ಶಬರಿಮಲೆ ದೇಗುಲದ ನೌಕರರಿಂದ ಹಣ ದುರುಪಯೋಗದ ಶಂಕೆ: ತನಿಖೆಗೆ ಕೇರಳ ಹೈಕೋರ್ಟ್ ಆದೇಶ

ತುಪ್ಪದ ಪ್ರಸಾದ ಮಾರಾಟದಿಂದ ಬರುವ ಆದಾಯ ದುರುಪಯೋಗವಾಗುತ್ತಿರುವ ಆರೋಪದ ಬಗ್ಗೆ ವಿಚಕ್ಷಣೆ ಮತ್ತು ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಬೇಕು ಎಂದು ಪೀಠ ಆದೇಶಿಸಿದೆ.
Sabarimala Temple
Sabarimala Temple
Published on

ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಸ್ವಾರ್ಥಿ ಅಧಿಕಾರಿಗಳು ಶಬರಿಮಲೆ ದೇವಸ್ಥಾನದ ಹಣವನ್ನು ದುರ್ಬಳಕೆ ಮಾಡುತ್ತಿರುವಂತೆ ಕಾಣುತ್ತಿದೆ ಎಂದು ಕೇರಳ ಹೈಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ಹೀಗಾಗಿ ಪ್ರಕರಣವನ್ನು ವಿಚಕ್ಷಣಾ ದಳ ತನಿಖೆ ನಡೆಸಬೇಕು ಎಂದು ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ವಿ ಮತ್ತು ಕೆ ವಿ ಜಯಕುಮಾರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.

Also Read
ನೈಲಾನ್ ಮಾಂಜಾ ಬಳಸಿ ಗಾಳಿಪಟ ಹಾರಿಸಿದರೆ ₹25,000 ದಂಡ: ಬಾಂಬೆ ಹೈಕೋರ್ಟ್

ಶಬರಿಮಲೆ ದೇವಸ್ಥಾನದ ವಿವಿಧ ಕೌಂಟರ್‌ಗಳಲ್ಲಿ ಮಾರಾಟವಾಗುವ ತುಪ್ಪದ ಪ್ರಸಾದದಿಂದ ಬರುವ ಹಣದ ಕ್ರಿಮಿನಲ್‌ ದುರುಪಯೋಗಕ್ಕೆ ಸಂಬಂಧಿಸಿದಂತೆ ಶಬರಿಮಲೆ ವಿಶೇಷ ಆಯುಕ್ತರು ಸಲ್ಲಿಸಿದ್ದ ವರದಿ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ  ನೀಡಿದೆ.

ತಿರುವಾಂಕೂರು ದೇವಸ್ವಂ ಮಂಡಳಿಯ ಕೆಲ ಉದ್ಯೋಗಿಗಳು, ತಮಗೆ ವಹಿಸಿದ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಕ್ಕಿಂತ, ಹಣವನ್ನು ಲಪಟಾಯಿಸುವುದರಲ್ಲಿಯೇ ಹೆಚ್ಚು ಆಸಕ್ತಿ ತೋರುತ್ತಿರುವಂತೆ ಕಾಣುತ್ತದೆ. ಬಹಿರಂಗಗೊಂಡಿರುವ ವರ್ತನೆಯಿಂದಾಗಿ, ಇಂತಹ ಉದ್ಯೋಗಿಗಳ ಪ್ರಧಾನ ಉದ್ದೇಶವು ಸಂಸ್ಥೆ ಹಾಗೂ ಭಕ್ತರ ಹಿತಕ್ಕಾಗಿ ಕರ್ತವ್ಯ ನಿಷ್ಠೆಯಿಂದ ಸೇವೆ ಸಲ್ಲಿಸುವುದಕ್ಕಿಂತ, ಯಾವುದಾದರೂ ಮಾರ್ಗದಲ್ಲಿ ವೈಯಕ್ತಿಕ ಲಾಭ ಪಡೆಯುವುದೇ ಆಗಿದೆ ಎಂಬ ಆತಂಕಕಾರಿ ನಿರ್ಣಯಕ್ಕೆ ಕಾರಣವಾಗುತ್ತದೆ,” ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ಹಿಂದೆಯೂ ಇಂತಹ ಘಟನೆಗಳು ನಡೆದಿರುವುದು ನ್ಯಾಯಾಲಯದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಉದ್ಯೋಗಿಗಳು ಆದಾಯದ ಹಣವನ್ನು ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ನಿರ್ವಹಿಸುತ್ತಿರುವುದನ್ನು  ಬಲವಾಗಿ ಖಂಡಿಸುವುದಾಗಿ ನ್ಯಾಯಾಲಯ ಹೇಳಿತು.

“ಬಲಿಷ್ಠ ತಾಂತ್ರಿಕ ಸುರಕ್ಷತಾ ವ್ಯವಸ್ಥೆಗಳಿಂದ ಬೆಂಬಲಿತವಾದ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಳು ಆಡಳಿತಾತ್ಮಕ ಆಯ್ಕೆಯ ವಿಷಯವಾಗಿ ಉಳಿದಿಲ್ಲ, ಬದಲಿಗೆ ಅವು ಕಾನೂನುಬದ್ಧವಾದ, ನೈತಿಕ ಕರ್ತವ್ಯಗಳಾಗಿವೆ. ಮಂಡಳಿ ಅವುಗಳನ್ನು ಕಾನೂನುಬದ್ಧವಾಗಿ, ನೈತಿಕವಾಗಿ ಪಾಲಿಸಲು ಬದ್ಧವಾಗಿರಬೇಕು. ಈ ವಿಚಾರದಲ್ಲಿ ನಿರಂತರ ವಿಫಲತೆ ಕಂಡುಬಂದರೆ, ಮಂಡಳಿಯ ಹಿರಿಯ ಅಧಿಕಾರಿಗಳು ವ್ಯವಸ್ಥೆಯಲ್ಲಿ ದೋಷ ಮುಂದುವರೆಯಲು ಇಚ್ಛಾಪೂರ್ವಕವಾಗಿ ಅವಕಾಶ ನೀಡುತ್ತಿದ್ದಾರೆ ಅಥವಾ ಸಹಭಾಗಿಗಳಾಗಿದ್ದಾರೆ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದು ನಾವು ಮಂಡಳಿಗೆ ನೆನಪಿಸುತ್ತಿದ್ದೇವೆ” ಎಂದು ನ್ಯಾಯಾಲಯ ಹೇಳಿತು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿನ್ಜೋನ ಸೌಮ್ಯಾ ಸಿಂಗ್‌ ರಾಥೋಡ್‌ಗೆ ಜಾಮೀನು, ಪವನ್‌ ನಂದಾ ಇ ಡಿ ಕಸ್ಟಡಿಗೆ

ತನಿಖಾ ತಂಡ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿರುವ ಅದು ತನಿಖೆಯ ವಿವರಗಳನ್ನು ಸಾರ್ವಜನಿಕವಾಗಿ ಇಲ್ಲವೇ ಮಾಧ್ಯಮಗಳಿಗೆ ಬಹಿರಂಗಪಡಿಸುವಂತಿಲ್ಲ ಎಂದು ಹೇಳಿತು.

2025 ನವೆಂಬರ್ 17 ರಿಂದ ಡಿಸೆಂಬರ್ 26 ರವರೆಗೆ 13,679 ಪ್ಯಾಕೆಟ್‌ಗಳ ತುಪ್ಪದ ಪ್ರಸಾದ ಮಾರಾಟದಿಂದ ಬಂದ (₹13,67,900 ಮೌಲ್ಯದ) ಹಣ ನೀಡಿಲ್ಲ ಎಂದು ಶಬರಿಮಲೆಯ ವಿಶೇಷ ಆಯುಕ್ತರು ವರದಿ ನೀಡಿದ್ದರು.

Kannada Bar & Bench
kannada.barandbench.com