“ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪೊಲೀಸ್ ಮಹಾನಿರ್ದೇಶಕರ ನಿರ್ದೇಶನವು ಕಾಗದಕ್ಕೆ ಸೀಮಿತವಾಗಿದೆ. ಮುಂದೆ ಇಂಥ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ ಮಾಡಲಾಗುವುದು” ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಪೊಲೀಸರಿಗೆ ಮೌಖಿಕವಾಗಿ ಕಟು ಎಚ್ಚರಿಕೆ ನೀಡಿದೆ.
ದಕ್ಷಿಣ ಜಿಲ್ಲೆಯ ಪುಂಜಾಲಕಟ್ಟೆಯ ಸಬ್‌ಇನ್‌ಸ್ಪೆಕ್ಟರ್ ಕೆ ಪಿ ಸುತೇಶ್ ಅವರು ತಮ್ಮ ಮೇಲೆ ಕಾನೂನುಬಾಹಿರವಾಗಿ ಹಲ್ಲೆ ನಡೆಸಿರುವುದನ್ನು ಪ್ರಶ್ನಿಸಿ ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರಕ್ಕೆ ಆದೇಶ ಕಾಯ್ದಿರಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಪೀಠವು “ಗೇಟ್ ಬಗ್ಗೆ ಅವರು (ಕುಲದೀಪ್ ಮತ್ತು ದೂರುದಾರ) ಅಲ್ಲಿ ಒಡೆದಾಡಿಕೊಂಡರೆ ನೀವು (ಪೊಲೀಸರು) ಅಲ್ಲಿ ಮಾಡುವುದು ಏನಿದೆ? ದೂರುದಾರ ಪ್ರಭಾವಿ ಎಂದ ಮಾತ್ರಕ್ಕೆ ನೀವು (ಪೊಲೀಸರು) ಇದೆಲ್ಲಾ ಮಾಡುತ್ತೀರಿ” ಎಂದು ಆಕ್ರೋಶ ವ್ಯಕ್ತಪಡಿಸಿತು.
“ಪೊಲೀಸರು ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ಹೇಳಲಾಗಿದೆ. ಮಾರ್ಗಸೂಚಿ ರೂಪಿಸಿದ ಮೇಲೆ ಪೊಲೀಸರು ಹೆಚ್ಚಾಗಿ ಸಿವಿಲ್ ದಾವೆಗಳಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಬಂಧಿಸುವ ಅಧಿಕಾರ ನೀಡಿದ್ದರಿಂದ ಭ್ರಷ್ಟರಾಗುವ ಅಧಿಕಾರ ನೀಡಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ಹೇಳಿದೆ” ಎಂದು ಪೀಠವು ಮಾರ್ಮಿಕವಾಗಿ ನುಡಿಯಿತು.
“ಎಫ್‌ಐಆರ್ ದಾಖಲಿಸುವುದಕ್ಕೂ ಮುನ್ನ ನೀವು (ಪೊಲೀಸರು) ಅವರನ್ನು (ವಕೀಲ ಕುಲದೀಪ್) ಎಳೆದು, ಬಡಿದಿದ್ದೀರಿ. ಮಧ್ಯರಾತ್ರಿಯಲ್ಲಿನ ಸಂಧಾನವನ್ನೂ ನಾನು ನೋಡಿದ್ದೇನೆ. ಇಂಥ ವಿಚಾರಗಳು ಪುನರಾವರ್ತಿಸಬಾರದು. ಆದೇಶದ ಆಪರೇಟಿವ್ ಭಾಗದಲ್ಲಿ ಏನು ಹೇಳಬೇಕು ಎಂಬುದು ನನಗೆ ಗೊತ್ತಿದೆ. ತಾತ್ಕಾಲಿಕ ನಿರ್ಬಂಧಕ್ಕೆ (ಪೊಲೀಸರು ಸಿವಿಲ್ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡುವುದನ್ನು ತಡೆಯುವ ಕುರಿತು) ಯಾವುದೇ ಅರ್ಥಬರುವುದಿಲ್ಲ” ಎಂದು ಪೀಠವು ಮೌಖಿಕವಾಗಿ ಹೇಳಿತು.
“ವಕೀಲ ಕುಲದೀಪ್ ಅವರಿಗೆ ಪರಿಹಾರ ನೀಡಬೇಕು. ಪರಿಹಾರದ ಹಣವನ್ನು ಆರೋಪಿ ಪೊಲೀಸರಿಂದ ವಸೂಲಿ ಮಾಡಬೇಕು. ಕುಲದೀಪ್ ಅವರು ವಕೀಲರ ಸಂಘದಲ್ಲಿ ನೋಂದಣಿ ಮಾಡಿ 20 ದಿನಗಳಾಗಿಲ್ಲ. ಅದಾಗಲೇ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ” ಎಂದು ಪೀಠವು ಬೇಸರ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ಆದೇಶ ಬರೆಸಿದ ಪೀಠವು “ಕುಲದೀಪ್ ಮೇಲೆ ಹಲ್ಲೆ ನಡೆಸಿ, ಅವರನ್ನು ರಾತ್ರಿ ಬಂಧಿಸಲಾಗಿದೆ. ಬಂಧಿಸುವುದಕ್ಕೆ ಮುನ್ನ ಕುಲದೀಪ್ ಅವರಿಗೆ ಚಿತ್ರಹಿಂಸೆ ನೀಡಲಾಗಿದೆ. ಇದನ್ನು ಮಂಗಳೂರಿನ ಫಾದರ್ ಮುಲ್ಲರ್ಡ್ಸ್ ಆಸ್ಪತ್ರೆಯ ವೈದ್ಯರು ಸರ್ಟಿಫಿಕೇಟ್ ಮೂಲಕ ಖಾತರಿಪಡಿಸಿದ್ದಾರೆ. ಸದರಿ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಕುಲದೀಪ್ ಮಧ್ಯಂತರ ಜಾಮೀನು ಕೋರಿದ್ದರು. ಡಿಸೆಂಬರ್ 3ರಂದು ಅವರಿಗೆ ಜಾಮೀನು ದೊರೆತಿತ್ತು. ಕುಲದೀಪ್ ಅವರಿಗೆ ಪೊಲೀಸರು ನೀಡಿದ್ದ ಚಿತ್ರಹಿಂಸೆಯ ಕುರಿತು ವಿಚಾರಣಾಧೀನ ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ಕುಲದೀಪ್ ಮೇಲೆ ಕಾನೂನುಬಾಹಿರವಾಗಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಿನ ಅಧಿಕಾರಿಗಳಿಗೆ ವಿಚಾರಣಾಧೀನ ನ್ಯಾಯಾಲಯ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕನೇ ಪ್ರತಿವಾದಿಯಾದ ದಕ್ಷಿಣ ಜಿಲ್ಲೆಯ ಪುಂಜಾಲಕಟ್ಟೆಯ ಸಬ್‌ಇನ್‌ಸ್ಪೆಕ್ಟರ್ ಕೆ ಪಿ ಸುತೇಶ್ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿರುವುದರಿಂದ ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಘಟನಾವಳಿಗಳನ್ನು ವಿವರಿಸಿದೆ.
ಇದರ ಬೆನ್ನಿಗೆ, “ಕುಲದೀಪ್ ಅವರು ಸುತೇಶ್ ವಿರುದ್ಧ ಡಿಸೆಂಬರ್ 9ರಂದು ದೂರು ದಾಖಲಿಸಿದ್ದರು. ಇದಕ್ಕೂ ಮುನ್ನ ಪೊಲೀಸರು ಕುಲದೀಪ್ ಆಸ್ಪತ್ರೆಯಲ್ಲಿದ್ದಾಗ ಅವರ ಹೇಳಿಕೆ ದಾಖಲಿಸಿಕೊಂಡಿದ್ದರೂ ಎಫ್‌ಐಆರ್ ದಾಖಲಿಸಿರಲಿಲ್ಲ. ಡಿಸೆಂಬರ್ 8ರಂದು ದೂರು ನೀಡಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸಿರಲಿಲ್ಲ. ಹೀಗಾಗಿ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ” ಎಂದು ಪೀಠವು ವಿವರಿಸಿದೆ.
“ಡಿಸೆಂಬರ್ 13ರಂದು (ಹೈಕೋರ್ಟ್) ಮಾಡಿದ್ದ ಆದೇಶದಲ್ಲಿ ಕುಲದೀಪ್ ಅವರ ದೂರಿಗೆ ಸಂಬಂಧಿಸಿದಂತೆ ಯಾವ ಕ್ರಮಕೈಗೊಳ್ಳಲಾಗಿದೆ ಎಂಬುದರ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವುದಾಗಿ ಸರ್ಕಾರದ ವಕೀಲರು ತಿಳಿಸಿದ್ದರು. ಮಾರಕಾಸ್ತ್ರಗಳಿಂದ ದಾಳಿ, ನಿಂದನೆ, ಕ್ರಿಮಿನಲ್ ಬೆದರಿಕೆಯ ಬಗ್ಗೆ ತಿಳಿಸಿದ್ದರೂ ಸೂಚನೆ ಪಡೆಯುವ ನೆಪದಲ್ಲಿ ಸರ್ಕಾರದ ವಕೀಲರು ಮೂರು ಬಾರಿ ವಿಚಾರಣೆ ಮುಂದೂಡಿಕೆ ಕೋರಿದ್ದರು. ಆನಂತರ ಜನವರಿ 5ರಂದು ರಾತ್ರಿ 8.10 ಗಂಟೆ ಸುಮಾರಿಗೆ ಸುತೇಶ್ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 504, 506, 323, 324 ಜೊತೆಗೆ 34 ಅಡಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.
“ಕುಲದೀಪ್ ಅವರ ಮೂಲಭೂತ ಹಕ್ಕು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ಪರಿಹಾರ ನೀಡುವ ವಿಚಾರ ನ್ಯಾಯಾಲಯದ ಮುಂದೆ ಇದೆ. ಸಿಆರ್‌ಪಿಸಿ ಸೆಕ್ಷನ್ 41ಎ ಅಡಿ ಸಮನ್ಸ್ ನೀಡಿ ಅವರ ಹೇಳಿಕೆ ಪಡೆದು, ಅದು ತೃಪ್ತಿದಾಯಕವಲ್ಲದಾಗ ಮಾತ್ರ ಪೊಲೀಸರು ಅವರನ್ನು ಬಂಧಿಸಬೇಕು. ಆದರೆ, ಇಲ್ಲಿ ಅರ್ಜಿದಾರರಿಗೆ ನೋಟಿಸ್ ನೀಡಲಾಗಿಲ್ಲ. ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 447 ಮತ್ತು 379 ಅಡಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ಸೆಕ್ಷನ್ 447ರ ಅಡಿ ಗರಿಷ್ಠ ಮೂರು ತಿಂಗಳು ಮಾತ್ರ ಶಿಕ್ಷೆ ವಿಧಿಸಬಹುದಾಗಿದ್ದು, ಸೆಕ್ಷನ್ 379ರ ಅಡಿ ಗರಿಷ್ಠ 3 ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಗರಿಷ್ಠ ಏಳು ವರ್ಷ ಶಿಕ್ಷೆಯಾಗಬಹುದಾದ ಪ್ರಕರಣವಾದರೆ ಮಾತ್ರ ಆರೋಪಿಯನ್ನು ಬಂಧಿಸಬಹುದಾಗಿದೆ. ಈ ನೆಲೆಯಲ್ಲಿ ಕುಲದೀಪ್ ಅವರನ್ನು ಬಂಧಿಸುವ ಮೂಲಕ ಪೊಲೀಸರು ಅವರ ಮೂಲಭೂತ ಹಕ್ಕು ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ, ಅರ್ಜಿದಾರ ಕುಲದೀಪ್ ಅವರಿಗೆ ಪರಿಹಾರ ನೀಡಬೇಕಿದೆ. ಪರಿಹಾರಕ್ಕೆ ಸಂಬಂಧಿಸಿದ ಆದೇಶವನ್ನು ಆನಂತರ ಬರೆಸಲಾಗುವುದು” ಎಂದು ಪೀಠವು ಆದೇಶದಲ್ಲಿ ವಿವರಿಸಿದೆ.
ಅರ್ಜಿದಾರ ಕುಲದೀಪ್ ಅವರ ಪರವಾಗಿ ಹಿರಿಯ ವಕೀಲ ಪಿ ಪಿ ಹೆಗ್ಡೆ ವಾದಿಸಿದರು.