

ಗಾಳಿಪಟ ಹಾರಿಸಲು ಬಳಸುವ, ಗಾಜಿನ ಚೂರುಗಳನ್ನು ಸೇರಿಸಿ ಮಾಡಲಾದ ಮನುಷ್ಯರು ಮತ್ತು ಪ್ರಾಣಿಗಳ ಸಾವು ನೋವಿಗೆ ಕಾರಣವಾಗಬಲ್ಲ ನೈಲಾನ್ ಮಾಂಜಾಕ್ಕೆ ಅಧಿಕಾರಿಗಳು ಕಡಿವಾಣ ಹಾಕದೆ ಇರುವುದನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
ಈ ಸಂಬಂಧ ಪ್ರತ್ಯೇಕ ಆದೇಶ ನೀಡಿರುವ ಬಾಂಬೆ ಹೈಕೋರ್ಟ್ ಔರಂಗಾಬಾದ್ ಮತ್ತು ನಾಗಪುರ ಪೀಠಗಳು ದಾರ ತಯಾರಿಕೆ ಮತ್ತು ಬಳಕೆ ತಡೆಯುವಲ್ಲಿ ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
ಜನವರಿ 9ರಂದು ನೀಡಿದ ಆದೇಶದಲ್ಲಿ ಔರಂಗಾಬಾದ್ ಪೀಠ, “ಆಡಳಿತದ ಈ ನಿರಂತರ ವೈಫಲ್ಯ ಸಂವಿಧಾನದ ವಿಧಿ 21ನೇ ವಿಧಿಯಡಿ ಒದಗಿಸಲಾದ ಜೀವಿಸುವ ಹಕ್ಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ನೈಲಾನ್ ಮಂಜಾದಿಂದ ಉಂಟಾಗುವ ಅಪಾಯ ಮಾನವರಿಗೆ ಮಾತ್ರ ಸೀಮಿತವಲ್ಲ; ಜೊತೆಗೆ, ಪರಿಸರ ಮತ್ತು ಜೀವಿಗಳ ರಕ್ಷಣೆಗೆ ಸಂಬಂಧಿಸಿದ ಸಂವಿಧಾನದ 48 ಎ ಮತ್ತು 51ಎ(ಜಿ) ಉಲ್ಲಂಘನೆಯಾಗುತ್ತಿದೆ” ಎಂದು ಹೇಳಿದೆ.
ಮತ್ತೊಂದೆಡೆ, ನೈಲಾನ್ ಮಂಜಾ ಬಳಸಿ ಗಾಳಿಪಟ ಹಾರಿಸುವ ವೇಳೆ ಸಿಕ್ಕಿಬಿದ್ದ ಯಾವುದೇ ವ್ಯಕ್ತಿಗೆ ₹25,000 ದಂಡ ವಿಧಿಸಬೇಕು ಎಂದು ನಾಗಪುರ ಪೀಠ ಸೋಮವಾರ ಆದೇಶಿಸಿದೆ. ಅಪರಾಧಿ ಅಪ್ರಾಪ್ತವಯಸ್ಕನಾಗಿದ್ದರೆ, ಆ ದಂಡದ ಮೊತ್ತವನ್ನು ಅವನ ಅಥವಾ ಅವಳ ಪೋಷಕರಿಂದ ವಸೂಲಿ ಮಾಡಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಅಂತೆಯೇ ಯಾವುದೇ ಮಾರಾಟಗಾರರ ಬಳಿ ನೈಲಾನ್ ಮಾಂಜಾ ದಾಸ್ತಾನು ಕಂಡುಬಂದರೆ, ಅವರು ₹2.5 ಲಕ್ಷ ದಂಡ ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.
2021ರಲ್ಲಿ ಪತ್ರಿಕಾ ವರದಿ ಆಧರಿಸಿ ದಾಖಲಾದ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ವೇಳೆ ನಾಗಪುರ ಪೀಠ ಜನವರಿ 12 ರಂದು ಈ ಆದೇಶ ನೀಡಿತು. ಅನೇಕ ಆದೇಶಗಳು ಮತ್ತು ಪ್ರಯತ್ನಗಳ ಹೊರತಾಗಿಯೂ ನೈಲಾನ್ ಮಾಂಜಾದ ಅತಿರೇಕದ ಬಳಕೆ ಮುಂದುವರಿದಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಎಸ್ ಕಿಲೋರ್ ಮತ್ತು ರಾಜ್ ಡಿ ವಕೋಡ್ ಅವರಿದ್ದ ಪೀಠ ತಿಳಿಸಿತು.
ರಾಜ್ಯ ಸರ್ಕಾರದಿಂದ ಸ್ಪಷ್ಟ ಕಾಯ್ದೆ ಅಥವಾ ನಿಯಮಾವಳಿ ಇಲ್ಲದ ಕಾರಣ ಅಧಿಕಾರಿಗಳು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಕಷ್ಟಪಡುತ್ತಿದ್ದಾರೆ ಎಂದು ಅದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ, ನೈಲಾನ್ ಮಂಜಾ ಬಳಸಿ ಗಾಳಿಪಟ ಹಾರಿಸಿದರೆ ₹25,000 ದಂಡ ವಿಧಿಸುವಂತೆ ಆದೇಶಿಸಲಾಗಿದೆ. ಭವಿಷ್ಯದಲ್ಲಿ ನೈಲಾನ್ ಮಂಜಾದಿಂದ ಯಾವುದೇ ಅಹಿತಕರ ಘಟನೆ ನಡೆದರೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಅಂತಹ ಸಂದರ್ಭಗಳಲ್ಲಿ, ಪೊಲೀಸ್ ಆಯುಕ್ತರು ಅಥವಾ ಪೊಲೀಸ್ ಅಧೀಕ್ಷಕರು ಕರ್ತವ್ಯ ಲೋಪದ ಬಗ್ಗೆ ನೋಟಿಸ್ ಜಾರಿ ಮಾಡಿ, ಕೈಗೊಂಡ ಕ್ರಮಗಳೊಂದಿಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಅದು ತಿಳಿಸಿದೆ.
ವಿಚಾರಣೆ ವೇಳೆ ಔರಂಗಾಬಾದ್ ಪೀಠ ಸ್ಪಷ್ಟ ನಿಷೇಧವಿದ್ದರೂ ನೈಲಾನ್ ಮಾಂಜಾ ಬಳಕೆ ತಡೆಯಲು ಅಧಿಕಾರಿಗಳು ಕೇವಲ ನೆಪಮಾತ್ರದ ಕ್ರಮ ಕೈಗೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಸಾಮಾಜಿಕ ಜಾಲತಾಣಗಳು ಸೇರಿದಂತೆ ಆನ್‌ಲೈನ್ ಮಾರುಕಟ್ಟೆಗಳಲ್ಲಿ ನೈಲಾನ್ ಮಂಜಾ ಇನ್ನೂ ಲಭ್ಯವಾಗುತ್ತಿರುವುದನ್ನೂ ಗಮನಿಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಹಿತೇನ್ ಎಸ್ ವೆನೆಗಾವ್ಕರ್ ಅವರಿದ್ದ ಪೀಠ, ಡಿಜಿಟಲ್ ಯುಗದಲ್ಲಿ ಆನ್‌ಲೈನ್ ಆಯಾಮವನ್ನು ನಿರ್ಲಕ್ಷಿಸಿ ಅಧಿಕಾರಿಗಳು ಕ್ರಮ ಕೈಗೊಂಡರೆ ಅದು ನಿಷ್ಪ್ರಯೋಜಕ ಎಂದು ಕುಟುಕಿದೆ.
ತಾಂತ್ರಿಕ ಜಟಿಲತೆಯ ನೆಪದಲ್ಲಿ ರಾಜ್ಯವು ಅಸಹಾಯಕತೆ ತೋರಬಾರದು; ಬದಲಾಗಿ ತಾಂತ್ರಿಕ ಪರಿಣತಿಯನ್ನು ಬಳಸಿ ಕಾನೂನುಬದ್ಧ ಅಧಿಕಾರ ಚಲಾಯಿಸಬೇಕು ಎಂದು ಅದು ಕಿವಿಮಾತು ಹೇಳಿದೆ.
ಅಂತಿಮವಾಗಿ, ನೈಲಾನ್ ಮಂಜಾದ ತಯಾರಿಕೆ, ಸಂಗ್ರಹ, ಮಾರಾಟ, ಆನ್‌ಲೈನ್ ಮಾರ್ಕೆಟಿಂಗ್ ಮತ್ತು ಬಳಕೆಗೆ ಸಂಬಂಧಿಸಿದ ಅಪರಾಧಗಳನ್ನು ಎದುರಿಸಲು ರಾಜ್ಯಮಟ್ಟದ ವಿಶೇಷ ಕಾರ್ಯಪಡೆ ಅದು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನಿರ್ದೇಶನ ನೀಡಿತು. ಅಲ್ಲದೆ ನಾಲ್ಕು ವಾರಗಳೊಳಗೆ ಪರಿಹಾರ ನಿಧಿ ಸ್ಥಾಪಿಸಿ, ಭವಿಷ್ಯದ ಮಂಜಾ ಸಂಬಂಧಿತ ಗಾಯ ಪ್ರಕರಣಗಳಿಗೆ ನೀತಿ ರೂಪಿಸಬೇಕೆಂದು ಅದು ರಾಜ್ಯಕ್ಕೆ ಆದೇಶಿಸಿದೆ. ತನ್ನ ಆದೇಶವನ್ನು ಕೇವಲ ತೋರಿಕೆಯಿಂದ ಪಾಲಿಸುವುದನ್ನು ಮುಂದುವರೆಸಿದರೆ ಹಿರಿಯ ಅಧಿಕಾರಿಗಳು ವೈಯಕ್ತಿಕವಾಗಿ ಬೆಲೆ ತೆರಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
[ಔರಂಗಾಬಾದ್ ಹಾಗೂ ನಾಗಪುರ ಪೀಠ ಪ್ರಕಟಿಸಿರುವ ಆದೇಶದ ಪ್ರತಿಗಳು]