಜಾರಿ ಮಾಡಿದ್ದರು. ಬಂಧನಕ್ಕೆ ಒಳಗಾಗುವ ಭೀತಿಗೆ ಒಳಗಾಗಿದ್ದ ಅರ್ಜಿದಾರ ರಾಮಪ್ಪ ವಿಚಾರಣೆಗೆ ಹಾಜರಾಗದೆ ಸೆಷನ್ಸ್ ಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 29 ರಂದು ಸೆಷನ್ಸ್ ಕೋರ್ಟ್ ಅರ್ಜಿ ತಿರಸ್ಕರಿಸಿತ್ತು.

ನ್ಯಾಯಾಲಯ ಹೇಳಿದ್ದು…

ಸಾಕಷ್ಟು ಸಾಕ್ಷ್ಯಗಳು ಲಭಿಸುವವರೆಗೆ ಸಿಆರ್‌ಪಿಸಿ ಸೆಕ್ಷನ್‌ 41 ಎ ಬಂಧನವನ್ನು ಮುಂದೂಡುತ್ತದೆ. ಹೀಗಾಗಿ ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಬಹುದು ಅಥವಾ ಕಳಿಸಬಹುದು. ಆದ್ದರಿಂದ ತನಿಖಾಧಿಕಾರಿ ನೋಟಿಸ್‌ ಜಾರಿ ಮಾಡಿದಾಗ ನೋಟಿಸ್‌ ಪಡೆದ ವ್ಯಕ್ತಿಗೆ ಬಂಧನ ಭೀತಿ ಸಂಪೂರ್ಣ ಮಾಯವಾಗಿರುವುದಿಲ್ಲ. ಆದ್ದರಿಂದ, ಈ ಸಂದರ್ಭಗಳಲ್ಲಿ, ನ್ಯಾಯಾಲಯಗಳು ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 438 ರ ಅಡಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಲು ಸಾಧ್ಯವಿಲ್ಲ.

ಒಬ್ಬ ವ್ಯಕ್ತಿಗೆ ಎರಡು ಸಂದರ್ಭಗಳಲ್ಲಿ ತಾನು ಬಂಧನಕ್ಕೊಳಗಾಗುತ್ತಾನೆ ಎಂಬ ಆತಂಕ ಇರುತ್ತದೆ. ಮೊದಲನೆಯದಾಗಿ ಸಿಆರ್‌ಪಿಸಿ ಸೆಕ್ಷನ್‌ 41 ಎ (1)ರ ಅಡಿಯಲ್ಲಿ ಅವನಿಗೆ ನೋಟಿಸ್‌ ನೀಡಿದಾಗ ಮತ್ತು ಎರಡನೆಯದಾಗಿ ನೋಟಿಸ್‌ ಜಾರಿಗೊಳಿಸಿದಾಗ ಆತನನ್ನು ಬಂಧಿಸಬೇಕಾಗುತ್ತದೆ ಎಂದು ತನಿಖಾಧಿಕಾರಿ ನಿರ್ಧಾರಕ್ಕೆ ಬಂದಾಗ. ಅಥವಾ ನೋಟಿಸ್‌ ನಿಯಮಗಳನ್ನು ಪಾಲನೆ ಮಾಡದೆ ಇಲ್ಲವೇ ಪ್ರಕರಣದಲ್ಲಿ ತನ್ನನ್ನು ಗುರುತಿಸಿಕೊಳ್ಳಲು ಬಯಸದೇ ಇರುವಾಗ ನೋಟಿಸ್‌ ಪಡೆದಾತ ಬಂಧನ ಭೀತಿ ಎದುರಿಸುತ್ತಾನೆ. ಈ ಎಲ್ಲಾ ಸನ್ನಿವೇಶಗಳಲ್ಲಿ ನೋಟಿಸ್‌ ಪಡೆದ ವ್ಯಕ್ತಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

ಸಿಆರ್‌ಪಿಸಿ ಸೆಕ್ಷನ್‌ 41ಎ ಹಿಂದಿನ ಉದ್ದೇಶ ಮತ್ತು ಕಾರಣವನ್ನು ನ್ಯಾಯಾಲಯ ವಿವರಿಸಿತು. ಸಿಆರ್‌ಪಿಸಿ ಹಿಂದಿನ ಉದ್ದೇಶ ಏನೆಂದರೆ ಬಂಧನಕ್ಕೆ ಕಾರಣಗಳನ್ನು ಪೊಲೀಸರು ಕಡ್ಡಾಯವಾಗಿ ದಾಖಲಿಸಬೇಕು. ಜೊತೆಗೆ ಗರಿಷ್ಠ ಶಿಕ್ಷೆಯಾಗುವ ಸಂಜ್ಞೇಯ ಅಪರಾಧಕ್ಕೆ ಏಳು ವರ್ಷಗಳ ಕಾಲ ಬಂಧನವಾಗಬಾರದು ಎಂಬ ಕಾರಣಕ್ಕೆ ಸೆಕ್ಷನ್‌ 41ಎಯನ್ನು ಶಾಸಕಾಂಗ ಅಡಕಗೊಳಿಸಿದೆ.

ಹಾಜರಾತಿ ನೋಟಿಸ್‌ ನೀಡುವಿಕೆಗೆ ಸಂಬಂಧಿಸಿದ ಸಿಆರ್‌ಪಿಸಿ ಸೆಕ್ಷನ್‌ 41ಎ ನಾಗರಿಕ ಜೀವನ ಮತ್ತು ಸ್ವಾತಂತ್ರ್ಯ ಹಕ್ಕಿಗೆ ಅನುಗುಣವಾಗಿ ಇದ್ದು ಭಾರತದ ಜೈಲುಗಳು ಕಿಕ್ಕಿರಿದು ತುಂಬದಂತೆ ಬಂಧನ ಸಂಖ್ಯೆ ಕಡಿಮೆ ಮಾಡಲು ಸಹಾಯ ಮಾಡಲು ಮುಂದಾಗುತ್ತದೆ.

ಮುಗ್ಧರು ನಕಲಿ ಪ್ರಕರಣಗಳಲ್ಲಿ ಸಿಲುಕಿಕೊಂಡಿದ್ದರೆ ಅವರನ್ನು ರಕ್ಷಿಸುವ ಉದ್ದೇಶದಿಂದ ಈ ನಿಬಂಧನೆ ಸೇರಿಸಲಾಗಿದೆ.

ಈ ತಿದ್ದುಪಡಿಯಿಂದಾಗಿ ಪೊಲೀಸ್‌ ಅಧಿಕಾರಿ ಸಂಬಂಧಪಟ್ಟ ವ್ಯಕ್ತಿಯನ್ನು ಬಂಧಿಸುವ ಬದಲು ನೋಟಿಸ್‌ ನೀಡಿ ತನಿಖೆಯಲ್ಲಿ ಸಹಕರಿಸುವಂತೆ ಕೇಳಿಕೊಳ್ಳಬೇಕು. ನ್ಯಾಯಾಧೀಶರ ವಾರೆಂಟ್‌ ಅಥವಾ ಆದೇಶದ ವಿನಾ ಬಂಧಿಸಲು ಅಸಾಧ್ಯವಾದ (NON-COGNIZABLE) ಅಪರಾಧದಲ್ಲಿ ಯಾವುದೇ ಬಂಧನ ಮಾಡುವಂತಿಲ್ಲ.

Also Read
[ಎಸ್‌ಸಿ/ಎಸ್‌ಟಿ ಕಾಯಿದೆ] ಪ್ರಮಾಣಿತ ದಾಖಲೆಗಳಿಗೆ ಕಾಯುವುದರಿಂದ ಖುಲಾಸೆ ಪ್ರಶ್ನಿಸಲು ವಿಳಂಬ: ಹೈಕೋರ್ಟ್‌

“ಸೆಕ್ಷನ್‌ 41 ಎ ಯಾವುದೇ ಬಂಧನ ಇಲ್ಲದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಯಾವುದೇ ವ್ಯಕ್ತಿಯನ್ನು ಬಂಧಿಸದಿರಲು ನಿರ್ಧರಿಸಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಪಾಲಿಸಬೇಕಾದ ಆಯ್ಕೆಯ ಮಾರ್ಗವನ್ನು ಸೂಚಿಸುತ್ತದೆ. ಯಾವುದೇ ವ್ಯಕ್ತಿಯನ್ನು ಬಂಧಿಸದೇ ಇರುವ ಸಂದರ್ಭದಲ್ಲಿ ಬೇರೆ ಯಾವುದೇ ಕಾನೂನು ಅನ್ವಯವಾಗದೇ ಇದ್ದಾಗ ಜಾಮೀನು ಕೋರಿ ಅರ್ಜಿ ಸಲ್ಲಿಸಲು ಆ ವ್ಯಕ್ತಿ ಅರ್ಹನಾಗಿರುತ್ತಾನೆ.

ಸೆಕ್ಷನ್‌ 41 ಎ ಅಡಿ ಹಾಜರಾತಿ ನೋಟಿಸ್‌ ನೀಡಿದ ಬಳಿಕವೂ ಬಂಧನ ಭೀತಿ ಇದ್ದೇ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ಸಿಆರ್‌ಪಿಸಿ ಸೆಕ್ಷನ್ 438 ರ ಅಡಿಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಲು ಸಾಧ್ಯವಿಲ್ಲ.

ಆದ್ದರಿಂದ ತನಿಖಾಧಿಕಾರಿ ಅರ್ಜಿದಾರರ ವಿರುದ್ಧ ಸಾಕ್ಷ್ಯ ಸಂಗ್ರಹಿಸಬಹುದು ಮತ್ತು ಅರ್ಜಿದಾರರಿಗೆ ವಿರುದ್ಧವಾದ ಕಾರಣಗಳನ್ನು ದಾಖಲಿಸಿಕೊಂಡು ಆತನನ್ನು ಬಂಧಿಸಬಹುದು.

ಈ ಅವಲೋಕನಗಳೊಂದಿಗೆ ಅರ್ಜಿ ಮಾನ್ಯ ಮಾಡಲು ನ್ಯಾಯಾಲಯ ಮುಂದಾಯಿತು ಮತ್ತು ರೂ 1,00000 ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತದ ಒಂದು ಶ್ಯೂರಿಟಿಯೊಡನೆ ಜಾಮೀನು ನೀಡಿತು. ಆದೇಶ ಜಾರಿಯಾದ ದಿನದಿಂದ ಹದಿನೈದು ದಿನಗಳ ಒಳಗಾಗಿ ಅರ್ಜಿದಾರರು ಸ್ವಯಂಪ್ರೇರಿತವಾಗಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ತನಿಖೆಯೊಂದಿಗೆ ಸಹಕರಿಸಬೇಕು ಮತ್ತು ತನಿಖೆ ವೇಳೆ ಖುದ್ದು ಲಭ್ಯವಿರಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

Related Stories

No stories found.
Kannada Bar & Bench
kannada.barandbench.com