ನ್ಯಾಯಾಧೀಶರಿಗೆ ಕೃತಕ ಬುದ್ಧಿಮತ್ತೆ ಪೂರಕವಾಗಬಹುದೇ ಹೊರತು ಬದಲಿಯಾಗಲಾರದು: ಸಿಜೆಐ ಎಸ್ ಎ ಬೊಬ್ಡೆ

“ಯಂತ್ರವು ಎಷ್ಟೇ ಬುದ್ಧಿಮತ್ತೆ ಹೊಂದಿದ್ದರೂ ಮಾನವನ ನಿರ್ಣಯಕ್ಕೆ ಬದಲಿಯಾಗಿ ಅದನ್ನು ನ್ಯಾಯಿಕ ವ್ಯವಸ್ಥೆಯು ಒಪ್ಪದು. ನ್ಯಾಯಾಂಗದ ನಿರ್ಧಾರಕ್ಕೆ ಭಾವನಾತ್ಮಕ ಅಡಿಪಾಯವಿದ್ದು, ಕೃತಕ ಬುದ್ದಿಮತ್ತೆಗೆ ಅದು ಸಾಧ್ಯವಾಗದು," ಎಂದ ಸಿಜೆಐ.
CJI SA Bobde
CJI SA Bobde

ನ್ಯಾಯಾಂಗ ವ್ಯವಸ್ಥೆಯಲ್ಲಿ ಯಂತ್ರಗಳು ಮಾನವನ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯನ್ನು ಬದಲಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಹೇಳಿದ್ದಾರೆ. ಕೃತಕ ಬುದ್ದಿಮತ್ತೆಯು ನಿರ್ಧಾರ ಕೈಗೊಳ್ಳಲು ಸಹಾಯ ಮಾಡಬಹುದೇ ವಿನಾ ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬದಲಿಸಲಾಗದು ಎಂದು ಅವರು ಹೇಳಿದರು.

ವಿಧಿ ಕಾನೂನು ಮತ್ತು ನೀತಿ ಕೇಂದ್ರ ಮತ್ತು ಟಿಸಿಜಿ ಕ್ರೆಸ್ಟ್‌ ಜಂಟಿಯಾಗಿ ಸಿದ್ಧಪಡಿಸಿರುವ “ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಜವಾಬ್ದಾರಿಯುತ ಕೃತಕ ಬುದ್ದಿಮತ್ತೆ (ಎಐ)” ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಜೆಐ ಬೊಬ್ಡೆ ಮಾತನಾಡಿದರು.

ಮಾಹಿತಿಯನ್ನು ಹೆಕ್ಕಿ ತೆಗೆದು ವೇಗ ಹೆಚ್ಚಿಸುವುದು ಕೃತಕ ಬುದ್ದಿಮತ್ತೆಯ ಪಾತ್ರವಾಗಿದೆ. ಆದರೆ, ಪ್ರಕರಣದ ತೀರ್ಪು ನಿರ್ಧರಿಸಲು ಕೃತಕ ಬುದ್ದಿಮತ್ತೆಗೆ ಅವಕಾಶ ನೀಡಬಾರದು. “ಮಾಹಿತಿ ಹೇಗೆ ತೆಗೆಯಬೇಕು ಎಂಬುದರೊಂದಿಗೆ ನ್ಯಾಯಾಂಗದಲ್ಲಿ ಕೃತಕ ಬುದ್ದಿಮತ್ತೆ ಅಂತ್ಯ ಕಾಣಬೇಕು ಎಂಬುದು ನನ್ನ ಅಭಿಪ್ರಾಯ. ಪ್ರಕರಣದ ತೀರ್ಪನ್ನು ನಿರ್ಧರಿಸುವುದಕ್ಕೆ ಕೃತಕ ಬುದ್ಧಿಮತ್ತೆಗೆ ಅವಕಾಶ ಕಲ್ಪಿಸಬಾರದು” ಎಂದು ಸಿಜೆಐ ಹೇಳಿದರು.

ತೀರ್ಪು ನೀಡುವುದು, ತೀರ್ಪಿಗಾಗಿ ಬಂದಿರುವ ಘಟನಾವಳಿಗಳನ್ನು ಅವಲೋಕಿಸುವುದುಕ್ಕಿಂತ ಹೆಚ್ಚಿನದಾಗಿದೆ. ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ಭಾವನೆಗಳು ಸೇರಿರುತ್ತವೆ. ಘಟನೆಯ ಪ್ರತಿಕ್ರಿಯೆಗಳು, ವಾದಗಳು ಮತ್ತು ತಾರ್ಕಿಕತೆ ಕೊನೆಗೆ ಅಂತಿಮ ನಿರ್ಧಾರಕ್ಕೆ ಕಾರಣವಾಗುತ್ತವೆ.

ಕೃತಿಕ ಬುದ್ಧಿಮತ್ತೆಯು ಘಟನೆಗಳಿಗೆ ಮಾನವನ ಪ್ರಾಥಮಿಕ ಪ್ರತಿಕ್ರಿಯೆಯು ಹೇಗಿರುತ್ತದೆ ಎನ್ನುವುದರ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದುವೇ ಕೃತಕ ಬುದ್ದಿಮತ್ತೆಯ ನೈಸರ್ಗಿಕ ಮಿತಿಯಾಗಿದೆ. ಹೀಗಾಗಿ, ಕೃತಕ ಬುದ್ದಿಮತ್ತೆಗೆ ಎಲ್ಲಾ ಮಾಹಿತಿಯಿದ್ದರೆ ಅದ್ಭುತ ಕೆಲಸ ಮಾಡಬಹುದು, ಆದರೆ ಅಂತಿಮ ಗುರಿ ಕೃತಕ ಬುದ್ದಿಮತ್ತೆ ಅಲ್ಲ ನ್ಯಾಯ ಎಂದರು.

ಈ ಕಾರಣಕ್ಕಾಗಿ ಸ್ವಯಂಚಾಲಿತ ನ್ಯಾಯ ನಿರ್ಣಯ ವಿಧಾನಕ್ಕೆ ತಮ್ಮ ವಿರೋಧವಿದೆ ಎಂದಿರುವ ಸಿಜೆ ಬೊಬ್ಡೆ ಅವರು “ನಾನು ನಿರಂತರವಾಗಿ ಸ್ವಯಂಚಾಲಿತ (ಆಟೋಮೇಟೆಡ್) ನಿರ್ಧಾರ ಪ್ರಕ್ರಿಯೆಯನ್ನು ವಿರೋಧಿಸಿದ್ದೇನೆ. ಮನುಷ್ಯ ನಿರ್ಧಾರಕ್ಕಿಂತ ಯಂತ್ರ ಎಷ್ಟೇ ಬುದ್ದಿವಂತಿಕೆಯಿಂದ ಕೂಡಿದ್ದರೂ ಅದನ್ನು ಒಪ್ಪಿಕೊಳ್ಳಲು ನ್ಯಾಯಾಂಗ ವ್ಯವಸ್ಥೆಗೆ ಸಾಧ್ಯವಿಲ್ಲ” ಎಂದು ಒತ್ತಿಹೇಳಿದರು.

“ನ್ಯಾಯಿಕ ನಿರ್ಧಾರಕ್ಕೆ ಸಾಕಷ್ಟು ಭಾವತ್ಮಾಕ ತಳಹದಿ ಇರುತ್ತದೆ. ಇದರ ಸಮೀಪಕ್ಕೆ ಕೃತಕ ಬುದ್ದಿಮತ್ತೆ ತಲುಪಲಾಗದು. ಈ ಕಾರಣಕ್ಕಾಗಿ ನಾನು ನ್ಯಾಯಾಲಯದ ನಿರ್ಧಾರವು ಕ್ರಮಾವಳಿಗಳ ಮೇಲೆ ನಿರ್ಧಾರವಾಗುವುದಕ್ಕೆ ವಿರೋಧಿಸಿದ್ದೇನೆ” ಎಂದರು.

ಪ್ರಸಕ್ತ ದಶಕದಲ್ಲಿ ಭಾರತ ನ್ಯಾಯಾಂಗ ವ್ಯವಸ್ಥೆಯು ಹೆಚ್ಚು ತಾಂತ್ರಿಕ ಹೊಸತನಕ್ಕೆ ತೆರೆದುಕೊಳ್ಳಲಿದೆ. ಅಲ್ಲದೇ ಸಕ್ರಿಯವಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ದಿಮತ್ತೆಗೆ ಸಮೀಪವಾಗಲಿದೆ. ಸಹಾಯಕ ಸಾಧನಗಳು ಅಗತ್ಯ ಮಾಹಿತಿ ಒದಗಿಸುವ ಮೂಲಕ ಹಾಲಿ ಇರುವ ಕಾನೂನಿನ ಅಡಿ ಸರಿಯಾದ ನಿರ್ಧಾರ ಕೈಗೊಳ್ಳಲು ನೆರವಾಗಲಿದೆ. ಆದರೆ, ಯಾವಾಗ ಮತ್ತು ಏನನ್ನು ತೀರ್ಪಿನಲ್ಲಿ ಹೇಳಬೇಕು ಎಂಬುದನ್ನಲ್ಲ ಎಂದು ಅಭಿಪ್ರಾಯಪಟ್ಟರು.

Also Read
ಏಕರೂಪ ನಾಗರಿಕ ಸಂಹಿತೆಯಡಿ ಗೋವಾದಲ್ಲಿ ನಡೆಯುತ್ತಿರುವ ನ್ಯಾಯಾಡಳಿತವನ್ನು ಬುದ್ಧಿಜೀವಿಗಳು ಗಮನಿಸಬೇಕು: ಸಿಜೆಐ ಬೊಬ್ಡೆ

“ಏನನ್ನು ನಿರ್ಧರಿಸಬೇಕು, ಯಾವಾಗ ನಿರ್ಧರಿಸಬೇಕು ಎಂದು ಹೇಳಲು ನಾವು ಅದಕ್ಕೆ (ಕೃತಕ ಬುದ್ಧಿಮತ್ತೆ) ಅನುಮತಿಸುವುದಿಲ್ಲ. ಎಲ್ಲಾ ಮಾಹಿತಿಯನ್ನು ಹೆಚ್ಚಿನ ವೇಗದಲ್ಲಿ ಒದಗಿಸಲು ಮಾತ್ರ ನಾವು ಅದನ್ನು ಬಳಸುತ್ತೇವೆ. ನ್ಯಾಯಾಂಗ ನಿರ್ಧಾರಕ್ಕೆ ಸಹಾಯ ಮಾಡಲು ನಾವು ನ್ಯಾಯಾಂಗ ತಂತ್ರಜ್ಞಾನವನ್ನು ಅವಲಂಬಿಸಿರುವಲ್ಲಿ, ಅದು ಮನುಷ್ಯನ (ಮನಸ್ಸಿನ) ಅಂತಿಮ ಪರಿಗಣನೆಗೆ ಒಳಪಟ್ಟಿರಬೇಕಾಗುತ್ತದೆ” ಎಂದು ಹೇಳಿದರು.

“ಭವಿಷ್ಯದ ನ್ಯಾಯಾಂಗದ ಕಲ್ಪನೆಯು ಇನ್ನು ಮುಂದೆ ಕಾಲ್ಪನಿಕವಲ್ಲ. ಇತರೆ ತಾಂತ್ರಿಕ ಆವಿಷ್ಕಾರಗಳಂತೆ ಕೃತಕ ಬುದ್ದಿಮತ್ತೆಯು ತನ್ನದೇ ಆದ ಅನುಕೂಲ ಮತ್ತು ಸಮಸ್ಯೆಗಳನ್ನು ಹೊಂದಿದೆ” ಎಂದು ಅವರು ಹೇಳಿದರು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಲ್‌ ನಾಗೇಶ್ವರ ರಾವ್‌, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಬಿ ಎನ್‌ ಶ್ರೀಕೃಷ್ಣ ಮತ್ತಿತರರು ಭಾಗವಹಿಸಿದ್ದರು.

Related Stories

No stories found.
Kannada Bar & Bench
kannada.barandbench.com